ಚುನಾವಣಾ ಬಾಂಡ್: 1368 ಕೋಟಿ ನೀಡಿದ ಲಾಟರಿ ಕಿಂಗ್ ಯಾರು?

Update: 2024-03-15 11:41 GMT

 Photo: twitter.com/HarishKumarDaga

ಹೊಸದಿಲ್ಲಿ: ಸುಪ್ರೀಂಕೋರ್ಟ್ ಸೂಚನೆಯಂತೆ ಚುನಾವಣಾ ಆಯೋಗ ಗುರುವಾರ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಚುನವಣಾ ಬಾಂಡ್ ಗಳನ್ನು ಖರೀದಿಸಿದ ಸಂಸ್ಥೆಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದು, ಗರಿಷ್ಠ ಅಂದರೆ 1368 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ ಮಾಲೀಕ ಸ್ಯಾಂಟಿಗೊ ಮಾರ್ಟಿನ್ ಅಥಾ ಲಾಟರಿ ಕಿಂಗ್ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.

ಇವರ ಚಾರಿಟಬಲ್ ಟ್ರಸ್ಟ್ ನ ವೆಬ್ ಸೈಟ್ ಪ್ರಕಾರ ಮಾರ್ಟಿನ್ ಮ್ಯಾನ್ಮಾರ್ ನ ಯಂಗೂನ್ ನಲ್ಲಿ ಕೂಲಿಕಾರ್ಮಿಕನಾಗಿ ವೃತ್ತಿಜೀವನ ಆರಂಭಿಸಿದವರು. 1988ರಲ್ಲಿ, ಭಾರತಕ್ಕೆ ಮರಳಿ ತಮಿಳುನಾಡಿನಲ್ಲಿ ಲಾಟರಿ ವ್ಯವಹಾರವನ್ನು ಆಂಭಿಸಿದರು. ಈಶಾನ್ಯ ರಾಜ್ಯಗಳಿಗೆ ತೆರಳುವ ಮುನ್ನ ಕರ್ನಾಟಕ ಹಾಗೂ ಕೇರಳದಲ್ಲೂ ತಮ್ಮ ವ್ಯವಹಾರ ವಿಸ್ತರಿಸಿದ್ದರು.

ಫ್ಯೂಚರ್ ಗೇಮಿಂಗ್ & ಹೊಟೇಲ್ ಸರ್ವೀಸಸ್ ಕಂಪನಿಯ ಒಡೆಯನಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಕಥೆ ಕನಸುಗಾರಿಕೆ ಮತ್ತು ರಾಜಕೀಯ ಹಗರಣಗಳ ಹೆಣಿಗೆಯಂತಿದೆ. ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ಮ್ಯಾನ್ಮಾರ್‌ನಿಂದ ಹಿಂದಿರುಗಿದ ಬಳಿಕ 1988ರಲ್ಲಿ ಕೊಯಮತ್ತೂರಿನಲ್ಲಿ ಲಾಟರಿ ಏಜೆನ್ಸಿ ಶುರು ಮಾಡಿದ್ದೇ ಮಾಡಿದ್ದು. ಆತನ ಬದುಕೇ ಬದಲಾಗಿ ಹೋಯಿತು.

ಸಾಮಾನ್ಯ ಜನರಿಗೆ ಕನಸು ಮತ್ತು ಅದೃಷ್ಟವನ್ನು ಮಾರುವ ಆಟದಂತಿದ್ದ ಲಾಟರಿ ವ್ಯವಹಾರದ ಮೂಲಕ ತಿರುವು ಪಡೆದ ಆತನ ಬದುಕು ಅನಂತರ ಕಂಡದ್ದು ಬೇರೆ ಬೇರೆಯದೇ ಮಜಲುಗಳನ್ನು. ಕಾರ್ಮಿಕನೊಬ್ಬ ಲಾಟರಿ ಕಿಂಗ್ ಆಗಿ ಬದಲಾದದ್ದು ಬೆರಗುಗೊಳಿಸುವ ಕಥೆಯೇ ಆದರೂ, ಆತ ರಾಜಕೀಯದ ರಾಡಿಯಲ್ಲೂ ಅಷ್ಟೇ ಮಿಂದೆದ್ದಿದ್ದ ಎಂಬುದು ಮತ್ತೊಂದು ಆಯಾಮ.

ಈಗ ಬಯಲಾಗಿರುವ ಪ್ರಕಾರ, ಚುನಾವಣಾ ಬಾಂಡ್ ಮೂಲಕ ರಾಜಕೀಯ ದೇಣಿಗೆ ನೀಡಿದ ಸಂಸ್ಥೆಗಳಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ಕಂಪನಿಯೇ ಅಗ್ರ ಸ್ಥಾನದಲ್ಲಿದೆ.

2019ರ ಎಪ್ರಿಲ್ ನಿಂದ 2024ರ ಜನವರಿವರೆಗೆ ಆತನ ಕಂಪನಿ 1,368 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಈಗ 59 ವರ್ಷ ವಯಸ್ಸಿನ ಮಾರ್ಟಿನ್, ಮ್ಯಾನ್ಮಾರ್‌ನಿಂದ ಹಿಂದಿರುಗಿದ ನಂತರ ಕೊಯಮತ್ತೂರಿನಲ್ಲಿ ಮಾರ್ಟಿನ್ ಲಾಟರಿ ಏಜೆನ್ಸಿ ಲಿಮಿಟೆಡ್ ಎಂಬ ಸಂಸ್ಥೆ ಸ್ಥಾಪಿಸಿದ್ದು 1988ರಲ್ಲಿ. ಆತನ ಹೆಸರೇ ಲಾಟರಿ ಮಾರ್ಟಿನ್ ಎಂದಾಗಿ ಹೋಯಿತು. ಮತ್ತು ಆತ ತಂದ ಎರಡಂಕಿ ಲಾಟರಿ ಎಲ್ಲೆಡೆ ಮನೆಮಾತಾಗಿ ಬಿಟ್ಟಿತು.

ಕೊಯಮತ್ತೂರಿನಲ್ಲಿ ಶುರುವಾದ ಆತನ ಈ ವ್ಯವಹಾರ ಕರ್ನಾಟಕ ಮತ್ತು ಕೇರಳಕ್ಕೂ ವಿಸ್ತರಣೆಗೊಂಡಿತು. ಕಡೆಗೆ ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿಯು ಅದಕ್ಕೆ ಅನುಮತಿ ಸಿಕ್ಕಿತ್ತು. ಮಾರ್ಟಿನ್ ಸಾಮ್ರಾಜ್ಯ ಇದ್ದಕ್ಕಿದ್ದಂತೆ ಬೃಹತ್ತಾಗಿ ಬೆಳೆದುಬಿಟ್ಟಿತು. ಭಾರೀ ಶ್ರೀಮಂತಿಕೆ ಬಂತು. ಎಲ್ಲೋ ಇದ್ದ ಕಾರ್ಮಿಕನೊಬ್ಬ ಹಳೆಯ ಧೂಳೆಲ್ಲ ಕೊಡವಿಕೊಂಡು ಪ್ರಭಾವಿಯಾಗಿ ಬೆಳೆದುಬಿಟ್ಟಿದ್ದೂ ಆಗಿತ್ತು.

ಆದರೆ ಅದರ ಬೆನ್ನಲ್ಲೇ, ಮಾರ್ಟಿನ್ ಹೊಸ ಅವತಾರದ ಹಿಂದಿದ್ದ ಬೇರೆಯದೇ ಕೊಳಕು ಬಯಲಾಗುವುದಕ್ಕೂ ಹೆಚ್ಚು ಸಮಯ ಹಿಡಿಯಲಿಲ್ಲ.

