ಪ್ರಧಾನಿ ಮೋದಿಯವರ ಸಂದರ್ಶನಗಳು ಪೂರ್ವನಿರ್ಧರಿತ ಪ್ರಶ್ನೋತ್ತರಗಳಿಂದ ಮಾಡಲ್ಪಟ್ಟಿವೆ: ಸಾಕೇತ್ ಗೋಖಲೆ

Update: 2024-05-19 17:34 GMT

Photo : facebook

ಹೊಸದಿಲ್ಲಿ : ಪ್ರಧಾನಿ ಮೋದಿಯವರು ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳೆಲ್ಲವೂ ಪೂರ್ವ ನಿರ್ಧರಿತ ಪ್ರಶ್ನೋತ್ತರಗಳ ಸಂದರ್ಶನಗಳು. ಮಾರ್ಚ್ 31 ರಿಂದ ಮೇ 14 ರವರೆಗೆ ಮೋದಿ ಅವರು 41 ಪೂರ್ವ ನಿರ್ಧರಿತ ಪ್ರಶ್ನೋತ್ತರಗಳ ಸಂದರ್ಶನಗಳನ್ನು ನೀಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಂಚಿಕೊಂಡಿರುವ ಸಾಕೇತ್ ಗೋಖಲೆ,”ಈ ಚುನಾವಣಾ ಕಾಲದಲ್ಲಿ ಮೋದಿಯವರ ಸಂದರ್ಶನಗಳ ವಾಸ್ತವತೆಯನ್ನು ಮಾಧ್ಯಮದಿಂದ ನೀವು ಎಂದಿಗೂ ಕೇಳಲು ಸಾಧ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ರಾಜಿ ಮಾಡಿಕೊಂಡ ಚುನಾವಣಾ ಆಯೋಗ, ಬೆನ್ನುಮೂಳೆಯಿಲ್ಲದ ಮಾಧ್ಯಮ, ಕೋಮು ದ್ವೇಷದ ಭಾಷಣ, ಕೋಟಿಗಟ್ಟಲೆ ಖರ್ಚು, ಮತ್ತು ತನಿಖಾ ಏಜೆನ್ಸಿಗಳ ದುರುಪಯೋಗ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

“ಇಷ್ಟೆಲ್ಲಾ ದುರುಪಯೋಗ ಮಾಡಿಕೊಂಡಿದ್ದರೂ ಪ್ರಧಾನಿ ಮೋದಿ ಚುನಾವಣಾ ಫಲಿತಾಂಶಗಳ ಬಗ್ಗೆ ಭಯಭೀತರಾಗಿದ್ದಾರೆ. ಅವರು ಈಗ 400ಕ್ಕೂ ಹೆಚ್ಚು ಸ್ಥಾನಗಳ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಗ್ಯಾರಂಟಿಗಳ ಬಗ್ಗೆಯೂ ಅವರ ಮಾತು ನಿಂತಿದೆ. ಈಗ ಅವರು ಮಾತನಾಡುತ್ತಿರುವುದು ಹಿಂದೂ-ಮುಸ್ಲಿಮರ ಬಗ್ಗೆ” ಎಂದು ಸಾಕೇತ್ ಹೇಳಿದ್ದಾರೆ.

“ದಯವಿಟ್ಟು ಹೊರಬನ್ನಿ, ನಿಮ್ಮ ಸರದಿ ಬಂದಾಗ ಮತ ಚಲಾಯಿಸಿ. ಅದು ಪ್ರದಾನಿಯವರನ್ನು ಹೆಚ್ಚು ಬೆದರಿಸುತ್ತದೆ. ಅಂತಿಮವಾಗಿ ಅದೇ ಮುಖ್ಯವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಹೇಳದ, ಪ್ರಧಾನಿ ಸಂದರ್ಶನದ ಗುಟ್ಟನ್ನು ಸಾಕೇತ್ ಹಂಚಿಕೊಂಡಿದ್ದಾರೆ. “ಮಾರ್ಚ್ 31 ರಿಂದ ಮೇ 14 ರವರೆಗೆ ಮೋದಿ ಅವರು 41 ಪೂರ್ವ ನಿರ್ಧರಿತ ಪ್ರಶ್ನೋತ್ತರಗಳ ಸಂದರ್ಶನಗಳನ್ನು ನೀಡಿದ್ದಾರೆ. ಅಂದರೆ ಸರಾಸರಿ ದಿನಕ್ಕೆ ಒಂದು ಸಂದರ್ಶನ. ಇದರ ಹಿಂದಿನ ಮೋಜಿನ ಸಂಗತಿಗಳು ಇಲ್ಲಿವೆ” ಎಂದು ವಿವರಣೆ ನೀಡಿದ್ದಾರೆ.

