ಗಾಝಾ ಆಕ್ರಮಣಕ್ಕೆ ಒಂದು ವರ್ಷ | ಕದನ ವಿರಾಮಕ್ಕೆ ವಿಶ್ವಾದ್ಯಂತ ಕರೆಗಳ ಮಹಾಪೂರ

Update: 2024-10-07 16:30 GMT

PC : PTI 

ಗಾಝಾ : ಕಳೆದ ವರ್ಷ ಇಸ್ರೇಲ್ ನಡೆಸಿದ್ದ ಫೆಲೆಸ್ತೀನಿಗಳ ಮಾರಣ ಹೋಮ ಸೋಮವಾರ ಒಂದು ವರ್ಷವನ್ನು ಪೂರ್ಣಗೊಳಿಸಿದ್ದು,ಈ ಸಂದರ್ಭದಲ್ಲಿ ವಿಶ್ವಾದ್ಯಂತ ಹತ್ತಾರು ಸಾವಿರ ಜನರು ಬೃಹತ್ ರ‍್ಯಾಲಿಗಳನ್ನು ನಡೆಸಿ ಗಾಝಾ ಮತ್ತು ಲೆಬನಾನ್‌ಗಳಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದರು.

ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಮೊದಲ ವರ್ಷಾಚರಣೆಯ ಅಂಗವಾಗಿ ಸೋಮವಾರ ಡಝನ್‌ಗಟ್ಟಲೆ ನಗರಗಳಲ್ಲಿ ಪ್ರತಿಭಟನಾಕಾರರು ಸಮಾವೇಶಗೊಂಡಿದ್ದರು. ಇಸ್ರೇಲ್ ಗಾಝಾ ಮತ್ತು ಲೆಬನಾನ್‌ಗಳಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿದ್ದು,ಇದು ವ್ಯಾಪಕ ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಸೋಮವಾರ ನ್ಯೂಜಿಲಂಡ್‌ನ ಆಕ್ಲಂಡ್‌ನಲ್ಲಿ ಸರಕಾರಿ ಟಿವಿಎನ್‌ಝಡ್ ಟಿವಿ ಕೇಂದ್ರದ ಎದುರು ಸೇರಿ ಕದನ ವಿರಾಮಕ್ಕೆ ಆಗ್ರಹಿಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ತೀವ್ರ ಬಲಪಂಥೀಯ ಮೂಲಭೂತವಾದಿ ಕ್ರಿಶ್ಚಿಯನ್ ಗುಂಪು ಡೆಸ್ಟಿನ ಚರ್ಚ್‌ನ ಅನುಯಾಯಿಗಳೊಂದಿಗೆ ಘರ್ಷಣೆ ನಡೆಸಿದರು.

ನ್ಯೂಝಿಲಂಡ್ ಹೆರಾಲ್ಡ್‌ನ ವರದಿಯ ಪ್ರಕಾರ ಎದುರಾಳಿ ಗುಂಪುಗಳನ್ನು ಪ್ರತ್ಯೇಕಿಸಲು 35 ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದರು. ಟಿವಿಎನ್‌ಝಡ್ ಸಮೀಪದ ರಸ್ತೆಗೂ ಹಬ್ಬಿದ ಗಲಭೆಯನ್ನು ನಿಯಂತ್ರಿಸಲು ಪೋಲಿಸರು ಪ್ರಯತ್ನಿಸಿದ್ದು, ಓರ್ವ ಪ್ರತಿಭಟನಾಕಾರ ಪೆಪ್ಪರ್ ಸ್ಪ್ರೇ ಪ್ರಯೋಗಕ್ಕೆ ಗುರಿಯಾಗಿದ್ದ.

ಸೋಮವಾರ ಬೆಳಿಗ್ಗೆ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು, ಕದನವಿರಾಮ, ಸಂಯಮ ಮತ್ತು ಉದ್ವಿಗ್ನತೆ ಶಮನಕ್ಕೆ ಕರೆಯನ್ನು ನ್ಯೂಝಿಲಂಡ್ ಮುಂದುವರಿಸುತ್ತದೆ, ಪ್ರತೀಕಾರಕ್ಕಾಗಿ ಅಲ್ಲ. ಪ್ರಾದೇಶಿಕ ಉದ್ವಿಗ್ನತೆ ಮತ್ತು ಸಂಘರ್ಷವನ್ನು ತಗ್ಗಿಸುವ ಯಾವುದೇ ಮಿಲಿಟರಿ ಕ್ರಮಗಳಿಲ್ಲ ಎಂದು ಹೇಳಿದರು.

ಸಂಘರ್ಷವನ್ನು ಕೊನೆಗೊಳಿಸಲು ‘ದ್ವಿ-ರಾಷ್ಟ್ರ ಪರಿಹಾರ’ಕ್ಕೆ ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News