'ಸಹಾಯಕ ಪ್ರಾಧ್ಯಾಪಕ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟವಾದರೂ ಸ್ಥಳನಿಯುಕ್ತಿ ಆದೇಶವಿಲ್ಲ'

Update: 2024-03-06 04:20 GMT

Photo: PTI

ಬೆಂಗಳೂರು, ಮಾ.5: ಸರಕಾರಿ ಪ್ರಥಮ ದರ್ಜೆಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ 1,242 ಹುದ್ದೆಗಳಿಗೆ 2021ರಲ್ಲಿ ನೇಮಕಾತಿಯು ಕೆಇಎ ಮೂಲಕ ಅಧಿಸೂಚನೆಯಾಗಿದ್ದು, ಅಂತಿಮ ಆಯ್ಕೆ ಪಟ್ಟಿಯನ್ನು 2023ರ ನವೆಂಬರ್ 4ರಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟವಾಗಿದ್ದರೂ ಕೂಡ ಇದುವರೆಗೂ ಸ್ಥಳನಿಯುಕ್ತಿ ಆದೇಶ ಪತ್ರ ನೀಡಿಲ್ಲ ಎಂದು ಸಹಾಯಕ ಪ್ರಾಧ್ಯಪಕ ಹುದ್ದೆಯ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಸ್ಥಳನಿಯುಕ್ತಿಗೊಳಿಸುವ ಸಂಬಂಧ ಫೆ.26ರಂದು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿ, ನಂತರ ಒಂದೇ ದಿನದಲ್ಲಿ ಹಿಂಪಡೆಯಲಾಗಿದೆ. ನಂತರ ಫೆ.27ರಂದು ಮತ್ತೊಂದು ಜ್ಞಾಪನ ಪತ್ರವನ್ನು ಹೊರಡಿಸಿ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಧ್ಯಾಪಕರ ಸ್ಥಳನಿಯುಕ್ತಿಯ ಕುರಿತು ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಯಾವುದೇ ವೇಳಾ ಪಟ್ಟಿಯನ್ನು ಪ್ರಕಟಗೊಳಿಸದಿರುವುದು ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಯೊಬ್ಬರು ತಿಳಿಸಿದರು.

ಡಿಸೆಂಬರ್ ಅಥವಾ ಜನವರಿ ಅಂತ್ಯಕ್ಕೆ ಆದೇಶ ಹೊರಡಿಸಲಾಗುವುದು ಎಂಬ ಉನ್ನತ ಶಿಕ್ಷಣ ಸಚಿವರ ಭರವಸೆ ಸುಳ್ಳಾಗಿದೆ. ನೇಮಕಾತಿಯಲ್ಲಿ ಅನೇಕ ಅಡತಡೆಗಳಾದರೂ ಅಂತಿಮ ಪಟ್ಟಿಯ ವರೆಗೂ ಬಂದು ತಲುಪಿದೆ ಆದರೆ, ಸ್ಥಳನಿಯುಕ್ತಿ ಆದೇಶ ಬರದಿರುವುದರಿಂದ ಅಭ್ಯರ್ಥಿಗಳು ಸಂಕಷ್ಟ ಅನುಭವಿಸಬೇಕಾಗಿದೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ನೇಮಕಾತಿ ಆದೇಶ ದೂರ ಹೋಗುತ್ತದೆ. ಅದಕ್ಕಾಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಸಹಾಯಕ ಪ್ರಾಧ್ಯಾಪಕರ ಸ್ಥಳನಿಯುಕ್ತಿ ಆದೇಶ ಪತ್ರ ನೀಡಬೇಕು ಎನ್ನುವುದು ಅಭ್ಯರ್ಥಿಗಳ ಬೇಡಿಕೆಯಾಗಿದೆ.

ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಹಲವು ಜನರು ಸರಕಾರಿ ಕೆಲಸ ಸಿಕ್ಕಿತು ಎನ್ನುವ ಭರವಸೆಯಿಂದ ಮೊದಲು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ನಿರುದ್ಯೋಗಿಗಳಾಗಿದ್ದಾರೆ. ಮತ್ತೊಂದು ಕಡೆ ಕೆಲಸ ಹುಡುಕುವುದು ಕೂಡ ಈಗ ಕಷ್ಟವಾಗಿದೆ. ಆದ್ದರಿಂದ ಸರಕಾರ ಸ್ಥಳ ನಿಯುಕ್ತಿ ವೇಳಾಪಟ್ಟಿ ಪ್ರಕಟಿಸುವುದನ್ನು ಮುಂದೂಡದೇ ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮೊದಲು ಪ್ರಕಟಿಸಬೇಕು.

-ಜಯಶಂಕರ್, ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಮಾಳಿಂಗರಾಯ ಕೆಂಭಾವಿ

contributor

Similar News