ನಾನು ಅಮಾಯಕ, ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಕೋಲ್ಕತ್ತ ವೈದ್ಯೆಯ ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ರಾಯ್

Update: 2025-01-20 14:04 IST
Photo of Sanjay Roy

ಆರೋಪಿ ಸಂಜಯ್ ರಾಯ್

  • whatsapp icon

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 34 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ನ್ಯಾಯಾಲಯದಿಂದ ದೋಷಿ ಎಂದು ತೀರ್ಪಿಗೊಳಗಾಗಿರುವ ಸಂಜಯ್ ರಾಯ್ ಹೇಳಿದ್ದಾನೆ.

ನ್ಯಾಯಾಲಯವು ಇಂದು ಈ ಪ್ರಕರಣದ ಸಂಬಂಧ ಶಿಕ್ಷೆಯನ್ನು ಪ್ರಕಟಿಸಲಿದೆ. ಶನಿವಾರ ಆರೋಪಿ ಸಂಜಯ್ ರಾಯ್ ನನ್ನು ದೋಷಿ ಎಂದು ತೀರ್ಪಿತ್ತಿದ್ದ ನ್ಯಾ. ಅನಿರ್ಬನ್ ದಾಸ್, ಇಂದು ಶಿಕ್ಷೆ ಪ್ರಕಟಿಸುವುದಕ್ಕೂ ಮುನ್ನ, ಆರೋಪಿಯ ಮಾತುಗಳನ್ನು ಆಲಿಸುವುದಾಗಿ ಪ್ರಕಟಿಸಿದ್ದರು. ಸಂಜಯ್ ರಾಯ್ ಗೆ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದ್ದು, ಗರಿಷ್ಠ ಮರಣ ದಂಡನೆ ಶಿಕ್ಷೆ ನೀಡಬಹುದಾಗಿದೆ ಎಂದು ಅವರು ಹೇಳಿದ್ದರು.

ಇಂದು ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ ರಾಯ್, “ನಾನು ಈ ಕೃತ್ಯವನ್ನು ಮಾಡಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಲವಾರು ಸಾಕ್ಷ್ಯಾಧಾರಗಳನ್ನು ನಾಶಗೊಳಿಸಲಾಗಿದೆ. ಒಂದು ವೇಳೆ ನಾನೇನಾದರೂ ನನ್ನ ರುದ್ರಾಕ್ಷಿ ಮಾಲೆಯೊಂದಿಗೆ ಈ ಕೃತ್ಯ ನಡೆಸಿದ್ದರೆ, ನನ್ನ ರುದ್ರಾಕ್ಷಿ ಮಾಲೆ ಒಡೆದು ಹೋಗಬೇಕಿತ್ತು. ನನ್ನನ್ನು ಸಿಲುಕಿಸಲಾಗಿದೆಯೊ ಇಲ್ಲವೊ ಎಂಬುದನ್ನು ನೀವು ನಿರ್ಧರಿಸಿ” ಎಂದು ಮನವಿ ಮಾಡಿದ.

ಅದಕ್ಕೆ ಪ್ರತಿಯಾಗಿ, ನಾನು ನ್ಯಾಯವನ್ನು ನೀಡಬೇಕಿದೆ ಎಂದು ನ್ಯಾಯಾಧೀಶರು ಹೇಳಿದರು. “ನನ್ನೆದುರಿಗಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ನಾನು ನಿರ್ಧಾರ ಮಾಡಲಿದ್ದೇನೆ. ನಾನು ನಿನ್ನ ಮಾತುಗಳನ್ನು ಸುಮಾರು ಮೂರು ಗಂಟೆಗಳ ಕಾಲ ಆಲಿಸಿದ್ದೇನೆ. ನಿನ್ನ ವಕೀಲರು ನಿನ್ನ ಪ್ರಕರಣವನ್ನು ವಾದಿಸಿದ್ದಾರೆ. ನಿನ್ನ ಮೇಲಿನ ದೋಷಾರೋಪಗಳು ರುಜುವಾತಾಗಿವೆ. ಈಗ ನಾನು ನಿನಗೆ ನೀಡಲಾಗುವ ಶಿಕ್ಷೆಯ ಬಗ್ಗೆ ನಿನ್ನ ಅನಿಸಿಕೆಯನ್ನು ತಿಳಿಯಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ತನ್ನ ಸುಪರ್ದಿಗೆ ಪಡೆದುಕೊಂಡಿರುವ ಸಿಬಿಐ, ಆರೋಪಿ ಸಂಜಯ್ ರಾಯ್ ಗೆ ಮರಣ ದಂಡನೆ ವಿಧಿಸಬೇಕು ಎಂದು ವಾದಿಸಿತು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದೆ ಎಂದು ಸಿಬಿಐ ವಕೀಲರು ಹಾಗೂ ಸಂತ್ರಸ್ತೆಯ ಪೋಷಕರು ವಾದಿಸಿದರು. ಹೀಗಾಗಿ ದೋಷಿಯಾಗಿರುವ ಸಂಜಯ್ ರಾಯ್ ಗೆ ಮರಣ ದಂಡನೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News