ಅಂಬಾನಿ ಪುತ್ರನ ಮದುವೆಯೂ.. ಸೋನಿಯಾ ಗಾಂಧಿ ಕುಟುಂಬದ ಗೈರುಹಾಜರಿಯೂ...

ಮತ್ತೊಮ್ಮೆ ಮೋದಿ ಸುಳ್ಳುಗಳನ್ನೇ ಮುಂದಿಟ್ಟು ಅನಾಯಾಸವಾಗಿ ಈ ದೇಶದ ಜನರನ್ನು ಮರುಳುಗೊಳಿಸುವ ಹಳೇ ಹಾದಿಯಲ್ಲೇ ಸಾಗಿದ್ದಾರೆ. ಕಾರ್ಪೊರೇಟ್ ವಲಯಕ್ಕೆ ಎಲ್ಲ ದಾರಿಗಳೂ ಮುಕ್ತವಾಗುತ್ತಿರುವಂತೆ ಕಾಣಿಸುತ್ತಿವೆ. ಹೀಗಿರುವಾಗ, ಅದನ್ನು ವಿರೋಧಿಸಬೇಕಾದ ಎಲ್ಲರೂ ಅಂಬಾನಿ ಮಗನ ಮದುವೆಗೆ ಧಾವಿಸಿದ್ದಾರೆ. ಇಂತಹವರಿಂದ ಏನನ್ನು ನಿರೀಕ್ಷಿಸಬಹುದು? ರಾಹುಲ್ ಗಾಂಧಿಯವರೇನೋ ವಿರೋಧಿಸುತ್ತಾರೆ. ಅದರೆ ಅವರೊಬ್ಬರೇ ಆಗಿಬಿಟ್ಟಂತೆ ಕಾಣಿಸುತ್ತಿದೆ.

Update: 2024-07-16 07:35 GMT
Editor : Thouheed | Byline : ವಿನಯ್ ಕೆ.

ಮೋದಿ ಹೊಸ ಸರಕಾರದ ಹೊಸ ಬಜೆಟ್ ಸಿದ್ಧವಾಗುತ್ತಾ ಇದೆ. ಈಗಾಗಲೇ ಕಾರ್ಪೊರೇಟ್‌ಗಳಿಗೆ ಸಾಕಷ್ಟು ಕೊಟ್ಟು ಕೊಬ್ಬಿಸಿರುವ ಮೋದೀಜಿ ಇನ್ನೂ ಸಾಕಷ್ಟು ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಪೊರೇಟ್ ಕುಳಗಳು ನಿರೀಕ್ಷಿಸುತ್ತಿದ್ದಾರೆ.

ಈ ನಡುವೆ ಮೋದಿ ಅಂಬಾನಿ ಮಗನ ‘ಶ್ರೀಮಂತ ಮದುವೆ’ಗೂ ಹೋಗಿ ಬಂದಿದ್ದಾರೆ. ‘ಇಂಡಿಯಾ’ ಒಕ್ಕೂಟದ ಹಲವು ನಾಯಕರೂ ಈ ಮದುವೆಯಲ್ಲಿ ಹಾಜರಾಗಿದ್ದಾರೆ.

ಆದರೆ ಮುಕೇಶ್ ಅಂಬಾನಿ ಖುದ್ದು ಹೋಗಿ ಆಹ್ವಾನ ನೀಡಿದ್ದರೂ ಸೋನಿಯಾ ಗಾಂಧಿ ಕುಟುಂಬ ಗೈರುಹಾಜರಾಗಿದೆ. ಒಂದೊಮ್ಮೆ ಸೋನಿಯಾ ಗಾಂಧಿ ಕುಟುಂಬದ ಸದಸ್ಯರು ಯಾರಾದರೂ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರೂ, ಆನಂತರ ರಾಹುಲ್ ಗಾಂಧಿ ಅಂಬಾನಿ-ಅದಾನಿಯನ್ನು ಟೀಕಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದರು. ಇದನ್ನೇ ನಿರೀಕ್ಷಿಸುತ್ತಿದ್ದ ಮೋದಿ ಪರಿವಾರಕ್ಕೆ ಈ ಚಕ್ರವ್ಯೆಹದಲ್ಲಿ ಸೋನಿಯಾ ಗಾಂಧಿ ಕುಟುಂಬವನ್ನು ಸಿಲುಕಿಸುವುದು ಕಡೆಗೂ ಸಾಧ್ಯವಾಗಿಲ್ಲ. ಈ ಎಲ್ಲದರ ಬಗ್ಗೆ ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೇಯಿ ಅವರು ವಿಶ್ಲೇಷಣೆ ಮಾಡಿದ್ದಾರೆ.

