ಪರಿಶಿಷ್ಟ ಜಾತಿಗೆ ಸೇರಿದ 7ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಕಿರುಕುಳ ; ಪ್ರಕರಣ ದಾಖಲು

Update: 2023-09-18 16:49 GMT

ಸಾಂದರ್ಭಿಕ ಚಿತ್ರ.| Photo: PTI

ಬರೇಲಿ: ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಇಂಟರ್ ಕಾಲೇಜೊಂದರ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಆರೋಪಿ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 7 ನೇ ತರಗತಿಯ 13 ವರ್ಷದ ದಲಿತ ವಿದ್ಯಾರ್ಥಿನಿ ಸೆಪ್ಟೆಂಬರ್ 4 ರಂದು ಪರೀಕ್ಷೆ ಬರೆಯಲು ಇಂಟರ್ ಕಾಲೇಜಿಗೆ ಹೋಗಿದ್ದಾಗ ನರೇಶ್ ಪಾಲ್ ಗಂಗ್ವಾರ್ ಎಂಬ ಶಿಕ್ಷಕ ಆಕೆಯನ್ನು ಕೋಣೆಗೆ ಕರೆದು, ಬಾಗಿಲು ಲಾಕ್‌ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಆಕೆಗೆ ಥಳಿಸಿದ್ದು, ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯ ತಂದೆ ಸೆಪ್ಟೆಂಬರ್ 16 ರಂದು ಇಲ್ಲಿನ ಸಿಬಿ ಗಂಜ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದು, ನರೇಶ್ ಗಂಗ್ವಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ರಾಹುಲ್ ಭಾಟಿ ಹೇಳಿದರು.

ನರೇಶ್ ಗಂಗ್ವಾರ್ ಈ ಹಿಂದೆ ಇಬ್ಬರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದ ಎಂದು ಸಿಬಿ ಗಂಜ್ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News