ಬಾಬಾಸಾಹೇಬ ಮತ್ತು ರಮಾಬಾಯಿ ಅವರ ಧಾರವಾಡ ನಂಟು

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 1929ರಲ್ಲಿ ಧಾರವಾಡದಲ್ಲಿ ಇದೇ ಕಟ್ಟಡದಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್ ಆರಂಭಿಸಿದರು. ನಂತರ ಇದು ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಎಂದು ಪುನರ್ ನಾಮಕರಣಗೊಂಡಿತು. ಅಂಬೇಡ್ಕರರ ಆಪ್ತರಾಗಿದ್ದ ಎಚ್.ಬಿ. ವರಾಳೆ ಅವರು ಈ ಹಾಸ್ಟೆಲ್ ವಾರ್ಡನ್ ಆಗಿ ಅದನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದಾರೆ. (ಅವರ ಮೊಮ್ಮಗ ಪಿ.ಬಿ. ವರಾಳೆ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ಧರು. ಇತ್ತೀಚೆಗೆ ಅವರು ಭಡ್ತಿ ಹೊಂದಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದಾರೆ.) 1930ರಲ್ಲಿ ಬಾಬಾಸಾಹೇಬರು ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳುವ ಸಂದರ್ಭದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಆಗಿದ್ದು ತಿಳಿದುಬಂದಿತು. ಕೂಡಲೇ ತಮ್ಮ ಧರ್ಮಪತ್ನಿ ರಮಾಬಾಯಿ ಅವರನ್ನು ಧಾರವಾಡಕ್ಕೆ ಕಳಿಸಿದರು. ವಿದ್ಯಾರ್ಥಿಗಳ ಕರುಣಾಜನಕ ಸ್ಥಿತಿ ಕಂಡು ಮಮ್ಮಲ ಮರುಗಿದ ರಮಾಬಾಯಿ ಸರಾಫ್ ಅಂಗಡಿಗೆ ಹೋಗಿ ಮೈಮೇಲಿನ ಚಿನ್ನ ಮಾರಿ, ದಿನಸಿ ಖರೀದಿಸಿ ತಂದು ಅಡುಗೆ ಮಾಡಿ ಬಡಿಸಿ ತೃಪ್ತಿ ಪಟ್ಟಿದ್ದಕ್ಕೆ ಈ ಕಟ್ಟಡ ಸಾಕ್ಷಿಯಾಗಿದೆ.

Update: 2024-02-06 09:00 GMT

ಭಾರತೀಯರಿಗೆ ಆಡಳಿತದಲ್ಲಿ ನಿಯಮಿತ ಅಧಿಕಾರ ನೀಡುವ ಉದ್ದೇಶದಿಂದ ಬ್ರಿಟಿಷರು ವಿಧಾನ ಪರಿಷತ್ ಸ್ಥಾಪಿಸುವುದಕ್ಕಾಗಿ 1919ರಲ್ಲಿ ನೇಮಿಸಿದ ಮೊಂಟ್‌ಫೋರ್ಡ್ ಸುಧಾರಣಾ ಕಮಿಷನ್ ಭಾಗವಾದ ಸೌತ್ ಬರೋ ಸಮಿತಿ ಮುಂದೆ ಅಂಬೇಡ್ಕರ್ ಅವರು ‘ವಯಸ್ಕರ ಮತದಾನ ಪದ್ಧತಿಯಲ್ಲಿ ಶೋಷಿತ ಜಾತಿಗಳಿಗೂ ಸಮಾನ ಹಕ್ಕು ಇರಬೇಕು’ ಎಂದು ಪ್ರತಿಪಾದಿಸಿದರು. ಆ ಸಂದರ್ಭದಲ್ಲಿ ಅವರಿಗೆ ಈ ಕೆಳಗಿನ ಮಹತ್ವದ ಮಾಹಿತಿಯೊಂದು ಲಭಿಸಿತು.

