ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿಯ ಹರ್ಯಾಣದ ಕಾನೂನನ್ನು ರದ್ದುಗೊಳಿಸಿದ ಹೈಕೋರ್ಟ್
ಚಂಡಿಗಡ : ಖಾಸಗಿ ವಲಯದಲ್ಲಿನ 30,000 ರೂ.ಗೂ ಕಡಿಮೆ ವೇತನದ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗಾಗಿ ಮೀಸಲಿರಿಸುವ ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ಮಸೂದೆಯನ್ನು ಶುಕ್ರವಾರ ರದ್ದುಗೊಳಿಸಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು, ಈ ಕಾನೂನು ಅಸಾಂವಿಧಾನಿಕವಾಗಿದೆ ಮತ್ತು ಸಂವಿಧಾನದ ಭಾಗ-3ನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
2020ರಲ್ಲಿ ಈ ಕಾನೂನನ್ನು ಅಂಗೀಕರಿಸಲಾಗಿತ್ತು. ಉಚ್ಚ ನ್ಯಾಯಾಲಯವು ಸಂಪೂರ್ಣ ಕಾಯ್ದೆಯನ್ನು ರದ್ದುಗೊಳಿಸಿದೆ ಎಂದು ಹಿರಿಯ ವಕೀಲ ಅಕ್ಷಯ ಭಾನ್ ತಿಳಿಸಿದರು.
ಖಾಸಗಿ ವಲಯದಲ್ಲಿಯ ಶೇ.75ರಷ್ಟು ಉದ್ಯೋಗಗಳಿಗೆ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಒದಗಿಸಿದ್ದ ಕಾಯ್ದೆಯ ಜಾರಿಯ ವಿರುದ್ಧ ಹಲವಾರು ಅರ್ಜಿಗಳನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಕಾಯ್ದೆಯು ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಸಂವಿಧಾನದ ವಿಧಿ 19ರಡಿ ತಮ್ಮ ಉದ್ಯಮ ಮತ್ತು ವ್ಯವಹಾರಗಳನ್ನು ನಡೆಸುವ ಖಾಸಗಿ ಉದ್ಯೋಗದಾತರ ಮೂಲಭೂತ ಹಕ್ಕುಗಳಲ್ಲಿ ಸರಕಾರದ ಅತಿಕ್ರಮಣವನ್ನು ಪ್ರತಿನಿಧಿಸುತ್ತದೆ ಎಂದು ಅರ್ಜಿದಾರರ ಪೈಕಿ ಫರೀದಾಬಾದ್ ಇಂಡಸ್ಟ್ರೀಸ್ ಅಸೋಸಿಯೇಷನ್ ವಾದಿಸಿತ್ತು.
ಕಾಯ್ದೆಯು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ತ್ವಗಳಿಗೆ ವಿರುದ್ಧವಾಗಿದೆ ಮತ್ತು ದೇಶದ ಏಕತೆ ಹಾಗೂ ಸಮಗ್ರತೆ ಮತ್ತು ಸಾಮಾನ್ಯ ಭಾರತೀಯನ ಅನನ್ಯತೆಯ ಪರಿಕಲ್ಪನೆಯ ಮೇಲೆ ಗಂಭೀರ ದಾಳಿಯನ್ನು ಸೂಚಿಸುತ್ತದೆ ಎಂದೂ ಅರ್ಜಿದಾರರು ವಾದಿಸಿದ್ದರು.