‘ಸಂಸ್ಕೃತಿ’ಯು ಸಮುದಾಯ ಅಥವಾ ಜಾತಿಜನ್ಯವಲ್ಲ
- ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಮೈಸೂರಿನಲ್ಲಿ ನಡೆದ ‘ಮಹಿಷ ಉತ್ಸವ’ ಕಾರ್ಯಕ್ರಮದಲ್ಲಿ,‘ಒಕ್ಕಲಿಗರು ಸಂಸ್ಕೃತಿ ಹೀನರು’ ಎಂದು ಕುವೆಂಪು ಅವರೇ ಹೇಳಿದ್ದರು, ಅದನ್ನು ತಾವು ಉಲ್ಲೇಖಿಸುತ್ತಿದ್ದೇನಷ್ಟೆ ಎಂಬ ಪ್ರೊ. ಭಗವಾನರ ಹೇಳಿಕೆಗೆ ಪರ-ವಿರೋಧ ಸಹಜವಾಗಿಯೇ ವ್ಯಕ್ತವಾಗಿದೆ. ಭಗವಾನರು ಕುವೆಂಪು ಅವರ ಹೇಳಿಕೆಯನ್ನು ಸಮರ್ಥಿಸುವರೋ ಇಲ್ಲವೋ ಎಂಬ ಸ್ಪಷ್ಟತೆಯಿಲ್ಲ. ‘ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?’ ಎಂದಿರುವ ಕುವೆಂಪು, ತಾವು ಎಂದೋ, ಯಾವ ಸಂದರ್ಭದಲ್ಲಿಯೋ ಹೇಳಿರುವ, ‘ಒಕ್ಕಲಿಗರು ಸಂಸ್ಕೃತಿ ಹೀನರು’ ಎಂಬ ಉಕ್ತಿಯನ್ನು ಹಿಡಿದು ಜಗ್ಗಾಡುತ್ತಿರುವ ಈಗಿನ ಪ್ರಭೃತಿಗಳಿಗೆ, ತಮ್ಮ ಸಮಾಧಿಯಿಂದಲೇ ಛೀಮಾರಿ ಹಾಕುತ್ತಿರಬೇಕು!
ಕುವೆಂಪು ಅವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟಿವ್ ಆಗಿ ಬಳಸಿಕೊಳ್ಳುವ ಹಲವು ‘ಬುದ್ಧಿಜೀವಿ’ಗಳು, ಅವರನ್ನು ‘ಬ್ರಾಹ್ಮಣ ದ್ವೇಷಿ’ ಎಂದು, ಒಂದು ಜಾತಿಗೆ ಸೀಮಿತಗೊಳಿಸುತ್ತಾರೆ; ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದುದನ್ನು ಕೆಲ ಬ್ರಾಹ್ಮಣರು ಸಹಿಸಲಿಲ್ಲವೆಂಬ ಉದಾಹರಣೆಯನ್ನು ಮುಂದಿಡುತ್ತಾರೆ. ಹಾಗಿದ್ದರೆ, ತಮ್ಮ ಸಾಹಿತ್ಯಕ ಶ್ರೇಯಸ್ಸಿಗೆ ಕಾರಣರು ಮತ್ತು ಬ್ರಾಹ್ಮಣರಾದ ಟಿ.ಎಸ್.ವೆಂಕಣ್ಣಯ್ಯನವರು, ಎ.ಆರ್. ಕೃಷ್ಣಶಾಸ್ತ್ರಿಗಳು ಮತ್ತು ಬಿ.ಎಂ.ಶ್ರೀಕಂಠಯ್ಯನವರಿಗೆ ಋಣಿಯಾಗಿರುವುದಾಗಿ ಅವರು ಹೇಳಿಕೊಳ್ಳುತ್ತಿರಲಿಲ್ಲ ಮತ್ತು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯವನ್ನು, ‘‘ಇದೊ ಮುಗಿಸಿ ತಂದಿಹೆನ್ ಈ ಬೃಹದ್ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯಗುರುವೆ, ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ..’’ ಎಂದು ವೆಂಕಣ್ಣಯ್ಯನವರಿಗೆ ಅರ್ಪಿಸುತ್ತಿರಲಿಲ್ಲ. ಇಷ್ಟಕ್ಕೂ ಬ್ರಾಹ್ಮಣೇತರರೆಲ್ಲಾ ಕುವೆಂಪು ಪರವಾಗಿಯೇ ಇದ್ದರೇ?! ಇರಲಿ, ಭಗವಾನರು ಕುವೆಂಪು ಅವರ ಆ ಹೇಳಿಕೆಯನ್ನು ತಾವು ಒಪ್ಪುವರೋ, ಇಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸದಿರುವುದನ್ನು ಗಮನಿಸಿದರೆ, ವಿವಾದ ಸೃಷ್ಟಿಯಾಗಲೆಂದೇ ಅವರು ಅದನ್ನು ಉಲ್ಲೇಖಿಸಿದಂತಿದೆ. ಹಾಗೆ ನೋಡಿದರೆ, ಭಗವಾನರಿಗೆ ವಿವಾದ ಹೊಸದೇನಲ್ಲ, ಅದನ್ನು ನಿರೀಕ್ಷಿಸಿಯೇ ಅವರು ಹೇಳಿಕೆಗಳನ್ನು ನೀಡುವರೆನಿಸುತ್ತದೆ. ಈ ಹಿಂದೆ ಅವರು ‘‘ಶ್ರೀರಾಮ ಮದ್ಯ ಸೇವಿಸುತ್ತಿದ್ದ, ತನ್ನ ಹೆಂಡತಿಯನ್ನು ಕಾಡಿಗಟ್ಟಿದ’’ ಎಂದು ಹೇಳಿ ವಿವಾದವೆಬ್ಬಿಸಿದ್ದರು. ಮೂಲಭೂತ ಪ್ರಶ್ನೆಯೆಂದರೆ, ಪ್ರಗತಿಪರರು ಮತ್ತು ಚಿಂತನಶೀಲರೆನಿಸಿಕೊಂಡ ಭಗವಾನರು ಪುರಾಣಪುರುಷನೆನ್ನಲಾಗುವ ಶ್ರೀರಾಮನನ್ನು ನಂಬುತ್ತಾರೆಯೇ ಎಂಬುದು. ಶ್ರೀರಾಮ ಮದ್ಯ ಕುಡಿಯುತ್ತಿದ್ದ ಮತ್ತು ತನ್ನ ಮಡದಿಯನ್ನು ಕಾಡಿಗಟ್ಟಿದ ಎಂಬುದಕ್ಕೆ ಅವರು ಒದಗಿಸುವ ಸಾಕ್ಷ್ಯಾಧಾರಗಳು ಪೌರಾಣಿಕ ಗ್ರಂಥಗಳೇ ಅಥವಾ ಚಾರಿತ್ರಿಕ ದಾಖಲೆಗಳೇ? ಮೊದಲನೆಯದಾದರೆ, ಅವರೂ ಪುರಾಣಗಳನ್ನು ನಂಬುತ್ತಾರೆಂದಾಯಿತು; ಎರಡನೆಯದಾದರೆ, ಆ ಚಾರಿತ್ರಿಕ ದಾಖಲೆಗಳಾವುವು ಎಂಬುದನ್ನು ಅವರು ಉಲ್ಲೇಖಿಸಲೇಬೇಕು. ಇತರೆಲ್ಲರಿಗಿರುವಂತೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಭಗವಾನರಿಗೂ ವಾಕ್ ಸ್ವಾತಂತ್ರ್ಯವಿದೆ, ತಮ್ಮ ನಂಬಿಕೆಯಂತೆ ನಡೆದುಕೊಳ್ಳುವ ಹಕ್ಕೂ ಅವರಿಗಿದೆ. ಹಾಗೆಯೇ, ತಮ್ಮಂತೆ ಪ್ರಗತಿಪರರಲ್ಲದ, ಇನ್ನಿತರ ‘ಹುಲುಮಾನವರ’ ನಂಬಿಕೆಗಳಿಗೂ ಘಾಸಿಗೊಳ್ಳದಂತೆ ಅವರು ನಡೆದುಕೊಳ್ಳಬೇಕಾಗುತ್ತದೆ.
‘ಮಹಿಷ ದಸರಾ’ ಆಯೋಜಿಸಿದ್ದ ಪ್ರಮುಖರಲ್ಲೊಬ್ಬರಾದ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಅವರು, ಮಹಿಷ ಉತ್ಸವಕ್ಕಷ್ಟೇ ಸೀಮಿತರಾಗಿರಬೇಕೆಂದು ಅವರಿಗೆ ಹೇಳಿದ್ದರೂ, ಭಗವನ್ ಅವರು ಒಕ್ಕಲಿಗರ ವಿಷಯವನ್ನು ಪ್ರಸ್ತಾಪಿಸಿದ್ದು ದುರದೃಷ್ಟಕರವೆಂದು ಹೇಳಿ, ಅದಕ್ಕಾಗಿ ಜಾಣ್ಮೆಯಿಂದ ಒಕ್ಕಲಿಗರ ಕ್ಷಮೆ ಕೇಳಿ, ಕೈತೊಳೆದುಕೊಂಡಿದ್ದಾರೆ. ಒಕ್ಕಲಿಗರಿರಲಿ, ಇತರ ಸಮುದಾಯದವರಿರಲಿ, ಇಡೀ ಒಂದು ಸಮುದಾಯವನ್ನೇ ‘ಸಂಸ್ಕೃತಿ ಹೀನರು’ ಎಂದರೆ, ಭಗವಾನರಷ್ಟು ವಿಚಾರವಂತರಲ್ಲದ, ಸಮುದಾಯದ ‘ಸಾಮಾನ್ಯರು’ ಸ್ವಾಭಾವಿಕವಾಗಿಯೇ ಅಸಮಾಧಾನಗೊಳ್ಳುತ್ತಾರೆ. ಭಗವಾನರು ಹೇಳಿರುವುದನ್ನೇ ಸ್ವಲ್ಪ ವಿಸ್ತರಿಸಿದರೆ, ಒಕ್ಕಲಿಗರಲ್ಲದ ಇತರರೆಲ್ಲಾ ‘ಸುಸಂಸ್ಕೃತರು’ ಎಂದೇ ಅರ್ಥೈಸಬೇಕಾಗುತ್ತದೆ! ‘ಸಂಸ್ಕೃತಿ’ ಸಮುದಾಯ ಅಥವಾ ಜಾತಿಜನ್ಯವಲ್ಲ, ಅದನ್ನು ಯಾವುದೇ ವ್ಯಕ್ತಿ ತಾನಾಗಿಯೇ ಬೆಳೆಸಿಕೊಳ್ಳಬೇಕಾಗುತ್ತದೆ, ಉಳಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ವಿಚಾರವಾದಿಗಳಾದ ಭಗವಾನರಿಗೆ ಇತರರು ಹೇಳಿಕೊಡಬೇಕೇ?