‘ಬ್ಲೂ ಸ್ಕ್ರೀನ್ ಆಫ್ ಡೆತ್’ ಹಿಂದೆ...

ಈ ವ್ಯತ್ಯಯಕ್ಕಾಗಿ ಕ್ಷಮೆ ಯಾಚಿಸಿರುವ ಕ್ರೌಡ್ ಸ್ಟ್ರೈಕ್, ಇದನ್ನು ಪೂರ್ತಿಯಾಗಿ ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಈ ಸ್ವಲ್ಪ ಸಮಯ ಅಂದರೆ ಎಷ್ಟು? ದಿನಗಳೇ? ವಾರಗಳೇ? ಗೊತ್ತಿಲ್ಲ. ಅಂತೂ, ಈ ಅನಿರೀಕ್ಷಿತ ‘ಸರ್ಜಿಕಲ್ ಸ್ಟ್ರೈಕ್’ನಿಂದ ಜಗತ್ತು ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ದಿನಗಳಂತೂ ಬೇಕೇ ಬೇಕು.

Update: 2024-07-21 07:32 GMT

ಶುಕ್ರವಾರ ವಿಶ್ವಾದ್ಯಂತ ಬಹುತೇಕ ಬಳಕೆದಾರರು ತಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆನ್ ಮಾಡುತ್ತಿದ್ದಂತೆ ಶಾಕ್ ಆಗಿದ್ದರು.

ಕಂಪ್ಯೂಟರ್ ಪರದೆಯ ಮೇಲೆ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್‌ಒಡಿ) ಎರರ್ ಸಂದೇಶ ಕಾಣಿಸಿತ್ತು.

ಜಾಗತಿಕ ಟೆಕ್ ಕಂಪೆನಿ ಮೈಕ್ರೋಸಾಫ್ಟ್‌ನ ವಿಂಡೋಸ್‌ನಲ್ಲಿ ತಲೆದೋರಿದ್ದ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣವಾಗಿತ್ತು.

ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಲಕ್ಷಾಂತರ ಮಂದಿ ತೊಂದರೆ ಅನುಭವಿಸಬೇಕಾಯಿತು.

ಜಾಗತಿಕ ಮಟ್ಟದಲ್ಲಿ ಹಲವು ಉದ್ಯಮಗಳು ಬೆಚ್ಚಿ ಬೀಳುವ ಹಾಗೆ ಈ ದೋಷ ವಕ್ಕರಿಸಿತ್ತು.

ವಿಮಾನಗಳು ಹಾರಲಿಲ್ಲ, ಬ್ಯಾಂಕ್‌ಗಳಲ್ಲಿ ವ್ಯವಹಾರ ಸ್ಥಗಿತಗೊಂಡಿತ್ತು. ಆಸ್ಪತ್ರೆ ಸೇವೆಗಳಿಗೆ ಅಡ್ಡಿಯಾಗಿತ್ತು. ಐಟಿ ವಲಯ ತೊಂದರೆ ಎದುರಿಸಿತ್ತು ಮತ್ತು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಉಂಟಾಗಿತ್ತು.

ಮೈಕ್ರೋಸಾಫ್ಟ್‌ನ 365 app​s and services ಸೇವೆಯೂ ಸ್ಥಗಿತಗೊಂಡಿರುವುದು ವರದಿಯಾಯಿತು.

ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯ, ಜರ್ಮನಿ, ಫ್ರಾನ್ಸ್, ಭಾರತ, ಸ್ಪೇನ್, ಇಟಲಿ, ನೆದರ್ ಲ್ಯಾಂಡ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಫಿನ್‌ಲ್ಯಾಂಡ್, ಬೆಲ್ಜಿಯಂ, ಸ್ವಿಟ್ಸರ್‌ಲ್ಯಾಂಡ್, ಆಸ್ಟ್ರಿಯಾ, ಐರ್‌ಲ್ಯಾಂಡ್, ಪೋರ್ಚುಗಲ್ ಹಾಗೂ ನ್ಯೂಝಿಲ್ಯಾಂಡ್‌ಗಳ ಹಲವು ಕ್ಷೇತ್ರಗಳಲ್ಲಿ ಈ ಔಟೇಜ್‌ನಿಂದ ಸಮಸ್ಯೆ ಸೃಷ್ಟಿಯಾಗಿದೆ.

ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ ಏರ್‌ಲೈನ್ಸ್, ಬ್ಯಾಂಕಿಂಗ್ ಸೇರಿದಂತೆ ಭಾರತದಲ್ಲಿ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ.

ಚೆನ್ನೈ, ಬೆಂಗಳೂರು, ದಿಲ್ಲಿ ಮತ್ತು ಮುಂಬೈನಂತಹ ಅನೇಕ ಪ್ರಮುಖ ನಗರಗಳಲ್ಲಿ ಈ ತಾಂತ್ರಿಕ ವ್ಯತ್ಯಯ ಕಂಡಿತ್ತು.

ದಿಲ್ಲಿಯ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಉಂಟಾಗಿತ್ತು. ಚೆಕ್‌ಇನ್, ಬೋರ್ಡಿಂಗ್‌ಗಳಲ್ಲಿ ವಿಳಂಬ ಉಂಟಾಗಿ, ಹಲವು ವಿಮಾನಗಳು ರದ್ದುಗೊಂಡ ವರದಿಗಳಿದ್ದವು.

ಹಲವಾರು ವಿಮಾನಯಾನ ಸಂಸ್ಥೆಗಳ ಮೇಲೆಯೂ ಪರಿಣಾಮ ಉಂಟಾಗಿದ್ದು, ದಿಲ್ಲಿ, ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿನ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಸಮಸ್ಯೆಯಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಮೊನ್ನೆ ರಾತ್ರಿ ರಶ್ಯದಲ್ಲಿ ಇಳಿಸಲಾಗಿತ್ತು.

ಭಾರತದಲ್ಲಿ ಬ್ಯಾಂಕಿಂಗ್‌ಗೆ ಸಮಸ್ಯೆಯಾಗಿರಲಿಲ್ಲ ಎಂದು ಕೆಲ ವರದಿಗಳು ಹೇಳಿವೆ. ಆದರೆ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಆನ್‌ಲೈನ್ ಸೇವೆಗಳ ಬಳಕೆದಾರರು ಅಡಚಣೆ ಉಂಟಾದ ಬಗ್ಗೆ ದೂರಿದ್ದಾರೆ. ಆದರೆ ಯುಪಿಐ ಮೇಲೆ ಯಾವುದೇ ತೊಂದರೆ ಆಗಿರಲಿಲ್ಲ.

ಈ ದಿಢೀರ್ ಸ್ಥಗಿತಕ್ಕೆ ಕಾರಣವೇನು?

ಮೈಕ್ರೋಸಾಫ್ಟ್ ತನ್ನ ಕ್ಲೌಡ್ ಸರ್ವೀಸ್‌ನಲ್ಲಿನ ದಿಢೀರ್ ಸ್ಥಗಿತಕ್ಕೆ ಕಾರಣಗಳನ್ನು ಪೂರ್ತಿಯಾಗಿ ಬಹಿರಂಗಪಡಿಸದೇ ಇದ್ದರೂ, ಕ್ರೌಡ್ ಸ್ಟ್ರೈಕ್‌ನಲ್ಲಿ ಇತ್ತೀಚೆಗೆ ನಡೆದ ಅಪ್ಡೇಟ್ ಇದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಕ್ರೌಡ್ ಸ್ಟ್ರೈಕ್, ಅಮೆರಿಕ ಮೂಲದ ಒಂದು ಸೈಬರ್ ಸೆಕ್ಯೂರಿಟಿ ಕಂಪೆನಿ. ಕ್ರೌಡ್ ಸ್ಟ್ರೈಕ್‌ನ ಫಾಲ್ಕನ್ ಸೆನ್ಸರ್ ಸಾಫ್ಟ್‌ವೇರ್ ಸೂಟ್‌ನಲ್ಲಿ ಮಾಡಲಾದ ಅಪ್ಡೇಟ್‌ನಿಂದಾಗಿ ಈ ಎರರ್ ಉಂಟಾಗಿತ್ತು.

ಕ್ರೌಡ್ ಸ್ಟ್ರೈಕ್ ಅಂದರೆ ಏನು?

ಕ್ರೌಡ್ ಸ್ಟ್ರೈಕ್ ಫಾಲ್ಕನ್ ಸೆನ್ಸರ್ ಎನ್ನುವುದು ಹ್ಯಾಕರ್‌ಗಳು ಮತ್ತು ಆನ್‌ಲೈನ್ ನುಸುಳುಕೋರರ ವಿರುದ್ಧ ರಕ್ಷಿಸಿಕೊಳ್ಳಲು ಕಂಪೆನಿಗಳು ಬಳಸುವ ಭದ್ರತಾ ಪ್ರೋಗ್ರಾಂ.

