ಮಹಾರಾಷ್ಟ್ರ: ಭಾರೀ ಭೂಕುಸಿತ; 4 ಮಂದಿ ಮೃತ್ಯು
ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ ನಾಲ್ವರು ಜೀವಂತ ಸಮಾಧಿಯಾಗಿದ್ದು, 30ಕ್ಕೂ ಅಧಿಕ ಕುಟುಂಬಗಳು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಖಾಳಾಪುರ ಗ್ರಾಮದಲ್ಲಿ ಈ ದುರಂಗ ಸಂಭವಿಸಿದ್ದು, ಇದುವರೆಗೆ 25 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದು, 21 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗುರುವಾರ ರಾಯಗಢ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತ ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್ಡಿಆರ್ಎಫ್) ಜತೆ ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಬುಧವಾರ ಮಧ್ಯರಾತ್ರಿ ದುರಂತ ಸಂಭವಿಸಿದ್ದು, ಉಪವಿಭಾಗಾಧಿಕಾರಿ ಮತ್ತು ಖೊಪೋಲಿ ತಹಸೀಲ್ದಾರ್ ಅವರನ್ನೊಳಗೊಂಡ ತಂಡ ಈಗಾಗಲೇ ಘಟನಾ ಸ್ಥಳಕ್ಕೆ ತೆರಳಿದೆ. ಏಳು ಮಂದಿ ಆಘಾತದಿಂದ ಚೇತರಿಸಿಕೊಂಡು ಓಡಿ ಹೋಗಿದ್ದನ್ನು ತಂಡ ಪತ್ತೆ ಮಾಡಿದೆ. ಈ ಪ್ರದೇಶಕ್ಕೆ ತೆರಳಲು ಎರಡು ಗಂಟೆ ಕಾಲ ಬೆಟ್ ಏರಬೇಖಿದ್ದು, ಇದು ನಿಜಕ್ಕೂ ಸವಾಲು ಎಂದು ರಾಯಗಡ ಜಿಲ್ಲಾಧಿಕಾರಿ ಯೋಗೀಶ್ ಮ್ಹಾಸೆ ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ಎಲ್ಲ ಅಧಿಕಾರಿಗಳ ಜತೆ ಮಧ್ಯರಾತ್ರಿ ವೀಡಿಯೊ ಕಾನ್ಫರೆನ್ಸ್ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕರೆ ಮಾಡಿ ಸೂಚನೆ ನೀಡಿದ್ದಾರೆ ಎಮದು ಪ್ರಾದೇಶಿಕ ಆಯುಕ್ತ ಮಹೇಂದ್ರ ಕಲ್ಯಾಣಕರ್ ಸ್ಪಷ್ಟಪಡಿಸಿದ್ದಾರೆ.
50 ಮಂದಿಯ ಎನ್ಡಿಆರ್ಎಫ್ ತಂಡ ಪರಿಹಾರ ಕಾರ್ಯ ಕೈಗೊಂಡಿದ್ದು, ನಾಲ್ಕು ಆ್ಯಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ವಂಚಿತ್ ಬಹುಜನ್ ಅಗಾಡಿ ಪಕ್ಷದ ಉಪಾಧ್ಯಕ್ಷ ರೋಹಿತ್ ಚಂದ್ರಕಾಂತ್ ಪವಾರ್ ದುರಂತ ಸ್ಥಳಕ್ಕೆ ಭೇಟಿ ನೀಡಿ, ಮೂವರನ್ನು ರಕ್ಷಿಸಿ ಬೆಟ್ಟದ ತಪ್ಪಲಿಗೆ ಕರೆ ತರಲಾಗಿದೆ ಎಂದು ವಿವರಿಸಿದ್ದಾರೆ.