ಕರಗುತ್ತಿರುವ ಅಮೆರಿಕದ ಬಣ್ಣ

Update: 2025-01-27 11:55 IST
Editor : Thouheed | Byline : ಫೈಝ್ ವಿಟ್ಲ
ಕರಗುತ್ತಿರುವ ಅಮೆರಿಕದ ಬಣ್ಣ
  • whatsapp icon

ಅಮೆರಿಕ ಈಗ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ವೈದ್ಯರು ಬರೆದು ಕೊಟ್ಟ ಔಷಧಿ ಖರೀದಿಸಲೂ ಅಮೆರಿಕನ್ನರು ಕಷ್ಟ ಪಡುತ್ತಿದ್ದು, ಲಕ್ಷಗಟ್ಟಲೆ ಅಮೆರಿಕನ್ನರು ನಿರ್ಗತಿಕರಾಗಿದ್ದಾರೆ ಎಂದು ಅಮೆರಿಕದ ದೇಶದ ವೆರ್ಮಂಟ್ ರಾಜ್ಯ ಸೆನೆಟರ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ವೆರ್ಮಂಟ್ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ವ್ಯಕ್ತಪಡಿಸಿರುವ ಕಳವಳವು, ಅಮೆರಿಕದ ವೈಭವೋಪೇತ ಸಂಪತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಮೂಡಿಸಿದೆ.

ಅಮೆರಿಕದ ಪ್ರಜೆಗಳಲ್ಲಿ ಹಂಚಿಕೆ ಯಾಗುತ್ತಿರುವ ಆರ್ಥಿಕತೆಯು ಅತ್ಯಂತ ಅಸಮಾನತೆಯಿಂದ ಕೂಡಿದ್ದು, ಅಲ್ಲಿನ ದುಡಿಯುವ ವರ್ಗವು ಹಿಂದೆಂದಿಗಿಂತಲೂ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಎರಡನೇ ಬಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಡೊನಾಲ್ಡ್ ಟ್ರಂಪ್ ಕಡೆಗಣಿಸಿದ್ದಾರೆ ಎನ್ನಲಾದ ವಿಷಯಗಳ ಕಡೆಗೆ ಗಮನ ಸೆಳೆದಿರುವ ಬೆರ್ನಿ ಸ್ಯಾಂಡರ್ಸ್, ‘‘ಪ್ರಿಸ್ಕ್ರಿಪ್ಷನ್ ಔಷಧಿಗಳಿಗೆ ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಬೆಲೆ ತೆರುತ್ತಿದ್ದು, ಆರೋಗ್ಯ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಉಳಿದ ದೇಶಗಳಿಗೆ ಹೋಲಿಸಿದರೆ, ಅಮೆರಿಕದಲ್ಲಿ ಆರೋಗ್ಯಕ್ಕಾಗಿ ಮಾಡುವ ಖರ್ಚೂ ವಿಪರೀತ, ನಾಲ್ವರು ಅಮೆರಿಕನ್ನರಲ್ಲಿ ಓರ್ವರಿಗೆ ಡಾಕ್ಟರ್‌ಗಳು ನೀಡುವ ಔಷಧಿಗಳನ್ನು ಖರೀದಿಸುವ ತಾಕತ್ತು ಇಲ್ಲ. ಆರೋಗ್ಯ ಕ್ಷೇತ್ರಕ್ಕಾಗಿ ಖರ್ಚು ಮಾಡಿ ದುಡಿಯುವ ವರ್ಗದ ಅಮೆರಿಕನ್ನರು ಹೈರಾಣಾಗುತ್ತಿದ್ದಾರೆ’’ ಎಂದಿದ್ದಾರೆ.

ಮಾತ್ರವಲ್ಲದೆ, ಅಮೆರಿಕ ಗಮನಾರ್ಹವಾಗಿ ವಸತಿ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದರ ಕಡೆಗೆ ಅವರು ಗಮನ ಸೆಳೆದಿದ್ದಾರೆ. ಎಂಟು ಲಕ್ಷ ಅಮೆರಿಕನ್ನರು ನಿರಾಶ್ರಿತರಾಗಿದ್ದಾರೆ, ಮಾತ್ರವಲ್ಲ ಲಕ್ಷಾಂತರ ಜನರು ತಮ್ಮ ಸೀಮಿತ ಆದಾಯದ ಶೇ.50 ರಿಂದ ಶೇ.60 ರಷ್ಟು ವಸತಿಗಾಗಿಯೇ ಖರ್ಚು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಈ ವಿಷಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದು ಮಾತ್ರವಲ್ಲ, ಅಮೆರಿಕನ್ನರ ಸ್ಥಿತಿ ಹೀಗಿದ್ದರೂ,

ನವೆಂಬರ್‌ನ ಅಧ್ಯಕ್ಷೀಯ ಚುನಾವಣೆ ಬಳಿಕ ಅಮೆರಿಕದ ಅತ್ಯಂತ ಶ್ರೀಮಂತರಾದ ಎಲಾನ್ ಮಸ್ಕ್, ಮಾರ್ಕ್ ಝುಕರ್‌ಬರ್ಗ್, ಜೆಫ್ ಬೆಸೋಸ್ ಆಸ್ತಿಯಲ್ಲಿ 233 ಬಿಲಿಯನ್ ಡಾಲರ್ ಏರಿಕೆ ಯಾಗಿದೆ ಎಂಬುದರ ಕಡೆಗೂ ಗಮನ ಸೆಳೆದಿದ್ದಾರೆ.

