ನೀತಿ ಆಯೋಗದ ಸಭೆಯಿಂದ ಅರ್ಧದಲ್ಲೇ ಹೊರನಡೆದ ಮಮತಾ ಬ್ಯಾನರ್ಜಿ

Update: 2024-07-27 09:58 GMT

ಮಮತಾ ಬ್ಯಾನರ್ಜಿ | PC : PTI 

ಹೊಸ ದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ ನೀತಿ ಆಯೋಗದ 9ನೇ ಆಡಳಿತಾತ್ಮಕ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರ್ಧದಲ್ಲೇ ಹೊರನಡೆದಿರುವ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗೆ ಸಭೆಯಲ್ಲಿ ಕೇವಲ ಐದು ನಿಮಿಷ ಮಾತ್ರ ಮಾತನಾಡಲು ಅವಕಾಶ ನೀಡಲಾಯಿತು ಎಂದು ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ನಾನು ಕೇಂದ್ರ ಸರಕಾರವು ರಾಜ್ಯಗಳೊಂದಿಗೆ ತಾರತಮ್ಯ ಮಾಡಬಾರದು ಎಂದು ಹೇಳಿದೆ. ನನಗೆ ಕೇವಲ ಐದು ನಿಮಿಷಗಳ ಕಾಲ ಮಾತ್ರ ಮಾತನಾಡಲು ಅವಕಾಶ ನೀಡಿ, ನಂತರ ನಾನು ಮಾತನಾಡಲು ಬಯಸಿದರೂ ಮೈಕ್ ಅನ್ನು ನಿಶ್ಯಬ್ದಗೊಳಿಸಲಾಯಿತು. ನನಗೂ ಮುನ್ನ ಇತರರು 10-20 ನಿಮಿಷ ಮಾತನಾಡಿದ್ದರು” ಎಂದು ಆರೋಪಿಸಿದರು.

“ವಿರೋಧ ಪಕ್ಷಗಳ ಪೈಕಿ ನಾನೊಬ್ಬಳು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದೆ. ಹೀಗಿದ್ದೂ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಅಪಮಾನಕಾರಿ” ಎಂದು ಅವರು ಕಿಡಿ ಕಾರಿದರು.

ಹಲವು ವಿರೋಧ ಪಕ್ಷಗಳ ಸರಕಾರಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಈ ಪೈಕಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮ ರಾಜ್ಯಗಳ ವಿರುದ್ಧ 2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮಲತಾಯಿ ಧೋರಣೆ ಪ್ರದರ್ಶಿಸಿರುವುದರಿಂದ ನಾವು ನೀತಿ ಆಯೋಗದ ಸಭೆಗೆ ಹಾಜರಾಗುವುದಿಲ್ಲ ಎಂದು ಈ ಮುನ್ನವೇ ಪ್ರಕಟಿಸಿದ್ದರು.

ಇವರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ನೀತಿ ಆಯೋಗದ ಸಭೆಗೆ ಗೈರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News