ಹುಸಿ ಬಾಂಬ್ ಬೆದರಿಕೆ | ಪ್ರತೀ ವಿಮಾನಕ್ಕೆ ಸರಾಸರಿ 3 ಕೋಟಿ ರೂ. ನಷ್ಟ!
ಹೊಸದಿಲ್ಲಿ : ಕಳೆದ ವಾರ ಹತ್ತಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಸ್ವೀಕರಿಸಿದ ಹುಸಿ ಬಾಂಬ್ ಬೆದರಿಕೆ ಕರೆಯಿಂದ ಆ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಮಾತ್ರ ಸಮಸ್ಯೆಯಾಗಿಲ್ಲ. ಬದಲಿಗೆ, ಇಂತಹ ಬೆದರಿಕೆಗಳಿಂದ ಒಂದು ವಿಮಾನ ತುರ್ತು ಭೂಸ್ಪರ್ಶ ಮಾಡಲು ಅಥವಾ ಅದು ಟೇಕ್ ಆಫ್ ಆದ ಸ್ಥಳಕ್ಕೆ ವಾಪಸು ಮರಳಲು ವಿಮಾನಯಾನ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಸೋಮವಾರ ಮುಂಬೈನಿಂದ ನ್ಯೂಯಾರ್ಕ್ ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಎಐ 119 ವಿಮಾನದ ಹಿರಿಯ ಪೈಲಟ್ ಪ್ರಕಾರ, “ಬಿ777 ವಿಮಾನದ ಗರಿಷ್ಠ ಭೂಸ್ಪರ್ಶ ತೂಕ 250 ಟನ್ ಆಗಿದೆ. ಇಂತಹ ಭರ್ತಿ ವಿಮಾನವು ಟೇಕಾಫ್ ಆಗುವಾಗ 340-450 ಟನ್ ತೂಕದ ಪ್ರಯಾಣಿಕರು, ಬ್ಯಾಗೇಜ್ ಮತ್ತು ಸರಕನ್ನು ಹೊಂದಿರುತ್ತದೆ. ವಿಮಾನವು ಎರಡೇ ಗಂಟೆಗಳಲ್ಲಿ ಭೂಸ್ಪರ್ಶ ಮಾಡುವುದೆಂದರೆ, ಸುಮಾರು 100 ಟನ್ ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಇಂತಹ ಇಂಧನದ ಪ್ರತಿ ಟನ್ ಮೌಲ್ಯ ಒಂದು ಲಕ್ಷ ರೂಪಾಯಿ. ಅರ್ಥಾತ್, ಒಟ್ಟಾರೆ ಇಂಧನ ವ್ಯರ್ಥದ ಮೌಲ್ಯ ಒಂದು ಕೋಟಿ ರೂಪಾಯಿ” ಎಂದು TOI ಸುದ್ದಿ ಸಂಸ್ಥೆಗೆ ವಿವರಿಸಿದ್ದಾರೆ.
ಆದರೆ, ಹುಸಿ ಬಾಂಬ್ ಬೆದರಿಕೆ ಸ್ವೀಕರಿಸಿದ ಬೆನ್ನಿಗೇ ಈ ವಿಮಾನವು ತನ್ನ ಮಾರ್ಗ ಬದಲಿಸಿ, ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಇದರೊಂದಿಗೆ ವಿಮಾನ ಯಾನ ಸಂಸ್ಥೆಯು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ಹಾಗೂ ಪಾರ್ಕಿಂಗ್ ಮಾಡಲು, ಸುಮಾರು 200 ಮಂದಿ ಪ್ರಯಾಣಿಕರನ್ನು ದಿಲ್ಲಿಯ ವಿವಿಧ ಹೋಟೆಲ್ ಗಳಲ್ಲಿರಿಸಲು, ಪ್ರಯಾಣಿಕರ ಸಮಯಕ್ಕೆ ಪರಿಹಾರ ನೀಡಲು ಹಾಗೂ ವಿಮಾನ ತಪ್ಪಿಸಿಕೊಂಡಿರುವ ಪ್ರಯಾಣಿಕರನ್ನು ದಿಲ್ಲಿಯಿಂದ ನಿಗದಿತ ಮರಳುವ ವಿಮಾನಕ್ಕೆ ಕರೆ ತರಲು ಬೃಹತ್ ಮೊತ್ತವನ್ನು ವೆಚ್ಚ ಮಾಡಬೇಕಾದ ಅಗತ್ಯ ಬಿದ್ದಿತು.
ಈ ಎಲ್ಲ ವೆಚ್ಚಗಳ ಒಟ್ಟಾರೆ ಮೊತ್ತ ಸುಮಾರು ಮೂರು ಕೋಟಿ ರೂ. ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಭಾರತೀಯ ವಿಮಾನಗಳು ಸೋಮವಾರದಿಂದ ಗುರುವಾರದವರೆಗೆ ಸುಮಾರು 40 ಹುಸಿ ಬಾಂಬ್ ಕರೆಗಳನ್ನು ಸ್ವೀಕರಿಸಿದ್ದು, ಇದರಿಂದ 60ರಿಂದ 80 ಕೋಟಿ ರೂ. ಅಧಿಕ ವೆಚ್ಚವಾಗಿದೆ ಎನ್ನಲಾಗಿದೆ.
ವಿಮಾನ ಯಾನ ಸಂಸ್ಥೆಯ ಮತ್ತೊಬ್ಬ ಹಿರಿಯ ಅಧಿಕಾರಿ ಪ್ರಕಾರ, ಇಂತಹ ವಿಮಾನಗಳಲ್ಲಿ ವಿಮಾನದ ಸಿಬ್ಬಂದಿಗಳು ಹೆಚ್ಚು ಸಮಯವನ್ನು ಕಳೆಯುವಂತಾಗುವುದರಿಂದ, ಅವರಿಗೆ ವಿರಮಿಸಲು ಹೆಚ್ಚು ಸಮಯಾವಕಾಶ ಒದಗಿಸಬೇಕಾಗುತ್ತದೆ. ಇದರಲ್ಲಿ ಅವರ ಹೋಟೆಲ್ ವೆಚ್ಚವೂ ಸೇರಿದೆ. ಇದು ಮಾತ್ರವಲ್ಲದೆ, ತಮ್ಮ ವಿಮಾನಗಳನ್ನು ತಪ್ಪಿಸಿಕೊಂಡ ಪ್ರಯಾಣಿಕರು ಈ ವಿಮಾನ ಯಾನ ಸಂಸ್ಥೆಗಳ ವಿರುದ್ಧ ಪ್ರಕರಣಗಳನ್ನೂ ದಾಖಲಿಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿನ ವೆಚ್ಚವು ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.