“ಮುಂಚಿತವಾಗಿ ಕಳುಹಿಸಲಾದ ಪ್ರಶ್ನೆಗಳೊಂದಿಗೆ ಎಲ್ಲಾ ಸಂದರ್ಶನಗಳನ್ನು ಮಾಡಲಾಗಿದೆ. ಪ್ರಧಾನಿ ಕಚೇರಿಯಿಂದ ಪ್ರಶ್ನೆ ಮತ್ತು ಉತ್ತರವನ್ನೂ ಮೊದಲೇ ಅನುಮೋದಿಸಲಾಗಿದೆ. 15 ನಿಮಿಷಗಳ ಕಾಲ ಸಣ್ಣ ಮಾತುಕತೆಗಾಗಿ ಸಂದರ್ಶನ ಮಾಡುವ ಸಂಪಾದಕರನ್ನು ಮೋದಿ ಭೇಟಿ ಮಾಡಿದ್ದರು. ವಿಚಿತ್ರವೆಂದರೆ ಪ್ರಧಾನಿ ಮೋದಿ ತಾನು ಕೋವಿಡ್ ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರೂ, ಸಂಪಾದಕರನ್ನು ಭೇಟಿ ಮಾಡುವ ಮೊದಲು ಸಂಪಾದಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಿಸಲಾಗಿದೆ” ಎಂದು ಟಿಎಂಸಿ ವಕ್ತಾರ ಹೇಳಿದ್ದಾರೆ.

“ಟಿವಿ ಸಂದರ್ಶನಗಳ ಕ್ಯಾಮೆರಾ ಸೆಟಪ್ ಅನ್ನು PMO ಮೂಲಕವೇ ಮಾಡಲಾಗಿತ್ತು. ಟಿವಿ ಚಾನೆಲ್ ಗಳಿಗೆ ಪೂರ್ವ ನಿರ್ಧರಿತ ಪ್ರಶ್ನೋತ್ತರಗಳ ಸಂದರ್ಶನವನ್ನು ತೋರಿಸುವುದಷ್ಟೇ ಕೆಲಸ. ಕೆಲವು ಮಾಧ್ಯಮಗಳಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಮೋದಿಯವರಿಗೆ ಮಣಿಯದೆ ಬೇರೆ ದಾರಿಯಿರಲಿಲ್ಲ. ಕೆಲವರು ಇದನ್ನು ಮನಃಪೂರ್ವಕವಾಗಿ ಮಾಡಿದರೆ, ಕೆಲವರು ಬಲವಂತವಾಗಿ ಮಾಡಿದ್ದಾರೆ. ಆದರೆ ಈ ಸಂದರ್ಶನಗಳ ಮುಖ್ಯ ಭಾಗ ಇಲ್ಲಿದೆ. 44 ದಿನಗಳಲ್ಲಿ ಮಾಡಿದ 41 ಸಂದರ್ಶನಗಳನ್ನು ಬಹಳ ಎಚ್ಚರಿಕೆಯಿಂದ ತಯಾರಿಸಲಾಗಿದೆ. ಈ ಸಂದರ್ಶನಗಳು ಮೋದಿಯವರು ಭಯಭೀತರಾಗಿರುವುದನ್ನು ತೋರಿಸುತ್ತದೆ” ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News