ಮಾನಹಾನಿ ಪ್ರಕರಣ: ಶಿವಸೇನೆ ನಾಯಕ ಸಂಜಯ್ ರಾವತ್ ಗೆ ಜೈಲು ಶಿಕ್ಷೆ
Update: 2024-09-26 12:55 IST

ಮುಂಬೈ: ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಪತ್ನಿ ಡಾ. ಮೇಧಾ ಕಿರಿತ್ ಸೋಮಯ್ಯ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಶಿವಸೇನೆ (ಉದ್ಧವ್ ಬಣ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರನ್ನು ದೋಷಿ ಎಂದು ಘೋಷಿಸಿರುವ ಮುಂಬೈನ ಮಝಗಾಂವ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ಅವರಿಗೆ 15 ದಿನಗಳ ಸೆರೆವಾಸ ಮತ್ತು ರೂ. 25,000 ದಂಡ ವಿಧಿಸಿದ್ದಾರೆ.
ಮೀರಾ ಭಯಾಂಡರ್ ನಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ನಡೆದಿರುವ ರೂ. 100 ಕೋಟಿ ಅಕ್ರಮ ಹಗರಣದಲ್ಲಿ ಭಾಗಿಯಾಗಿದ್ದೇವೆ ಎಂದು ಸಂಜಯ್ ರಾವತ್ ನನ್ನ ಪತಿ ಹಾಗೂ ನನ್ನ ಮೇಲೆ ಆಧಾರರಹಿತ ಮತ್ತು ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಮೇಧಾ ಸೋಮಯ್ಯ ಅವರು ಸಂಜಯ್ ರಾವತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.