ಜಮ್ಮು- ಕಾಶ್ಮೀರ ಸಹಿತ 4 ರಾಜ್ಯಗಳ ವಿಧಾನಸಭೆಗೆ ಇಂದು ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ
ಹೊಸದಿಲ್ಲಿ, ಆ.16: ಚುನಾವಣಾ ಆಯೋಗವು ಇಂದು ನಾಲ್ಕು ರಾಜ್ಯಗಳ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು (ಆ.16) ಅಪರಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ಆಯೋಜಿಸಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಂಭವ ಇದೆ ಎನ್ನಲಾಗುತ್ತಿದೆ. ಆದರೆ ಯಾವ ರಾಜ್ಯಗಳಿಗೆ ಚುನಾವಣೆ ಘೋಷಿಸಲಿದೆ ಎಂದು ಆಯೋಗ ಪ್ರಕಟನೆಯಲ್ಲಿ ಉಲ್ಲೇಖಿಸಿಲ್ಲ..
ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದ್ದು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಕೂಡಾ ಚುನಾವಣಾ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಅವಧಿ ಕ್ರಮವಾಗಿ ನವೆಂಬರ್ 3 ಮತ್ತು 26ಕ್ಕೆ ಮುಕ್ತಾಯವಾಗಲಿದೆ. ಜಾರ್ಖಂಡ್ ವಿಧಾನಸಭೆಯ ಅವಧಿ 2025ರ ಜನವರಿಯಲ್ಲಿ ಮುಕ್ತಾಯವಾಗಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸುಪ್ರೀಂಕೋರ್ಟ್ ನೀಡಿದ ಗಡುವು ದಿನಾಂಕವಾದ ಸೆಪ್ಟೆಂಬರ್ 30ರ ಒಳಗಾಗಿ ಚುನಾವಣೆ ನಡೆಸಲು ಕೂಡಾ ಆಯೋಗ ನಿರ್ಧರಿಸಿದೆ. ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ, ಮತದಾನ ದಿನಾಂಕ ಮತ್ತು ಫಲಿತಾಂಶ ಘೋಷಿಸುವ ಬಗ್ಗೆ ಕೂಡಾ ಮಾಹಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ.