ಮಹಾರಾಷ್ಟ್ರ ಚದುರಂಗದಾಟ: ಆರು ಪ್ರಮುಖ ಖಾತೆಗಳನ್ನು ಕಳೆದುಕೊಂಡ ಬಿಜೆಪಿ
ಮುಂಬೈ: ಎನ್ ಸಿಪಿಯ ಅಜಿತ್ ಪವಾರ್ ಬಣ ಮಹಾರಾಷ್ಟ್ರದಲ್ಲಿ ಶಿವಸೇನೆ- ಬಿಜೆಪಿ ಸರ್ಕಾರ ಸೇರಿದ ಹದಿನೈದು ದಿನಗಳ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೊಸದಾಗಿ ಸೇರ್ಪಡೆಯಾದ ಉಪಮುಖ್ಯಮಂತ್ರಿಗೆ ಪ್ರಮುಖವಾದ ಹಣಕಾಸು ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಇದರ ಜತೆಗೆ ಸಹಕಾರ (ದಿಲೀಪ್ ವಲ್ಸೆ ಪಾಟೀಲ್), ಆಹಾರ ಮತ್ತು ನಾಗರಿಕ ಸರಬರಾಜು (ಛಗನ್ ಭುಜಬಲ್), ಕೃಷಿ (ಧನಂಜಯ್ ಮುಂಢೆ) ಮತ್ತು ವೈದ್ಯಕೀಯ ಶಿಕ್ಷಣ (ಹಸನ್ ಮುಶ್ರಫ್) ಖಾತೆಗಳು ಪವಾರ್ ಬಣಕ್ಕೆ ಸಿಕ್ಕಿವೆ.
ಎನ್ ಸಿಪಿಯಿಂದ ಒಡೆದು ಬಂದಿರುವ ಅಜಿತ್ ಬಣಕ್ಕೆ ಖಾತೆ ಹಂಚಿಕೆಯಲ್ಲಿ ದೊಡ್ಡ ಲಾಭವಾಗಿದ್ದರೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಣಕಾಸು ಹಾಗೂ ಯೋಜನಾ ಖಾತೆಯನ್ನು ತ್ಯಾಗ ಮಾಡಬೇಕಾಗಿ ಬಂದಿದೆ. ಬಿಜೆಪಿ ಒಟ್ಟು ಆರು ಪ್ರಮುಖ ಇಲಾಖೆಗಳನ್ನು ಕಳೆದುಕೊಂಡಿದ್ದು, ಅಜಿತ್ ಪವಾರ್ ಬಣಕ್ಕಾಗಿ ಶಿಂಧೆ ನೇತೃತ್ವದ ಶಿವಸೇನೆ ಮೂರು ಖಾತೆಗಳನ್ನು ಕಳೆದುಕೊಂಡಿದೆ.
ಹಿಂದೆ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿದ್ದ ಅಜಿತ್ ಪವಾರ್, ಭಾರಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಹಾಗೂ ಇದು ಶಿವಸೇನೆ ವಿಭಜನೆಗೂ ಕಾರಣವಾಗಿತ್ತು. ಇದೀಗ ಮತ್ತೆ ಅಜಿತ್ ಆ ಖಾತೆಯನ್ನು ಹೊಂದಿರುವುದು ಶಿಂಧೆ ಬಣಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿವಸೇನೆ, ಬಿಜೆಪಿ ಹಾಗೂ ಎನ್ ಸಿಪಿ ಬಣದ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಕಾಡುತ್ತಿದೆ. ಹಲವು ಮಂದಿ ಆಕಾಂಕ್ಷಿಗಳು ಸದ್ಯಕ್ಕೆ ದೂರ ಉಳಿದಿದ್ದಾರೆ.
ಅಜಿತ್ ಬಣ ಸರ್ಕಾರವನ್ನು ಸೇರಿದ ಬಳಿಕ ಖಾತೆ ಹಂಚಿಕೆ ತೀರಾ ವಿಳಂಬವಾಗಿ ಆಗಿದ್ದು, ಹಣಕಾಸು ಹಾಗೂ ಸಹಕಾರ ಖಾತೆಗಳಿಗೆ ಪವಾರ್ ಹಕ್ಕು ಪ್ರತಿಪಾದಿಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಇದಕ್ಕೆ ಶಿಂಧೆ ಬಣದ ಶಾಸಕರು ಹಾಗೂ ಫಡ್ನವೀಸ್ ಅವರಿಂದ ತೀವ್ರ ವಿರೋಧ ಇತ್ತು. ಕೊನೆಗೆ ಬಿಜೆಪಿ ಮುಖಂಡರ ಮಧ್ಯಪ್ರವೇಶದಿಂದಾಗಿ ಫಡ್ನವೀಸ್ ಹಣಕಾಸು ಖಾತೆ ತೊರೆಯಲು ಒಪ್ಪಿಕೊಂಡರು ಎನ್ನಲಾಗಿದೆ.
ಫಡ್ನವೀಸ್ ಅವರನ್ನು ಹೊರತುಪಡಿಸಿ ಮುಖ್ಯಮಂತ್ರಿ ಶಿಂಧೆ, ಬಿಜೆಪಿಯ ಗಿರೀಶ್ ಮಹಾಜನ್, ಅತುಲ್ ಸಾವೆ ಮತ್ತು ಮಂಗಲ್ ಪ್ರಭಾತ್ ಲೋಧಾ ಹಾಗೂ ಸೇನೆ ಅಬ್ದುಲ್ ಸತ್ತಾರ್ ಕೂಡಾ ಖಾತೆಗಳನ್ನು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಭಾವಿ ಖಾತೆ ಎನ್ನಲಾದ ಸಹಕಾರ ವಿಭಾಗವನ್ನು ಎನ್ ಸಿಪಿಯ ದಿಲೀಪ್ ವಲ್ಸೆ ಪಾಟೀಲ್ ಗಿಟ್ಟಿಸಿಕೊಂಡಿದ್ದಾರೆ.