ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ | ಕರ್ನಾಟಕದ ಇಬ್ಬರು ಇಂಜಿನಿಯರ್ ಗಳನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದ NIA ?

Update: 2024-05-22 15:42 GMT

ಮುಂಬೈ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(NIA)ವು ಇಬ್ಬರು ಇಂಜಿನಿಯರ್ ಗಳನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆದಿರುವ ಆರೋಪಕ್ಕೆ ಗುರಿಯಾಗಿದೆ. ಮಂಗಳವಾರ (ಮೇ 21) ಮುಂಜಾನೆ 5 ಗಂಟೆಗೆ ಹುಬ್ಬಳಿಯ ಸ್ಥಳೀಯ ಪೊಲೀಸರ ನೆರವಿನೊಂದಿಗೆ ರಾಷ್ಟ್ರೀಯ ತನಿಖಾ ದಳದ ಒಂಬತ್ತು ಮಂದಿ ಸದಸ್ಯರ ತಂಡವು 34 ವರ್ಷದ ಇಂಜಿನಿಯರ್ ಶೋಯಬ್ ಅಹಮದ್ ಮಿರ್ಝಾ ನಿವಾಸಕ್ಕೆ ಧಾವಿಸಿ ಏಳು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ಶೋಯ್‍ ಅಹಮದ್ ಮಿರ್ಝಾರಿಂದ ಒಂದು ಲ್ಯಾಪ್ ಟಾಪ್ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದೆ.

ಮಧ್ಯಾಹ್ನದ ಹೊತ್ತಿಗೆ ಶೋಯಬ್ ಹಾಗೂ ಅವರ ಹಿರಿಯ ಸಹೋದರ ಇಜಾಝ್ ಅವರಿಗೆ ತಮ್ಮ ಕೆಲವು ಬಟ್ಟೆಗಳನ್ನು ತೆಗೆದುಕೊಳ್ಳುವಂತೆ ತನಿಖಾ ತಂಡವು ಸೂಚಿಸಿದೆ. ದಾಳಿಯ ಸಂದರ್ಭದಲ್ಲಿ ತಮ್ಮ ಮನೆಯಲ್ಲೇ ಇದ್ದ ಶೋಯಬ್ ಹಾಗೂ ಇಜಾಝ್ ಅವರ ತಂದೆಗೆ ಇಬ್ಬರನ್ನೂ ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ತನಿಖಾ ತಂಡವು ಮಾಹಿತಿ ನೀಡಿದೆ. ಆದರೆ, ಈ ಸಂದರ್ಭದಲ್ಲಿ ಆರೋಪಿಗಳಿಗೆ ಬಂಧನದ ನೋಟಿಸ್ ನೀಡುವ ಬದಲು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 160ರ ಅಡಿ ನೋಟಿಸ್ ನೀಡಿ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿರುವುದು ವಿವಾದಕ್ಕೆ ಕಾರಣವಾಗಿದೆ.

ಯಾವುದೇ ವ್ಯಕ್ತಿಯನ್ನು ಬಂಧಿಸುವುದಕ್ಕೂ ಮುನ್ನ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ಎ ಅಡಿ ಬಂಧನದ ನೋಟಿಸ್ ನೀಡಬೇಕಿರುವುದು ಕಡ್ಡಾಯ. ಆದರೆ, ರಾಷ್ಟ್ರೀಯ ತನಿಖಾ ದಳವು ಹಾಗೆ ಮಾಡುವ ಬದಲು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 160ರ ಅಡಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಸೆಕ್ಷನ್ ಅಡಿ ಸಾಕ್ಷಿಗಳು ತನಿಖಾ ತಂಡದೆದುರು ಕೇವಲ ಹಾಜರಾಗಬೇಕಾಗುತ್ತದೆ. ಶೋಯಬ್ ಹಾಗೂ ಇಜಾಝ್ ಅವರಿಗೆ ನೀಡಲಾಗಿರುವ ಸಾಕ್ಷಿ ನೋಟಿಸ್ ನಲ್ಲಿ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಸಂಖ್ಯೆ 01/2024/NIA/BLR ಅನ್ನು ಉಲ್ಲೇಖಿಸಲಾಗಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದಕ್ಕೂ ಮುನ್ನ, ಎಪ್ರಿಲ್ 12ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಅಡಗುತಾಣಗಳಿಂದ ಮುಸಾವಿರ್ ಹುಸೈನ್ ಶಾಝಿಬ್ ಹಾಗೂ ಅಬ್ದುಲ್ ಮತೀನ್ ತಾಹಾ ಎಂಬ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿತ್ತು. ಈ ಇಬ್ಬರೂ ಆರೋಪಿಗಳು ಮೂಲತಃ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿಗಳಾಗಿದ್ದು, ಘಟನೆಯ ಪ್ರಮುಖ ಸೂತ್ರಧಾರರು ಎನ್ನಲಾಗಿದೆ.