ಬಾಂಬೆ ಪ್ರೆಸಿಡೆನ್ಸಿಯಲ್ಲಿ 1815ರಲ್ಲಿ ‘ಬಾಂಬೆ ಎಜುಕೇಷನ್ ಸೊಸೈಟಿ’ ಆರಂಭವಾಯಿತು. ಮಹಾರರು ಎಷ್ಟೆಲ್ಲ ಶೌರ್ಯ ಪ್ರದರ್ಶಿಸಿದರೂ ಭಾರತೀಯ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದಾಗಿ ಅವರ ಮಕ್ಕಳಿಗೆ ಮತ್ತು ಇತರ ಶೂದ್ರರ ಮಕ್ಕಳಿಗೆ ಕೂಡ ಶಿಕ್ಷಣ ಪಡೆಯುವ ವಾತಾವರಣ ಇರಲಿಲ್ಲ. ಅಸ್ಪಶ್ಯರ ಶಿಕ್ಷಣದ ಪ್ರಶ್ನೆಯನ್ನು ಬ್ರಿಟಿಷ್ ಆಡಳಿತಗಾರರು ಸದಾ ಎದುರಿಸಿದರು. ಆಗ ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಧಾರವಾಡದ ಘಟನೆ ಈ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿದೆ.

1856ರಲ್ಲಿ ಒಬ್ಬ ಅಸ್ಪಶ್ಯ ಬಾಲಕನಿಗೆ ಶಾಲೆ ಕಲಿಯಲು ಧಾರವಾಡ ಸರಕಾರಿ ಶಾಲೆಯ ಮುಖ್ಯಸ್ಥ ಅವಕಾಶ ನೀಡಲಿಲ್ಲ. ಶಾಲೆಯಲ್ಲಿ ವಿದ್ಯೆ ಕಲಿಯುವುದಕ್ಕೆ ಅವಕಾಶ ಕಲ್ಪಿಸಲು ಆ ಬಾಲಕನ ಅಜ್ಜ ಬಾಂಬೆ ಎಜುಕೇಷನ್ ಸೊಸೈಟಿಗೆ ಮನವಿ ಪತ್ರ ಬರೆದ. ದಲಿತ ವಿದ್ಯಾರ್ಥಿಗೆ ಪ್ರವೇಶ ನೀಡಿದರೆ ಮೇಲ್ಜಾತಿಗಳ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ನಿಲ್ಲಿಸುತ್ತಾರೆ ಎಂಬುದು ಗೊತ್ತಿರುವ ವಿಚಾರವೇ ಆಗಿತ್ತು. ಅಂಥ ಪರಿಸ್ಥಿತಿಯನ್ನು ಎದುರಿಸುವ ಮನಸ್ಸು ಬಾಂಬೆ ಎಜುಕೇಷನ್ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಇರಲಿಲ್ಲ. ಆ ದಲಿತ ಬಾಲಕನಿಗೆ ಪ್ರವೇಶ ನಿರಾಕರಿಸುವ ಮೂಲಕ ಸಮಸ್ಯೆ ನಿವಾರಣೆ ಮಾಡುವುದು ಸರಳ ವಿಧಾನ ಎಂದು ಅವರಿಗೆ ಅನಿಸಿತು. ಒಬ್ಬ ದಲಿತ ವಿದ್ಯಾರ್ಥಿಗಾಗಿ ಎಲ್ಲ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ ಅಲ್ಲ ಎಂದೂ ಸಮಿತಿ ನಿರ್ಧರಿಸಿತು.

 1818ನೇ ಜನವರಿ 1ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಎರಡನೇ ಪೇಶ್ವೆ ಬಾಜಿರಾವ್ ಸೈನ್ಯದ ಮಧ್ಯೆ ಭೀಮಾ ತೀರದ ಕೋರೆಗಾಂವ್‌ನಲ್ಲಿ ಯುದ್ಧ ನಡೆಯಿತು. ಆ ಯುದ್ಧದಲ್ಲಿ 500 ಜನ ಮಹಾರರು ಸಿದ್ದನಾಕ್ ನೇತೃತ್ವದಲ್ಲಿ ವೀರೋಚಿತವಾಗಿ ಹೋರಾಡಿ ಬ್ರಿಟಿಷರ ಗೆಲುವಿಗೆ ಕಾರಣರಾದರು.

ಈ ಯುದ್ಧದಲಿ 500ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಸತ್ತರು. ಈಸ್ಟ್ ಇಂಡಿಯಾ ಕಂಪೆನಿಯ 834 ಸೈನಿಕರಲ್ಲಿ 275 ಮಂದಿ ಸತ್ತರು. ಸತ್ತವರಲ್ಲಿ ಭಾರತೀಯ ಮೂಲದ 21 ಮಹಾರರು, 16 ಮರಾಠರು, 8 ರಜಪೂತರು, ಇಬ್ಬರು ಮುಸ್ಲಿಮರು ಮತ್ತು ಇಬ್ಬರು ಯಹೂದಿಗಳು ಇದ್ದರು. ಹೀಗೆ ಪೇಶ್ವೆಗಳು ಮತ್ತು ಬ್ರಿಟಿಷರ ಮಧ್ಯೆ ನಡೆದ ಯುದ್ಧದಲ್ಲಿ ಭಾರತೀಯ ಮೂಲದ ಒಟ್ಟು 49 ಮಂದಿ ಹುತಾತ್ಮರಾದರು.

