ರಾಹುಲ್ ಪ್ರಕರಣ : ವಿಚಾರಣೆಯನ್ನು ಆಗಸ್ಟ್ 4ಕ್ಕೆ ನಿಗದಿಪಡಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಹೊಸದಿಲ್ಲಿ: ಮೋದಿ ಉಪನಾಮೆ ಕುರಿತಂತೆ ನೀಡಿದ ಹೇಳಿಕೆಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮನ್ನು ದೋಷಿಯೆಂದು ಘೋಷಿಸಿ ಸಂಸದ ಹುದ್ದೆಯಿಂದ ಅನರ್ಹಗೊಳ್ಳುವಂತಾದ ಆದೇಶವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ ಅಪೀಲನ್ನು ಪುರಸ್ಕರಿಸಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮುಂದಿನ ವಿಚಾರಣೆಯನ್ನು ಆಗಸ್ಟ್ 4ಕ್ಕೆ ನಿಗದಿಪಡಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ದೂರುದಾರ ಹಾಗೂ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರಿಗೆ, ಗುಜರಾತ್ ಸರ್ಕಾರ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ಮೋದಿ ಉಪನಾಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ಮಾರ್ಚ್ 23 ರಂದು ರಾಹುಲ್ ಗಾಂಧಿ ಅವರನ್ನು ದೋಷಿಯೆಂದು ಘೋಷಿಸಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಈ ಪ್ರಕರಣದ ದೂರುದಾರ ಪೂರ್ಣೇಶ್ ಮೋದಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಕೇವಿಯಟ್ ಸಲ್ಲಿಸಿದ್ದು ತಮ್ಮ ವಾದವನ್ನು ಆಲಿಸದೆ ರಾಹುಲ್ ಗಾಂಧಿ ಅವರ ಅಪೀಲಿನ ಕುರಿತು ಯಾವುದೇ ಆದೇಶ ಜಾರಿಗೊಳಿಸಬಾರದೆಂದು ಕೋರಿದ್ದಾರೆ.
ಇಂದು ವಿಚಾರಣೆಯನ್ನು ಜಸ್ಟಿಸ್ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಆರಂಭಿಸಿತ್ತು. ಈ ಸಂದರ್ಭ ಪ್ರತಿಕ್ರಿಯಿಸಿದ ಜಸ್ಟಿಸ್ ಗವಾಯಿ ತಮ್ಮ ತಂದೆ ಕಾಂಗ್ರೆಸ್ ಜೊತೆ ಸಂಬಂಧ ಹೊಂದಿದ್ದರು ಹಾಗು ತಮ್ಮ ಸಹೋದರ ಈಗಲೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಆದ್ದರಿಂದ ತಾವು ಈ ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಯಾರಿಂದಲಾದರೂ ಆಕ್ಷೇಪಂಣೆಯಿದೆಯೇ ಎಂದು ಕೇಳಿದರು.
ರಾಹುಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ದೂರುದಾರ ಪರ ವಕೀಲ ಮಹೇಶ್ ಜೇಠ್ಮಲಾನಿ ತಮಗೇನೂ ಅಭ್ಯಂತರವಿಲ್ಲ ಎಂದರು.
ರಾಹುಲ್ ಈಗಾಗಲೇ 100 ದಿನಗಳ ಸಂಸತ್ ಹಾಜರಾತಿಯನ್ನು ಕಳೆದುಕೊಂಡಿರುವುದರಿಂದ ಹಾಗೂ ಅವರು ಪ್ರತಿನಿಧಿಸುತ್ತಿದ್ದ ವಯನಾಡ್ ಕ್ಷೇತ್ರಕ್ಕೆ ಶೀಘ್ರ ಉಪಚುನಾವಣೆ ಘೋಷಣೆಯಾಗಬಹುದಾದುದರಿಂದ ಶೀಘ್ರ ವಿಚಾರಣೆಗೆ ಸಿಂಘ್ವಿ ಕೋರಿದರು. ಆಗ ಪ್ರತಿಕ್ರಿಯೆ ಸಲ್ಲಿಸಲು ಜೇಠ್ಮಲಾನಿ ಹತ್ತು ದಿನ ಕಾಲಾವಕಾಶ ಕೋರಿದರು.
ಹೈಕೋರ್ಟ್ 100 ಪುಟಕ್ಕೂ ಅಧಿಕವಿರುವ ಆದೇಶ ಹೊರತಂದಿರುವುದರಿಂದ ಪ್ರತಿಕ್ರಿಯೆಗೆ ಇಷ್ಟು ಸಮಯವೇಕೆ ಎಂದು ಜಸ್ಟಿಸ್ ಗವಾಯಿ ಕೇಳಿದಾಗ ತಮಗೆ ಕೆಲ ಅಂಶಗಳನ್ನು ಪ್ರಸ್ತಾಪಿಸಲಿದೆ ಎಂದು ಜೇಠ್ಮಲಾನಿ ಹೇಳಿದರು.
ಕೊನೆಗೆ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 4ಕ್ಕೆ ನಿಗದಿಪಡಿಸಿದೆ.