ಹಿಂದಿನ ಅವಧಿಯಲ್ಲೆಲ್ಲ ತಾನು ಆಡಿದ್ದೇ ಆಟ ಎಂದು ಪ್ರಚಂಡ ಬಹುಮತದ ಅಹಂನಲ್ಲಿ ಆಡುತ್ತಿದ್ದ ಬಿಜೆಪಿಗೆ, ಮೋದಿಗೆ ಈ ಸಲ ಅಂತಹ ನಿರಾಳತೆಯಿಲ್ಲ.

ವಿಕಸಿತ ಭಾರತ, 3ನೇ ದೊಡ್ಡ ಆರ್ಥಿಕತೆ ಎಂದೆಲ್ಲ ಬಡಾಯಿ ಕೊಚ್ಚುತ್ತಲೇ ಬಂದಿರುವವರಿಗೆ ಆ ವಿಚಾರವಾಗಿಯೂ ಬಜೆಟ್ ಮಂಡನೆ ವೇಳೆ ದೊಡ್ಡ ಸವಾಲುಗಳು ಎದುರಾಗಲಿವೆ.

ಅಷ್ಟು ಮಾತ್ರವಲ್ಲ, ದೇಶದ ದೊಡ್ಡ ದೊಡ್ಡ ಉದ್ಯಮಿ ಮಿತ್ರರ ವಿಚಾರದಲ್ಲಿನ ಮೋದಿ ನಡವಳಿಕೆಗಳು ಕೂಡ ಈ ಸಲ ಎದುರಿಸಬೇಕಾದ ಪ್ರಶ್ನೆಗಳು ಹಲವು.

ಕಾರ್ಪೊರೇಟ್ ಕುಳಗಳ ಜೊತೆಗಿನ ಮೋದಿ ಬಾಂಧವ್ಯದ ಬಗ್ಗೆ ಈಗಾಗಲೇ ಅನೇಕ ಪ್ರಶ್ನೆಗಳಿವೆ.

ಅದು ಈ ದೇಶದ ಬಡವರನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರನ್ನು ಇನ್ನಷ್ಟು ಕಷ್ಟಕ್ಕೆ ದೂಡಿರುವ ಬಗೆಗೆ ಗಂಭೀರ ತಕರಾರುಗಳಿವೆ.

ಹೀಗೆಲ್ಲ ಇರುವುದರ ನಡುವೆಯೇ, ಮುಕೇಶ್ ಅಂಬಾನಿ ತಮ್ಮ ಪುತ್ರನ ಮದುವೆಗೆ ಆಹ್ವಾನಿಸಲು ಸೋನಿಯಾ ಗಾಂಧಿಯವರ ದಿಲ್ಲಿಯ ಜನಪಥ್ ನಿವಾಸಕ್ಕೆ ಖುದ್ದು ಹೋಗಿದ್ದಾರೆ. ಹೀಗೆ ಸ್ವತಃ ಹೋಗಿ ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಆಹ್ವಾನಿಸುವ ಮರ್ಮ ರಾಜಕೀಯವಾಗಿ ಏನಾಗಿತ್ತು ಎಂಬುದು ಕೂಡ ಎಲ್ಲರಿಗೂ ಅರ್ಥವಾಗತೊಡಗಿದೆ.

ಮುಕೇಶ್ ದೇಶದ ಎಲ್ಲ ಮುಖ್ಯಮಂತ್ರಿಗಳು, ಅವರ ಸಂಪುಟದ ಮಂತ್ರಿಗಳು, ವಿಪಕ್ಷ ನಾಯಕರು, ಮಾತ್ರವಲ್ಲದೆ ‘ಇಂಡಿಯಾ’ ಒಕ್ಕೂಟದ ನಾಯಕರನ್ನೂ ಸೇರಿಸಿ ಎಲ್ಲ ರಾಜಕೀಯ ನಾಯಕರಿಗೂ ಮದುವೆ ಆಮಂತ್ರಣ ಕಳಿಸಿದ್ದರು. ಫೋನ್ ಮೂಲಕವೂ ಆಹ್ವಾನಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಆದರೆ ಯಾರನ್ನು ಮುಕೇಶ್ ಅಂಬಾನಿ ಖುದ್ದಾಗಿ ಹೋಗಿ ಆಹ್ವಾನಿಸಿದ್ದರೋ ಆ ಗಾಂಧಿ ಕುಟುಂಬ ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿಲ್ಲ.

