ಬಂಟ್ವಾಳ ಬೋಳಂತೂರಿನ ಭವ್ಯ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಟ್ಟ ಕೋಮುವಾದಿಗಳು !
ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ತುಳಸೀವನ ಗಣೇಶೋತ್ಸವ ಮೆರವಣಿಗೆಗೆ ಈ ಬಾರಿ ಬೋಳಂತೂರು ಮಸೀದಿಯಿಂದ ತಂಪು ಪಾನೀಯ, ಸಿಹಿತಿಂಡಿ ವಿತರಿಸಬಾರದು ಎಂದು ಬೊಳಂತೂರಿನ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಹೇಳಿದೆ. ಕಳೆದ ವರ್ಷ ಬೋಳಂತೂರು ಮಸೀದಿ ವತಿಯಿಂದ ಗಣೇಶೋತ್ಸವದ ಶೋಭಾಯಾತ್ರೆಗೆ ಸಿಹಿತಿಂಡಿ ಮತ್ತು ತಂಪು ಪಾನೀಯ ವಿತರಿಸಲಾಗಿತ್ತು. ಇದು ಕೋಮುವಾದದ ನೆಲದಲ್ಲಿ ಭಾವೈಕ್ಯದ ಸಂದೇಶ ಸಾರಿತ್ತು. ಆದರೆ ಈ ಬಾರಿ ಬೋಳಂತೂರು ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಪತ್ರ ಬರೆದು 'ಕಳೆದ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿದ್ದರು. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಿಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ’ಎಂದು ಪತ್ರದಲ್ಲಿ ಬರೆಯಲಾಗಿದೆ.
ವಾಸ್ತವವಾಗಿ ಕಳೆದ ವರ್ಷ ಬೋಳಂತೂರು ಶೋಭಾಯಾತ್ರೆಯ ದಿನ ಮಸೀದಿ ಪ್ರಾಯೋಜಿತ ಪಾನೀಯ ಸ್ವೀಕರಿಸಿದ ಯಾವ ಮಕ್ಕಳು ಅಸ್ವಸ್ಥರಾಗಿಲ್ಲ. ಈ ಬಗ್ಗೆ ಬಂಟ್ವಾಳ/ವಿಟ್ಲ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಸುಳ್ಳು ಕಾರಣ ನೀಡಿ ಮಸೀದಿಯಿಂದ ಪಾನೀಯ, ಸಿಹಿತಿಂಡಿ ನಿರಾಕರಿಸುವುದರ ಹಿಂದೆ ಕೋಮುವಾದದ ವಾಸನೆ ದಟ್ಟವಾಗಿದೆ.
ಬೋಳಂತೂರಿನ ಹಿಂದೂ-ಮುಸ್ಲಿಮ್ ಬಾಂಧವ್ಯ ಕೇವಲ ಮಸೀದಿಯ ಪಾನೀಯ, ಸಿಹಿತಿಂಡಿಯ ವಿತರಣೆಯಿಂದ ಪ್ರಾರಂಭವಾಗಿಲ್ಲ. ಅದಕ್ಕೊಂದು ಅತ್ಯುನ್ನತ ಇತಿಹಾಸವಿದೆ. ಬಂಟ್ವಾಳದ ಬೋಳಂತೂರಿನ ಭವ್ಯ ಇತಿಹಾಸ ಮತ್ತು ಜನಪದವನ್ನು ಮರೆತಿರುವವರು ಯಾವ ಧರ್ಮದ ರಕ್ಷಣೆಯನ್ನೂ ಮಾಡಲು ಸಾಧ್ಯವಿಲ್ಲ.