ಕ್ರೌಡ್ ಸ್ಟ್ರೈಕ್‌ನ ಹೊಸ ಕೋಡ್ ಮೈಕ್ರೋಸಾಫ್ಟ್ ವಿಂಡೋಸ್ ಸಾಫ್ಟ್‌ವೇರ್ ಚಲಾಯಿತ ಕಂಪ್ಯೂಟರ್‌ಗಳನ್ನು ಮುಟ್ಟಿದಾಗ ಎರರ್ ಸಂದೇಶ ಕಾಣಿಸಿಕೊಂಡಿತ್ತು.

ಬಿಎಸ್‌ಒಡಿ ಎಂದರೇನು?

ದೋಷಯುಕ್ತ ಅಪ್‌ಡೇಟ್ ಪರಿಣಾಮವಾಗಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್‌ನಲ್ಲಿ ಕಾಣಿಸುವ ಎಚ್ಚರಿಕೆ ಸಂದೇಶವೇ ಬಿಎಸ್‌ಒಡಿ ಅಥವಾ ಬ್ಲೂ ಸ್ಕ್ರೀನ್ ಆಫ್ ಡೆತ್.

ಬಿಎಸ್‌ಒಡಿ ಎಚ್ಚರಿಕೆಗೆ ಹಲವು ಕಾರಣಗಳಿರುತ್ತವೆ.

ಹಾರ್ಡ್‌ವೇರ್ ಡ್ರೈವರ್‌ಗಳು, ಅಪ್ಲಿಕೇಶನ್‌ಗಳು ಅಥವಾ ಪ್ರೋಗ್ರಾಂಗಳಂಥ ಹೊಂದಾಣಿಕೆಯಾಗದ ಸಾಫ್ಟ್‌ವೇರ್‌ಗಳಿಂದ ಈ ಎರರ್ ತಲೆದೋರುತ್ತದೆ.

ಅಲ್ಲದೆ, RAM, ಹಾರ್ಡ್ ಡಿಸ್ಕ್ ಡ್ರೈವ್, ಸಾಲಿಡ್-ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ), ಮದರ್‌ಬೋರ್ಡ್ ಅಥವಾ ಸಿಸ್ಟಮ್‌ನಲ್ಲಿರುವ ಇತರ ಭೌತಿಕ ಘಟಕಗಳಂತಹ ಹಾರ್ಡ್‌ವೇರ್ ಸಿಸ್ಟಮ್‌ಗಳಲ್ಲಿನ ದೋಷಗಳು ಸಹ ಈ ಸಂದೇಶಕ್ಕೆ ಕಾರಣವಾಗಬಹುದು.

ವಿಂಡೋಸ್ ಸುರಕ್ಷಿತವಾಗಿರಲಾರದು ಎಂಬ ಕಾರಣಕ್ಕೆ ಮತ್ತು ಹಾರ್ಡ್‌ವೇರ್‌ಗೆ ಉಂಟಾಗಬಹುದಾದ ಸಂಭವನೀಯ ಹಾನಿ ತಡೆಯಲು ಕಂಪ್ಯೂಟರ್ ಅನ್ನು ಅದು ಸ್ಥಗಿತಗೊಳಿಸುತ್ತದೆ.

ದೋಷಪೂರಿತ ಅಪ್‌ಡೇಟ್ ಮತ್ತು ಕಾನ್ಫಿಗರೇಶನ್ ಬದಲಾವಣೆಯೇ ಈ ದಿಢೀರ್ ಸ್ಥಗಿತದ ಕಾರಣ ಎಂಬುದನ್ನು ಮೈಕ್ರೋಸಾಫ್ಟ್ ಮತ್ತು ಕ್ರೌಡ್ ಸ್ಟ್ರೈಕ್ ಎರಡೂ ಸಂಸ್ಥೆಗಳು ಕಂಡುಕೊಂಡಿವೆ.

ಈ ವ್ಯತ್ಯಯಕ್ಕಾಗಿ ಕ್ಷಮೆ ಯಾಚಿಸಿರುವ ಕ್ರೌಡ್ ಸ್ಟ್ರೈಕ್, ಇದನ್ನು ಪೂರ್ತಿಯಾಗಿ ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಈ ಸ್ವಲ್ಪ ಸಮಯ ಅಂದರೆ ಎಷ್ಟು? ದಿನಗಳೇ? ವಾರಗಳೇ? ಗೊತ್ತಿಲ್ಲ.