ಮುಕೇಶ್ ಅಂಬಾನಿ ಅವರು ಪ್ರಧಾನಿ ಮೋದಿ ನಿವಾಸಕ್ಕೆ ಹೋಗಲಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬೇಕು. ಹಾಗಿದ್ದರೂ ಮದುವೆ ಸಮಾರಂಭದಲ್ಲಿ ಮೋದಿ ಪಾಲ್ಗೊಂಡಿದ್ದರು.

ಅಂಬಾನಿ, ಅದಾನಿಗಳ ಜೊತೆಗಿನ ಮೋದಿ ಬಾಂಧವ್ಯದ ಬಗ್ಗೆ ಸಂಸತ್ತಿನಲ್ಲಿ ದೊಡ್ಡ ದನಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದವರು ರಾಹುಲ್ ಗಾಂಧಿ.

ಅದಾದ ಬಳಿಕ ಕಾಂಗ್ರೆಸ್ ಕಚೇರಿಗೆ ಅಂಬಾನಿ-ಅದಾನಿಗಳ ಕಪ್ಪು ಹಣ ಟೆಂಪೋಗಳಲ್ಲಿ ಹೋಗಿದೆ ಎಂದು ಚುನಾವಣಾ ಪ್ರಚಾರದಲ್ಲಿ ಮೋದಿ ಮಾತಾಡಿದ್ದೂ ಆಯಿತು.

ಹಾಗೆ ಹೇಳಿದ ಮೋದಿ ಈಗ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ರಾಹುಲ್ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳದೆ ದೂರ ಉಳಿದರು.

ಯಾರಿಗೂ ಖುದ್ದಾಗಿ ಹೋಗಿ ಆಹ್ವಾನಿಸದ ಮುಕೇಶ್ ಅಂಬಾನಿ ಖುದ್ದು ಹೋಗಿ ಸೋನಿಯಾರನ್ನು ಕಂಡು ಆಹ್ವಾನ ನೀಡಿದ್ದರ ಹಿಂದೆ ದೊಡ್ಡ ರಾಜಕೀಯವೇ ಇತ್ತು ಎನ್ನುತ್ತಾರೆ ಪುಣ್ಯ ಪ್ರಸೂನ್ ಬಾಜಪೇಯಿ.

ಸೋನಿಯಾ ಗಾಂಧಿ ಕುಟುಂಬದ ಯಾರಾದರೊಬ್ಬರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡರೂ, ಆನಂತರ ಮೋದಿ ಮೇಲೆ ಈಗ ಮಾಡುತ್ತಿರುವಂತೆ ಆರೋಪ ಮಾಡುವುದು ಅವರಿಗೆ ಸಾಧ್ಯವಾಗುವುದಿಲ್ಲ ಎಂಬುದು ಲೆಕ್ಕಾಚಾರವಾಗಿತ್ತು.

ಅಂಥ ಲೆಕ್ಕಾಚಾರದೊಂದಿಗೇ ಹೆಣೆಯಲಾಗಿದ್ದ ಚಕ್ರವ್ಯೆಹದಲ್ಲಿ ಸೋನಿಯಾ ಗಾಂಧಿ ಕುಟುಂಬವನ್ನು ಸಿಲುಕಿಸುವುದು ಕಡೆಗೂ ಸಾಧ್ಯವಾಗಿಲ್ಲ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಅಜಿತ್ ಪವಾರ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಶಿವಸೇನಾ ಯುಬಿಟಿ ಬಣದ ಪ್ರಿಯಾಂಕಾ ಚತುರ್ವೇದಿ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವು ನಾಯಕರು ಅಂಬಾನಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಹಿನ್ನೆಲೆಯಲ್ಲಿ, ಇನ್ನು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಯೋಚಿಸಬೇಕಿದೆ.

ಬೆಲೆಯೇರಿಕೆ, ನಿರುದ್ಯೋಗವೂ ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಆಟವೇ ಇದೆ.

