ಕೋಟಾದಲ್ಲಿ ಮತ್ತೊಬ್ಬಳು ನೀಟ್ ಆಕಾಂಕ್ಷಿ ಆತ್ಮಹತ್ಯೆ: ಈ ವರ್ಷದ 24ನೇ ಪ್ರಕರಣ
ಕೋಟಾ: ಇಲ್ಲಿನ ಕೋಚಿಂಗ್ ಸಂಸ್ಥೆಯೊಂದಕ್ಕೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಯ ತರಬೇತಿಗಾಗಿ ಆಗಮಿಸಿದ್ದ 16 ವರ್ಷ ವಯಸ್ಸಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಉತ್ತರ ಪ್ರದೇಶದ ಮವು ಎಂಬಲ್ಲಿನ ಪ್ರಿಯಾಸ್ ಸಿಂಗ್ ಎಂದು ಗುರುತಿಸಲಾಗಿದ್ದು, ಹನ್ನೆರಡನೇ ತರಗತಿಯಲ್ಲಿ ಕಲಿಯುತ್ತಿದ್ದ ಈಕೆ ಇಲ್ಲಿನ ವಿಜ್ಞಾನ ನಗರದ ಪಿಜಿಯಲ್ಲಿ ವಾಸ್ತವ್ಯವಿದ್ದಳು.
ಮಧ್ಯಾಹ್ನ ತನ್ನ ಕೊಠಡಿಯಲ್ಲಿ ವಿಷ ಸೇವಿಸಿದ ವಿದ್ಯಾರ್ಥಿನಿ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಳು. ಇತರ ವಿದ್ಯಾರ್ಥಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಸಂಜೆ ಆಕೆ ಮೃತಪಟ್ಟಳು ಎಂದು ಡಿವೈಎಸ್ಪಿ ಧರ್ಮವೀರ್ ಸಿಂಗ್ ಹೇಳಿದ್ದಾರೆ.
ಈ ವರ್ಷ ಕೋಟಾದಲ್ಲಿ ಕೋಚಿಂಗ್‍ಗೆ ಆಗಮಿಸಿದ ವಿದ್ಯಾರ್ಥಿಗಳು ಸಾವಿಗೆ ಶರಣಾದ 24ನೇ ಪ್ರಕರಣ ಇದಾಗಿದೆ. ಈ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಎರಡನೇ ವಿದ್ಯಾರ್ಥಿನಿ ಈಕೆ. ಆಗಸ್ಟ್ ನಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು.
ವಿದ್ಯಾರ್ಥಿನಿಯ ಕೊಠಡಿಯಲ್ಲಿ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದ್ದು, ಆತ್ಮಹತ್ಯೆಗೆ ಏನು ಕಾರಣ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.