ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನ ಅಜಯ್ ರಾಯ್‌ ಸ್ಪರ್ಧೆ

Update: 2024-03-23 18:40 GMT

Photo : X/@SatyamInsights

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಲ್ಲಿ ವಾರಣಾಸಿಯಿಂದ ಅಜಯ್ ರಾಯ್‌ ಅವರಿಗೆ ಟಿಕೆಟ್ ನೀಡಲಾಗಿದೆ. 2014, 2019ರ ಲೋಕಸಭಾ ಚುನಾವಣೆಯಲ್ಲಿಯೂ ಅಜಯ್ ಅವರೇ ಮೋದಿ ವಿರುದ್ಧ ವಾರಣಾಸಿಯಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

2012ರಲ್ಲಿ ಕಾಂಗ್ರೆಸ್ ಸೇರಿದ, ಪ್ರಸಕ್ತ ಉತ್ತರ ಪ್ರದೇಶ ಕಾಂಗ್ರೆಸ್ ನ ಮುಖ್ಯಸ್ಥರಾಗಿರುವ ಅಜಯ್ ರಾಯ್‌ ಐದು ಬಾರಿ ಶಾಸಕರಾಗಿದ್ದವರು. ವಾರಣಾಸಿಯಲ್ಲಿ ಪ್ರಭಾವಿಯಾಗಿರುವ ಅವರು ಹಲವಾರು ಬಾರಿ ಪಕ್ಷಾಂತರ ಮಾಡಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಘಟಕದ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿದ ಅಜಯ್ ಈಗ ಮತ್ತೆ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ.

1996 ಮತ್ತು 2007 ರ ನಡುವೆ ಬಿಜೆಪಿ ಟಿಕೆಟ್‌ನಲ್ಲಿ ಸತತ ಮೂರು ಬಾರಿ ಕೋಲಸ್ಲಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಜಯ್ ರಾಯ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಲೋಕಸಭೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರಿದರು. 2009 ರ ಲೋಕಸಭೆ ಚುನಾವಣೆಯಲ್ಲಿ ಸೋತರು. ಬಳಿಕ 2009 ರ ವಿಧಾನಸಭಾ ಉಪಚುನಾವಣೆಯಲ್ಲಿ ಕೊಲಸ್ಲಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತಮ್ಮ ವೈಯುಕ್ತಿಕ ವರ್ಚಸ್ಸು ಹಿಗ್ಗಿಸಿಕೊಂಡರು.

2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ವಾರಣಾಸಿ ಸಂಸತ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ರಾಯ್‌ ನರೇಂದ್ರ ಮೋದಿಯವರ ವಿರುದ್ಧ ಸೋತರು. 2014ರ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿಯಿಂದ ಅಜಯ್ ರಾಯ್‌ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸೋತರು. ಅರವಿಂದ್ ಕೇಜ್ರಿವಾಲ್ ಎರಡನೇ ಸ್ಥಾನ ಪಡೆದರು. ಅಜಯ್ ರಾಯ್‌ ಈ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದರು.

2019ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಿ ಅಜಯ್ ರಾಯ್‌ ಮತ್ತೆ ಮೂರನೇ ಸ್ಥಾನ ಪಡೆದರು. ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಶಾಲಿನಿ ಯಾದವ್ 2 ನೇ ಸ್ಥಾನ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News