ಭೀಮಾ ಕೋರೆಗಾಂವಲ್ಲಿ ಬ್ರಿಟಿಷರು ಸ್ಥಾಪಿಸಿದ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ 21 ಮಂದಿ ಮಹಾರರ ಹೆಸರುಗಳು ಮತ್ತು ಉಳಿದ 28 ಮಂದಿ ಇತರ ಭಾರತೀಯ ಸೈನಿಕರ ಹೆಸರುಗಳನ್ನು ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಕೆತ್ತಿಸಿದೆ. 500 ಮಂದಿ ಮಹಾರ್ ಸೈನಿಕರಲ್ಲಿ ಉಳಿದಂಥ 479 ಸೈನಿಕರಿಗೆ ಕೂಡ ಬ್ರಿಟಿಷರು ಪುನರ್ವಸತಿ ಕಲ್ಪಿಸಿದರು.

ತನ್ನ ಮೊಮ್ಮಗನ ಶಾಲಾ ಪ್ರವೇಶಕ್ಕಾಗಿ ಮನವಿ ಪತ್ರ ಬರೆದ ಆ ವ್ಯಕ್ತಿ ಕೋರೆಗಾಂವ್ ಕದನದ ಮಹಾರ್ ಸೈನಿಕರಲ್ಲಿ ಒಬ್ಬನಾಗಿದ್ದ. ಆತ ಯುದ್ಧ ನಂತರ ಧಾರವಾಡಕ್ಕೆ ಬಂದು ನೆಲೆಸಿರಬಹುದು. ಅಥವಾ ಧಾರವಾಡ ಮೂಲದವನೇ ಆಗಿರಬಹುದು. ಆತನ ಕೋರೆಗಾಂವ್ ಯುದ್ಧದ ಹಿನ್ನೆಲೆ ಗೊತ್ತಾದರೂ ಹೆಸರು ಗೊತ್ತಾಗಲಿಲ್ಲ.

ಆ ಅಜ್ಞಾತ ಮಹಾರನ ಪ್ರಯತ್ನದಿಂದಾಗಿ ಕೊನೆಗೂ ಬಾಂಬೆ ಸರಕಾರ 1858ರಲ್ಲಿ ಶಾಲಾ ಪ್ರವೇಶಕ್ಕೆ ಎಲ್ಲರಿಗೂ ಅವಕಾಶ ಕಲ್ಪಿಸಿತು. ಅನುದಾನಿತ ಶಾಲೆಗಳಲ್ಲಿ ಕೂಡ ಈ ಅವಕಾಶ ಕಲ್ಪಿಸಲಾಯಿತು. ಜಾತಿ ಮತ್ತು ಕುಲದ ಆಧಾರದ ಮೇಲೆ ಶಿಕ್ಷಣ ಪಡೆಯುವ ಅವಕಾಶವನ್ನು ಕಡೆಗಣಿಸಿದರೆ ಅಂಥ ಶಾಲೆಗಳಿಗೆ ಕೊಡುವ ಅನುದಾನವನ್ನು ಸ್ಥಗಿತಗೊಳಿಸುವುದಾಗಿ ಆದೇಶ ಹೊರಡಿಸಿತು.

ಈ ಘಟನೆಯ ವಿಚಾರ ತಿಳಿದಾಗ ಅಂಬೇಡ್ಕರರು ರೋಮಾಂಚನ ಗೊಂಡರು. ಏಕೆಂದರೆ ಈ ಆದೇಶ ಬಾಂಬೆ ಕರ್ನಾಟಕ ಎನಿಸಿಕೊಂಡ ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಉತ್ತರ ಕನ್ನಡ ಸೇರಿದಂತೆ ಮಹಾರಾಷ್ಟ್ರ, ಗುಜರಾತ್ ಮತ್ತು ಈಗಿನ ಪಾಕಿಸ್ತಾನದ ಭಾಗವಾದ ಸಿಂಧ್ ಪ್ರಾಂತದವರೆಗೂ ಬಾಂಬೆ ಪ್ರೆಸಿಡೆನ್ಸಿ ಹಬ್ಬಿತ್ತು. ಹೀಗೆ ಬ್ರಿಟಿಷ್ ಭಾರತದ ದಲಿತರು ಮತ್ತು ಶೂದ್ರರಿಗೆ ವಿದ್ಯಾನಿಲಯಗಳ ಬಾಗಿಲು ತೆರೆಸಿದ್ದು ಧಾರವಾಡದ ಆ ಮಹಾರ್ ಮಾಜಿ ಸೈನಿಕ! ಉತ್ತರ ಕರ್ನಾಟಕದ ಲಿಂಗಾಯತರ ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಕೂಡ 1858ಕ್ಕಿಂತ ಹಿಂದಿನ ಇತಿಹಾಸವಿಲ್ಲ.

