ಅಪರಾಧಿಕ ಪ್ರಪಂಚವೂ ಬುಲ್ಡೋಜರ್ ನ್ಯಾಯವೂ

ರಾಜಕೀಯ ಪಕ್ಷಗಳ, ಸರಕಾರಗಳ ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುವ ಬುಲ್ಡೋಜರ್ ನ್ಯಾಯಕ್ಕೆ ಒಂದು ಸಾಂವಿಧಾನಿಕ ಚೌಕಟ್ಟಿನ ನ್ಯಾಯಯುತ ಕಾಯಕಲ್ಪ ಒದಗಿಸಲು ಸುಪ್ರೀಂಕೋರ್ಟ್ ಮುಂದಾಗಿರುವುದು ಸ್ವಾಗತಾರ್ಹ. ನಾಗರಿಕತೆಯನ್ನೇ ನಾಚಿಸುವ, ಸಂವಿಧಾನದ ಮೂಲ ತತ್ವಗಳನ್ನೇ ಕಡೆಗಣಿಸುವ ‘ಬುಲ್ಡೋಜರ್ ನ್ಯಾಯ’ ಎಂಬ ಅರಣ್ಯ ಕಾನೂನಿಗೆ ಸುಪ್ರೀಂಕೋರ್ಟ್ ಅಂತ್ಯ ಹಾಡುವುದಷ್ಟೇ ಅಲ್ಲದೆ, ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಪ್ರಜಾಪ್ರಭುತ್ವದ ಗೆಲುವು ಎಂದೇ ಹೇಳಬಹುದು.

Update: 2024-09-20 05:23 GMT
Editor : Thouheed | Byline : ನಾ. ದಿವಾಕರ

ಬಿಜೆಪಿ ಆಳ್ವಿಕೆಯ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ‘ಬುಲ್ಡೋಜರ್ ನ್ಯಾಯ’ ಎಂಬ ಆಧುನಿಕ ಭಾರತದ ಕಾನೂನುಗಳಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ಹಾಕಿದೆ. ಸೆಪ್ಟಂಬರ್ 2ರ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ಪೀಠ ಬುಲ್ಡೋಜರ್ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕರೆನೀಡಿದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘‘ಎಲ್ಲರ ಕೈಗಳೂ ಬುಲ್ಡೋಜರ್ ನಡೆಸಲು ಸಾಧ್ಯವಾಗುವುದಿಲ್ಲ’’ ಎಂದು ಹೇಳಿದ್ದರು. ಯಾವುದೇ ಪ್ರಜ್ಞಾವಂತ ಸಮಾಜ ಒಪ್ಪಲಾಗದ ಈ ನ್ಯಾಯದ ಪರಿಕಲ್ಪನೆಗೆ ಬಿಜೆಪಿ ನಾಯಕರು ಪದೇಪದೇ ಗರಿಮೂಡಿಸುತ್ತಲೇ ಇದ್ದಾರೆ. ಇತ್ತೀಚಿನ ನಾಗಮಂಗಲದ ಕೋಮು ಸಂಘರ್ಷದ ನಂತರವೂ ಬಿಜೆಪಿ ರಾಜ್ಯಾಧ್ಯಕ್ಷರು ಕರ್ನಾಟಕದಲ್ಲಿ ‘ಬುಲ್ಡೋಜರ್ ನ್ಯಾಯ’ದ ಪ್ರಸ್ತಾವ ಮಾಡಿದ್ದಾರೆ. ಯಾವುದೇ ರೀತಿಯ ಕೋಮು-ಮತೀಯ ಹಿಂಸೆ, ಗಲಭೆ, ದಂಗೆ ಅಥವಾ ಹಿಂಸಾತ್ಮಕ ಘಟನೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ, ಸಮಾಜದ ಶಾಂತಿಯನ್ನು ಕೆಡಿಸುವ ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಬಳಸಲಾಗುವ ಈ ನಿಯಮದ ಸಾಂವಿಧಾನಿಕ ಔಚಿತ್ಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ.

