ಕೇರಳ: ಭಾರೀ ಮಳೆ; ಹಲವು ಪ್ರದೇಶಗಳಲ್ಲಿ ನೆರೆ, ಭೂಕುಸಿತ
ತಿರುವನಂತಪುರ : ಕೇರಳದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ರಾಜ್ಯದ ವಿವಿಧೆಡೆ ನೆರೆ ಹಾಗೂ ಭೂಕುಸಿತ ಸಂಭವಿಸಿದೆ. ಮುಖ್ಯವಾಗಿ ತಿರುವನಂತಪುರ ಜಿಲ್ಲೆಯಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿದೆ.
ಈ ನಡುವೆ ಭಾರತದ ಹವಾಮಾನ ಇಲಾಖೆ ರವಿವಾರ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ ಹಾಗೂ ಆಲಪ್ಪುಳ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದೆ. ಅಲ್ಲದೆ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ದುರ್ಗಮ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಟಿವಿ ವಾಹಿನಿಗಳು ಪ್ರದರ್ಶಿಸಿದ ದೃಶ್ಯಾವಳಿಯ ಪ್ರಕಾರ, ಶನಿವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಿರುವನಂತಪುರ ಜಿಲ್ಲೆಯ ಬೀದಿ, ರಸ್ತೆ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಜಿಲ್ಲೆಯ ಉಪನಗರ ಪ್ರದೇಶವಾದ ಕಝಕೂಟಂನಲ್ಲಿರುವ ಟೆಕ್ನೋಪಾರ್ಕ್ ಕಾಲನಿಯ ಹಲವು ಮನೆಗಳಿಗೆ ನೆರೆ ನೀರು ಪ್ರವೇಶಿಸಿದೆ. ಆದುದರಿಂದ ಇಲ್ಲಿಂದ ಜನರನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಇತರ ಕೆಲವು ಪ್ರದೇಶಗಳಲ್ಲಿ ಸಾವಿರಾರು ಮನೆಗಳಿಗೆ ನೆರೆ ನೀರು ನುಗ್ಗಿದೆ ಹಾಗೂ ಭೂಕುಸಿತ ಸಂಭವಿಸಿದೆ.
ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವ ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ. ಸಿವನ್ಕುಟ್ಟಿ, ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆ ತಿರುವನಂತಪುರ ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಸೃಷಿಸಿದೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ಕಂದಾಯ ಸಚಿವ ಕೆ. ರಾಜನ್ ಕೂಡ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರ ಫೇಸ್ ಬುಕ್ ಪೋಸ್ಟ್ ಹೇಳಿದೆ.