ದೇವರಾಯ ಇಂಗಳೆ ಮುಂತಾದವರ ಪ್ರಯತ್ನದಿಂದ 1925ರಲ್ಲಿ ಬೆಳಗಾವಿಯ ನಿಪ್ಪಾಣಿಯಲ್ಲಿ ಬಹಿಷ್ಕೃತ ಹಿತಕಾರಿಣಿ ಮಹಾಸಭಾದ ಅಧಿವೇಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜಕೀಯ ಪರಿವರ್ತನೆಗಿಂತ ಸಾಮಾಜಿಕ ಪರಿವರ್ತನೆಯ ಚಳವಳಿ ಮಾಡುವುದು ಅವಶ್ಯ ಎಂಬ ನಿರ್ಣಯ ಕೈಗೊಳ್ಳಲಾಯಿತು. ತತ್ಪರಿಣಾಮವಾಗಿ ನಿಪ್ಪಾಣಿಯಲ್ಲಿ ನಿಮ್ನವರ್ಗದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಲಾಯಿತು. ನಂತರ ಅದನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು.

ದೇವರಾಯ ಇಂಗಳೆಯವರು ಬಾಬಾಸಾಹೇಬರಿಗಿಂತ ಎರಡು ವರ್ಷ ದೊಡ್ಡವರು. ಹೈದರಾಬಾದ್ ಕರ್ನಾಟಕದಲ್ಲಿ ಶ್ಯಾಮಸುಂದರ ಅವರು ದಲಿತ ಚಳವಳಿಗೆ ಕಾರಣರಾದಂತೆ ಇಂಗಳೆಯವರು ಮುಂಬೈ ಕರ್ನಾಟಕದಲ್ಲಿ ದಲಿತ ಚಳವಳಿಗೆ ಕಾರಣರಾದವರು. ಇಂಗಳೆಯವರು ‘ರೈತನ ಮಗಳು’ ನಾಟಕದಲ್ಲಿ ಅಂಬೇಡ್ಕರರ ಪಾತ್ರ ತಂದಿದ್ದಾರೆ. ಅವರು ಆ ನಾಟಕವನ್ನು ಅಂಬೇಡ್ಕರರ ಮುಂದೆ ಆಡಿ ತೋರಿಸಿದ್ದರು.

ಬಾಂಬೆ ಸರಕಾರದ ರಾಜ್ಯಪಾಲರು ಅಂಬೇಡ್ಕರ್‌ರನ್ನು 1926ರಲ್ಲಿ ಬಾಂಬೆ ವಿಧಾನ ಪರಿಷತ್‌ಗೆ ನೇಮಕ ಮಾಡಿದರು. ಅಂಬೇಡ್ಕರರು 1934ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಧಾರವಾಡದಲ್ಲಿದ್ದ ಆ ಮಹಾರ್ ವ್ಯಕ್ತಿಯ ಮನೆತನವನ್ನು ಹುಡುಕಿಕೊಂಡು ಹೋಗುವ ತೀವ್ರತೆ ಅಂಬೇಡ್ಕರರಿಗೆ ಹೆಚ್ಚಾಯಿತು. 1927ರಲ್ಲಿ ಬಾಬಾಸಾಹೇಬರು ಧಾರವಾಡಕ್ಕೆ ಬಂದರು. ಅವರು ಪ್ರಯತ್ನಪಟ್ಟರೂ ಆತನ ಮನೆತನದವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಅದೇನೇ ಆದರೂ ದಲಿತರಿಗೆ ಮತ್ತು ಶೂದ್ರರಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಈ ಘಟನೆ ಐತಿಹಾಸಿಕವಾಗಿದೆ.

