ಒಂಟಿತನ ದೂರಮಾಡಲು ವಾರಾಂತ್ಯದಲ್ಲಿ ಆಟೊ ಚಲಾಯಿಸುತ್ತಿರುವ ಮೈಕ್ರೊಸಾಫ್ಟ್ ಟೆಕ್ಕಿ!
ಬೆಂಗಳೂರು : ತಂತ್ರಜ್ಞಾನ ಬೆಳೆದಷ್ಟೂ, ಮಾನಸಿಕ ಖಿನ್ನತೆ, ಒಂಟಿತನದ ಪ್ರಕರಣಗಳೂ ಏರುಮುಖವಾಗುತ್ತಿವೆ. ಈ ಮಾತಿಗೆ ತಾಜಾ ಉದಾಹರಣೆ ಮೈಕ್ರೊಸಾಫ್ಟ್ ಟೆಕ್ಕಿಯೊಬ್ಬರು ತಮ್ಮ ಒಂಟಿತನ ದೂರಮಾಡಲು ವಾರಾಂತ್ಯದಲ್ಲಿ ಆಟೊ ಚಲಾಯಿಸುತ್ತಿರುವುದು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವೆಂಕಟೇಶ್ ಗುಪ್ತ ಎಂಬ ಟೆಕ್ಕಿಯೊಬ್ಬರು, "ವಾರಾಂತ್ಯದಲ್ಲಿ ತಮ್ಮ ಒಂಟಿತನವನ್ನು ನೀಗಿಕೊಳ್ಳಲು ಕೋರಮಂಗಲದ ಮೈಕ್ರೊಸಾಫ್ಟ್ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿರುವ 35 ವರ್ಷದ ಸಾಫ್ಟ್‌ವೇರ್ ಸಿಬ್ಬಂದಿಯೊಬ್ಬರು ನಮ್ಮ ಯಾತ್ರಿ ಆಟೊ ಚಲಾಯಿಸುತ್ತಿರುವುದನ್ನು ಕಂಡೆ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
"ತಂತ್ರಜ್ಞಾನದ ಉದ್ಯಮಗಳು ಬೆಳೆದಷ್ಟೂ ವೃತ್ತಿಪರರಲ್ಲಿ ಒಂಟಿತನ ಸಾಮಾನ್ಯ ವಿದ್ಯಮಾನವಾಗತೊಡಗಿದೆ. ಇದರ ಗೋಪ್ಯ ಸತ್ಯವೆಂದರೆ, ಕೆಲವೊಮ್ಮೆ ಅತ್ಯಂತ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವೂ ಮನುಷ್ಯರ ನಡುವಿನ ಸಂವಾದಕ್ಕೆ ಪರ್ಯಾಯವಾಗುವುದಿಲ್ಲ" ಎಂದು ಓರ್ವ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಎಲ್ಲವನ್ನೂ ಸಂಪರ್ಕಿಸಿರುವ ತಂತ್ರಜ್ಞಾನದ ಮತ್ತೊಂದು ಕರಾಳ ಪಾರ್ಶ್ವದ ಕುರಿತು ನಾನು ಪ್ರಶ್ನಿಸುವಂತೆ ಮಾಡಿದೆ. ತಂತ್ರಜ್ಞಾನವು ಜಗತ್ತನ್ನು ಏಕಾಂಗಿಯಾಗಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವರು ಮಿಶ್ರ ಪ್ರತಿಕ್ರಿಯೆನ್ನೂ ವ್ಯಕ್ತಪಡಿಸಿದ್ದು, ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ವೃತ್ತಿಪರರು ಊಬರ್ ವಾಹನಗಳನ್ನು ಚಲಾಯಿಸುವುದು ಸಾಮಾನ್ಯ ಸಂಗತಿಯಾಗಿದೆ. ಇದು ಹಣದ ಗಳಿಕೆಯನ್ನು ಮೀರಿದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.