ಭಾರತೀಯ ಸಂವಿಧಾನದ ಅನುಚ್ಛೇದ 21, ದೇಶದ ನಾಗರಿಕರ ಬದುಕುವ ಹಕ್ಕನ್ನು ರಕ್ಷಿಸುತ್ತದೆ. ಇಲ್ಲಿ ಬದುಕುವುದು ಎಂದರೆ ಘನತೆಯಿಂದ ಬದುಕುವುದು ಎಂದೂ ಸ್ಪಷ್ಟಪಡಿಸಲಾಗಿದ್ದು, ಕನಿಷ್ಠ ಪ್ರತೀ ವ್ಯಕ್ತಿಗೂ ವಾಸಿಸಲು ಒಂದು ಸೂರು ಇರಬೇಕು ಎನ್ನುವುದನ್ನು ನಮ್ಮ ಸಂವಿಧಾನ ಸ್ವೀಕರಿಸಿದೆ. ಅನುಚ್ಛೇದ 21 ಖಾತರಿಪಡಿಸಿದ ಜೀವ ರಕ್ಷಣೆಯು ಅದರ ವ್ಯಾಪ್ತಿಯಲ್ಲಿ ವಾಸಿಸುವ ಅರ್ಥಪೂರ್ಣ ಹಕ್ಕನ್ನು ಅನುಭವಿಸಲು ಸೂರಿನ ಹಕ್ಕನ್ನು ಒಳಗೊಂಡಿದೆ. ವಾಸಿಸುವ ಮತ್ತು ನೆಲೆಸುವ ಹಕ್ಕನ್ನು ಅನುಚ್ಛೇದ 19 (1) (ಇ) ಅಡಿಯಲ್ಲಿ ಮೂಲಭೂತ ಹಕ್ಕು ಮತ್ತು ಅನುಚ್ಛೇದ 21ರ ಅಡಿಯಲ್ಲಿ ಲಭ್ಯವಿರುವ ಬೇರ್ಪಡಿಸಲಾಗದ ಅರ್ಥಪೂರ್ಣ ಹಕ್ಕಿನ ಒಂದು ಅಂಶವಾಗಿ ನೋಡಲಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ, ಕಾನೂನಾತ್ಮಕ ಅಕ್ರಮಗಳ ಹೊರತಾಗಿ, ಯಾವುದೇ ಕಾರಣಕ್ಕಾದರೂ, ನಾಗರಿಕರ ವಸತಿಯನ್ನು ಕೆಡಹುವುದು ಅಸಾಂವಿಧಾನಿಕವಾಗಿಯೇ ಕಾಣುತ್ತದೆ.