ಎಲ್ಲ ಸಾಮಾಜಿಕ ಮತ್ತು ಆರ್ಥಿಕ ರೋಗಗಳಿಗೆ ಶಿಕ್ಷಣವೇ ಮದ್ದು ಎಂಬುದು ಅಂಬೇಡ್ಕರರ ದೃಢನಿರ್ಧಾರವಾಗಿತ್ತು. ಅವರ ಶಿಕ್ಷಣದ ಪರಿಕಲ್ಪನೆ ಬರೀ ಯಾವುದೋ ಒಂದು ನೌಕರಿ ಹಿಡಿದುಕೊಳ್ಳುವುದಾಗಿರಲಿಲ್ಲ. ಕೇವಲ ವಕೀಲ, ವೈದ್ಯ, ಇಂಜಿನಿಯರ್ ಅಥವಾ ಅಧಿಕಾರಿ ಆಗುವುದಾಗಿರಲಿಲ್ಲ. ಕಲಿತ ಶಿಕ್ಷಣದಿಂದ ಪಡೆದ ಅಧಿಕಾರದ ಮೂಲಕ ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವುದಕ್ಕಾಗಿ ವಿದ್ಯೆಯನ್ನು ಬಳಸಿಕೊಳ್ಳುವ ತೀವ್ರತೆ ಅವರದಾಗಿತ್ತು. ದಲಿತರು ಕೇವಲ ಸ್ವಾವಲಂಬಿಯಾಗುವುದು ಮಾತ್ರವಲ್ಲ ಸಂಘಟಿತರಾಗಿ ಆ ಮೂಲಕ ಅನ್ಯಾಯದ ವಿರುದ್ಧ ಹೋರಾಟ ಮಾಡಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂಬ ಕನಸನ್ನು ಅವರು ಹೊಂದಿದ್ದರು.

ಅಂಬೇಡ್ಕರರು ಧಾರವಾಡಕ್ಕೆ ಬಂದ ಸಂದರ್ಭದಲ್ಲಿ ಅವರ ಅನುಯಾಯಿಗಳಾದ ಪರಶುರಾಮ ಪವಾರ್ ಮತ್ತು ಯಲ್ಲಪ್ಪ ಹೊಂಗಲ್ ಅವರಿಗೆ ಮಚಗಾರ ಕೊ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸ್ಥಾಪಿಸಲು ಸಹಾಯ ಮಾಡಿದರು. ಈ ಇಬ್ಬರೂ ನಿರಕ್ಷರಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ಈ ಸೊಸೈಟಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ ಅಂಬೇಡ್ಕರರು ಬಂದು ಅದರ ಉದ್ಘಾಟನೆಯನ್ನೂ ಮಾಡಿದರು. ಸಮಗಾರ ಸಮಾಜದ ಈ ಇಬ್ಬರು ಅನುಯಾಯಿಗಳು, 1927ನೇ ಮಾರ್ಚ್ 19 ಮತ್ತು 20ರಂದು ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಮಹಾಡ್‌ನಲ್ಲಿನ ಚೌದಾರ್ ಕೆರೆಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಅಂಬೇಡ್ಕರರು 1929ರಲ್ಲಿ ಧಾರವಾಡದ ಕೊಪ್ಪದಕೆರೆ ಪ್ರದೇಶದಲ್ಲಿ ನಿಮ್ನವರ್ಗದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಪ್ರಾರಂಭಿಸಿದರು. ಅವರ ನಂಬಿಗಸ್ಥ ಅನುಯಾಯಿ ಬಿ.ಎಚ್. ವರಾಳೆಯವರು ಹಾಸ್ಟೆಲ್ ವಾರ್ಡನ್ ಆದರು. ಬಾಬಾ ಸಾಹೇಬರ ಪತ್ನಿ ರಮಾಬಾಯಿಯವರು ಈ ಹಾಸ್ಟೆಲ್ ಬಗ್ಗೆ ಬಹಳ ಕಾಳಜಿ ವಹಿಸಿದರು.

ರಮಾಬಾಯಿಯವರು ಮಹಾತಾಯಿಯಾಗಿದ್ದರು. ಬಡ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿ ದ್ದರು. ಅವರಿಗೆ ಧಾರವಾಡದ ವಾತಾವರಣ ಹಿಡಿಸಿತು. ಈ ಪ್ರದೇಶದ ದಲಿತ ಮಕ್ಕಳ ಶಿಕ್ಷಣಕ್ಕೆ ಏನಾದರೂ ಮಾಡಬೇಕು ಎಂಬ ಅವರ ತೀವ್ರತೆಗೆ ಆರೋಗ್ಯವೂ ಸಹಕಾರಿಯಾಯಿತು. ಅಂಬೇಡ್ಕರರು ಪತ್ನಿ ರಮಾಬಾಯಿಯವರನ್ನು ಕರೆದುಕೊಂಡು ಬಂದು ಅನೇಕ ಸಲ ಧಾರವಾಡದಲ್ಲಿ ಉಳಿದದ್ದೂ ಉಂಟು.