ಮಂಗಳವಾರ ದಿನಪೂರ್ತಿ ಸುದ್ದಿ ವಾಹಿನಿಗಳು ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳ ಹಲವಾರು ದಾಳಿ ನಡೆಸಿದೆ ಎಂದು ವರದಿ ಮಾಡಿದವು. ಅಂದು ರಾತ್ರಿ 8 ಗಂಟೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ರಾಷ್ಟ್ರೀಯ ತನಿಖಾ ದಳವು, ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳ 11 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು ಎಂದು ಹೇಳಿತ್ತು. ಶಂಕಿತ ಆರೋಪಿಗಳಿಂದ ವಿದ್ಯುನ್ಮಾನ ಸಾಧನಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾಳಿ ನಡೆದ 15 ಗಂಟೆಗಳ ನಂತರ ಬಿಡುಗಡೆಗೊಂಡಿದ್ದ ರಾಷ್ಟ್ರೀಯ ತನಿಖಾ ದಳದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿತ್ತು ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾವುದೇ ಹೊಸ ಬಂಧನ ನಡೆದಿರುವ ಕುರಿತು ಉಲ್ಲೇಖಿಸಿರಲಿಲ್ಲ.

ಹೀಗಾಗಿ, ಶೋಯಬ್ ಹಾಗೂ ಇಜಾಝ್ ರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಗಿದೆಯೆ ಎಂಬ ಪ್ರಶ್ನೆ ಕೇಳಿ ಬಂದಿದೆ. ಆ ದಿನದಂದು ಘಟನೆಗಳು ಹೇಗೆಲ್ಲ ನಡೆದವು, ಆ ಕುರಿತು ಶೋಯಬ್ ಹಾಗೂ ಇಜಾಝ್ ರ ಕುಟುಂಬದ ಸದಸ್ಯರು ನೀಡಿರುವ ವಿವರಗಳು ಹಾಗೂ ಅವರಿಬ್ಬರಿಗೆ ಜಾರಿಗೊಳಿಸಲಾಗಿರುವ ನೋಟಿಸ್ ಗಳು ಅವರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿವೆ.

ಮೇ 21ರ ಮುಂಜಾನೆ ಸಹೋದರರಿಬ್ಬರಿಗೂ ಎರಡು ಪ್ರತ್ಯೇಕ ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ. ಒಂದೇ ಬಗೆಯ ಸಾರವನ್ನು ಹೊಂದಿದ್ದ ಆ ನೋಟಿಸ್ ಗಳಲ್ಲಿ, “ವಿಚಾರಣೆ/ಪರೀಕ್ಷೆಗಾಗಿ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳದ ಕಚೇರಿಗೆ ಮೇ 21, 2024ರ ಸಂಜೆ 5 ಗಂಟೆಯೊಳಗೆ ತಪ್ಪದೆ ಹಾಜರಾಗಬೇಕು ಎಂದು ಈ ಮೂಲಕ ಸೂಚಿಸಲಾಗಿದೆ” ಎಂದು ಹೇಳಲಾಗಿದೆ. ಆದರೆ, ಶೋಯಬ್ ಹಾಗೂ ಇಜಾಝ್ ವಾಸಿಸುತ್ತಿರುವ ಹುಬ್ಬಳ್ಳಿಯಿಂದ ಬೆಂಗಳೂರು ನಡುವಿನ ಅಂತರವು ಸುಮಾರು 420 ಕಿಮೀಗಿಂತ ಹೆಚ್ಚಿದ್ದು, ಈ ಅಂತರವನ್ನು ರಸ್ತೆಯ ಮೂಲಕ ಕ್ರಮಿಸಲು ಕನಿಷ್ಠ ಪಕ್ಷ ಏಳು ಗಂಟೆ ತಗುಲುತ್ತದೆ. ಒಂದು ವೇಳೆ ಸಾಕ್ಷಿದಾರರಾಗಿ ಸ್ವಯಂ ಆಗಿ ಬೆಂಗಳೂರಿನತ್ತ ತೆರಳಿದರೆ, ನೋಟಿಸ್ ನಲ್ಲಿ ನಮೂದಿಸಲಾಗಿದ್ದ ವೇಳೆಯೊಳಗೆ ಬೆಂಗಳೂರು ತಲುಪುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.

