ಕಂಗನಾ ರಣಾವತ್ ವಿರುದ್ಧ ನಿರ್ಣಯ ಅಂಗೀಕರಿಸಿದ ಹಿಮಾಚಲ ಪ್ರದೇಶ ಸದನ
ಹೊಸದಿಲ್ಲಿ: ಹಿಮಾಚಲ ಪ್ರದೇಶ ವಿಧಾನಸಭೆಯು ಕಾಂಗ್ರೆಸ್ ಬೆಂಬಲಿತ ನಿರ್ಣಯವನ್ನು ಅಂಗೀಕರಿಸಿದ್ದು, ಭಾರತೀಯ ಜನತಾ ಪಕ್ಷದ ಮಂಡಿ ಸಂಸದೆ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಗಳ ಕುರಿತು ಇತ್ತೀಚೆಗೆ ಮಾಡಿದ ಟೀಕೆಗಳನ್ನು ಖಂಡಿಸಿದೆ.
ಇತ್ತೀಚೆಗೆ ರೈತರ ಪ್ರತಿಭಟನೆಯ ವಿರುದ್ಧ ಹೇಳಿಕೆ ನೀಡಿದ ನಟಿ, ಸಂಸದೆ ಕಂಗನಾ ರಣಾವತ್, ರೈತರ ಪ್ರತಿಭಟನೆಯಲ್ಲಿ ವಿದೇಶಿ ಶಕ್ತಿಗಳ ಪಿತೂರಿಯಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಶವಗಳನ್ನು ನೇಣು ಹಾಕುವುದು, ಅತ್ಯಾಚಾರ ಪ್ರಕರಣಗಳು ನಡೆದ ಉದಾಹರಣೆಗಳಿವೆ. ರೈತರ ಪ್ರತಿಭಟನೆಯನ್ನು ಮಟ್ಟ ಹಾಕದಿದ್ದರೆ ಬಾಂಗ್ಲಾದೇಶದಂತಹ ಅರಾಜಕತೆ ಸೃಷ್ಟಿಯಾಗಬಹುದು. ಇದಕ್ಕೆ ಪ್ರಬಲ ನಾಯಕತ್ವದ ಅಗತ್ಯವಿದೆ" ಎಂದು ಹೇಳಿದ್ದರು.
ಕಂಗನಾ ಹೇಳಿಕೆಗೆ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿತ್ತು. ಹಿಮಾಚಲ ಪ್ರದೇಶ ಸದನವು ಟೀಕೆಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸುತ್ತಿದ್ದಂತೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಿಂದ ಸಾವಿರಾರು ರೈತರು ಈಗ ರದ್ದಾದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಹಲವಾರು ತಿಂಗಳುಗಳಿಂದ ಆಂದೋಲನ ನಡೆಸಿದ್ದರು.
ಅಕ್ಟೋಬರ್ 1 ರಂದು ಹರಿಯಾಣ ಚುನಾವಣೆ ನಡೆಯಲಿದ್ದು, ಕಂಗನಾ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡವು.