ರಾಮ ಮಂದಿರ ಪ್ರಸಾದ ಎಂದು ಸಿಹಿತಿಂಡಿಗಳ ಮಾರಾಟ: ಅಮೆಝಾನ್‌ಗೆ ನೋಟಿಸ್ ಜಾರಿ
ಹೊಸದಿಲ್ಲಿ: ಶ್ರೀ ರಾಮ ಮಂದಿರ್ ಅಯೋಧ್ಯಾ ಪ್ರಸಾದ್ ಎಂದು ಹೇಳಿಕೊಂಡು ಸಿಹಿತಿಂಡಿಗಳ ಮಾರಾಟ ಮೂಲಕ ವಂಚನೆಯ ಉದ್ಯಮ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಇ-ಕಾಮರ್ಸ್ ಸಂಸ್ಥೆ ಅಮೆಝಾನ್‌ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ. ಇನ್ನಷ್ಟೇ ಉದ್ಘಾಟನೆಗೊಳ್ಳಬೇಕಿರುವ ರಾಮ ಮಂದಿರದ ಪ್ರಸಾದ ಎಂದು ಹೇಳಿಕೊಂಡು ಸಿಹಿತಿಂಡಿಗಳನ್ನು ಮಾರಾಟ ಮಾಡಿ ಗ್ರಾಹಕರ ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿ ಕಾನ್ಫಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ದಾಖಲಿಸಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮೆಝಾನ್‌ನಲ್ಲಿ ಶ್ರೀ ರಾಮ ಮಂದಿರ್ ಅಯೋಧ್ಯ ಪ್ರಸಾದ್, ರಘುಪತಿ ಘೀ ಲಡ್ಡು, ಅಯೋಧ್ಯಾ ರಾಮ್ ಮಂದಿರ್ ಅಯೋಧ್ಯಾ ಪ್ರಸಾದ್, ಖೋಯಾ ಖೋಬಿ ಲಾಡೂ, ರಾಮ್ ಮಂದಿರ್ ಅಯೋಧ್ಯಾ ಪ್ರಸಾದ್, ದೇಸಿ ಗೋವಿನ ಹಾಲಿನ ಪೇಡಾ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪ್ರಶ್ನಿಸಲಾಗಿದೆ.
ನೋಟಿಸಿಗೆ ಉತ್ತರಿಸಲು ಅಮೆಝಾನ್‌ಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದ್ದು ತಪ್ಪಿದಲ್ಲಿ ಗ್ರಾಹಕ ರಕ್ಷಣೆ ಕಾಯಿದೆ, 2019 ಅನ್ವಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.