ಕೇರಳದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ: ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಜನತೆ ಆಗ್ರಹ
ಕೊಚ್ಚಿ: ಕೇರಳದ ಎರ್ನಾಕುಳಮ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಂದ ಪೈಶಾಚಿಕ ಘಟನೆಯೊಂದು ವರದಿಯಾಗಿದೆ. ಪಾತಕಿಯು ಶುಕ್ರವಾರ ಬಾಲಕಿಯ ಶವವನ್ನು ಗೋಣಿಚೀಲವೊಂದರಲ್ಲಿ ಹಾಕಿ ಎಸೆದಿದ್ದಾನೆ ಹಾಗೂ ಒಂದು ದಿನದ ಬಳಿಕ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಬಾಲಕಿಯ ಮೃತದೇಹವಿರಿಸಿದ್ದ ಶಾಲೆಯಲ್ಲಿ ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಆರೋಪಿಗೆ ಕಠಿಣ ಶಿಕ್ಷೆ, ವಿಶೇಷವಾಗಿ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.
ಗುರುವಾರದವರೆಗೂ ವಿದ್ಯಾರ್ಥಿಯಾಗಿದ್ದ ಆ ಬಾಲಕಿಯ ಶಾಲೆಯೆಡೆಗೆ ಎಲ್ಲ ವಯೋಮಾನದವರು ಹಾಗೂ ಎಲ್ಲ ವರ್ಗದವರು ಆಕೆಗೆ ಅಂತಿಮ ವಿದಾಯ ಸಲ್ಲಿಸಲು ಧಾವಿಸಿದ್ದರು. ಶುಕ್ರವಾರ ಅಪಹರಣಕ್ಕೊಳಗಾಗಿದ್ದ ಆ ಬಾಲಕಿಯ ಮೇಲೆ ಆ ಬಾಲಕಿ ವಾಸಿಸುತ್ತಿದ್ದ ಕಟ್ಟಡದಲ್ಲೇ ನೆಲೆಸಿದ್ದ ಬಿಹಾರದ ವಲಸೆ ಕಾರ್ಮಿಕನೊಬ್ಬ ಕ್ರೂರವಾಗಿ ಅತ್ಯಾಚಾರವೆಸಗಿ, ನಂತರ ಕತ್ತು ಸೀಳಿ ಹತ್ಯೆಗೈದಿದ್ದ. ಆ ಬಾಲಕಿಯ ಕುಟುಂಬದವರೂ ಬಿಹಾರ ಮೂಲದವರೇ ಆಗಿದ್ದಾರೆ.
ಆಕೆಯ ಮೃತದೇಹವು ಶನಿವಾರದಂದು ಅಳುವ ಪ್ರದೇಶದ ಸಮೀಪವಿರುವ ಸ್ಥಳೀಯ ಮಾರುಕಟ್ಟೆಯೊಂದರ ಹಿಂಬದಿಯಲ್ಲಿನ ಜವುಳು ಪ್ರದೇಶದಲ್ಲಿ ಗೋಣಿ ಚೀಲವೊಂದರಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ಶುಕ್ರವಾರದಂದೇ ಬಂಧಿಸಲಾಗಿದ್ದರೂ, ಆತ ಪಾನಮತ್ತ ಸ್ಥಿತಿಯಲ್ಲಿದ್ದುದರಿಂದ ಆತನನ್ನು ವಿಚಾರಣೆಗೊಳಪಡಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಬಾಲಕಿಯನ್ನು ಹತ್ಯೆಗೈದಿರುವ ರೀತಿಯೇ ಆತನನ್ನೂ ಕೊಲ್ಲಬೇಕು. ಒಂದು ವೇಳೆ ಇದನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲದಿದ್ದರೆ, ಆತನನ್ನು ನಮ್ಮ ವಶಕ್ಕೆ ಒಪ್ಪಿಸಲಿ" ಎಂದು ಬಾಲಕಿಯ ಸಹಪಾಠಿಗಳ ಪೋಷಕರು ಆಗ್ರಹಿಸಿದ್ದಾರೆ.
ಆರೋಪಿಗೆ ಮರಣ ದಂಡನೆಯಂಥ ಗರಿಷ್ಠ ಶಿಕ್ಷೆಯಾಗುವುದನ್ನು ಸರ್ಕಾರ ಹಾಗೂ ಪೊಲೀಸರು ಖಾತ್ರಿಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕ ಅನ್ವರ್ ಸಾದತ್ ಒತ್ತಾಯಿಸಿದ್ದಾರೆ.
"ಓರ್ವ ಜನಪ್ರತಿನಿಧಿ ಮತ್ತು ತಂದೆಯಾಗಿ ನಾನು ಇದನ್ನಷ್ಟೆ ಬಯಸುವುದು. ನಾನು ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಇದನ್ನು ಪ್ರತ್ಯೇಕ ಪ್ರಕರಣವೆಂದು ಪರಿಗಣಿಸಿ, ತನಿಖೆಯನ್ನು ಇಲ್ಲಿಗೇ ಮುಕ್ತಾಯಗೊಳಿಸಬಾರದು ಎಂದು ಅವರಿಗೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
"ಈ ಘಟನೆಯ ನಂತರ, ಎಲ್ಲ ಕಡೆಯ ಪೋಷಕರು ಆತಂಕಗೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸರು ಹೆಚ್ಚು ಜಾಗೃತರಾಗಿರಬೇಕಾದ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವಾಗ ಭಾವುಕರಾದ ಶಾಸಕ ಅನ್ವರ್ ಸಾದತ್, ಆ ಬಾಲಕಿಯು ಈ ರೀತಿ ಹತ್ಯೆಗೊಳಗಾಗಬಹುದು ಎಂದು ನಾನೂ ಸೇರಿದಂತೆ ಯಾರೂ ಭಾವಿಸಿರಲಿಲ್ಲ ಮತ್ತು ನಾವೆಲ್ಲ ಆಕೆಯನ್ನು ಜೀವಂತವಾಗಿ ರಕ್ಷಿಸಬಹುದು ಎಂಬ ಆಶಾವಾದ ಹೊಂದಿದ್ದೆವು ಎಂದು ತಿಳಿಸಿದ್ದಾರೆ.
ಎಲ್ಲರೂ ತಮ್ಮ ಅಂತಿಮ ವಿದಾಯವನ್ನು ಸಲ್ಲಿಸಿದ ನಂತರ ಆಕೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಈ ಘಟನೆಯನ್ನು ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಕೂಡಾ ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನರು ಬೀದಿಗಿಳಿಯಬೇಕು ಎಂದೂ ಅವರು ಕರೆ ನೀಡಿದ್ದಾರೆ.
ಘಟನೆಯ ನಂತರ, ರಾಜ್ಯ ಪೊಲೀಸರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ವಿರೋಧ ಪಕ್ಷವಾದ ಕಾಂಗ್ರೆಸ್, ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಲೋಪವೆಸಗಿದ್ದಾರೆ ಎಂದು ಆರೋಪಿಸಿದೆ.
ಪೊಲೀಸರಿಂದ ಕ್ಷಮೆಯಾಚನೆ
ಮಗುವನ್ನು ಜೀವಂತವಾಗಿ ಪತ್ತೆ ಮಾಡಲು ಸಾಧ್ಯವಾಗದಿರುವುದಕ್ಕಾಗಿ ಕೇರಳ ಪೊಲೀಸರು ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ಹೆತ್ತವರ ಕ್ಷಮೆ ಕೋರಿದ್ದಾರೆ. ಅದೇ ವೇಳೆ, ಪೊಲೀಸರ ‘ವೈಫಲ್ಯ’ದ ಬಗ್ಗೆ ವಿರೋಧ ಪಕ್ಷಗಳು ಮಾಡಿರುವ ಆರೋಪಗಳನ್ನು ತಿರಸ್ಕರಿಸಿದ್ದಾರೆ.