ತಮಿಳುನಾಡಿನಲ್ಲಿ ಅಬ್ಬರಿಸಿದ ಫೆಂಗಲ್ ಚಂಡ ಮಾರುತ: ಕೃಷ್ಣಗಿರಿಯಲ್ಲಿ ಕೊಚ್ಚಿಕೊಂಡು ಹೋದ ಬಸ್ ಗಳು

Update: 2024-12-02 12:22 GMT

PC : PTI 

ತಮಿಳುನಾಡು: ಫೆಂಗಲ್ ಚಂಡ ಮಾರುತದ ಪ್ರಭಾವದಿಂದ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹೆಚ್ಚು ಹಾನಿಯಾಗಿದೆ, ಹಲವಾರು ವಾಹನಗಳು ರಸ್ತೆಯಿಂದ ತಗ್ಗು ಪ್ರದೇಶಗಳಿಗೆ ಕೊಚ್ಚಿಕೊಂಡು ಹೋಗಿದೆ.

ಕೃಷ್ಣಗಿರಿಯ ಉತ್ತಂಗಿರಿ ಬಸ್ ನಿಲ್ದಾಣದಲ್ಲಿ ಬಸ್, ಕಾರುಗಳು ಸೇರಿದಂತೆ ಇತರ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಅಧಿಕಾರಿಗಳ ಪ್ರಕಾರ, ಕೃಷ್ಣಗಿರಿ ಜಿಲ್ಲೆಯಲ್ಲಿ ಕಳೆದ 14 ಗಂಟೆಗಳಿಂದ ಸತತವಾಗಿ ಭಾರೀ ಮಳೆಯಾಗುತ್ತಿದೆ ಮತ್ತು ಉತ್ತಂಗರೈ ಪ್ರದೇಶದಲ್ಲಿ ಕಳೆದ ರಾತ್ರಿ ಅತಿ ಹೆಚ್ಚು ಮಳೆಯಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಪುದುಚೇರಿಯಲ್ಲಿ ಪ್ರವಾಹದಲ್ಲಿ ಮುಳುಗಿದ ಮನೆಯೊಂದರಲ್ಲಿ ಸಿಲುಕಿದ್ದ ಶಿಶುವನ್ನು ದೋಣಿ ಮೂಲಕ ತೆರಳಿ ಭಾರತೀಯ ಸೇನೆಯು ಮುಂಜಾನೆ ರಕ್ಷಿಸಿದೆ. ತಮಿಳುನಾಡಿನ ನೀಲಗಿರಿ, ಈರೋಡ್, ಕೊಯಮತ್ತೂರು, ತಿರುಪುರ್, ದಿಂಡಿಗಲ್, ಕೃಷ್ಣಗಿರಿ, ಸೇಲಂ, ನಾಮಕ್ಕಲ್, ತಿರುಚ್ಚಿ, ಕರೂರ್, ಮಧುರೈ ಮತ್ತು ತೇಣಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಸೋಮವಾರ ತಮಿಳುನಾಡಿನ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ರಾಜ್ಯದಾದ್ಯಂತ 7,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು 147 ಜನರನ್ನು ಆಶ್ರಯ ಶಿಬಿರಗಳಲ್ಲಿ ಇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News