2008ರಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ಕೇರಳದಲ್ಲಿ ಸಿಪಿಐಎಂ ಮುಖವಾಣಿ ದೇಶಾಭಿಮಾನಿಗೆ 2 ಕೋಟಿ ರೂ. ದೇಣಿಗೆ ನೀಡಿದಾಗ ರಾಜಕೀಯವಾಗಿ ಅದು ದೊಡ್ಡ ಗುಲ್ಲಾಯಿತು.

ಆಗಲೇ ಸಿಕ್ಕಿಂ ಸರ್ಕಾರಕ್ಕೆ 4,500 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪವನ್ನು ಸ್ಯಾಂಟಿಯಾಗೊ ಮಾರ್ಟಿನ್ ಎದುರಿಸುತ್ತಿದ್ದ. ಅಂಥ ಹೊತ್ತಲ್ಲಿ ಪಕ್ಷಕ್ಕೆ ಬಂದ ದೇಣಿಗೆ ಎರಡು ಬಣಗಳಾಗಿ ಒಡೆದಿದ್ದ ಕೇರಳ ಸಿಪಿಐಎಂನಲ್ಲಿ ಪಿಣರಾಯಿ ವಿಜಯನ್ ಮತ್ತು ವಿಎಸ್ ಅಚ್ಯುತಾನಂದನ್ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಆ ದೇಣಿಗೆ ವಿಚಾರವಾಗಿ ವಿಜಯನ್ ಬಣವನ್ನು ಅಚ್ಯುತಾನಂದನ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಪಕ್ಷ ಮತ್ತು ಮುಖವಾಣಿ ದೇಶಾಭಿಮಾನಿಯನ್ನು ನಿಯಂತ್ರಿಸುತ್ತಿದ್ದ ವಿಜಯನ್ ಬಣಕ್ಕೆ ಸ್ಯಾಂಟಿಯಾಗೋ ನೀಡಿದ ಆ ದೇಣಿಗೆ ಮುಜುಗರವನ್ನು ಉಂಟುಮಾಡಿತು. ಕಡೆಗೆ ಅದು ಹಣವನ್ನು ಮಾರ್ಟಿನ್ಗೇ ಹಿಂದಿರುಗಿಸಬೇಕಾಯಿತು.

ಆದರೆ ಲಾಟರಿ ವ್ಯವಹಾರದಿಂದ ಕೇರಳ ಭಾರೀ ಆದಾಯ ಪಡೆಯುತ್ತಿದ್ದ ವಾಸ್ತವವೂ ಮತ್ತೊಂದೆಡಗೆ ಇತ್ತು. ಕೆಲ ವರ್ಷಗಳ ಬಳಿಕ 2015ರಲ್ಲಿನ ಸಂದರ್ಶನವೊಂದರಲ್ಲಿ ಅಚ್ಯುತಾನಂದನ್ ಅವರೇ ಮಾರ್ಟಿನ್ ಪರಿಚಯಿಸಿರುವ ಲಾಟರಿ ವ್ಯವಹಾರವನ್ನು ಹಾಡಿ ಹೊಗಳಿದ್ದರು.

ಅದನ್ನು ಹಿಂದುಳಿದವರ ಪಾಲಿನ ಭರವಸೆಯೆಂಬಂತೆ ಮಾತನಾಡಿದ್ದರು. ಆಗ ಕೇರಳದ ಲಾಟರಿ ಆದಾಯ ದೊಡ್ಡ ಮಟ್ಟದ್ದಾಗಿದ್ದುದು ಕೂಡ ಅವರ ಮಾತಿಗೆ ಪುಷ್ಟಿಯೆಂಬಂತಿತ್ತು. 2011ರಲ್ಲಿ 557 ಕೋಟಿ ರೂ. ಇದ್ದದ್ದು 2015ರಲ್ಲಿ 5,696 ಕೋಟಿ ರೂ.ಗೆ ಏರಿತ್ತು. 2020ರಲ್ಲಿ ಕೇರಳದ ಲಾಟರಿ ಆದಾಯ 9,974 ಕೋಟಿ ರೂ.ಗೆ ಏರಿಕೆಯಾಗಿದೆ.

ಸ್ಯಾಂಟಿಯಾಗೊ ಮಾರ್ಟಿನ್ ಅದೃಷ್ಟದಲ್ಲಿನ ಏರಿಳಿತ ತಮಿಳುನಾಡಿನ ಡಿಎಂಕೆಯೊಂದಿಗಿನ ಆತನ ನಿಕಟ ಸಂಬಂಧದೊಂದಿಗೂ ಹೆಣೆದುಕೊಂಡಿದೆ. 2011ರಲ್ಲಿ ಮಾರ್ಟಿನ್ ಇಲೈಗ್ನನ್ ಎಂಬ ತಮಿಳು ಸಿನಿಮಾವನ್ನು 20 ಕೋಟಿ ವೆಚ್ಚದಲ್ಲಿ ನಿರ್ಮಿಸಿದರು. ಅದಕ್ಕೆ ಚಿತ್ರಕಥೆ ಬರೆದಿದ್ದವರು ಆಗಿನ ಮುಖ್ಯಮಂತ್ರಿ ಎಂ ಕರುಣಾನಿಧಿ.

ಎಐಎಡಿಎಂಕೆ ಅಧಿಕಾರಕ್ಕೆ ಬಂದಾಗ ಮಾರ್ಟಿನ್ ಪಾಲಿನ ಕೆಟ್ಟ ದಿನಗಳು ಶುರುವಾದವು.

ಜಯಲಲಿತಾ ಅಧಿಕಾರ ವಹಿಸಿಕೊಂಡ ಆರಂಭಿಕ ದಿನಗಳಲ್ಲಿ ಭೂಕಬಳಿಕೆ ಆರೋಪಗಳು ಮತ್ತು ಗೂಂಡಾ ಕಾಯ್ದೆಯಡಿ ನೂರಾರು ಡಿಎಂಕೆ ನಾಯಕರು ಮತ್ತು ಅವರ ಪರ ಸಹಾನುಭೂತಿಯುಳ್ಳವರ ಬಂಧನವಾದಾಗ ಮಾರ್ಟಿನ್ ಕೂಡ ಜೈಲುಪಾಲಾದರು.

ಕಡೆಗೆ ಮದ್ರಾಸ್ ಹೈಕೋರ್ಟ್ ಮಾರ್ಟಿನ್ ಬಂಧನವನ್ನು ರದ್ದುಗೊಳಿಸಿತು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಿತಾದರೂ. ಅದಾಗಲೇ ಎಂಟು ತಿಂಗಳು ಅವರು ಜೈಲಿನಲ್ಲಿದ್ದರು.

ಮಾರ್ಟಿನ್ ಜೈಲಿನಲ್ಲಿದ್ದಾಗ ಮತ್ತು ಹಲವಾರು ಲಾಟರಿ ಪ್ರಕರಣಗಳಲ್ಲಿ ಸಿಬಿಐ ಚಾರ್ಜ್‌ಶೀಟ್‌ಗಳನ್ನು ಎದುರಿಸಬೇಕಾಗಿ ಬಂದಾಗ ಆತನ ಪತ್ನಿ ಲೀಮಾ ರೋಸ್ ಮುನ್ನೆಲೆಗೆ ಬಂದರು. IJK ಪಕ್ಷವನ್ನೂ ಸೇರಿದ ಆಕೆ, ಕೊಯಮತ್ತೂರಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಎಂಕೆ ಸ್ಟಾಲಿನ್ ಅವರ ಅಳಿಯ ಶಬರೇಶನ್ ಅವರ ನಿಕಟ ವಲಯದಲ್ಲಿ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ ಇದ್ಧರು. ಆಧವ್ ಅರ್ಜುನ್ ಇತ್ತೀಚೆಗೆ ದಲಿತ ರಾಜಕೀಯ ಸಂಘಟನೆ ಮತ್ತು ಡಿಎಂಕೆ ಮಿತ್ರಪಕ್ಷ ವಿದುತಲೈ ಚಿರುತೈಗಲ್ ಕಚ್ಚಿಯ (ವಿಸಿಕೆ) ಉಪ ಪ್ರಧಾನ ಕಾರ್ಯದರ್ಶಿಯಾಗಿ ಸೇರಿಕೊಂಡರು.

