ಗೋಮಾಂಸ ಸಾಗಾಟ ಶಂಕೆ | ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರಿಂದ ರೈಲಿನಲ್ಲಿ ವೃದ್ಧನಿಗೆ ಹಲ್ಲೆ!

Update: 2024-09-02 18:31 GMT

PC : X 

ಹೊಸದಿಲ್ಲಿ : ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ವೃದ್ಧ ಹಾಜಿ ಅಶ್ರಫ್ ಮುನಿಯಾರ್‌ಗೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅನಂತರ ಕೆಲವೇ ಗಂಟೆಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ನಾಲ್ವರನ್ನು ಬಂಧಿಸಲಾಗಿತ್ತು. ವೀಡಿಯೊದಲ್ಲಿ ಬಂಧಿತ ನಾಲ್ವರು ಆರೋಪಿಗಳು ಸೇರಿದಂತೆ ಗುಂಪೊಂದು ವೃದ್ದರೋರ್ವರಿಗೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವುದು, ನಿಂದಿಸುತ್ತಿರುವುದು ಹಾಗೂ ಅವರೊಂದಿಗಿದ್ದ ಪುತ್ರಿಯನ್ನು ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡುತ್ತಿರುವುದು ದಾಖಲಾಗಿದೆ.

ವೃದ್ದ ಹಾಜಿ ಅಶ್ರಫ್ ಮುನಿಯಾರ್ ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂಬ ಶಂಕೆ ದಾಳಿಗೆ ಕಾರಣ ಎಂದು ವರದಿಯಾಗಿದೆ.

ಈ ವೀಡಿಯೊವನ್ನು ಥಾಣೆ ಸರಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸ್ವಯಂಪ್ರೇರಿತವಾಗಿ ಪರಿಗಣಿಸಿತು ಹಾಗೂ ಎಫ್‌ಐಆರ್ ದಾಖಲಿಸಿತು. ಮಾಧ್ಯಮ ವರದಿಗಳ ಪ್ರಕಾರ, ಸಂತ್ರಸ್ತರ ಬೇಡಿಕೆಯ ಹೊರತಾಗಿಯೂ ದ್ವೇಷಾಪರಾಧ, ಗುಂಪಿನಿಂದ ದಾಳಿ, ದರೋಡೆ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲು ಪೊಲೀಸರು ನಿರಾಕರಿಸಿದ್ದಾರೆ. ಇದು ಕೇವಲ 15 ಸಾವಿರ ರೂ. ಜಾಮೀನು ಮೊತ್ತ ಪಾವತಿಸಿ ಆರೋಪಿಗಳನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಕಾರಣವಾಯಿತು ಎಂದು ಹೇಳಲಾಗಿದೆ.

ಮಾಧ್ಯಮ ವರದಿಯ ಪ್ರಕಾರ, ಪ್ರಧಾನ ಆರೋಪಿಗಳಲ್ಲಿ ಓರ್ವನಾದ ಅಶು ಅವದ್ ಎಸ್‌ಆರ್‌ಪಿಎಫ್ (ವಿಶೇಷ ಮೀಸಲು ಪೊಲೀಸ್ ಪಡೆ) ಅಧಿಕಾರಿಯ ಪುತ್ರ. ವೃದ್ಧನ ಮೇಲೆ ದಾಳಿ ನಡೆಸಿದ ಗುಂಪಿನಲ್ಲಿದ್ದ ಎಲ್ಲರೂ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳುತ್ತಿದ್ದವರು ಎಂಬ ವಿಷಯದ ಹಲವರು ಕಳವಳಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News