ವಿಚಾರಣೆಗೊಳಪಡಿಸುವಾಗ ಅಥವಾ ಬಂಧಿಸುವಾಗ ಪಾಲಿಸಬೇಕಾದ ಕಾನೂನು ವಿಧಾನಗಳನ್ನು ಈ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳವು ಉಲ್ಲಂಘಿಸಿರುವುದು ಮೇಲ್ನೋಟಕ್ಕೇ ಕಂಡು ಬಂದಿದೆ. ಇಂತಹ ಸಂದರ್ಭಗಳಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಗೆ ಬದ್ಧವಾಗಿರಬೇಕಾದ ಅಗತ್ಯವನ್ನು ಸುಪ್ರೀಂ ಕೋರ್ಟ್ ಪದೇ ಪದೇ ಒತ್ತಿ ಹೇಳಿದೆ. ಕಳೆದ ವಾರ Newsclick ಸುದ್ದಿ ಪೋರ್ಟಲ್ ನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಪ್ರಬೀರ್ ಪುರ್ಕಾಯಸ್ಥರಿಗೆ ಜಾಮೀನು ಮಂಜೂರು ಮಾಡುವಾಗ, ತನಿಖಾ ಸಂಸ್ಥೆಯು ಕೇವಲ ಬಂಧನದ ಕಾರಣವನ್ನಷ್ಟೇ ಅಲ್ಲದೆ, ಬಂಧನಕ್ಕಿರುವ ಆಧಾರಗಳನ್ನೂ ಲಿಖಿತವಾಗಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಆದರೆ, ಶೋಯಬ್ ಹಾಗೂ ಇಜಾಝ್ ಗೆ ಈ ಎರಡನ್ನೂ ರಾಷ್ಟ್ರೀಯ ತನಿಖಾ ದಳ ಒದಗಿಸಿಲ್ಲ ಎಂದು ಹೇಳಲಾಗಿದೆ.

ಬಂಧನದ ವಾರಂಟ್ ಇಲ್ಲದೆ ಹಾಗೂ ಅಂದು ಸಂಜೆ ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಿಂದ ಮಿರ್ಝಾ ಕುಟುಂಬವು ತೀವ್ರ ಸ್ವರೂಪದ ಒತ್ತಡಕ್ಕೆ ಒಳಗಾಗಿದೆ. ಸಹೋದರರಿಬ್ಬರನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂಬುದನ್ನು ಪತ್ತೆ ಹಚ್ಚಲು ಇಡೀ ಕುಟುಂಬವು ದಿನ ಪೂರ್ತಿ ಕಾದು ಕುಳಿತಿತು ಎಂದು ಶೋಯಬ್ ರ ಪತ್ನಿ, ಮೂರು ತಿಂಗಳ ಗರ್ಭಿಣಿ ಲಾಝಿನಾ ಹೇಳಿದ್ದಾರೆ. “ಒಂದು ವೇಳೆ ಅವರನ್ನು ಬಂಧಿಸಿರದಿದ್ದರೆ ಹಾಗೂ ಅವರು ಸಾಕ್ಷಿದಾರರಾಗಿ ಮಾತ್ರ ಅಗತ್ಯವಿದ್ದರೆ, ಅವರನ್ನು ರಾಷ್ಟ್ರೀಯ ತನಿಖಾ ದಳವು ಈ ರೀತಿ ಏಕೆ ಕರೆದೊಯ್ದಿತು?” ಎಂದು ಅವರು ಪ್ರಶ್ನಿಸುತ್ತಾರೆ. ಸಹೋದರರು ಎಲ್ಲಿದ್ದಾರೆ ಎಂದು ಯಾರಿಂದ ತಿಳಿದುಕೊಳ್ಳಬೇಕು ಎಂದು ಅರಿಯದೆ ಗೊಂದಲಗೊಂಡಿದ್ದ ಇಡೀ ಕುಟುಂಬವು, ಒಂದಿಷ್ಟು ವಿಶ್ವಾಸಾರ್ಹ ಮಾಹಿತಿ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಇಡೀ ದಿನ ಕಾತರದಿಂದ ಸುದ್ದಿ ವಾಹಿನಿಗಳನ್ನು ವೀಕ್ಷಿಸಿದೆ. ಆದರೆ, ಅವರಿಗೆ ಅಂಥದ್ದೇನೂ ಕಂಡು ಬಂದಿಲ್ಲ.