ಇದೆಲ್ಲದರ ಹಿನ್ನೆಲೆಯಲ್ಲಿ ವಿಪಕ್ಷಗಳ ದನಿ ತಗ್ಗಿಸಲೆಂದೇ ‘ಆಮಂತ್ರಣ ರಾಜಕೀಯ’ ರೂಪಿಸಲಾಗಿತ್ತು ಎನ್ನುತ್ತಾರೆ ಪುಣ್ಯ ಪ್ರಸೂನ್ ಬಾಜಪೇಯಿ.

ಪ್ರಧಾನಿಯೂ ಸೇರಿದಂತೆ ಯಾವುದೇ ಸಚಿವರ ಮನೆಗಳಿಗೂ ಖುದ್ದಾಗಿ ಹೋಗಿ ಆಹ್ವಾನಿಸದವರು ಸೋನಿಯಾ ಅವರನ್ನು ಮಾತ್ರ ಖುದ್ದಾಗಿ ಹೋಗಿ ಆಹ್ವಾನಿಸಿದ್ದು ಸಾಧಾರಣ ತಂತ್ರಗಾರಿಕೆಯೇನೂ ಆಗಿರಲಿಲ್ಲ.

ಆದರೆ ಆ ಮೋಡಿಗೆ ಸೋನಿಯಾ ಗಾಂಧಿ ಕುಟುಂಬ ಮರುಳಾಗಿಲ್ಲ. ಮೋದಿಯನ್ನು ಪ್ರಶ್ನಿಸಲು, ಅಂಬಾನಿ, ಅದಾನಿಗಳ ಜೊತೆಗಿನ ಮೋದಿ ಬಾಂಧವ್ಯವನ್ನು ಪ್ರಶ್ನಿಸಲು ರಾಹುಲ್ ತಮ್ಮ ನೈತಿಕತೆಯನ್ನು ಕಾದುಕೊಂಡು ದೃಢವಾಗಿದ್ದಾರೆ.

ಈಗ ಅಂಬಾನಿ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿರುವ ವಿಪಕ್ಷ ಒಕ್ಕೂಟದ ನಾಯಕರು ರಾಹುಲ್ ಎತ್ತುವ ಪ್ರಶ್ನೆಗಳಲ್ಲಿ ಅವರಿಗೆ ಜೊತೆಯಾಗಬಲ್ಲರೆ?

ಮೋದಿ ಹೇಳುವ ವಿಕಸಿತ ಭಾರತದ ನಿಟ್ಟಿನ ಮೊದಲ ಬಜೆಟ್, ದೇಶದ ಆರ್ಥಿಕತೆ 3ನೇ ನಂಬರ್‌ಗೆ ಏರುತ್ತದೆ ಎನ್ನಲಾಗಿರುವ ಹೊತ್ತಿನ ಬಜೆಟ್ ಇದಾಗಿದೆ.

ಉತ್ಪಾದನಾ ವಲಯ, ಕೈಗಾರಿಗಾ ವಲಯದ ಹಾಗೆಯೇ ಕೃಷಿ ಕ್ಷೇತ್ರ ಸುಧಾರಣೆ ಅಂದರೆ ಅಲ್ಲಿಯೂ ಕಾರ್ಪೊರೇಟ್ ಸಹಭಾಗಿತ್ವದ ವಿಚಾರ ಮುನ್ನೆಲೆಗೆ ಬರಬಹುದಾದ ಹೊತ್ತಿನಲ್ಲಿ ಈ ಬಜೆಟ್ ಮಂಡನೆಯಾಗುತ್ತಿದೆ.

ಕೃಷಿ ಮತ್ತು ಭೂಮಿ ಎರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಾಗಿ ಕಾರ್ಪೊರೇಟ್ ವಲಯ ಹೊಂಚು ಹಾಕುತ್ತಿದೆ. ಬಿತ್ತನೆ ಬೀಜದಿಂದ ಹಿಡಿದು ಎಲ್ಲದರವರೆಗೆ ಹಿಡಿತ ಸಾಧಿಸಲು ಅದು ಬಯಸುತ್ತಲೇ ಇದೆ.

