ಕೊನೆಗೂ ಚಂಪೈ ಸೊರೇನ್ ಗೆ ಆಹ್ವಾನ ನೀಡಿದ ರಾಜ್ಯಪಾಲರು!

Update: 2024-02-02 02:28 GMT

Photo: PTI

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆ, ಬಂಧನದ ಬಳಿಕ ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ಅವಕಾಶ ಕೋರಿ ಚಂಪೈ ಸೊರೇನ್ ರಾಜ್ಯಪಾಲರಿಗೆ ಹಕ್ಕು ಮಂಡಿಸಿದ 48 ಗಂಟೆಗಳ ಬಳಿಕ   ಸರ್ಕಾರ ರಚಿಸುವಂತೆ ಗುರುವಾರ ರಾತ್ರಿ ರಾಜ್ಯಪಾಲರು ಚಂಪೈ ಸೊರೇನ್ ಗೆ ಆಹ್ವಾನ ನೀಡಿದ್ದಾರೆ.

ಜೆಎಂಎಂ,ಕಾಂಗ್ರೆಸ್,ಆರ್ ಜೆ ಡಿ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಚಂಪೈ ಸೊರೇನ್ ಹಕ್ಕು  ಮಂಡಿಸಿದ್ದರು. ಇದೀಗ ಸರ್ಕಾರ ರಚನೆಗೆ ಆಹ್ವಾನ ನೀಡುವ ನಿರ್ಧಾರವನ್ನು ರಾಜಭವನದ ಪ್ರಕಟಣೆ ಸ್ಪಷ್ಟಪಡಿಸಿದೆ.

"ನಾವು ನಾಳೆ ಅಥವಾ ನಾಡಿದ್ದು ಸರ್ಕಾರ ರಚನೆ ಮಾಡಲಿದ್ದೇವೆ. ರಾಜ್ಯಪಾಲರು ನಮಗೆ ಅನುಮತಿ ನೀಡಿದ್ದಾರೆ" ಎಂದು ಗುರುವಾರ ತಡರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ಹೊರಬಂದ ಬಳಿಕ ಚಂಪೈ ಸ್ಪಷ್ಟಪಡಿಸಿದರು. "ಸದನದಲ್ಲಿ ಬಲಾಬಲ ಪರೀಕ್ಷೆ ಹತ್ತು ದಿನಗಳ ಒಳಗಾಗಿ ನಡೆದರೂ ನಾವು ಸಿದ್ಧರಿದ್ದೇವೆ" ಎಂದು ಚಂಪೈ ಅವರೊಂದಿಗೆ ತೆರಳಿದ್ದ ಕಾಂಗ್ರೆಸ್ ಶಾಸಕ ಅಲಮ್ ಗೀರ್ ಅಲಮ್ ಹೇಳಿದರು.

ಇದಕ್ಕೂ ಮುನ್ನ 47 ಶಾಸಕರರ ಬೆಂಬಲವನ್ನು ದೃಢಪಡಿಸಿ ರಾಜ್ಯಪಾಲರಿಗೆ ಪತ್ರಬರೆದ ಸೊರೇನ್ ಸಂಜೆ 3 ಅಥವಾ 5.30ಕ್ಕೆ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದರು. ಸಂಜೆ ಐದು ಮಂದಿಯ ನಿಯೋಗಕ್ಕೆ ರಾಜಭವನ ಒಪ್ಪಿಗೆ ನೀಡಿತು. ಈ ವಿಚಾರದಲ್ಲಿ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದು, ಶುಕ್ರವಾರ ಮಾಹಿತಿ ನೀಡುವುದಾಗಿ ನಿಯೋಗಕ್ಕೆ ರಾಜ್ಯಪಾಲರು ತಿಳಿಸಿದ್ದರು. "ನಮಗೆ ಸಂಖ್ಯಾಬಲ ಇದೆ. ಸಂವಿಧಾನಾತ್ಮಕ ರೂಢಿಯ ಪ್ರಕಾರ ವಿಳಂಬ ಮಾಡುವಲ್ಲಿ ಅರ್ಥವಿಲ್ಲ ಎಂದು ನಾವು ರಾಜ್ಯಪಾಲರಿಗೆ ಸ್ಪಷ್ಟಪಡಿಸಿದ್ದೆವು ಎಂದು ಚಂಪೈ ಹೇಳಿದ್ದಾರೆ.

ಬಿಜೆಪಿ ತಮ್ಮ ಶಾಸಕರನ್ನು ಖರೀದಿ ಮಾಡುವ ಭೀತಿಯ ಹಿನ್ನೆಲೆಯಲ್ಲಿ 47 ಶಾಸಕರ ಪೈಕಿ ಬಹುತೇಕ ಮಂದಿಯನ್ನು ಹೈದರಾಬಾದ್ ಗೆ ಕಳುಹಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಅವರು ರಾಂಚಿಗೆ ಆಗಮಿಸುವುದು ವಿಳಂಬವಾಗಿದೆ. 82 ಸದಸ್ಯ ಬಲದ ವಿಧಾನಸಭೆಯಲ್ಲಿ 80 ಶಾಸಕರು ಇದ್ದು, ಬಹುಮತಕ್ಕೆ 41 ಶಾಸಕರ ಅಗತ್ಯವಿದೆ. ಬಿಜೆಪಿ 28 ಶಾಸಕರನ್ನು ಹೊಂದಿದೆ. ಹೇಮಂತ್ ಸೊರೇನ್ ಸೇರಿದಂತೆ ಮೈತ್ರಿಕೂಟಕ್ಕೆ 48 ಶಾಸಕರ ಬೆಂಬಲವಿದೆ. ಈ ಪೈಕಿ 43 ಮಂದಿ ರಾಂಚಿಯಲ್ಲಿದ್ದಾರೆ. ಸೀತಾ ಸೊರೇನ್, ಲೋಬಿನ್ ಹೆಮ್ಬ್ರೋಮ್, ಚಮ್ರಾ ಲಿಂಡ ಹಾಗೂ ರಾಮದಾಸ್ ಸೊರೇನ್ ಗೈರುಹಾಜರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News