ಬುಲ್ಡೋಜರ್ ನ್ಯಾಯದ ಪರಿಕಲ್ಪನೆ

ಹಲವು ರಾಜ್ಯಗಳಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ, ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿರುವುದನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಸಾಮಾನ್ಯವಾಗಿ ರಾಜ್ಯ ಸರಕಾರಗಳು ಈ ಕಾಯ್ದೆಯನ್ನು ದುರ್ಬಲ ವರ್ಗಗಳ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಬಳಸುತ್ತಿದ್ದು, ಮನೆ ಕಳೆದುಕೊಂಡವರಿಗೆ ಯಾವುದೇ ಕಾನೂನಾತ್ಮಕ ಪರಿಹಾರೋಪಾಯಗಳೂ ಇಲ್ಲವಾಗಿವೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಅನಿರ್ಬಂಧಿತವಾಗಿ ನಡೆಯುತ್ತಿರುವ ಬುಲ್ಡೋಜರ್ ಪ್ರಕ್ರಿಯೆ ಸಾಂವಿಧಾನಿಕ ವಸತಿ ಹಕ್ಕನ್ನು ಉಲ್ಲಂಘಿಸುತ್ತದೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿಯನ್ನೂ ಒದಗಿಸದೆ, ಪರಿಹಾರವನ್ನೂ ನೀಡದೆ, ಒಬ್ಬ ವ್ಯಕ್ತಿಯ ಅಪರಾಧಕ್ಕೆ ಇಡೀ ಕುಟುಂಬ ಬೀದಿಪಾಲಾಗಬೇಕಾದ ಸನ್ನಿವೇಶಗಳು ಉದ್ಭವಿಸಿವೆ. ಈ ಕ್ರಮದಿಂದ ಉಂಟಾಗುವ ಅಸಮಾನತೆಗಳು, ಸಾಮಾಜಿಕ ಪ್ರತ್ಯೇಕತೆ ಮತ್ತು ಅದರಿಂದ ಉಂಟಾಗುವ ಸಾಮಾಜಿಕ ಸಂಘರ್ಷಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಮೂಲಭೂತ ಮಾನವ ಹಕ್ಕುಗಳು, ಸಾಂವಿಧಾನಿಕ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಈ ಬುಲ್ಡೋಜರ್ ನ್ಯಾಯವನ್ನು ಪುನರ್ ವ್ಯಾಖ್ಯಾನ ಮಾಡುವ ಮೂಲಕ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಿದ್ದು, ಸುಪ್ರೀಂಕೋರ್ಟ್ ಈ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ. ಈ ಕ್ರೂರ ಪ್ರಕ್ರಿಯೆ ಈಗ ಹಲವು ರಾಜ್ಯಗಳಿಗೆ ಹರಡಿದ್ದು ಇದಕ್ಕೆ ಕಾನೂನು ವ್ಯಾಪ್ತಿಯನ್ನೂ ಒದಗಿಸಲಾಗಿದೆ. 2023ರಲ್ಲಿ ಹರ್ಯಾಣದ ನೂಹ್‌ನಲ್ಲಿ ನಡೆದ ಕೋಮು ಗಲಭೆಗಳ ನಂತರ ನೂರಾರು ಮನೆಗಳನ್ನು ಧ್ವಂಸ ಮಾಡಲಾಗಿತ್ತು. ಮಧ್ಯಪ್ರದೇಶದ ಖರ್ಗಾಂವ್‌ನಲ್ಲಿ ನಡೆದ ಕೋಮು ಗಲಭೆಗಳ ನಂತರ ‘ಗಲಭೆಕೋರರು’ ಎಂದು ಗುರುತಿಸಲ್ಪಟ್ಟ ಮುಸ್ಲಿಮರ ಮನೆ, ಅಂಗಡಿ ಮುಂಗಟ್ಟುಗಳನ್ನು ಬುಲ್ಡೋಜ್ ಮಾಡಲಾಗಿತ್ತು.

ಅಪರಾಧಿ ಎಂದು ಗುರುತಿಸಲ್ಪಡುವ ವ್ಯಕ್ತಿಗಳನ್ನು ಅಪರಾಧ ಸಾಬೀತಾಗುವವರೆಗೂ ಆರೋಪಿಯಾಗಿ ನೋಡಬೇಕಾದ ಸರಕಾರಗಳು, ‘ಶಂಕಿತ ಅಪರಾಧಿ’ಗಳ ವಿರುದ್ಧ ಕೂಡಲೇ ದಂಡನಾಕ್ರಮಗಳನ್ನು ಕೈಗೊಳ್ಳುವುದು ದಮನಕಾರಿ ನೀತಿಯಾಗುತ್ತದೆ. ಆದರೆ ಬಹುತೇಕ ಬುಲ್ಡೋಜರ್ ಪ್ರಕರಣಗಳಲ್ಲಿ ಸರಕಾರಗಳು ಪುರಸಭೆ/ನಗರಸಭೆ ಕಾನೂನುಗಳ ಉಲ್ಲಂಘನೆ, ಅಕ್ರಮ ಒತ್ತುವರಿ, ನಿರ್ಮಾಣ ನಿಯಮಗಳ ಉಲ್ಲಂಘನೆ ಮೊದಲಾದ ಕಾರಣಗಳನ್ನು ಮುಂದೊಡ್ಡುವ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತವೆ. ಅಪರಾಧ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಅನುಸರಿಸುವುದು, ಶಂಕಿತ ಅಪರಾಧಿಗಳ ಕೃತ್ಯಕ್ಕೆ ಪ್ರತಿಯಾಗಿ ಉಗ್ರ ಶಿಕ್ಷೆ ನೀಡುವುದು ಈ ಬುಲ್ಡೋಜರ್ ನ್ಯಾಯದ ಮೂಲ ತಾತ್ವಿಕ ತಳಹದಿಯಾಗಿದ್ದು, ಇದನ್ನು ಅನಿರ್ಬಂಧಿತವಾಗಿ ಪ್ರಯೋಗಿಸಲಾಗುತ್ತಿದೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಆರಂಭಿಸಿದ ಈ ಬುಲ್ಡೋಜರ್ ನ್ಯಾಯ ಈಗ ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಹರ್ಯಾಣ, ಅಸ್ಸಾಂ, ಉತ್ತರಾಖಂಡ, ಮುಂಬೈ ನಗರಗಳಲ್ಲೂ ಇದನ್ನು ಜಾರಿಗೊಳಿಸಲಾಗಿದೆ.

ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ತನ್ನ ಸಹಪಾಠಿಗೆ ಶಾಲೆಯಲ್ಲಿ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಾಲಕನ ತಂದೆ, ಆಟೋ ಚಾಲಕನ ಮನೆಯನ್ನು ಬುಲ್ಡೋಜ್ ಮಾಡಲಾಗಿತ್ತು. ಮಧ್ಯಪ್ರದೇಶದ ಗಲಭೆಯೊಂದರಲ್ಲಿ ಪೊಲೀಸ್ ಠಾಣೆಯ ಮೇಲೆ ಕಲ್ಲೆಸೆದ ಆರೋಪದ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮನೆಯನ್ನು ಬುಲ್ಡೋಜ್ ಮಾಡಲಾಗಿತ್ತು. ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಟಿಸಿದ ವರದಿಯೊಂದರ ಪ್ರಕಾರ ಈ ರೀತಿ ಬುಲ್ಡೋಜ್ ಮಾಡಲಾದ ಮುಸಲ್ಮಾನರ 128 ಮನೆಗಳಿಂದ 617 ಜನರು ಬಾಧಿತರಾಗಿದ್ದಾರೆ. ‘ನ್ಯೂಯಾರ್ಕ್ ಮಾರ್ಚ್’ ಎಂಬ ಸಂಸ್ಥೆಯ ವರದಿಯ ಪ್ರಕಾರ ಎರಡು ವರ್ಷಗಳಲ್ಲಿ ಒಂದೂವರೆ ಲಕ್ಷ ಮನೆಗಳನ್ನು ಧ್ವಂಸ ಮಾಡಲಾಗಿದ್ದು ಏಳು ಲಕ್ಷಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡಿದ್ದಾರೆ. (ದ ವೈರ್ ಪತ್ರಿಕೆಯ ವರದಿ).

