ಬಿಜೆಪಿಯಿಂದ ಒತ್ತಡ | ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಕೈಬಿಟ್ಟ ಆರ್‌ ಎಲ್‌ ಡಿ

Update: 2024-09-08 05:41 GMT

ಜಯಂತ್ ಚೌಧರಿ | PC : PTI 

ಹೊಸದಿಲ್ಲಿ : ಬಿಜೆಪಿಯ ಒತ್ತಡಕ್ಕೆ ಮಣಿದ ರಾಷ್ಟ್ರೀಯ ಲೋಕದಳ, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಬೇಡಿಕೆಯನ್ನು ಕೈಬಿಟ್ಟಿದೆ. ಈ ಬೆಳವಣಿಗೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಎನ್‍ಡಿಎ ಮಿತ್ರಪಕ್ಷಗಳ ಮೇಲೆ ಬಿಜೆಪಿ ಹೊಂದಿರುವ ಹಿಡಿತವನ್ನು ಸ್ಪಷ್ಟಪಡಿಸುತ್ತದೆ.

ಹರ್ಯಾಣದಲ್ಲಿ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸೇರುವ ಸಂದರ್ಭದಲ್ಲೇ ಹರ್ಯಾಣ ವಿಧಾನಸಭೆಯ ಕನಿಷ್ಠ ಎರಡು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಆರ್‌ ಎಲ್‌ ಡಿ ಮುಂದಿಟ್ಟಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ.

ರೈತರು ಹಾಗೂ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ಸುತ್ತ ಕೇಂದ್ರಿತವಾಗಿರುವ ಆರ್‌ ಎಲ್‌ ಡಿ ಪಕ್ಷದ ರಾಜಕೀಯವು, ಅತಿಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕ ಸಮುದಾಯ ಮತ್ತು ಜಾಟ್ ಸಮುದಾಯವನ್ನು ಹೊಂದಿರುವ ಹರ್ಯಾಣಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿತ್ತು ಎನ್ನಲಾಗಿದೆ.

ಉತ್ತರ ಪ್ರದೇಶದ ಮೀರ್‍ಪುರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಕೂಡಾ ಇಂಗಿತ ವ್ಯಕ್ತಪಡಿಸಿತ್ತು. ಹಾಲಿ ಶಾಸಕ ಚಂದನ್ ಚೌಹಾಣ್, ಬಿಜ್ನೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. 2019ರ ಚುನಾವಣೆಯಲ್ಲಿ 90 ಸದಸ್ಯಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು ಮತ್ತು ಶೇಕಡ 36.49ರಷ್ಟು ಮತ ಪಡೆದಿತ್ತು. ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವೇ ಸ್ಪರ್ಧಿಸಲು ಸಣ್ಣ ಮಿತ್ರ ಪಕ್ಷಗಳು ಸಹಕಾರ ನೀಡಬೇಕು ಎನ್ನುವ ನಿಲುವನ್ನು ಬಿಜೆಪಿ ಹೊಂದಿದೆ.

ಮಹತ್ವದ ಅಂಶವೆಂದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿ ವೇಳೆ ಆರ್‌ ಎಲ್‌ ಡಿ, ಬಿಜೆಪಿ ಸಂಸದ ಮತ್ತು ಡಬ್ಲ್ಯುಎಫ್‍ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿದ್ದ ಹೋರಾಟಕ್ಕೆ ಬಹಿರಂಗ ಬೆಂಬಲ ಘೋಷಿಸಿತ್ತು. ಹರ್ಯಾಣ ಬದಲು ಜಮ್ಮು ಮತ್ತು ಕಾಶ್ಮೀರದ 10 ಸ್ಥಾನಗಳಿಗೆ ಸ್ಪರ್ಧಿಸಲು ಆರ್‌ ಎಲ್‌ ಡಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News