ಭೂ ಸುಧಾರಣೆ, ಮದ್ಯಪಾನ ನಿಷೇಧ ಅಂತ್ಯಗೊಳಿಸುವ ಭರವಸೆಯೊಂದಿಗೆ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಉದಯ
ಪಾಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬುಧವಾರ ತಮ್ಮ ಬಹುನಿರೀಕ್ಷಿತ 'ಜನ್ ಸುರಾಜ್' ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾರೆ. ಈ ವರ್ಷದ ನವೆಂಬರ್ ನಲ್ಲಿ ನಡೆಯುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಲಿದೆ.
ಮಾಜಿ ರಾಜತಾಂತ್ರಿಕ ಮನೋಜ್ ಭಾರ್ತಿಯವರನ್ನು ಪಕ್ಷದ ಮೊಟ್ಟಮೊದಲ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಧುಬಾನಿ ನಿವಾಸಿಯಾಗಿರುವ ಭಾರ್ತಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು. ನಾಲ್ಕು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕರ್ತವ್ಯ ನಿಭಾಯಿಸಿದ್ದರು.
"ನೀವು ಮುಂದಿನ ವಿಧಾನಸಭಾ ಚುನಾವಣೆ ನಡೆಯುವ 2025ರ ವರೆಗೆ ಕಾಯುತ್ತೀರಾ ಅಥವಾ 2024ರಲ್ಲೇ ನಿಮ್ಮ ಶಕ್ತಿ ಪ್ರದರ್ಶನ ಮಾಡುತ್ತೀರಾ" ಎಂದು ಪ್ರಶಾಂತ್ ಕಿಶೋರ್ ಪಾಟ್ನಾದಾ ವೆಟರ್ನರಿ ಗ್ರೌಂಡ್ ನಲ್ಲಿ ನಡೆದ ಪ್ರಥಮ ಅಧಿವೇಶನದಲ್ಲಿ ಪ್ರಶ್ನಿಸಿದರು.
ರಾಜ್ಯದಿಂದ ಎನ್ ಡಿಎ ಆಡಳಿತವನ್ನು ನಿರ್ಮೂಲನೆ ಮಾಡುವುದು ತಮ್ಮ ಗುರಿ ಎಂದು ಕಿಶೋರ್ ಸ್ಪಷ್ಟಪಡಿಸಿದರು. "ಇದು ಯುದ್ಧದ ಆರಂಭದ ಕಾಲ.. ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ" ಎಂದರು.
ಆರಂಭಿಕ ಅಧಿವೇಶನದಲ್ಲಿ ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್, ಮಾಜಿ ರಾಜತಾಂತ್ರಿಕ ಪವನ್ ಕೆ.ವರ್ಮಾ, ಮಾಜಿ ಸಂಸದರಾದ ಸಹನ್ ಮತ್ತು ಸೀತಾರಾಂ ಯಾದವ್ ಮತ್ತಿತರರು ಭಾಗವಹಿಸಿದ್ದರು. ಭೂ ಸಮೀಕ್ಷೆ ಮಾಡುವ ಬದಲು ಭೂ ಸುಧಾರಣೆ ಜಾರಿಗೊಳಿಸುವುದು ಮತ್ತು ಮದ್ಯ ಪಾನ ನಿಷೇಧ ಅಂತ್ಯಗೊಳಿಸುವುದು ಪಕ್ಷದ ಉದ್ದೇಶ ಎಂದು ಕಿಶೋರ್ ಹೇಳಿದರು.