ವಕೀಲರಾಗಿದ್ದ ಅಂಬೇಡ್ಕರರು ಧಾರವಾಡದ ಕೋರ್ಟಿಗೂ ಬರುತ್ತಿದ್ದರು. ಒಮ್ಮೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾತನಾಡುವಾಗ ‘‘ನೀವು ಬಸವಣ್ಣನವರಂಥ ಮಹಾನ್ ಕ್ರಾಂತಿಕಾರಿಯನ್ನು ಇಟ್ಟುಕೊಂಡು ಇಷ್ಟೇಕೆ ದಡ್ಡರಿದ್ದೀರಿ?’’ ಎಂದು ಪ್ರಶ್ನಿಸಿದ್ದಾಗಿ ಡಾ. ಆರ್.ಸಿ. ಹಿರೇಮಠ ಅವರು ನನಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಅವರು ಅಂಬೇಡ್ಕರರ ಭಾಷಣ ಕೇಳಲು ಹೋಗಿದ್ದರು.

ಆಗಿನ ಮುಂಬೈ ಸರಕಾರ ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಬಗ್ಗೆ ಚಿಮನ್‌ಲಾಲ್ ಕಮಿಟಿ ನೇಮಿಸಿತು. ಅಂಬೇಡ್ಕರರು ಆ ಕಮಿಟಿಯ ಕಾರ್ಯದರ್ಶಿಯಾದರು. ಧಾರವಾಡದಲ್ಲಿ ಉನ್ನತ ಶಿಕ್ಷಣ ಪ್ರಾರಂಭ ಮಾಡುವ ಕುರಿತು ಈ ಸಮಿತಿ ಸರಕಾರಕ್ಕೆ ಶಿಫಾರಸು ಮಾಡುತ್ತದೆ. ಧಾರವಾಡ ವಿದ್ಯಾನಗರಿ ಎನಿಸಿಕೊಳ್ಳಲು ಅಂಬೇಡ್ಕರರು ಕಾರಣರಾಗಿದ್ದಾರೆ. ಸರ್ ಸಿದ್ದಪ್ಪ ಕಂಬಳಿಯವರಿಂದಾಗಿ ಇದು ಸಾಧ್ಯವಾಯಿತು.

ಧಾರವಾಡದಲ್ಲಿದ್ದಾಗ, ಶಿಕ್ಷಣದ ವಿಚಾರದಲ್ಲಿ ದಲಿತ ಯುವಕರನ್ನು ಹುರಿದುಂಬಿಸುತ್ತಿದ್ದರು. ದಲಿತ ಮತ್ತು ಅನಾಥ ಮಕ್ಕಳಿಗಾಗಿ ಡಿಪ್ರೆಸ್ಡ್ ಕ್ಲಾಸ್ ಸ್ಟೂಡೆಂಟ್ಸ್ ಹಾಸ್ಟೆಲ್ ಅನ್ನು ಸ್ಥಾಪನೆ ಮಾಡುವುದಕ್ಕಾಗಿ ಜಮೀನು ಬಯಸಿ ಧಾರವಾಡ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರು. ಬ್ರಿಟಿಷ್ ಸರಕಾರ ಐದು ಎಕರೆಗಳಷ್ಟು ಜಮೀನನ್ನು ಷರತ್ತುಗಳೊಂದಿಗೆ ಮಂಜೂರು ಮಾಡಿತು. ಐದು ಕೋಣೆಗಳ ಹಾಸ್ಟೆಲ್ ಮತ್ತು ಬುದ್ಧರಖ್ಖಿತ ಶಾಲೆ ಪ್ರಾರಂಭವಾದವು. ಬಾಬಾ ಸಾಹೇಬರು ಹಾಸ್ಟೆಲ್‌ನ ಮ್ಯಾನೇಜಿಂಗ್ ಟ್ರಸ್ಟಿಯಾದರು. ಅವರ ನಂಬಿಗಸ್ಥ ಅನುಯಾಯಿ ಬಿ.ಎಚ್. ವರಾಳೆ ಅವರು ಹಾಸ್ಟೆಲ್ ಸೂಪರಿಂಟೆಂಡೆಂಟ್ ಆದರು. ರಮಾಬಾಯಿ ಅವರಿಗೆ ಈ ಹಾಸ್ಟೆಲ್ ಬಗ್ಗೆ ವಿಶೇಷ ಕಾಳಜಿ ಇತ್ತು.

