ಏಳು ಮಕ್ಕಳ ಜತೆ ಸ್ಕೂಟರ್ ಸವಾರಿ ಮಾಡಿದ ವ್ಯಕ್ತಿಯ ಬಂಧನ
ಮುಂಬೈ: ಏಳು ಮಂದಿ ಮಕ್ಕಳನ್ನು ಸ್ಕೂಟರ್ನಲ್ಲಿ ಕೂರಿಸಿಕೊಂಡು ದ್ವಿಚಕ್ರವಾಹನ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮುನಾವ್ವರ್ ಶಾ (39) ಎಂಬ ತೆಂಗಿನಕಾಯಿ ವ್ಯಾಪಾರಿ ಏಳು ಮಂದಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೂರಿಸಿಕೊಂಡು ಸ್ಕೂಟರ್ ಸವಾರಿ ಮಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಮಗು ಸ್ಕೂಟರ್ ಎದುರು ಕಾಲಿಡುವ ಜಾಗದಲ್ಲಿ ನಿಂತಿದ್ದರೆ, ಮತ್ತೊಂದು ಮಗು ಎಡಗಡೆ ಗಟ್ಟಿಯಾಗಿ ಅಂಟಿಕೊಂಡಿದೆ. ಸ್ವಲ್ಪ ದೊಡ್ಡ ಹುಡುಗ ಸ್ಕೂಟರ್ ಹಿಂಬದಿಯಲ್ಲಿ ತುದಿಗಾಲಲ್ಲಿ ನಿಂತಿದ್ದರೆ ಇತರ ಮೂವರು ಮಕ್ಕಳು ಸವಾರನ ಹಿಂದೆ ಸೀಟಿನಲ್ಲಿ ಕೂತಿದ್ದಾರೆ. ಈ ಎಲ್ಲರೂ ಆರರಿಂದ 14 ವರ್ಷ ವಯಸ್ಸಿನ ಮಕ್ಕಳು.
ಈ ಪೈಕಿ ನಾಲ್ವರು ಮಕ್ಕಳು ಶಾ ಅವರ ಮಕ್ಕಳಾಗಿದ್ದರೆ, ಇತರ ಮೂವರು ಪಕ್ಕದ ಮನೆಯವರು ಎಂದು ಪೊಲೀಸರು ಹೇಳಿದ್ದಾರೆ. ಶಾಲಾ ಸಮವಸ್ತ್ರದಲ್ಲಿ ಇಲ್ಲದ ಈ ಮಕ್ಕಳನ್ನು ಶಾಲೆ ಅಥವಾ ಟ್ಯೂಷನ್ಗೆ ಕರೆದೊಯ್ಯಲಾಗುತ್ತಿತ್ತು ಎಂದು ವಿವರಿಸಿದ್ದಾರೆ.
ನೆರೆಯವರಿಗೆ ನೆರವು ನೀಡಲು ಹೋದ ಶಾ ಕಾನೂನು ತೊಂದರೆ ಎದುರಿಸುತ್ತಿದ್ದಾರೆ. "ಎಲ್ಲ ಮಕ್ಕಳ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಕಟ್ಟುನಿಟಿಟನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಾ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದ ಹಿರಿಯ ನಿರೀಕ್ಷಕ ವಿವೇಕ್ ಶಿಂಧೆ ಹೇಳಿದ್ದಾರೆ.
ಜೂನ್ 21ರಿಂದ 24ರ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಕುರಿತ ವಿಡಿಯೊವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸೊಹೈಲ್ ಖುರೇಷಿ ಎಂಬುವವರು, ಇದನ್ನು ಮುಂಬೈ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿ ಕಚೇರಿಗೆ ಟ್ಯಾಗ್ ಮಾಡಿದ್ದರು. ಆ ಬಳಿಕ ಸವಾರನನ್ನು ಪತ್ತೆ ಮಾಡಿ ಠಾಣೆಗೆ ಕರೆ ತರಲಾಯಿತು.