ನ್ಯಾಯಾಂಗದ ಸಕಾಲಿಕ ಪ್ರವೇಶ

ಈಗ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ನ್ಯಾ. ಬಿ.ಆರ್. ಗವಾಯ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರ ಪೀಠವು ಬುಲ್ಡೋಜರ್ ನ್ಯಾಯವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೊಳಪಡಿಸಿದೆ. ಅನಧಿಕೃತವಾದ ಅಥವಾ ಅತಿಕ್ರಮಣ ಮಾಡಲ್ಪಟ್ಟ ಸ್ಥಿರಾಸ್ತಿಗಳನ್ನು ರಕ್ಷಿಸುವುದು ಸಾಧ್ಯವಿಲ್ಲವಾದರೂ, ಈ ಕಟ್ಟಡಗಳನ್ನು ಧ್ವಂಸ ಮಾಡುವ ಮುನ್ನ ಕೆಲವು ಕಾನೂನಾತ್ಮಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಹೇಗೆ ಆತನ/ಆಕೆಯ ಮನೆಯನ್ನು ಧ್ವಂಸ ಮಾಡಲು ಸಾಧ್ಯ? ಅಪರಾಧಿಯಾಗಿದ್ದರೂ ಹಾಗೆ ಮಾಡಲಾಗುವುದಿಲ್ಲ ಎಂದು ನ್ಯಾ. ಗವಾಯ್ ಹೇಳಿದ್ದಾರೆ. ಸೆಪ್ಟಂಬರ್ 18ರಂದು ನೀಡಿದ ತನ್ನ ಮಧ್ಯಂತರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ‘‘ಕಾನೂನುಬಾಹಿರವಾಗಿ ಒಂದೇ ಒಂದು ಕಟ್ಟಡ ನೆಲಸಮ ಕಾರ್ಯಾಚರಣೆ ನಡೆದರೂ ಅದು ಸಂವಿಧಾನದ ತತ್ವಗಳಿಗೆ ವಿರುದ್ಧವಾದುದು. ತನ್ನ ಅನುಮತಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಒಂದೇ ಒಂದು ನೆಲಸಮ ಕಾರ್ಯಾಚರಣೆ ನಡೆಸಬಾರದು’’ ಎಂದು ಹೇಳಿದ್ದು ಅಕ್ಟೋಬರ್ 1ರವರೆಗೂ ತಡೆಯೊಡ್ಡಿದೆ. ಆನಂತರ ನಡೆಯುವ ವಿಚಾರಣೆಯ ಬಳಿ ತನ್ನ ಅಂತಿಮ ತೀರ್ಪು ನೀಡಲಿದೆ.

ಬುಲ್ಡೋಜರ್ ನ್ಯಾಯ ಎಂಬ ಪರಿಕಲ್ಪನೆಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ, ‘‘ಅಕ್ರಮ ಕಟ್ಟಡಗಳನ್ನು ರಕ್ಷಿಸುವಂತೆ ಯಾವ ನ್ಯಾಯಾಲಯವೂ ಹೇಳುವುದಿಲ್ಲ. ಆದರೆ ಅಕ್ರಮ ಕಟ್ಟಡಗಳನ್ನು ಧ್ವಂಸ ಮಾಡುವುದಕ್ಕೂ ಕೆಲವು ಕಾನೂನು ನಿಯಮಗಳಿರುತ್ತವೆ. ಈ ನಿಯಮಗಳನ್ನು ಉಲ್ಲಂಘಿಸುವ ಪ್ರಸಂಗಗಳೇ ಹೆಚ್ಚಾಗಿರುತ್ತವೆ. ಒಂದು ಆಸ್ತಿಯನ್ನು ಅಕ್ರಮ ಎಂದು ಸರಕಾರ ಗುರುತಿಸಿದ ಮಾತ್ರಕ್ಕೆ ನಿಯಮ ಉಲ್ಲಂಘಿಸಿ ಅದನ್ನು ಕೆಡವಲು ಆಗುವುದಿಲ್ಲ, ಸೂಕ್ತ ನೋಟಿಸ್ ಜಾರಿಗೊಳಿಸಿ ಸಂಬಂಧ ಪಟ್ಟ ವ್ಯಕ್ತಿಗೆ ಸಮಜಾಯಿಷಿ ನೀಡಲು ಕಾಲಾವಧಿಯನ್ನು ನೀಡಿ ನಂತರವೇ ಕ್ರಮ ಕೈಗೊಳ್ಳುವುದು ನ್ಯಾಯಯುತ’’ ಎಂದು ಹೇಳುತ್ತಾರೆ.