ಸೆನೆಟರ್ ಸ್ಯಾಂಡರ್ಸ್ ಅವರ ಮಾತುಗಳನ್ನು ಮಾಧ್ಯಮ ವರದಿಗಳೂ ಬೆಂಬಲಿಸುತ್ತವೆ. ಬ್ಯುಸಿನೆಸ್ ಇನ್ಸೈಡರ್ ವರದಿ ಪ್ರಕಾರ 2024 ರಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ 203 ಬಿಲಿಯನ್ ಡಾಲರ್ ಲಾಭ ಗಳಿಸಿದ್ದು, ಅವರ ವೈಯಕ್ತಿಕ ಸಂಪತ್ತು 432 ಬಿಲಿಯನ್ ಡಾಲರ್ ಗೆ ಏರಿದೆ. ಅಮೆಝಾನ್ ಮಾಲಕ ಜೆಫ್ ಬೆಸೋಸ್ ಹಾಗೂ ಮಾರ್ಕ್ ಝುಕರ್‌ಬರ್ಗ್ ಕೂಡಾ ಆ ವರ್ಷ ಕ್ರಮವಾಗಿ 61 ಹಾಗೂ 79 ಬಿಲಿಯನ್ ಡಾಲರ್ ಆಸ್ತಿಯನ್ನು ವೃದ್ಧಿಸಿಕೊಂಡಿದ್ದಾರೆ.

ಈ ಮೂವರ ಆಸ್ತಿಯ ಪ್ರಮಾಣವು, ಅಮೆರಿಕದ ಅರ್ಧದಷ್ಟು ಜನಸಂಖ್ಯೆಯ ಒಟ್ಟು ಆಸ್ತಿಗಿಂತ ಹೆಚ್ಚಿದೆ ಎನ್ನುವುದನ್ನು ಎತ್ತಿ ತೋರಿಸಿರುವ ಸೆನೆಟರ್, ಈ ಮೂವರು ಸೇರಿದಂತೆ ಶ್ರೀಮಂತ ವ್ಯಕ್ತಿಗಳು ತಮ್ಮ ನ್ಯಾಯಯುತ ತೆರಿಗೆಗಳನ್ನು ಪಾವತಿಸುವಂತೆ ಮಾಡಬೇಕು ಎಂದಿದ್ದಾರೆ.

ಚುನಾವಣಾ ಸಂದರ್ಭದಲ್ಲಿ, ಎಲಾನ್ ಮಸ್ಕ್, ಝುಕರ್‌ಬರ್ಗ್ ಹಾಗೂ ಜೆಫ್ ಬೆಸೋಸ್ ಅವರು ತಮ್ಮ ಸಂಸ್ಥೆಗಳ ಮೂಲಕ ಕೋಟ್ಯಂತರ ಡಾಲರ್‌ಗಳನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಚುನಾವಣಾ ದೇಣಿಗೆಯಾಗಿ ನೀಡಿದ್ದರು. ಎಲಾನ್ ಮಸ್ಕ್ ಒಬ್ಬರೇ ಸುಮಾರು 260 ಮಿಲಿಯನ್ ಡಾಲರ್‌ಗಳನ್ನು ಟ್ರಂಪ್ ಚುನಾವಣಾ ಗೆಲುವಿಗಾಗಿ ಖರ್ಚು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ಗಳ ಮೂಲಕ ಮಾರ್ಕ್ ಝುಕರ್‌ಬರ್ಗ್ ಹಾಗೂ ಎಕ್ಸ್ ಮೂಲಕ ಎಲಾನ್ ಮಸ್ಕ್ ಕೂಡಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗಣನೀಯ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಬಿಲಿಯನೇರ್ ಉದ್ಯಮಿಗಳು ಚುನಾವಣಾ ದೇಣಿಗೆಯಾಗಿ ನೀಡುವ ಹಣಕಾಸು ವ್ಯವಸ್ಥೆಯನ್ನೂ ಸ್ಥಗಿತಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ. ಕೆಲವೇ ಬಿಲಿಯನೇರ್‌ಗಳು ಅಧ್ಯಕ್ಷೀಯ ಚುನಾವಣೆಯನ್ನು ಖರೀದಿಸುವುದನ್ನು ಅನುಮತಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಫೈಝ್ ವಿಟ್ಲ

contributor

Similar News