ಹರ್ಯಾಣ ಸಿಎಂ ವಿರುದ್ಧ ಸ್ಪರ್ಧಿಸಿದ ಬಂಡಾಯ ಅಭ್ಯರ್ಥಿ ಸೇರಿ ಎಂಟು ಮಂದಿ ಬಿಜೆಪಿಯಿಂದ ಉಚ್ಚಾಟನೆ
ಹೊಸದಿಲ್ಲಿ: ಅಕ್ಟೋಬರ್ 5ರಂದು ನಡೆಯುವ ಹರ್ಯಾಣ ವಿಧಾನಸಭಾ ಚುನಾವಣೆಯ ಕಣದಲ್ಲಿ ಉಳಿದಿರುವ ಎಂಟು ಮಂದಿ ಬಂಡಾಯ ಅಭ್ಯರ್ಥಿಗಳನ್ನು ಬಿಜೆಪಿ ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೇರಿದಂತೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ ಕಣದಲ್ಲಿರುವ ಎಂಟು ಮಂದಿ ಉಚ್ಚಾಟನೆಗೆ ಒಳಗಾಗಿದ್ದಾರೆ.
ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ರಂಜೀತ್ ಚೌಟಾಲಾ, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಲಾದ್ವಾ ಕ್ಷೇತ್ರದಲ್ಲಿ ಸ್ಪರ್ಧಿಸಿರು ಸಂದೀಪ್ ಗಾರ್ಗ್ ಉಚ್ಚಾಟಿತರಲ್ಲಿ ಸೇರಿದ್ದಾರೆ. ಎಲ್ಲ ಎಂಟು ಮಂದಿಯನ್ನು ಆರು ವರ್ಷದ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮೋಹನ್‍ಲಾಲ್ ಬಡೋಲಿ ಹೇಳಿದ್ದಾರೆ.
ಅಸ್ಸಂದ್ ಕ್ಷೇತ್ರದಿಂದ ಸ್ಪರ್ಧಿಸಿರುವ ಝಿಲ್‍ರಾಮ್ ಶರ್ಮಾ, ಸಫಿದೊ ಕ್ಷೇತ್ರದಿಂದ ಕಣದಲ್ಲಿರುವ ಮಾಜಿ ಸಚಿವ ಬಚನ್ ಸಿಂಗ್ ಆರ್ಯ, ಮೇಹಮ್ ಕ್ಷೇತ್ರದ ರಾಧಾ ಅಹ್ಲ್‍ವಾಟ್, ಗುರುಗಾಂವ್‍ನ ನವೀನ್ ಗೋಯನ್ ಮತ್ತು ಹತಿನ್ ಕ್ಷೇತ್ರದಖೇರ್ ಸಿಂಗ್ ರಾವತ್ ಹಾಗೂ ಮಾಜಿ ಶಾಸಕ ದೇವೇಂದ್ರ ಕದ್ಯಾಣ್ ಇತರ ಉಚ್ಚಾಟಿತ ನಾಯಕರು.
ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ಬಾರಿ ಗೆದ್ದಿದ್ದ ರನಿಯಾ ಕ್ಷೇತ್ರದಿಂದ ಈ ಬಾರಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ರಂಜೀತ್ ಚೌತಾಲಾ ಪಕ್ಷ ತೊರೆಯಲು ನಿರ್ಧರಿಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಹಿಸ್ಸಾರ್ ನಿಂದ ಸ್ಪರ್ಧಿಸಿ ಅವರು ಸೋಲು ಅನುಭವಿಸಿದ್ದರು.