ಈ ನಿಟ್ಟಿನಲ್ಲಿ ಯಾವುದೇ ಪ್ರತ್ಯೇಕ ಕಾನೂನು ಅವಶ್ಯಕತೆಯೇ ಇಲ್ಲ ಎಂದು ಹೇಳುವ ನಿವೃತ್ತ ನ್ಯಾಯಮೂರ್ತಿ ಲೋಕೂರ್, ಒಂದು ವೇಳೆ ಸುಪ್ರೀಂಕೋರ್ಟ್ ನಿಯಮಗಳನ್ನು ರೂಪಿಸಿದರೂ ಸರಕಾರಗಳು ಅದನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಕಾಯ್ದೆ ಕಾನೂನುಗಳಿಂದ ಆಳ್ವಿಕೆಯನ್ನು ನಿರ್ವಹಿಸಬೇಕಾದ ದೇಶದಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಅಪರಾಧ ಎಸಗಿದ್ದರೆ ಅದಕ್ಕೆ ಕುಟುಂಬದ ಎಲ್ಲ ಸದಸ್ಯರೂ ಶಿಕ್ಷೆ ಅನುಭವಿಸುವುದು ನ್ಯಾಯಯುತವಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ರೀತಿಯ ಅಕ್ರಮ ಕಟ್ಟಡಗಳನ್ನು ಧ್ವಂಸ ಮಾಡುವ ಮುನ್ನ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದು ಸರಕಾರಗಳ ಕರ್ತವ್ಯ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಭಾರತದ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಸತತವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ ಬುಲ್ಡೋಜರ್ ನ್ಯಾಯ ಎಂಬ ಪರಿಕಲ್ಪನೆ ಬಹುಪಾಲು ಸಂದರ್ಭಗಳಲ್ಲಿ ದುರುಪಯೋಗಕ್ಕೊಳಗಾಗುತ್ತಿದ್ದು, ರಾಜ್ಯ ಸರಕಾರಗಳ ದ್ವೇಷ ರಾಜಕಾರಣದ ಒಂದು ಭಾಗವಾಗಿದೆ. ಭಾರತದ ಕಾನೂನುಗಳ ವ್ಯಾಪ್ತಿಯಲ್ಲಿ ಎಂತಹುದೇ ಅಪರಾಧವಾದರೂ ಶಿಕ್ಷೆಗೊಳಪಡಿಸುವಂತಹ ಕಠಿಣ ಕಾಯ್ದೆಗಳಿವೆ. ಈ ಕಾಯ್ದೆ ಕಾನೂನುಗಳನ್ನೂ ದೇಶದ ನ್ಯಾಯಾಂಗ ಆಗಿಂದಾಗ ಪುನರ್ ಪರಿಶೀಲನೆಗೊಳಪಡಿಸುತ್ತಿದ್ದು, ಸರಕಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಲೇ ಇದೆ. ಅಲ್ಪಸಂಖ್ಯಾತರನ್ನೇ ಗುರಿಯಾಗಿಸುವ ಅಥವಾ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಮಣಿಸುವ ದೃಷ್ಟಿಯಿಂದ ಇಂತಹ ಕಾನೂನುಗಳನ್ನು ಬಳಸುವುದು ಅಸಾಂವಿಧಾನಿಕವಷ್ಟೇ ಅಲ್ಲ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತದ್ವಿರುದ್ಧವಾಗಿ ಕಾಣುತ್ತದೆ.