ಮಾರ್ಟಿನ್ ವ್ಯವಹಾರ ಲಾಟರಿಗೆ ಮಾತ್ರವೇ ಸೀಮಿತವಾಗಲಿಲ್ಲ. ಕಳೆದ ದಶಕದಲ್ಲಿ ಅವರು ಇತರ ಉದ್ಯಮಗಳ ಕಡೆಗೂ ತಮ್ಮ ಸಾಮ್ರಾಜ್ಯ ಬೆಳೆಸಿದರು.

ಕೊಯಮತ್ತೂರಿನ ಬಳಿಯ ಮಾರ್ಟಿನ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಸ್ಸೆಸ್ ಮ್ಯೂಸಿಕ್ ಎಂಬ ಟಿವಿ ಚಾನೆಲ್, ಎಂ & ಸಿ ಪ್ರಾಪರ್ಟಿ ಡೆವಲಪ್ಮೆಂಟ್, ಮಾರ್ಟಿನ್ ನಂದವನಂ ಅಪಾರ್ಟ್‌ಮೆಂಟ್‌ಗಳು ಮತ್ತು ಲೀಮಾ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮೋದಲಾದವು ಅವರ ಇತರ ವ್ಯವಹಾರಗಳಲ್ಲಿ ಸೇರಿವೆ.

2011ರಲ್ಲಿ ಅಕ್ರಮ ಲಾಟರಿ ವ್ಯವಹಾರಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರ ದಾಳಿಯನ್ನು ಮಾರ್ಟಿನ್ ಎದುರಿಸಬೇಕಾಯಿತು. 2013ರಲ್ಲಿ ಕೇರಳ ಪೊಲೀಸರು ರಾಜ್ಯದಲ್ಲಿ ಅಕ್ರಮ ಲಾಟರಿ ಕಾರ್ಯಾಚರಣೆಗಳ ತನಿಖೆಯ ಭಾಗವಾಗಿ ಮಾರ್ಟಿನ್ ವಿರುದ್ಧ ರೇಡ್ ನಡೆಸಿದ್ದರು.

2015ರಲ್ಲಿ ಆದಾಯ ತೆರಿಗೆ ಇಲಾಖೆ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆರಿಗೆ ವಂಚನೆ ಮತ್ತು ಹಣಕಾಸು ಅಕ್ರಮಗಳ ಆರೋಪದ ಮೇಲೆ ಮಾರ್ಟಿನ್ ನಿವಾಸಗಳ ಮೇಲೆ ದಾಳಿ ನಡೆಸಿತ್ತು.

2016ರಲ್ಲಿ ಈಡಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಲಾಟರಿ ವ್ಯವಹಾರಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆ ಹಿನ್ನೆಲೆಯಲ್ಲಿ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. 2018ರಲ್ಲಿ ಅಕ್ರಮ ಲಾಟರಿ ಕಾರ್ಯಾಚರಣೆಗಳು ಮತ್ತು ಆಪಾದಿತ ಆರ್ಥಿಕ ಅಪರಾಧಗಳ ಬಗ್ಗೆ ವ್ಯಾಪಕ ತನಿಖೆಯ ಭಾಗವಾಗಿ ಸಿಬಿಐ ಅನೇಕ ರಾಜ್ಯಗಳಲ್ಲಿ ಮಾರ್ಟಿನ್ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸಿತ್ತು.