ಬಜೆಟ್ ವಿಚಾರದಲ್ಲಿ ಸರಕಾರಕ್ಕೆ ಸಲಹೆ ನೀಡುವ ಆರ್‌ಬಿಐ, ನೀತಿ ಆಯೋಗಗಳೆಲ್ಲ, ಹೆಚ್ಚು ಭಾಗವನ್ನು ಮೂಲಸೌಕರ್ಯದ ಮೇಲೆ ವೆಚ್ಚ ಮಾಡಬೇಕಾಗಬಹುದು ಎನ್ನುತ್ತಿವೆ.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಕಾರ್ಪೊರೇಟ್ ನುಸುಳಿಕೊಳ್ಳುತ್ತದೆ. ಸಂವಹನ, ಇಂಧನ, ರಸ್ತೆ, ರೈಲ್ವೆ, ಬಂದರು ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಈ ಪ್ರಶ್ನೆ ಇದ್ದೇ ಇದೆ.

ಪಟ್ಟಿ ಮಾಡಲಾದ 26 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 5 ಲಕ್ಷ ಕೋಟಿ ರೂ. ಲಾಭ ಬಂದಿದೆ ಇವೆಲ್ಲವೂ ಖಾಸಗಿಯವರ ಕೈಗೆ ಹೋಗಲಿವೆಯೇ?

ಶಿಕ್ಷಣ, ಆರೋಗ್ಯದವರೆಗೆ ಎಲ್ಲವನ್ನೂ ಖಾಸಗೀಕರಣಗೊಳಿಸುವ ಸನ್ನಾಹದಲ್ಲಿ ಸರಕಾರ ಇದ್ದಂತಿದೆ ಎನ್ನುತ್ತಾರೆ ಪುಣ್ಯ ಪ್ರಸೂನ್ ಬಾಜಪೇಯಿ. ಹೀಗೆ ಎಲ್ಲವೂ ಖಾಸಗಿಯವರ ಪಾಲಾದರೆ ಕಾರ್ಪೊರೇಟ್ ವಲಯ ದೊಡ್ಡ ಲಾಭ ಪಡೆಯಲಿದೆ.ಇಂತಹದ್ದೊಂದು ಹೆಜ್ಜೆಯನ್ನು ಸರಕಾರ ತೆಗೆದುಕೊಂಡರೆ ಯಾರು ವಿರೋಧಿಸಬೇಕು ಈಗ?

ಉದ್ಯೋಗ ಪ್ರಮಾಣ 2023-24ರಲ್ಲಿ ಡಬಲ್ ಆಗಿದೆ ಎಂದು ಆರ್‌ಬಿಐ ಹೇಳಿಬಿಟ್ಟಿದೆ. ಸರಕಾರ ಜಾದೂವನ್ನೇ ಮಾಡಿಬಿಟ್ಟಿದೆ ಎಂಬ ಗುಣಗಾನ ಮಾಡಲಾಗಿದೆ. ಈ ಮೂಲಕ ತಮ್ಮನ್ನು ನೇಮಿಸಿದವರ ಋಣ ತೀರಿಸುವ ಕೆಲಸವನ್ನು ಆರ್‌ಬಿಐ ಮುಖ್ಯಸ್ಥರು ಮಾಡಿದ ಹಾಗಿದೆ.

ಆರ್‌ಬಿಐ ವರದಿ ಉಲ್ಲೇಖಿಸಿ ಆಮೇಲೆ ಪ್ರಧಾನಿ ಬಡಾಯಿ ಕೊಚ್ಚಿಕೊಳ್ಳುವುದು ಇದ್ದೇ ಇದೆ. ದೇಶದಲ್ಲಿ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಮತ್ತೆ ಬಡಾಯಿ ಕೊಚ್ಚುತ್ತಾರೆ.

ಆ ವರದಿ ಉಲ್ಲೇಖಿಸಿ ಸರಕಾರದ ಸಾಧನೆಯ ಬಗ್ಗೆ ಈ ಮಟ್ಟದ ಭಂಡ ಸುಳ್ಳನ್ನು ಸರಕಾರ ಹೇಳುತ್ತದೆ.

ಆದರೆ ದೇಶದಲ್ಲಿನ ಉದ್ಯೋಗ ಸ್ಥಿತಿಯ ವಾಸ್ತವ ಏನು?

ಐಎಂಎಫ್ ಕೂಡ ಪ್ರಕಟಿಸಿರುವ ಒಂದು ವರದಿಯ ಬಗ್ಗೆ ಪ್ರಧಾನಿ ಮೋದಿ ಮಾತಾಡುವುದೇ ಇಲ್ಲ.

