"ಮೋದಿಯ ಟೆಲಿಪ್ರಾಂಪ್ಟರ್ ಮತ್ತೆ ವಿಫಲವಾಗಿದೆ": ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್
ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತಮ ವಾಗ್ಮಿಯಾಗಿದ್ದಾರೆ. ಆದರೆ, ಟೆಲಿಪ್ರಾಂಪ್ಟರ್ ಇಲ್ಲದೆ ಅವರು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ವಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮೋದಿಯ ದಿಲ್ಲಿ ಚುನಾವಣಾ ಪ್ರಚಾರದ ವೀಡಿಯೊ ಹಂಚಿಕೊಂಡು ವ್ಯಂಗ್ಯವಾಗಿ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ದಿಲ್ಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಾಗ ಮೋದಿಯಿಂದ 'ಮೌನವೃತ' ಆಚರಣೆ.. ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದ ಕೂಡ ಮಾತಾಡಲು ಸಾಧ್ಯವೇ ಇಲ್ಲ.. ಏಕೆಂದರೆ 'ಒಳಗಡೆ' ಏನೂ ಇಲ್ಲ ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ.
ದಿಲ್ಲಿಯ ರೋಹಿಣಿ ಬಡಾವಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಎಎಪಿ ಸರ್ಕಾರ ದಿಲ್ಲಿಯ ಪಾಲಿಗೆ ‘ವಿಪತ್ತು’. ದೆಹಲಿಯು ಈ ‘ವಿಪತ್ತಿ’ನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಎಂಜಿನ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದರು. ಎಎಪಿ ಸರ್ಕಾರ ರಾಜಧಾನಿಯಲ್ಲಿ ಕೇಂದ್ರದ ಜೊತೆಗೆ ಸಂಘರ್ಷ ಮಾಡುತ್ತ ಒಂದು ದಶಕ ಪೋಲು ಮಾಡಿದೆ. ಇಲ್ಲಿ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಬಿಜೆಪಿಗೆ ಒಂದು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದರು. ಆದರೆ ಭಾಷಣದ ಮಧ್ಯೆ ಇದ್ದಕ್ಕಿದ್ದಂತೆ ಮೋದಿ ಕೆಲಕಾಲ ಮೌನವಾಗಿಯೇ ನಿಂತುಕೊಂಡಿದ್ದರು. ಮೋದಿಯ ಟೆಲಿಪ್ರಾಂಪ್ಟರ್ ಕೈಕೊಟ್ಟ ಕಾರಣ ಮೋದಿ ಈ ರೀತಿ ಮೌನವಾಗಿದ್ದಾರೆ ಎಂದು ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಎಎಪಿ ಬಿಜೆಪಿಯಂತೆಯೇ ದಿಲ್ಲಿಯಲ್ಲಿ ಮೋದಿಯ ಟೆಲಿಪ್ರಾಂಪ್ಟರ್ ವಿಫಲವಾಗಿದೆ ಎಂದು ಹೇಳಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೂಡ ಪ್ರಧಾನಿ ಮೋದಿಗೆ ವ್ಯಂಗ್ಯವಾಡಿದ್ದಾರೆ. ʼನೆಹರು ವಿದ್ಯುತ್ ಕಡಿತಗೊಳಿಸಿದ್ದಾರೆ, ನರೇಂದ್ರ ಮೋದಿಯವರ ಟೆಲಿಪ್ರಾಂಪ್ಟರ್ ಮತ್ತೆ ವಿಫಲವಾಗಿದೆ ಎಂದು ಓರ್ವ ಎಕ್ಸ್ ಬಳಕೆದಾರರು ಬರೆದುಕೊಂಡರೆ, ಒಂದು ರಾಷ್ಟ್ರ.. ಎರಡು ಟೆಲಿಪ್ರಾಂಪ್ಟರ್ ಗಳು. ಎರಡೂ ವಿಫಲವಾಗಿವೆ ಎಂದು ಮತ್ತೋರ್ವ ಬಳಕೆದಾರರು ವ್ಯಂಗ್ಯವಾಡಿದ್ದಾರೆ.
ದಿಲ್ಲಿಯಲ್ಲಿ ಬಿಜೆಪಿಯಂತೆ ಮೋದಿ ಜಿಯವರ ಟೆಲಿಪ್ರಾಂಪ್ಟರ್ ವಿಫಲವಾಗಿದೆ. ಆದರೆ ಚಿಂತಿಸಬೇಡಿ, ಕಳೆದ 4 ವರ್ಷಗಳಲ್ಲಿ, ಮೋದಿ ಜಿ ಅವರು ತಮ್ಮ ಇಮೇಜ್ ರಿಪೇರಿ ಮಾಡಲು ಜನರ ತೆರಿಗೆಯ 4,300 ಕೋಟಿ ರೂ. ವ್ಯಯಿಸಿದ್ದಾರೆ ಎಂದು ಮತ್ತೋರ್ವರು ಹೇಳಿದ್ದಾರೆ.