ಪಶ್ಚಿಮ ಬಂಗಾಳದಲ್ಲಿ ಬಂಧನಗಳನ್ನು ನಡೆಸಿದ ಮರುದಿನ, ಎಪ್ರಿಲ್ 13ರಂದು ರಾಷ್ಟ್ರೀಯ ತನಿಖಾ ದಳವು ವಿಚಾರಣೆಗೆ ಹಾಜರಾಗುವಂತೆ ಶೋಯಬ್ ಗೆ ಸೂಚಿಸಿತ್ತು. ಅಂದು thewire.in ನೊಂದಿಗೆ ಮಾತನಾಡಿದ್ದ ಶೋಯಬ್, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೆಲವು ಹೆಸರುಗಳ ಕುರಿತು ನನ್ನನ್ನು ಪ್ರಶ್ನಿಸಿದರು ಹಾಗೂ ನಿಮ್ಮ ನಂಬರ್ ಅನ್ನು ಅವರ ಮೊಬೈಲ್ ಗಳಲ್ಲಿ ಏಕೆ ಸ್ಟೋರ್ ಮಾಡಲಾಗಿತ್ತು ಎಂದು ವಿಚಾರಿಸಿದರು. ಅವರು ತಮ್ಮ ಶಂಕಿತರ ಪಟ್ಟಿಯಲ್ಲಿರಬಹುದಾದ ಕೆಲವು ವ್ಯಕ್ತಿಗಳ ಕುರಿತು ನನ್ನನ್ನು ಪ್ರಶ್ನಿಸಿ, ಇವರ ಪರಿಚಯ ನಿಮಗಿದೆಯೆ ಎಂದು ಕೇಳಿದರು. ನನಗೆ ಆ ಹೆಸರುಗಳನ್ನು ನೆನಪಿಸಿಕೊಳ್ಳಗಲು ಸಾಧ್ಯವಾಗಲಿಲ್ಲ ಹಾಗೂ ನಾನು ಅದನ್ನೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ತಿಳಿಸಿದೆ. ಅವರು ಕೆಲವು ಗಂಟೆಗಳ ನಂತರ ನನಗೆ ಅಲ್ಲಿಂದ ತೆರಳಲು ಅವಕಾಶ ನೀಡಿದರು” ಎಂದು ತಿಳಿಸಿದ್ದರು.

