ಶಾಸಕನಾಗಿ ಫುಟ್ ಪಾತ್ ನಲ್ಲಿ ನಿದ್ದೆ ಮಾಡಿದ್ದ ಒಡಿಶಾ ನಿಯೋಜಿತ ಸಿಎಂ!

Update: 2024-06-12 02:49 GMT

PC: X/ chitralekhamag

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿಯಾಗಿ ನಿಯೋಜಿತರಾಗಿರುವ ಮೋಹನ್ ಚರಣ್ ಮಾಝಿ ಕೃಷಿಕರಾಗಿ, ಆರೆಸ್ಸೆಸ್ ಶಾಲೆಯ ಶಿಕ್ಷಕರಾಗಿ, ಸರಪಂಚರಾಗಿ, ಆದಿವಾಸಿ ಹಕ್ಕುಗಳ ಹೋರಾಟಗಾರರಾಗಿ ಮತ್ತು ಗಣಿ ಮಾಫಿಯಾ ವಿರುದ್ಧದ ಚಳವಳಿಗಾರರಾಗಿ ವೈವಿಧ್ಯಮಯ ಅನುಭವಗಳನ್ನು ಹೊಂದಿದ್ದಾರೆ. ಈ ಪೂರ್ವ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸಿಎಂ ಆಗಲಿರುವ 52 ವರ್ಷ ವಯಸ್ಸಿನ ಮಾಝಿ ಕಿಯೊಂಝರ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ದೇಶದ ಮೊಟ್ಟಮೊದಲ ಆದಿವಾಸಿ ರಾಷ್ಟ್ರಪತಿ ಎನಿಸಿದ ದ್ರೌಪದಿ ಮುರ್ಮು ಅವರ ಸಮುದಾಯವಾದ ಸಂತಾಲ ಸಮಾಜಕ್ಕೆ ಸೇರಿದ ಅವರನ್ನು ಬಿಜೆಪಿ ಆಯ್ಕೆ ಮಾಡಿದ್ದು, ಆದಿವಾಸಿ ಪ್ರಾಬಲ್ಯದ ಜಾರ್ಖಂಡ್ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾರ್ಯತಂತ್ರದ ಭಾಗವಾಗಿ ಇವರನ್ನು ಆಯ್ಕೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಿಯೊಂಝರ್ ದಕ್ಷಿಣ ಭಾಗದಲ್ಲಿ ಹುಟ್ಟಿ ಬೆಳೆದ ಮಾಝಿ ವಿದ್ಯಾರ್ಥಿ ಜೀವನದಲ್ಲೇ ಭರವಸೆಯ ನಾಯಕರಾಗಿ ಮೂಡಿಬಂದವರು. ಸಮುದಾಯದ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಾ ಬಂದ ಅವರು, ಕಾನೂನು ಪದವಿ ಪಡೆದು ರಾಜಕೀಯಕ್ಕೆ ಧುಮುಕುವ ಮುನ್ನ ಆರೆಸ್ಸೆಸ್ ನ ಸರಸ್ವತಿ ಶಿಶು ವಿದ್ಯಾ ಕೇಂದ್ರದಲ್ಲಿ ಬೋಧನೆ ಮಾಡುತ್ತಿದ್ದರು. 1997ರಿಂದ 2000ನೇ ಇಸ್ವಿ ವರೆಗೆ ಸರಪಂಚರಾಗಿ ಕಾರ್ಯನಿರ್ವಹಿಸಿದ ಅವರು 2000ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಬಿಜೆಪಿ ಆದಿವಾಸಿ ಮೋರ್ಚಾ ಕಾರ್ಯದರ್ಶಿಯಾಗಿ ಮಾಝಿ ಅವರ ಕಾರ್ಯದಕ್ಷತೆ ಅವರನ್ನು 2019ರಲ್ಲಿ ಮುಖ್ಯ ಸಚೇತಕರನ್ನಾಗಿ ಮಾಡಿತು. 2005 ರಿಂದ 2009ರಲ್ಲಿ ಬಿಜೆಡಿ ಜತೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಉಪ ಮುಖ್ಯ ಸಚೇತಕರಾಗಿದ್ದರು.

2019ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಸರ್ಕಾರ ಅವರಿಗೆ ಅತಿಥಿಗೃಹ ಮಂಜೂರು ಮಾಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಶಾಸಕರಾಗಿ ಹಲವು ರಾತ್ರಿಗಳನ್ನು ಫುಟ್ಪಾತ್ ನಲ್ಲಿ ಕಳೆದಿದ್ದಾಗಿ ವಿಧಾನಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಬಾಡಿಗೆ ಮನೆಯನ್ನು ಪಡೆಯುವ ಸ್ಥಿತಿಯಲ್ಲಿ ತಾವಿಲ್ಲ ಎಂದು ಸ್ಪೀಕರ್ ಎಸ್.ಎನ್.ಪಾತ್ರೊ ಅವರಿಗೆ ಮಾಝಿ ತಿಳಿಸಿದ್ದರು. ಫುಟ್ಪಾತ್ ನಲ್ಲಿ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಅವರ ಮೊಬೈಲ್ ಫೋನ್ ಕಳ್ಳತನವಾಗಿತ್ತು.

ಇದೀಗ ನಿಯೋಜಿತ ಸಿಎಂಗೆ ಬಂಗ್ಲೆ ಹುಡುಕುವ ಕಾರ್ಯದಲ್ಲಿ ಆಡಳಿತ ಯಂತ್ರ ಮಗ್ನವಾಗಿದೆ. ಏಕೆಂದರೆ ಮಾಜಿ ಸಿಎಂ ನವೀನ್ ಪಟ್ನಾಯಕ್ ಖಾಸಗಿ ಮನೆಯಲ್ಲಿ ಕಳೆದ 24 ವರ್ಷಗಳಿಂದ ಇದ್ದಾರೆ. ಇದರಿಂದ ಸಿಎಂಗೆ ಅಧಿಕೃತ ನಿವಾಸ ಹುಡುಕುವ ಪ್ರಮೇಯ ಬಂದಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News