ಮಹಿಳೆಯರು ಅನ್ಯಾಯವನ್ನು ಸಹಿಸಿಕೊಳ್ಳಬೇಡಿ : ನ್ಯಾ.ನವಲೆ ಅಭಿಮತ
ಕಲಬುರಗಿ : ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳಿಂದ ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ಓದಿನ ಜೊತೆಗೆ ಸಮಾಜದ ಕಾರ್ಯಗಳಿಗೂ ಇಂದಿನ ವಿದ್ಯಾರ್ಥಿನಿಯರು ಮುಂದೆ ಬರಬೇಕು. ಸುಂದರ ಸಮಾಜದಲ್ಲಿರುವ ಇಂದಿನ ಮಹಿಳೆಯರು ಅನ್ಯಾಯವನ್ನು ಸಹಿಸದೆ ನಿರ್ಭೀತಿಯಿಂದ ಬಾಳಬೇಕೆಂದು ಜಿಲ್ಲಾ ಸಿವಿಲ್ ನ್ಯಾಯಧೀಶ ಶ್ರೀನಿವಾಸ ನವಲೆ ಅವರು ಕರೆ ನೀಡಿದ್ದಾರೆ.
ನಗರದ ಆರಾಧನಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯು ಹಮ್ಮಿಕೊಂಡಿರುವ ʼಅಂತರ್‌ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆʼಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಸಲುವಾಗಿ ಭಾರತೀಯ ಸಂವಿಧಾನದಲ್ಲಿ ಅನೇಕ ಕಾನೂನುಗಳಿವೆ. ಅಪ್ರಾಪ್ತ ಬಾಲಕಿಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಮತ್ತು ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡುಸುತ್ತಿರುವುದನ್ನು ಸರ್ವರೂ ವಿರೋಧಿಸಬೇಕೆಂದು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೋಯಾ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಪ್ರತಿಯೊಬ್ಬರು ಧೈರ್ಯಮಾಡಿ ಮುಂದೆ ಬರಬೇಕು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮತನಾಡಿದ ಆರಾಧನಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚೇತನಕುಮಾರ ಗಾಂಗಜಿ, ಯಾಒಬ್ಬ ವಿದ್ಯಾರ್ಥಿನಿಯು ತಮ್ಮ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು, ಧೈರ್ಯದಿಂದ ಓದು ಪೂರ್ಣಗೊಳಿಸಿ ಪ್ರಬಲ ಭಾರತ ನಿರ್ಮಾಣಕ್ಕೆ ಮುಂದೆ ಬರಬೇಕೆಂದು ಕರೆ ಕೊಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಉಪಸಭಾಪತಿ ಭಾಗ್ಯಲಕ್ಷ್ಮೀ ಎಮ್., ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಜಿ.ಎಸ್.ಪದ್ಮಾಜಿ, ಪ್ರಥಮ ಚಿಕಿತ್ಸೆ ಉಪ ಸಮಿತಿಯ ಸಂಚಾಲಕರಾದ ಸುರೇಶ ಬಡಿಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ಸಮಿತಿಯ ಸಂಚಾಲಕಿ ನೈನಾ ಸೇಠಿಯಾ, ವಿಪತ್ತು ನಿರ್ವಹಣಾ ಉಪ ಸಮಿತಿಯ ಸಂಚಾಲಕ ಸದಸ್ಯ ಡಾ.ಎಸ್.ಎಸ್.ಹತ್ತಿ, ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಡಾ.ಅಂಬಾರಾಯ ಹಾಗರಗಿ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು.ಋಷಿಕಾ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಅರ್ಪಿತಾ ಪಾಟೀಲ ಅವರು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ವಂದಿಸಿದರು.