1930ನೇ ನವೆಂಬರ್ 12ರಂದು ಲಂಡನ್‌ನಲ್ಲಿ ಪ್ರಾರಂಭವಾದ ಮೊದಲ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಹೋಗುವಾಗ ಅಂಬೇಡ್ಕರ್ ಅವರು ರಮಾಬಾಯಿ ಅವರನ್ನು ಧಾರವಾಡದಲ್ಲಿ ಬಿಟ್ಟುಹೋಗಿದ್ದರು.

1930ರಿಂದ 1935ರ ವರೆಗೂ ರಮಾಬಾಯಿಯವರು ಸತತವಾಗಿ ಬಂದು ಹಾಸ್ಟೆಲ್ ಮಕ್ಕಳನ್ನು ಕಾಳಜಿಯಿಂದ ನೋಡಿಕೊಂಡಿದ್ದಾರೆ. ರಮಾಬಾಯಿಯವರು ಒಂದು ಸಲ ಧಾರವಾಡಕ್ಕೆ ಬಂದಾಗ ಮಕ್ಕಳು ಉಪವಾಸವಿದ್ದುದು ತಿಳಿದು ಬಂದಿತು. ಮುನಸಿಪಾಲಿಟಿ ಅನುದಾನದ ರೇಷನ್ ಮುಗಿದಿದ್ದ ಕಾರಣ ವಾರ್ಡನ್ ಎಚ್.ಬಿ. ವರಾಳೆಯವರೂ ಅಸಹಾಯಕರಾಗಿದ್ದರು. ಆಗ ರಮಾಬಾಯಿಯವರು ಕೂಡಲೇ ಮಾರ್ಕೆಟ್‌ಗೆ ಹೋಗಿ ಗಿರವಿ ಅಂಗಡಿಯಲ್ಲಿ ಎರಡು ಬಂಗಾರದ ಬಳೆ ಮಾರಿ, ರೇಷನ್ ತಂದು ಹಾಸ್ಟೆಲ್ ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸಿದರು!

ಹಾಸ್ಟೆಲ್‌ಗಾಗಿ ಸಮಗಾರ ಸಮಾಜದ ಎಸ್.ಎನ್. ಶಿವತರಕರ್, ಡಿ.ವೈ. ಸಾಂಬ್ರಾಣಿ ಮುಂತಾದವರು ಕಾಳಜಿ ವಹಿಸಿದ್ದಾರೆ. ಸ್ಥಳೀಯ ಜಮೀನುದಾರ ಟಿ.ಟಿ. ಮುದರಡ್ಡಿ ಅವರು ಹಾಸ್ಟೆಲ್ ಕಟ್ಟಡಕ್ಕೆ 4,000 ರೂ. ದೇಣಿಗೆ ನೀಡಿದ್ದೊಂದು ವಿಶೇಷ.

ರಮಾಬಾಯಿಯವರು 1898ನೇ ಫೆಬ್ರವರಿ 7ರಂದು ಬಹಳ ಬಡತನದ ಕುಟುಂಬದಲ್ಲಿ ಜನಿಸಿದರು. ತಾಯಿ ರುಕ್ಮಿಣಿ. ತಂದೆ ಭಿಕು ಧೋತ್ರೆ (ವಲಂಗಕರ). ಅವರ ಜನ್ಮಸ್ಥಳ ರತ್ನಗಿರಿ ಜಿಲ್ಲೆಯ ದಾಪೋಲಿ ಬಳಿಯ ವಾನಂದ ಗ್ರಾಮ.

ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ನಂತರ ತಂದೆಯೂ ಮೃತಪಟ್ಟರು.

ಅಂಬೇಡ್ಕರರು ರಮಾಬಾಯಿಗೆ ರಾಮು ಎಂದು ಕರೆಯುತ್ತಿದ್ದರು. ರಮಾಬಾಯಿಯವರು ಸಾಬೇಬ್ ಎಂದು ಅಂಬೇಡ್ಕರರನ್ನು ಕರೆಯುತ್ತಿದ್ದರು. 1906ರಲ್ಲಿ ಮದುವೆಯಾಯಿತು. ಅವರ ಮದುವೆಯಾದಾಗ ಅಂಬೇಡ್ಕರರಿಗೆ 15 ವರ್ಷ ರಮಾಬಾಯಿಯವರಿಗೆ 9 ವರ್ಷ. ರಾತ್ರಿ ಮುಂಬೈ ಮೀನು ಮಾರ್ಕೆಟ್‌ನಲ್ಲಿ ಅವರ ಮದುವೆಯಾಯಿತು. ಮಂಬೈಯಲ್ಲಿ ಕಡು ಬಡವರ ಮದುವೆಗಳು ಹೀಗೆ ಖರ್ಚಿಲ್ಲದ ಜಾಗದಲ್ಲಿ ಆಗುತ್ತವೆ. ಕೆಲವೇ ಗಂಟೆಗಳಲ್ಲಿ ಮದುವೆ ಕಾರ್ಯ ಮುಗಿಯುತ್ತದೆ.