ಯಾಕೆಂದರೆ, ಬಿಬಿಸಿಯ ತಾಂತ್ರಿಕ ಸಂಪಾದಕ ರೆ ಕ್ಲಿನ್ ಮನ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ಕ್ರೌಡ್ ಸ್ಟ್ರೈಕ್‌ನ ಪ್ರತಿಯೊಂದೂ ಸಿಸ್ಟಂ ಅನ್ನು ಸೇಫ್ ಮೋಡ್‌ನಲ್ಲಿ ಮ್ಯಾನುವಲ್ ಆಗಿ ರೀಬೂಟ್ ಮಾಡುವ ಅಗತ್ಯ ಇರಬಹುದು. ಇದಕ್ಕೆ ಸಮಯ ತಗಲುತ್ತದೆ.

ಇದೇ ವೇಳೆ, ಇದು ಭದ್ರತಾ ಉಲ್ಲಂಘನೆ ಅಥವಾ ಸೈಬರ್ ದಾಳಿಯಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ವಿಂಡೋಸ್ ಸ್ಥಗಿತ ಸ್ಥಿತಿಯನ್ನು ಬಗೆಹರಿಸಲಾಗಿದ್ದು, ಮೈಕ್ರೋಸಾಫ್ಟ್ ಸೇವೆಗಳು ಆನ್‌ಲೈನ್‌ಗೆ ಮರಳಿರುವುದಾಗಿ ಹೇಳಲಾಗಿದೆ.

ಅಂದ ಹಾಗೆ, ಮೈಕ್ರೋಸಾಫ್ಟ್‌ನ ವಿಂಡೋಸ್ ಬಳಸದ ಆ್ಯಪಲ್ ಹಾಗೂ ಲಿನಕ್ಸ್ ಬಳಕೆದಾರರಿಗೆ ಸಹಜವಾಗಿಯೇ ಈ ಔಟೇಜ್‌ನಿಂದ ಯಾವುದೇ ಸಮಸ್ಯೆಯಾಗಿಲ್ಲ.

ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ, ಅಮೆರಿಕ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತಲುಪಿಸಲು ಕೆಲಸ ಮಾಡುತ್ತಿವೆ ಎಂದು ಖಚಿತಪಡಿಸಿರುವುದಾಗಿ ವರದಿಗಳು ಹೇಳಿವೆ.

ಇದೆಲ್ಲದರ ನಡುವೆ, ಮೈಕ್ರೋಸಾಫ್ಟ್ ಮತ್ತು ಕ್ರೌಡ್ ಸ್ಟ್ರೈಕ್ ಎರಡೂ ಮುಂಬರುವ ದಿನಗಳಲ್ಲಿ ಶ್ವೇತಭವನದ ಹಲವು ಕಠಿಣ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕಾಗಿ ಬರಬಹುದು ಎನ್ನಲಾಗುತ್ತಿದೆ.

ಕ್ರೌಡ್ ಸ್ಟ್ರೈಕ್, ಹೊಸ ಅಪ್ಡೇಟ್ ಅನ್ನು ಶುಕ್ರವಾರ ಯಾಕೆ ಮಾಡಿತು ಎಂಬ ಪ್ರಶ್ನೆಯೂ ಐಟಿ ಕ್ಷೇತ್ರದಲ್ಲಿ ಎದ್ದಿದೆ. ಏನಾದರೂ ಸಮಸ್ಯೆ ಎದುರಾದರೂ ವಾರಾಂತ್ಯದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಇಂತಹ ಪ್ರಮುಖ ಅಪ್‌ಡೇಟ್‌ಗಳನ್ನು ವಾರಾಂತ್ಯಕ್ಕೆ ಮಾಡಿದ್ದೇ ಸರಿಯಲ್ಲ ಎಂಬ ವಾದವೂ ಇದೆ.

ಅಂತೂ, ಈ ಅನಿರೀಕ್ಷಿತ ‘ಸರ್ಜಿಕಲ್ ಸ್ಟ್ರೈಕ್’ನಿಂದ ಜಗತ್ತು ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ದಿನಗಳಂತೂ ಬೇಕೇ ಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ.ಎನ್. ಉಮೇಶ್

contributor

Similar News