ರಾಹುಲ್ ಆರೋಪ ನಿರಾಕರಿಸಿದ ಬೆನ್ನಲ್ಲೇ ಅಯೋಧ್ಯೆಗೆ ಭೇಟಿ ನೀಡಿದ ರಾಷ್ಟ್ರಪತಿ
ಅಯೋಧ್ಯೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಆದಿವಾಸಿ ಜನಾಂಗಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಅವರನ್ನು ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿದ ಅರೋಪವನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ನಿರಾಕರಿಸಿದ ಬೆನ್ನಲ್ಲೇ ರಾಷ್ಟ್ರಪತಿ ಅಯೋಧ್ಯೆ ರಾಮಮಂದಿರಕ್ಕೆ ಬುಧವಾರ ಭೇಟಿ ನೀಡಿದ್ದಾರೆ.
ವೇದಘೋಷ ಮತ್ತು ಮಂತ್ರಗಳ ಪಠಣದ ನಡುವೆ ಮುರ್ಮು ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಆ ಬಳಿಕ ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ ರಾಷ್ಟ್ರಪತಿ, "ಅಯೋಧ್ಯೆ ಮಂದಿರ ಭಾರತ ಸಮಾಜದ ಸಾಂಸ್ಕೃತಿಕ ಮೌಲ್ಯಗಳ ಸಂಗಮ" ಎಂದು ಬಣ್ಣಿಸಿದ್ದಾರೆ.
ರಾಹುಲ್ ಗಾಂಧಿಯವರ ಆರೋಪವನ್ನು ನಿರಾಕರಿಸಿರುವ ಚಂಪತ್ ರಾಯ್, "ರಾಹುಲ್ ಆರೋಪಗಳು ಸುಳ್ಳು, ನಿರಾಧಾರ ಮತ್ತು ತಪ್ಪುದಾರಿಗೆ ಎಳೆಯುವಂಥದ್ದು. ರಾಷ್ಟ್ರಪತಿಗಳನ್ನೂ ಜನವರಿ 22ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು" ಎಂದು ಹೇಳಿದ್ದಾರೆ.
ಮುರ್ಮು ಭೇಟಿ ಬಳಿಕ ಹೇಳಿಕೆ ನೀಡಿರುವ ಅವರು, ರಾಮಮಂದಿರಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿಲ್ಲ ಎಂದು ಆಪಾದಿಸುವವರಿಗೆ ಇದು ತಕ್ಕ ಉತ್ತರ ಎಂದು ತಿರುಗೇಟು ನೀಡಿದ್ದಾರೆ.
"ವಿಶೇಷ ವ್ಯವಸ್ಥೆಯಡಿ ರಾಷ್ಟ್ರಪತಿಗಳು ರಾಮಮಂದಿರದ ಗರ್ಭಗುಡಿಯ ಒಳಗೆ ರಾಮನ ವಿಗ್ರಹದ ಬಳಿಗೆ ಬರುವ ಅವಕಾಶ ನೀಡಲಾಗಿತ್ತು. ಪ್ರತಿಷ್ಠೆ ಸಂದರ್ಭದಲ್ಲಿ ಕೇವಲ ಅರ್ಚಕರು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರ ಗರ್ಭಗೃಹ ಪ್ರವೇಶಿಸಲು ಅವಕಾಶ ನೀಡಲಾಗಿತ್ತು" ಎಂದು ವಿವರಿಸಿದ್ದಾರೆ.
ರಾಷ್ಟ್ರಪತಿಗಳಿಗೆ ದೇವಾಲಯ ಟ್ರಸ್ಟ್ ವತಿಯಿಂದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು. ಸಂಜೆ 4ರ ವೇಳೆಗೆ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಷ್ಟ್ರಪತಿ ಮುರ್ಮು ಮೊದಲು ಹನುಮಾನ್ ಗ್ರಾಹಿ ದೇಗುಲಕ್ಕೆ ಭೇಟಿ ನೀಡಿದರು. ಬಳಿಕ ಸರಯೂ ನದಿ ತೀರಕ್ಕೆ ಭೇಟಿ ನೀಡಿ ಸಂಜೆಯ ಭವ್ಯ ಆರತಿಗೆ ಸಾಕ್ಷಿಯಾದರು. ಸರಯೂ ನದಿಗೆ ಪುಷ್ಪಮಾಲಿಕೆ ಸಲ್ಲಿಸಿದರು.