ತಮಿಳುನಾಡು: ಬಸ್ ಪ್ರಪಾತಕ್ಕೆ ಬಿದ್ದು ಎಂಟು ಮಂದಿ ಮೃತ್ಯು
ಚೆನ್ನೈ: ಟೂರಿಸ್ಟ್ ಬಸ್ಸೊಂದು ಪ್ರಪಾತಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ ಎಂಟು ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ ನೀಲ್’ಗಿರೀಸ್ ನಲ್ಲಿ ಶನಿವಾರ ನಡೆದಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಬಾಲಕ ಸೇರಿದ್ದಾನೆ.
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಂತೆಯೇ ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.
ತೆಂಕಾಸಿ ಜಿಲ್ಲೆಯ ಕಡಯಂ ಮೂಲದವರಾದ ಸಂತ್ರಸ್ತರು, ತಮ್ಮ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ಸಂದರ್ಭದಲ್ಲಿ ಬಸ್ಸು ಪ್ರಪಾತಕ್ಕೆ ಉರುಳಿದ್ದು, ಸ್ಥಳೀಯರು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಮತ್ತು ಪರಿಹಾರ ತಂಡಗಳು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು.
ಬಸ್ಸು ಮಗುಚಿ ಬಿದ್ದಿದ್ದು, ಪರಿಹಾರ ಕಾರ್ಯಕರ್ತರು ಬಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಸ್ಸನ್ನು ರೋಪ್ ಸಹಾಯದಿಂದ ಮೇಲಕ್ಕೆತ್ತಬೇಕಾಯಿತು. ಬಹುತೇಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.