ಮಂಚಿ-ಇರಾ-ಬೋಳಂತೂರಿನ ನೆಲದಲ್ಲಿ ‘ಅರಸು ಕುರಿಯಡಿತ್ತಾಯಿ ಮೂವರು ದೈವಂಗಳು’ಎಂಬ ಕಾರಣಿಕದ ದೈವಗಳು ಆರಾಧನೆ ಪಡೆಯುತ್ತಿವೆ. ಜನಪದ ನಂಬಿಕೆಯ ಪ್ರಕಾರ ಈ ದೈವಸ್ಥಾನವನ್ನು ಬಂಗಾಡಿಯ ಬಂಗರಸರು ಸ್ಥಾಪಿಸಿದರು. ಬಂಗಾಡಿಯ ಬಂಗರಸರು ತೆಂಕಣ ರಾಜ್ಯಕ್ಕೆ ದಿಗ್ವಿಜಯ ಹೊರಟಾಗ ಮಂಚಿಕಟ್ಟೆಯಲ್ಲಿ ಕೂತು ಆಯಾಸ ಕಳೆಯುವಾಗ ಅವರಿಗೆ ದೈವದ ಸಾನ್ನಿದ್ಯ ಅರಿವಿಗೆ ಬರುತ್ತದೆ. ಆಗ ಬಂಗರಸರು ‘ನಾವು ಯುದ್ಧದಲ್ಲಿ ಗೆದ್ದು ಬಂದರೆ ದೈವಸ್ಥಾನ ಕಟ್ಟಿಸಿ ಬಲಿ-ಭೋಗದ ಸೇವೆ ನೀಡುತ್ತೇವೆ' ಎಂದು ಪ್ರಾರ್ಥಿಸಿ ಮುಂದಕ್ಕೆ ಹೋಗುತ್ತಾರೆ. ಯುದ್ಧದಲ್ಲಿ ಬಂಗರಸರು ವಿಜಯಿಯಾಗುತ್ತಾರೆ. ಆದರೆ ಯುದ್ಧದಲ್ಲಿ ಸೇನಾನಾಯಕ ಆಗಿದ್ದ ಮಂಚಿಗುತ್ತು ಕುಂಞಳರು ಬಲ ಕೈಯನ್ನು ಕಳೆದುಕೊಳ್ಳುತ್ತಾರೆ. ಅದೇ ಕುಂಞಳರ ನೇತೃತ್ವದಲ್ಲೇ ಬಂಗರಸರು ‘ಅರಸು ಕುರಿಯಡಿತ್ತಾಯಿ ಮೂವರು ದೈವಂಗಳ’ದೈವಸ್ಥಾನ ಕಟ್ಟಿಸುತ್ತಾರೆ. ಈಗಲೂ ದೈವಸ್ಥಾನದ ಮೊದಲ ಪ್ರಸಾದ ಮಂಚಿಗುತ್ತಿಗೆ ಸಲ್ಲಬೇಕು. ಅದು ಬಂಗರಸರಿಗೆ ಕೊಡುವ ಗೌರವ.
ಈಗ ಇತಿಹಾಸಕ್ಕೆ ಬರೋಣಾ. ಮಂಚಿಗುತ್ತು ಕುಂಞಳರು ಸೇನಾ ನಾಯಕರಾಗಿದ್ದ ಬಂಗರಸರ ಸೈನ್ಯದಲ್ಲಿ ಸೈನಿಕರು ಯಾರಾಗಿದ್ದರು ? ದೈವವನ್ನು ಪ್ರಾರ್ಥಿಸಿ ಯುದ್ಧಕ್ಕೆ ಹೊರಟ ಬಂಗರಸರು ಯುದ್ಧ ಗೆದ್ದಿದ್ದು ಹೇಗೆ? ಬೋಳಂತೂರಿನ ದೈವಸ್ಥಾನ ಸ್ಥಾಪನೆಗೆ ಕಾರಣವಾದ ಯುದ್ಧದ ಗೆಲುವಿನಲ್ಲಿ ಸತ್ತವರು ಯಾರು? ಇದನ್ನು ಅರಿಯಬೇಕಾದರೆ ಬಂಗರಸರ ಇತಿಹಾಸ ಅರಿಯಬೇಕು.