ಭಾರತ ವಿಕಸಿತ ಆಗಲಿಕ್ಕೆ 32 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಾದ ಅಗತ್ಯವಿದೆ ಎಂದು ಐಎಂಎಫ್ ತನ್ನ ವರದಿಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಆದರೆ ಆ ಉದ್ಯೋಗಗಳನ್ನು ಸೃಷ್ಟಿಸಲು ಹೆಣಗಾಡಬೇಕಾದ ಸ್ಥಿತಿಯಿದೆ.

ಪ್ರಸಕ್ತ ಶೇ.7ರ ಜಿಡಿಪಿ ಬೆಳವಣಿಗೆ ದರ ಆಧರಿಸಿ, ವರ್ಷಕ್ಕೆ 80ರಿಂದ 90 ಲಕ್ಷ ಉದ್ಯೋಗಗಳಿಗಿಂತ ಹೆಚ್ಚನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಅಂದರೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಕೂಡ ಸಾಧ್ಯವೇ ಇಲ್ಲ ಎಂದಿದೆ.

ಇಂತಹ ಹೊತ್ತಲ್ಲಿ ಮತ್ತೊಮ್ಮೆ ಮೋದಿ ಸುಳ್ಳುಗಳನ್ನೇ ಮುಂದಿಟ್ಟು ಅನಾಯಾಸವಾಗಿ ಈ ದೇಶದ ಜನರನ್ನು ಮರುಳುಗೊಳಿಸುವ ಹಳೇ ಹಾದಿಯಲ್ಲೇ ಸಾಗಿದ್ದಾರೆ.

ಕಾರ್ಪೊರೇಟ್ ವಲಯಕ್ಕೆ ಎಲ್ಲ ದಾರಿಗಳೂ ಮುಕ್ತವಾಗುತ್ತಿರುವಂತೆ ಕಾಣಿಸುತ್ತಿವೆ. ಹೀಗಿರುವಾಗ, ಅದನ್ನು ವಿರೋಧಿಸಬೇಕಾದ ಎಲ್ಲರೂ ಅಂಬಾನಿ ಮಗನ ಮದುವೆಗೆ ಧಾವಿಸಿದ್ದಾರೆ. ಇಂತಹವರಿಂದ ಏನನ್ನು ನಿರೀಕ್ಷಿಸಬಹುದು?

ರಾಹುಲ್ ಗಾಂಧಿಯವರೇನೋ ವಿರೋಧಿಸುತ್ತಾರೆ. ಅದರೆ ಅವರೊಬ್ಬರೇ ಆಗಿಬಿಟ್ಟಂತೆ ಕಾಣಿಸುತ್ತಿದೆ.

ಅಗ್ನಿವೀರ್‌ನಂತಹ ಯೋಜನೆಯಿಟ್ಟುಕೊಂಡು ಮೋದಿ ಸರಕಾರ ಇನ್ನು ಪೆನ್ಷನ್ ನೀಡುವುದಿಲ್ಲ ಎನ್ನುತ್ತದೆ.

ಸೇನೆಯಿಂದ ನಿವೃತ್ತಿಯಾಗಿರುವ ಅಧಿಕಾರಿಗಳು 30 ಲಕ್ಷ ಇದ್ದಾರೆ. 1 ಲಕ್ಷ 41 ಸಾವಿರ ಕೋಟಿ ರೂ. ವಾರ್ಷಿಕವಾಗಿ ಪೆನ್ಷನ್ ನೀಡುವುದಕ್ಕೇ ಬೇಕಾಗುತ್ತದೆ.

6 ಲಕ್ಷ 20 ಸಾವಿರ ಕೋಟಿ ರಕ್ಷಣಾ ಬಜೆಟ್ ಆಗಿದ್ದು, ಇದರಲ್ಲಿ 1 ಲಕ್ಷ 41 ಸಾವಿರ ಕೋಟಿ ಪೆನ್ಷನ್‌ಗೇೀ ಹೋಗಲಿದೆ.

ಹೀಗಾಗಿ ಪೆನ್ಷನ್ ನೀಡುವುದನ್ನೇ ನಿಲ್ಲಿಸಲು ಸರಕಾರ ಯೋಚಿಸಿದೆ. ಇನ್ನೊಂದೆಡೆ ಎಲ್ಲವನ್ನೂ ಖಾಸಗಿಯವರ ಕೈಗಿಡಲು ತಯಾರಿ ನಡೆಯುತ್ತಿದೆ.

