ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು 'ರಾಮ್ ಕೋವಿಡ್' ಎಂದ ಸಂಸದೆ ಕಂಗನಾ ರಣಾವತ್!

Update: 2024-08-30 14:58 GMT

ಸಂಸದೆ, ನಟಿ ಕಂಗನಾ ರಣಾವತ್ | PC : X

ಹೊಸದಿಲ್ಲಿ: ಸಂಸದೆ, ನಟಿ ಕಂಗನಾ ರಣಾವತ್, ಮಾಧ್ಯಮ ಸಂದರ್ಶನದ ವೇಳೆ ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು 'ರಾಮ್ ಕೋವಿಡ್' ಎಂದು ತಪ್ಪಾಗಿ ಉಚ್ಚಾರಣೆ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.

The Lallantop ಸುದ್ದಿ ಮಾಧ್ಯಮದ ಸಂಸ್ಥಾಪಕ ಸಂಪಾದಕ ಸೌರಭ್ ದ್ವಿವೇದಿ ಅವರೊಂದಿಗಿನ ಸಂವಾದದಲ್ಲಿ ಕಂಗನಾ ರಣಾವತ್ ಅವರು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು 'ರಾಮ್ ಕೋವಿಡ್' ಎಂದು ಕರೆದಿರುವುದು ವಿಡಿಯೋದಲ್ಲಿದೆ.

ತಪ್ಪಿನ ಅರಿವಾಗುತ್ತಿದ್ದಂತೆ ಅವರು ಸರಿಪಡಿಸಿಕೊಂಡರೂ, ಕಂಗನಾ ತಪ್ಪಾಗಿ ಉಚ್ಚಾರಣೆ ಮಾಡಿದ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಆ ಕುರಿತ ʼಮೀಮ್ʼ ಗಳು ಹುಟ್ಟಿಕೊಂಡಿವೆ.

ಕಂಗನಾ ರಣಾವತ್ ಅವರು ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿರುವ ತಮ್ಮ ಚಿತ್ರ ʼಎಮರ್ಜೆನ್ಸಿʼ ಬಿಡುಗಡೆಗೆ ಮುಂಚಿತವಾಗಿ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಮಂಡಿ ಸಂಸದೆ ಕಂಗನಾ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ವೀಡಿಯೊದಲ್ಲಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರಕರಣಗಳಲ್ಲಿ ಅನ್ಯಾಯ ಮತ್ತು ಹಲ್ಲೆಗಳು ಹೆಚ್ಚು ವರದಿಯಾಗುತ್ತವೆಯೇ ಎಂದು ರಣಾವತ್ ಅವರನ್ನು ಕೇಳಿದಾಗ, ಅವರು ಬದಲಾವಣೆಯ ಉದಾಹರಣೆಗಳನ್ನು ಉಲ್ಲೇಖಿಸಿ ಭಾರತದ ದಲಿತ ರಾಷ್ಟ್ರಪತಿಗಳ ಬಗ್ಗೆ ಪ್ರಸ್ತಾಪಿಸಿದರು.

ದ್ರೌಪದಿ ಮುರ್ಮು ಮತ್ತು ರಾಮ್ ನಾಥ್ ಕೋವಿಂದ್ ಬಗ್ಗೆ ಪ್ರಸ್ತಾಪಿಸಿ ನಾವೇಕೆ ಉದಾಹರಣೆಗಳನ್ನು ನೋಡಬಾರದು ಎಂದು ಹೇಳಿದರು. ರಾಮ್ ನಾಥ್ ಕೋವಿಂದ್ ಅವರನ್ನು ಮೊದಲ ದಲಿತ ರಾಷ್ಟ್ರಪತಿ ಎಂದು ತಪ್ಪಾಗಿ ಉಲ್ಲೇಖಿಸಿದರು. ಕೂಡಲೇ ಸಂದರ್ಶನದಲ್ಲಿ ಕುಳಿತಿದ್ದ ಸಂಪಾದಕರು ಆಕೆಯನ್ನು ಕೋವಿಂದ್ ಎರಡನೆಯವರು, ಮೊದಲ ದಲಿತ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಎಂದು ಸರಿಪಡಿಸಿದರು. ಆ ವೇಳೆ ಕಂಗನಾ, ರಾಮ್ ನಾಥ್ ಕೋವಿಂದ್ ಅವರನ್ನು ತಪ್ಪಾಗಿ 'ರಾಮ್ ಕೋವಿಡ್' ಎಂದು ಉಚ್ಚರಿಸಿರುವುದು ಈಗ ವೈರಲ್ ಆಗಿದೆ.

ಸಂದರ್ಶನವು ವೈರಲ್ ಆದ ಬಳಿಕ ಕಂಗನಾ ಅವರ ತಪ್ಪು ಹೇಳಿಕೆಯ ಕುರಿತು ಮೀಮ್‌ಗಳು ಹುಟ್ಟಿಕೊಂಡವು. ಜನರು ಆಕೆಯನ್ನು "Whatsapp ಯೂನಿವರ್ಸಿಟಿ ಕಿ ಮೇಡಮ್" ಎಂದು ಟ್ರೋಲ್ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಅಭಿಮಾನಿಗಳು ಮತ್ತು ಬೆಂಬಲಿಗರು "ತಪ್ಪಿದ್ದರೆ ಒಪ್ಪಿಕೊಳ್ಳುವ ಧೈರ್ಯ ಅವರಿಗಿದೆ.." ಎಂದು ರಣಾವತ್ ಪರವಾಗಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News