ಇತಿಹಾಸದಲ್ಲಿ ಹಲವು ಬಂಗರಸರು ಬರುತ್ತಾರೆ. ಕ್ರಿ.ಶ 1541ರಲ್ಲಿ ವಿಜಯನಗರದ ರಾಮರಾಯನ ಆಳ್ವಿಕೆಯಲ್ಲಿ ಪೋರ್ಚುಗೀಸರಿಗೂ ಈ ರಾಮರಾಯರಿಗೂ ಆದ ಒಪ್ಪಂದದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರವನ್ನು ಸಂಪೂರ್ಣವಾಗಿ ಪೋರ್ಚುಗೀಸರಿಗೆ ಒಪ್ಪಿಸಲಾಯಿತು. ಕರಾವಳಿಯ ತುಂಡು ಅರಸರುಗಳು ಪೋರ್ಚುಗೀಸರಿಗೆ ಕಪ್ಪ ಕೊಡಬೇಕು ಎಂದು ಆದೇಶಿಸಲಾಯಿತು. ಆದರೆ ಮಂಗಳೂರು ಬಂಗರಾಜ, ಉಳ್ಳಾಲದ ಚೌಟರ ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಕಪ್ಪವನ್ನು ಕೊಡಲು ನಿರಾಕರಿಸಿದರು. ಇದರಿಂದ ಕೆರಳಿದ ಪೋರ್ಚುಗೀಸರು ಬಾರ್ಕೂರು, ಮಂಗಳೂರು, ಉಳ್ಳಾಲ ಮುಂತಾದ ಬಂದರುಗಳು, ಪೇಟೆಗಳು, ಕೋಟೆಗಳು, ದೇವಸ್ಥಾನ, ಅರಮನೆಗಳನ್ನು ಸುಡುತ್ತಾ, ನಾಶ ಮಾಡುತ್ತಾ ಬಂದರು. ಈ ಸಂದರ್ಭದಲ್ಲಿ ಕರಾವಳಿಯ ಮುಸ್ಲಿಮರು ಬಂಗ್ರ ಕೂಳೂರಿನಲ್ಲಿದ್ದ ಬಂಗರಾಜನ ಸೇನೆಯಲ್ಲೂ, ಉಳ್ಳಾಲದ ರಾಣಿ ಅಬ್ಬಕ್ಕನ ಸೈನ್ಯದಲ್ಲೂ ಸೈನಿಕರಾಗಿದ್ದರು. ಮುಸ್ಲಿಮರ ಸೈನ್ಯದ ಬಲದೊಂದಿಗೆ ಬಂಗರಾಜನು ಪೋರ್ಚುಗೀಸರ ಜೊತೆ ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದನು. ಬಂಗರಾಜನು ಯುದ್ಧ ಗೆದ್ದಿದ್ದು ಮುಸ್ಲಿಮ್ ಸೈನಿಕರ ಬಲದಿಂದ ಎಂಬುದು ಇತಿಹಾಸ ಹೇಳುತ್ತದೆ. ನೂರಾರು ಮುಸ್ಲಿಮ್ ಸೈನಿಕರು ಮಡಿದು ಯುದ್ಧ ಗೆದ್ದಿದ್ದರಿಂದಲೇ ಬೊಳಂತೂರಿನಲ್ಲಿ ದೈವಸ್ಥಾನ ನಿರ್ಮಿಸಲು ಸಾಧ್ಯವಾಯಿತು.
"ಹಾವಳಿ ಬಂಗರಾಜನು ಕಾಲವಾದ ನಂತರ ಅವನ ತಮ್ಮ ಲಕ್ಷ್ಮಪ್ಪರಸನು ಶಾ, ಶ.1822 (ಕ್ರಿ.