ಬಜೆಟ್ ಹೊತ್ತಲ್ಲಿ ಮೂಲಸೌಕರ್ಯ ಮತ್ತು ಖಾಸಗೀಕರಣ ವಿಚಾರ ಬಹು ದೊಡ್ಡ ಸವಾಲಾಗಿರುತ್ತದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ 12.1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾದರೆ ಅದು ಇಲ್ಲಿಯವರೆಗಿನದಕ್ಕಿಂತ ದೊಡ್ಡ ಮೊತ್ತವಾಗಲಿದೆ. ಹಿಂದಿನ ಬಜೆಟ್‌ನಿಂದ ಶೇ.11ರಷ್ಟು ಹೆಚ್ಚಿನ ಮೊತ್ತವಾಗಿದೆ.

ಈ ಕ್ಷೇತ್ರದಲ್ಲಿ ಅದಾನಿಯೂ ಹಣ ಹಾಕುವವರೇ ಆಗಿದ್ದಾರೆ. ಅಂಬಾನಿಯೂ ಹಣ ತೊಡಗಿಸುತ್ತಾರೆ. ಟಾಟಾ ಕೂಡ ಹಣ ತೊಡಗಿಸುತ್ತಾರೆ.

ಎಲ್ಲರೂ ಬಯಸುವ ಒಂದು ಸಾಮಾನ್ಯ ಕ್ಷೇತ್ರವೆಂದರೆ ಇಂಧನ ವಲಯ.

ಮಧ್ಯಪ್ರದೇಶ ಮಹಾನ್ ಎನರ್ಜಿ ಲಿಮಿಟೆಡ್ ಎಂಬುದು ಅದಾನಿ ಸಮೂಹದ ಜೊತೆ ಸಹಯೋಗ ಹೊಂದಿದೆ.ಇದರಲ್ಲಿ ಅಂಬಾನಿಯ ಶೇ.24ರಷ್ಟು ಷೇರು ಇದೆ. ಹೀಗೆ ಇಲ್ಲಿ ಇಬ್ಬರೂ ಒಟ್ಟಿಗೇ ಇದ್ದಾರೆ.

ಇದಲ್ಲದೆ, ಪ್ರವಾಸೋದ್ಯಮ, ನೀರಾವರಿ, ರೈಲ್ವೆ, ಇಂಧನ, ಗಣಿಗಾರಿಕೆ, ಸಂವಹನ ಇಂಥ ಹಲವಾರು ಇಲಾಖೆಗಳಲ್ಲಿ ಎಲ್ಲ ಕಡೆಯೂ ಕಾರ್ಪೊರೇಟ್ ಬಂದರೆ ಏನಾಗಿ ಹೋದೀತು?

ಪ್ರಶ್ನಿಸಬೇಕಿದ್ದ ವಿಪಕ್ಷ ನಾಯಕರುಗಳೇ ಹೋಗಿ ಉದ್ಯಮಿ ಮನೆಯ ಮದುವೆಯಲ್ಲಿ ಕೂತಿದ್ದು ಉಂಟುಮಾಡಬಹುದಾದ ಪರಿಣಾಮಗಳು ಏನಿರಬಹುದು?

ಕಾರ್ಪೊರೇಟ್ ವಲಯದ ಆಕ್ರಮಣ ಮತ್ತದೇ ಬಡವರನ್ನು ಇನ್ನಷ್ಟು ಬಡವರನ್ನಾಗಿಸುವುದನ್ನೇ ಮುಂದುವರಿಸಲಿದೆ.

ಇದನ್ನು ಸತತವಾಗಿ ವಿರೋಧಿಸುತ್ತ ಬಂದಿರುವ ರಾಹುಲ್ ಗಾಂಧಿ ಈ ಬಾರಿಯೂ ಪ್ರಶ್ನೆಗಳನ್ನು ಎತ್ತಲಿದ್ದಾರೆ.

ಇಡೀ ಸನ್ನಿವೇಶ ರಾಹುಲ್ ವರ್ಸಸ್ ಕಾರ್ಪೊರೇಟ್ ರಾಜಕೀಯ ಎಂಬಂತಾಗಲಿದೆ.

ಆದರೆ ದೇಶದ ಬಹುಪಾಲು ಕಾರ್ಪೊರೇಟ್ ಪಾಲಾಗುವುದನ್ನು ತಡೆಯುವುದು ರಾಹುಲ್ ಒಬ್ಬರಿಗೇ ಸಾಧ್ಯವಾದೀತೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News