ಮಿರ್ಝಾ ಕುಟುಂಬವು ತನಿಖಾ ಸಂಸ್ಥೆಗಳ ದಾಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. 2012ರಲ್ಲಿ ಬಲಪಂಥೀಯ ಅಂಕಣಕಾರ ಹಾಗೂ ಮೈಸೂರಿನ ಈಗಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರನ್ನು ಹತ್ಯೆಗೈಯ್ಯಲು ಲಷ್ಕರ್-ಎ-ತೈಯಿಬಾ ರೂಪಿಸಿರುವ ಸಂಚಿನಲ್ಲಿ ಶೋಯಬ್ ಪಾತ್ರವಿದೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಆಗ ಕೇವಲ 22 ವರ್ಷ ವಯಸ್ಸಿನ ಯುವಕರಾಗಿದ್ದ ಶೋಯಬ್, ಆಗಷ್ಟೆ ಕಂಪ್ಯೂಟರ್ ಅಪ್ಲಿಕೇಷನ್ಸ್ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಆ ಸಂದರ್ಭದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದ 25 ವರ್ಷದ ಇಜಾಝ್ ರನ್ನೂ ಬಂಧಿಸಲಾಗಿತ್ತು. ಐದು ವರ್ಷಗಳ ನಂತರ, ಆ ಪ್ರಕರಣದಲ್ಲಿ ಶೋಯಬ್ ಹಾಗೂ ಇತರ 12 ಮಂದಿ ತಪ್ಪೊಪ್ಪಿಕೊಂಡರೆ, ಇಜಾಝ್ ರನ್ನು ಆರು ತಿಂಗಳಲ್ಲೇ ಬಿಡುಗಡೆ ಮಾಡಲಾಗಿತ್ತು. ಅವರನ್ನು ಆ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿತ್ತಾದರೂ, ಅದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿನ ವಿಜ್ಞಾನಿ ಉದ್ಯೋಗಕ್ಕೆ ಕುತ್ತು ತಂದಿತ್ತು. ಸದ್ಯ, ಇಜಾಝ್ ಬೆಂಗಳೂರು ಮೂಲದ ಐಟಿ ಕಂಪನಿಯೊಂದಕ್ಕೆ ಕೆಲಸ ಮಾಡುತ್ತಿದ್ದು, 2020ರ ನಂತರ ಕೋವಿಡ್-19 ಸಾಂಕ್ರಾಮಿಕದ ಬಳಿಕ, ಶೋಯಬ್ ನಂತೆ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

2017ರ ನಂತರ ತಾನು ಬಿಡುಗಡೆಯಾದ ನಂತರ, ಶೋಯಬ್ ಐಟಿ ಉದ್ಯೋಗವೊಂದನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದರಲ್ಲದೆ, ‘ಇತ್ತೆಹಾದ್ ನ್ಯೂಸ್ ಹುಬ್ಳಿ’ ಎಂಬ ಯೂಟ್ಯೂಬ್ ವಾಹಿನಿಯನ್ನೂ ಪ್ರಾರಂಭಿಸಿದ್ದರು. ಈ ವಾಹಿನಿಗೆ ಸುಮಾರು 6,000 ಚಂದಾದಾರರಿದ್ದು, 600ಕ್ಕೂ ಹೆಚ್ಚು ವಿಡಿಯೊಗಳನ್ನು ಹೊಂದಿದೆ. ಈ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿಸಲ್ಪಟ್ಟು, ನಂತರ ಬೆಳಗಾವಿಯ ಪ್ರಖ್ಯಾತ ಪತ್ರಕರ್ತರಾಗಿದ್ದ ಇಕ್ಬಾಲ್ ಜಟಕಿಯಿಂದ ಶೋಯಬ್ ಪ್ರೇರಣೆ ಹೊಂದಿದ್ದರು. ಸುಳ್ಳು ಪ್ರಕರಣವೊಂದರಲ್ಲಿ ಬಂಧನಕ್ಕೀಡಾಗಿದ್ದ ಜಟಕಿ ಕೂಡಾ, ತಮ್ಮ ಬಿಡುಗಡೆಯ ನಂತರ ‘ಇತ್ತೆಹಾದ್ ನ್ಯೂಸ್’ ಎಂಬ ಯೂಟ್ಯೂಬ್ ವಾಹಿನಿಯನ್ನು ಪ್ರಾರಂಭಿಸಿ, ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರುತ್ತಿರುವ ಸಾಮಾಜಿಕ-ರಾಜಕೀಯ ವಿಚಾರಗಳೊಂದಿಗೆ, ಬೆಳಗಾವಿ ಜಿಲ್ಲೆಯ ಸ್ಥಳೀಯ ಸುದ್ದಿಗಳತ್ತಲೂ ಗಮನ ಹರಿಸಿದ್ದರು.