ಶ. 1400)ರಲ್ಲಿ ಪಟ್ಟಕ್ಕೆ ಬಂದನು. ಲಕ್ಷ್ಮಪ್ಪ ಬಂಗರಸನು ಅರಮನೆಯನ್ನು ಕಟ್ಟಿದ ಮೇಲೆ ಅದರ ದಕ್ಷಿಣದಲ್ಲಿ ಒಂದು ಕೋಟೆ ಕಟ್ಟಿಸಿ, ಕೋಟೆಯಲ್ಲಿ ಶಿಲಾಮಯವಾದ ದೇವಸ್ಥಾನವನ್ನು ಕಟ್ಟಿಸಿ ಅದರಲ್ಲಿ ವೀರಭದ್ರ ದೇವರ ಪ್ರತಿಷ್ಠೆ ಮಾಡಿಸಿದನು. ಪಿಲಿಚಂಡಿ ದೈವಕ್ಕೆ ಒಂದು ಗುಡಿಯನ್ನು ಸಹ ಕಟ್ಟಿಸಿದನು. ಅರಮನೆಯ ಪೂರ್ವ ದಿಕ್ಕಿನಲ್ಲಿ ಒಂದು ಮುಖ್ಯಪ್ರಾಣ ದೇವಸ್ಥಾನವನ್ನೂ ದಕ್ಷಿಣ ಭಾಗದಲ್ಲಿ ಆದೀಶ್ವರ ಬಸದಿಯನ್ನೂ ಮುಸ್ಲಿಮರಿಗೆ ಮತ್ತು ಮಾಪಿಳ್ಳೆಯರಿಗೆ ಒಂದು ಮಸೀದಿಯನ್ನೂ ಕಟ್ಟಿಸಿದನು" ಎಂದು ಗಣಪತಿ ಐಗಳರು ಬರೆದ ‘ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ’ಪುಸ್ತಕದ ಪುಟ ಸಂಖ್ಯೆ 273 ಮತ್ತು 274 ರಲ್ಲಿ ಉಲ್ಲೇಖಿಸಲಾಗಿದೆ. ಬಂಗರಸರು ಏಕಕಾಲದಲ್ಲಿ ಮಸೀದಿಗಳನ್ನೂ, ದೈವಸ್ಥಾನವನ್ನೂಕಟ್ಟಿದರು. ಆದರೆ ಬಂಗರಸರು ಕಟ್ಟಿದ ದೈವಸ್ಥಾನ ಇರುವ ಬೋಳಂತೂರು ಗ್ರಾಮದಲ್ಲಿ ಗಣೇಶೋತ್ಸವಕ್ಕೆ ಮಸೀದಿಯ ಆತಿಥ್ಯ ಬೇಡ ಎನ್ನುವುದು ಎಷ್ಟು ಸರಿ ?
ಶಂಕರದೇವಿಯ ತರುವಾಯ ಅವಳ ಮಗ ಕಾಮರಾಯನು ಶಾ. ಶ. 1418 (ಕ್ರಿ.ಶ.1491) ರಂದು ಪಟ್ಟಕ್ಕೆ ಬಂದನು. ಈ ಅರಸನ ಕಾಲದಲ್ಲಿ ಪೋರ್ಚುಗೀಸರ ಹಾವಳಿಯು ಪ್ರಾರಂಭವಾಯಿತು. ಕ್ರಿ.ಶ 1526 ರಲ್ಲಿ ಪೋರ್ಚುಗೀಸರ ವ್ಯಾಸ್ ರಾಯ್ ಆಗಿದ್ದ ಲೋಪೆಝ್ ಡಿ ಸೆಂಪಾಯೋ ಎಂಬವನು ಬಂಗರಾಜನ ಮುಖ್ಯ ಪಟ್ಟಣವಾದ ಮಂಗಳೂರಿಗೆ ದಾಳಿ ಮಾಡಿದನು. ಬಂಗರಾಜನ ಸೈನಿಕರಾಗಿದ್ದ ಮಾಪಿಳ್ಳೆ ಮುಸ್ಲಿಮರು, ಅರಬಿ ಮುಸ್ಲಿಮರು ಸೋತು ಹೋದರು. ಕಡೆಗೆ ಬಂಗರಾಜನಿಗೂ ಪೋರ್ಚುಗೀಸರಿಗೂ ಕರಾರಾಗಿ ಬಂಗರಾಜನು ಪೋರ್ಚುಗೀಸರಿಗೆ 2,400 ಮುಡಿ ಅಕ್ಕಿಯನ್ನೂ 1,000 ಬುದ್ದಲಿ ಎಣ್ಣೆಯನ್ನೂ ಸುಂಕದ ರೂಪವಾಗಿ ಕೊಡಲಾರಂಭಿಸಿದನು. ಬಂಗರಾಜನು ಸೋತು ಹೋದರೂ ಮುಸ್ಲಿಮರು ಬಂಗರಾಜನ ಸಹವಾಸ ಬಿಟ್ಟು ಪೋರ್ಚುಗೀಸರ ಸಹವಾಸ ಮಾಡಲಿಲ್ಲ. ಕರಾವಳಿಯ ಪೂರ್ತಿ ವ್ಯವಹಾರ ಪೊರ್ಚುಗೀಸರ ಪಾಲಾದರೂ ಮಂಗಳೂರಿನ ಮುಸ್ಲಿಮರು ಪೋರ್ಚುಗೀಸರ ಜೊತೆ ವ್ಯಾಪಾರ ವಹಿವಾಟು ನಡೆಸಲಿಲ್ಲ. ಹಾಗೊಂದು ವೇಳೆ ಪೋರ್ಚುಗೀಸರ ಜೊತೆ ವ್ಯಾಪಾರ ನಡೆಸಿದ್ದೇ ಆಗಿದ್ದಲ್ಲಿ ಇವತ್ತು ಇಡೀ ಕರಾವಳಿಯು ಮುಸ್ಲಿಮ್ ಜಮೀನ್ದಾರರಿಂದ, ಮುಸ್ಲಿಮ್ ಶ್ರೀಮಂತರಿಂದ ತುಂಬಿರುತ್ತಿತ್ತು. ಮುಸ್ಲಿಮ್ ಸಾಹುಕಾರನೊಬ್ಬ ಸೋತು ಹೋದ ಬಂಗರಸನಿಗೆ ಸಹಾಯ ಮಾಡುತ್ತಿದ್ದಾನೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಮತ್ತೊಮ್ಮೆ ಪೋರ್ಚುಗೀಸರು ಮಂಗಳೂರಿಗೆ ದಾಳಿ ಮಾಡಿ ಮುಸ್ಲಿಮರ ವ್ಯಾಪಾರ ಕೇಂದ್ರವನ್ನು ನಾಶ ಮಾಡುತ್ತಾರೆ.
ಬಂಗರಸರಿಗಾಗಿ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಪ್ರಾಣವನ್ನೇ ಕೊಟ್ಟಿದ್ದಾರೆ. ಅಂದು ಬಂಗರಸರು ಸೋತ ನಂತರ ಪೋರ್ಚುಗೀಸರ ಜೊತೆ ಮುಸ್ಲಿಮ್ ಸಾಹುಕಾರರು ನಿಂತಿದ್ದರೆ ಇಂದು ಮಂಗಳೂರು ಪೂರ್ತಿ ಮುಸ್ಲಿಮ್ ಸಾಹುಕಾರರ ನೆಲೆಯಾಗುತ್ತಿತ್ತು. ಆಶ್ಚರ್ಯವೆಂದರೆ ವ್ಯಾಪಾರಿಗಳಾಗಿದ್ದ ಅರಬೀ ಮುಸ್ಲಿಮರು, ಮಾಪಿಳ್ಳೆ ಬ್ಯಾರಿ ಮುಸ್ಲಿಮರು ಸೋತು ಸುಣ್ಣವಾಗಿದ್ದ ಹಿಂದೂ, ಜೈನ ರಾಜ-ರಾಣಿಯರ ಜೊತೆಯೇ ನಿಂತಿದ್ದರು. ಈಗ ಮುಸ್ಲಿಮರಿಂದ ಯುದ್ಧ ಗೆದ್ದ ಬಂಗರಸರು ಕಟ್ಟಿದ ಬೋಳಂತೂರಿನಲ್ಲಿ ಗಣೇಶ ಶೋಭಾಯಾತ್ರೆಗೆ ಮಸೀದಿಯ ವತಿಯಿಂದ ನೀಡುವ ಪಾನೀಯವನ್ನು ನಿರಾಕರಿಸಲಾಗಿದೆ. ಮಸೀದಿಗೆ ಪತ್ರ ಬರೆದು ಮುಸ್ಲಿಮರಿಗೆ ಅವಮಾನ ಮಾಡಿದೆವು ಎಂದು ಕೋಮುವಾದಿಗಳು ಅಂದುಕೊಂಡಿರಬಹುದು. ಆದರೆ, ಇದು ಜಾತ್ಯತೀತ, ಧರ್ಮಾತೀತ ರಾಜರಾಗಿದ್ದ ಬಂಗರಸರು ನಿರ್ಮಿಸಿದ ಮಂಚಿ-ಇರಾ-ಬೋಳಂತೂರಿನ ‘ಅರಸು ಕುರಿಯಡಿತ್ತಾಯಿ ಮೂವರು ದೈವಂ'ಗಳಿಗೆ ಮಾಡುವ ಅವಮಾನವಲ್ಲದೇ ಇನ್ನೇನೂ ಅಲ್ಲ.!