ಸಿಕ್ಕಿಂ ಸರ್ಕಾರಕ್ಕೆ 900 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮೇ ತಿಂಗಳಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿಯಲ್ಲಿ ಈಡಿ ದಾಳಿ ನಡೆದಿತ್ತು.

2008ರಲ್ಲಿ ಮಾರ್ಟಿನ್ ಸಿಪಿಎಂ ನ ಪತ್ರಿಕೆಗೆ ಕೊಟ್ಟಿದ್ದು 2 ಕೋಟಿ ರೂಪಾಯಿ. ಈಗ ಆತ ಎಲೆಕ್ಟೊರಲ್ ಬಾಂಡ್ ಮೂಲಕ ನೀಡಿರುವುದು 1,368 ಕೋಟಿ ರೂಪಾಯಿ.

ಒಂದೂವರೆ ಸಾವಿರ ಕೋಟಿ ರೂಪಾಯಿ ಒಂದೇ ಕಡೆ ದೇಣಿಗೆ ಕೊಟ್ಟಿದ್ದಾನೆ ಈ ಆಸಾಮಿ ಅಂದ್ರೆ ಈತನ ವ್ಯವಹಾರ, ವ್ಯಾಪ್ತಿ, ವಿಸ್ತಾರ ಅದೆಷ್ಟು ಇರಬಹುದು ಎಂದು ಊಹಿಸಲು ಅಸಾಧ್ಯ. 

ಅಖಿಲ ಭಾರತ ಲಾಟರಿ ವ್ಯವಹಾರ ಮತ್ತು ಸಂಬಂಧಿತ ಉದ್ಯಮಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅವರ ಫ್ಯೂಚರ್ ಗೇಮಿಂಗ್ ಸೊಲ್ಯೂಶನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿಶ್ವ ಲಾಟರಿ ಅಸೋಸಿಯೇಷನ್ ನ ಸದಸ್ಯತ್ವವನ್ನೂ ಪಡೆದಿದೆ. ಆನ್ ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕ್ರೀಡಾ ಬೆಟ್ಟಿಂಗ್ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದೆ. ಈ ಸಂಸ್ಥೆ ಐದು ವರ್ಷದ ಅವಧಿಯಲ್ಲಿ 1368 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ರಾಜಕೀಯ ಪಕ್ಷಗಳಿಗೆ ನೀಡಿದೆ.

ಪಿಎಂಎಲ್ಎ ಕಾನೂನಿನ ಉಲ್ಲಂಘನೆ ಆರೋಪದಲ್ಲಿ 2019ರಿಂದೀಚೆಗೆ ಕಾನೂನು ಜಾರಿ ನಿರ್ದೇಶನಾಲಯ ಕಂಪನಿ ವಿರುದ್ಧ ತನಿಖೆ ನಡೆಸುತ್ತಿದ್ದು, 2023ರ ಮೇ ತಿಂಗಳಲ್ಲಿ ಕೊಯಮತ್ತೂರು ಮತ್ತು ಚೆನ್ನೈ ಕಚೇರಿಗಳ ಮೇಲೆ ದಾಳಿಯನ್ನೂ ನಡೆಸಿತ್ತು. ಈ ಕಂಪನಿ ಸಿಕ್ಕಿಂ ಸರ್ಕಾರದ ಲಾಟರಿಗಳನ್ನು ಕೇರಳದಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಸಿಬಿಐ ತನಿಖೆ ನಡೆಸಿ ಸಲ್ಲಿಸಿದ ಆರೋಪಪಟ್ಟಿ ಆಧಾರದಲ್ಲಿ ಇ.ಡಿ. ತನಿಖೆ ಆರಂಭಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News