ರಾಹುಲ್ ಗಾಂಧಿ ಮಾನನಷ್ಟ ಪ್ರಕರಣ: ‘ಮೋದಿ ಹೇಳಿಕೆ’ಯಿಂದ ಹಿಡಿದು ಸುಪ್ರೀಂ ಕೋರ್ಟ್ ತೀರ್ಪಿನವರೆಗಿನ ಘಟ್ಟಗಳು

Update: 2023-08-04 14:04 GMT

ಹೊಸದಿಲ್ಲಿ: ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಶಿಕ್ಷೆಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆಯನ್ನು ನೀಡಿದೆ. ಶಿಕ್ಷೆಯು ರಾಹುಲ್ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವುದಕ್ಕೆ ಕಾರಣವಾಗಿತ್ತು.

2019ರ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆಯಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದವರೆಗೆ ಪ್ರಕರಣದಲ್ಲಿಯ ಪ್ರಮುಖ ಘಟ್ಟಗಳು ಇಲ್ಲಿವೆ:

ಎಪ್ರಿಲ್ 13 - 2019: ಲೋಕಸಭಾ ಚುನಾವಣೆಗಳಿಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್,‘ಎಲ್ಲ ಕಳ್ಳರು ಮೋದಿ ಉಪನಾಮವನ್ನು ಹೊಂದಿರುವುದು ಹೇಗೆ?’ ಎಂದು ಪ್ರಶ್ನಿಸಿದ್ದರು.

ಮಾ. 23 - 2023: ರಾಹುಲ್ ಹೇಳಿಕೆಗಾಗಿ ಅವರನ್ನು ದೋಷಿ ಎಂದು ಘೋಷಿಸಿದ ಸೂರತ್ ನ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತು. 15,000 ರೂ.ಗಳ ಭದ್ರತೆಯ ಆಧಾರದಲ್ಲಿ ರಾಹುಲ್ ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಾಗುವಂತೆ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿತು.

ಮಾ.24 - 2023: ದೋಷಿ ಎಂದು ಘೋಷಿಸಿದ ಒಂದು ದಿನದ ಬಳಿಕ ರಾಹುಲ್ರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ರಾಹುಲ್ರ ದೋಷನಿರ್ಣಯ ದಿನವಾದ ಮಾ.23ರಿಂದ ಅವರು ಸದನದಿಂದ ಅನರ್ಹಗೊಂಡಿದ್ದಾರೆ ಎಂದು ಲೋಕಸಭಾ ಸಚಿವಾಲಯವು ಹೊರಡಿಸಿದ್ದ ನೋಟಿಸ್ನಲ್ಲಿ ಹೇಳಲಾಗಿತ್ತು.

ಎ.3 - 2023: ತನ್ನ ದೋಷನಿರ್ಣಯವನ್ನು ಪ್ರಶ್ನಿಸಿ ಮತ್ತು ಸೂರತ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ರಾಹುಲ್ರಿಂದ ಅರ್ಜಿ ಸಲ್ಲಿಕೆ.

ಎ.20 - 2023: ರಾಹುಲ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಅವರ ದೋಷನಿರ್ಣಯದಲ್ಲಿ ಮ್ಯಾಜಿಸ್ಟೇಟ್ ಆದೇಶವನ್ನು ಎತ್ತಿ ಹಿಡಿಯಿತು.

ಎ.25 - 2023: ಮಾನನಷ್ಟ ಪ್ರಕರಣದಲ್ಲಿ ತನ್ನ ದೋಷನಿರ್ಣಯಕ್ಕೆ ತಡೆಯಾಜ್ಞೆ ನೀಡಲು ಸೂರತ್ ನ್ಯಾಯಾಲಯದ ನಿರಾಕರಣೆಯನ್ನು ಪ್ರಶ್ನಿಸಿ ರಾಹುಲ್ರಿಂದ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಕೆ.

ಜು.7 - 2023: ರಾಹುಲ್ ಅರ್ಜಿ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ವಜಾ.

ಜು.15 - 2023: ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ರಾಹುಲ್ ರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆ.

ಜು.21 - 2023: ರಾಹುಲ್ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಿಂದ ಗುಜರಾತ್ ಸರಕಾರಕ್ಕೆ ನೋಟಿಸ್.

ಆ.3 - 2023: ತಾನು ಮಾನನಷ್ಟ ಅಪರಾಧದ ತಪ್ಪಿತಸ್ಥನಲ್ಲ ಎಂದು ಪ್ರತಿಪಾದಿಸಿದ ರಾಹುಲ್,ಕ್ಷಮೆ ಯಾಚಿಸುವ ಉದ್ದೇಶವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ತಾನು ತಪ್ಪಿತಸ್ಥನಲ್ಲ ಎನ್ನುವುದು ಹಿಂದೆಯೂ ತನ್ನ ನಿಲುವು ಆಗಿತ್ತು ಮತ್ತು ಈಗಲೂ ತನ್ನ ನಿಲುವು ಅದೇ ಆಗಿದೆ. ತನ್ನ ದೋಷನಿರ್ಣಯವು ಸಮರ್ಥನೀಯವಲ್ಲ. ಕ್ಷಮೆ ಯಾಚಿಸುವಂತಿದ್ದರೆ ಮತ್ತು ರಾಜಿ ಮಾಡಿಕೊಳ್ಳುವಂತಿದ್ದರೆ ಬಹಳ ಹಿಂದೆಯೇ ಅದನ್ನು ಮಾಡುತ್ತಿದ್ದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಉತ್ತರದಲ್ಲಿ ರಾಹುಲ್ ಹೇಳಿದ್ದರು.

ಆ.4 - 2023: ಮಾನನಷ್ಟ ಪ್ರಕರಣದಲ್ಲಿ ರಾಹುಲ್ ದೋಷನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News