ಮತ್ತೊಮ್ಮೆ ಜನತೆಯೊಡನೆ ನ್ಯಾಯಾಂಗ

ಎಂದಿನಂತೆ ಈ ಬಾರಿಯೂ ದೇಶದ ನ್ಯಾಯಾಂಗ ಜನಸಾಮಾನ್ಯರ ರಕ್ಷಣೆಗೆ ಧಾವಿಸಿದ್ದು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್.ಗವಾಯ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರ ದ್ವಿಸದಸ್ಯ ಪೀಠವು ಈ ವಿವಾದಾಸ್ಪದ ಕಾಯ್ದೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮಧ್ಯಂತರ ತೀರ್ಪು ನೀಡಿದೆ. ನ್ಯಾಯಾಲಯದ ಈ ನಿರ್ದೇಶನವು ರೈಲು ಹಳಿ, ರಸ್ತೆ, ಪಾದಚಾರಿ ಮಾರ್ಗಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳ ಅತಿಕ್ರಮಣ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದ್ದು ಅಲ್ಲಿಯವರೆಗೂ ನ್ಯಾಯಾಲಯದ ಅನುಮತಿ ಇಲ್ಲದೆ ಯಾವುದೇ ಬುಲ್ಡೋಜರ್ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಸೆಪ್ಟಂಬರ್ 2ರ ಕೋರ್ಟ್ ನಿರ್ದೇಶನದ ಹೊರತಾಗಿಯೂ ಕೆಲವು ರಾಜ್ಯಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಸಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಗವಾಯ್, ‘‘ಕೊಂಚ ಮಟ್ಟಿನ ಮೇಲ್ವಿಚಾರಣೆಯ ಅಗತ್ಯವಿದ್ದು, ನಮ್ಮ ಆದೇಶದ ನಂತರವೂ ಬುಲ್ಡೋಜರ್ ಮುಂದುವರಿಯಲಿದೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ... ಬುಲ್ಡೋಜರ್ ಸ್ಟೀರಿಂಗ್ ಮೇಲೆ ಯಾರ ಕೈಗಳಿವೆ ಎನ್ನುವುದರ ಸೂಚನೆ ಇದಾಗಿದೆ’’ ಎಂದು ವಿಷಾದದಿಂದ ಹೇಳಿದ್ದಾರೆ.

ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಒಂದು ಸ್ಪಷ್ಟ ಕಾನೂನಾತ್ಮಕ ಮಾರ್ಗದರ್ಶಿ ಸೂತ್ರವನ್ನು ಸುಪ್ರೀಂಕೋರ್ಟ್ ರೂಪಿಸಲಿದೆ. ರಾಜಕೀಯ ಪಕ್ಷಗಳ, ಸರಕಾರಗಳ ದ್ವೇಷ ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುವ ಬುಲ್ಡೋಜರ್ ನ್ಯಾಯಕ್ಕೆ ಒಂದು ಸಾಂವಿಧಾನಿಕ ಚೌಕಟ್ಟಿನ ನ್ಯಾಯಯುತ ಕಾಯಕಲ್ಪ ಒದಗಿಸಲು ಸುಪ್ರೀಂಕೋರ್ಟ್ ಮುಂದಾಗಿರುವುದು ಸ್ವಾಗತಾರ್ಹ. ನಾಗರಿಕತೆಯನ್ನೇ ನಾಚಿಸುವ, ಸಂವಿಧಾನದ ಮೂಲ ತತ್ವಗಳನ್ನೇ ಕಡೆಗಣಿಸುವ ‘ಬುಲ್ಡೋಜರ್ ನ್ಯಾಯ’ ಎಂಬ ಅರಣ್ಯ ಕಾನೂನಿಗೆ ಸುಪ್ರೀಂಕೋರ್ಟ್ ಅಂತ್ಯ ಹಾಡುವುದಷ್ಟೇ ಅಲ್ಲದೆ, ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಪ್ರಜಾಪ್ರಭುತ್ವದ ಗೆಲುವು ಎಂದೇ ಹೇಳಬಹುದು. ಉನ್ನತ ನ್ಯಾಯಾಂಗದ ಈ ನಿರ್ದೇಶನ ಬುಲ್ಡೋಜರ್ ನ್ಯಾಯವನ್ನು ವೈಭವೀಕರಿಸುತ್ತಿದ್ದ ರಾಜಕೀಯ ನಾಯಕರಿಗೆ ಕಪಾಳ ಮೋಕ್ಷವೂ ಆಗಿದೆ. ಸತತವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕೊಂಚ ಮಟ್ಟಿಗಾದರೂ ತಡೆಗಟ್ಟಲು ಈ ತೀರ್ಪು ನೆರವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾ. ದಿವಾಕರ

contributor

Similar News