2012ರ ಪ್ರಕರಣದಲ್ಲಿ ಶೋಯಬ್ ನೊಂದಿಗೆ ದೋಷಿಯಾಗಿದ್ದ ಇನ್ನೂ ಮೂರು ಮಂದಿಯ ಮನೆಗಳ ಮೇಲೆಯೂ ರಾಷ್ಟ್ರೀಯ ತನಿಖಾ ದಳವು ದಾಳಿ ನಡೆಸಿತ್ತು. ಇದರೊಂದಿಗೆ ಆಂಧ್ರಪ್ರದೇಶದ ಅನಂತಪುರಂ ನಿವಾಸಿಯಾದ ಐಟಿ ಇಂಜಿನಿಯರ್ ನಿವಾಸದ ಮೇಲೆಯೂ ದಾಳಿ ನಡೆಸಿತ್ತು. ವರದಿಗಳ ಪ್ರಕಾರ, ರಾಷ್ಟ್ರೀಯ ತನಿಖಾ ದಳದ ಒಂದು ತಂಡವು ಹುಬ್ಬಳ್ಳಿಗೆ ಬಂದಿಳಿದಿದ್ದ ಸಮಯದ ಆಸುಪಾಸಿನಲ್ಲೇ ಮತ್ತೊಂದು ತಂಡವು ಅನಂತಪುರಂ ಅನ್ನು ತಲುಪಿತ್ತು ಹಾಗೂ ಅನಂತಪುರಂನ ರಾಯದುರ್ಗ ಪಟ್ಟಣದ ನಗುಲಬಾವಿ ವೀದಿಯಲ್ಲಿ ವಾಸಿಸುತ್ತಿರುವ ನಿವೃತ್ತ ಶಾಲಾ ಶಿಕ್ಷಕ ಅಬ್ದುಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯಾಗಿರುವ ಅವರ 33 ವರ್ಷದ ಪುತ್ರ ಸೊಹೇಲ್ ನನ್ನು ವಶಕ್ಕೆ ಪಡೆದಿತ್ತು. ಸೊಹೇಲ್ ಕಳೆದ ಮೂರು ತಿಂಗಳಿನಿಂದ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಸೊಹೇಲ್ ನನ್ನು ಅಧಿಕೃತವಾಗಿ ಬಂಧಿಸಲಾಗಿದೆಯೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಮತ್ತೊಮ್ಮೆ, ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆತನನ್ನು ಬಂಧಿಸಿರುವ ಯಾವುದೇ ಉಲ್ಲೇಖವಿಲ್ಲ.

ಈ ಹಿಂದೆ ಪ್ರಕರಣಗಳನ್ನು ಎದುರಿಸಿದ್ದ ಮೂವರು ವ್ಯಕ್ತಿಗಳ ಪೈಕಿ ಹುಬ್ಬಳ್ಳಿ ನಿವಾಸಿಯಾದ ಅಬ್ದುಲ್ ಹಕೀಮ್ ಜಾಮ್ ದಾರ್, ಹಾಗೂ ಕೊಯಂಬತ್ತೂರಿನ ವೈದ್ಯರಾದ ಝಫರ್ ಇಕ್ಬಾಲ್ ಶೋಲಾಪುರ್ ಹಾಗೂ ನಯೀಮ್ ಸಿದ್ದಿಕಿ ಸೇರಿದ್ದಾರೆ. ರಾಷ್ಟ್ರೀಯ ತನಿಖಾ ದಳವು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 160ರ ಅಡಿ ಜಾಮ್ ದಾರ್, ಶೋಲಾಪುರ್ ಹಾಗೂ ಸಿದ್ದಿಕಿಗೆ ನೋಟಿಸ್ ಜಾರಿಗೊಳಿಸಿದ್ದು, ಮೇ 23ರಂದು ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ ಕಚೇರಿಗೆ ಹಾಜರಾಗುವಂತೆ ಅವರೆಲ್ಲರಿಗೂ ಸೂಚಿಸಿದೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News