ನಿರಕ್ಷರಿ ಹೆಣ್ಣುಮಗಳಾದ ರಮಾಬಾಯಿಯವರು ಕುಳ್ಳು ಮಾರಿ ಮತ್ತು ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದು ಅಂಬೇಡ್ಕರ್‌ರನ್ನು ಓದಿಸಿದ್ದು ಹೃದಯಸ್ಪರ್ಶಿಯಾಗಿದೆ. ಅವರು ಅಂಬೇಡ್ಕರರನ್ನು ಬೆಳೆಸುವುದಕ್ಕಾಗಿ ತಮ್ಮ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದಿದ್ದಾರೆ. ಅವರ ತ್ಯಾಗಕ್ಕೆ ಸಾಟಿಯಿಲ್ಲ. ಮಕ್ಕಳ ಸಾವು ನೋವುಗಳನ್ನು ಸಹಿಸಿಕೊಂಡು ಅಂಬೇಡ್ಕರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಅವರ ಶಕ್ತಿ ಅಗಾಧವಾದುದು. ರಮಾಬಾಯಿಯವರು 1935ನೇ ಮೇ 27 ರಂದು ನಿಧನರಾದರು. ಅಂಬೇಡ್ಕರರು ರಮಾಬಾಯಿಯವರ ತ್ಯಾಗವನ್ನು ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ.

ಅಂಬೇಡ್ಕರ್‌ರಿಗೆ ಧಾರವಾಡದ ನಂಟು ಘನವಾಗಲು ಕೃಷಿ, ಅರಣ್ಯ, ಅಬಕಾರಿ, ಸಹಕಾರ, ಲೋಕೋಪಯೋಗಿ, ಸಂಸದೀಯ ವ್ಯವಹಾರಗಳ ಖಾತೆಗಳ ಜೊತೆ ಶಿಕ್ಷಣ ಸಚಿವರೂ ಆಗಿದ್ದ ಸರ್ ಸಿದ್ದಪ್ಪ ಕಂಬಳಿ ಅವರ ಆತ್ಮೀಯ ಸಂಬಂಧ ಕಾರಣವಾಯಿತು.

ಕಂಬಳಿಯವರು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಖ್ಯಾತ ವ್ಯಕ್ತಿಯಾಗಿದ್ದರು. ಮುಂಬೈ ವಿಧಾನ ಪರಿಷತ್ತಿನಲ್ಲಿ 27 ಮಂದಿ ಬ್ರಾಹ್ಮಣೇತರ ಗುಂಪಿನ ನಾಯಕರಾಗಿ ದೇಶದಲ್ಲಿ ಬ್ರಾಹ್ಮಣೇತರ ನಾಯಕತ್ವ ಬೆಳೆಸುವಲ್ಲಿ ತಲ್ಲೀನರಾಗಿದ್ದರು. ಕರ್ನಾಟಕದಿಂದ ಅವರೂ ಸೇರಿದಂತೆ ಮೂವರು ಮಾತ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಬೆಳಗಾವಿಯ ಷಣ್ಮುಖಪ್ಪ ಅಂಗಡಿ ಮತ್ತು ವಿಜಯಪುರದ ರಕ್ಕಸಗಿ ದೇಸಾಯಿಯವರು ಸಿದ್ದಪ್ಪ ಕಂಬಳಿಯವರ ಗುಂಪಿಗೆ ಸೇರಿದ್ದರು. ಹೊರಗಡೆಯಲ್ಲಿ ಸರ್ದಾರ ಮಹಬೂಬ್ ಅಲಿಖಾನ್ ಮತ್ತು ತಿಮ್ಮಪ್ಪ ಮುದರಡ್ಡಿ ಭಾರೀ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಬ್ರಾಹ್ಮಣೇತರ ಗುಂಪಿನ ಇನ್ನುಳಿದ 24 ಜನರು ಮಹಾರಾಷ್ಟ್ರ, ಗುಜರಾತ್ ಮತ್ತು ಸಿಂಧ್‌ನವರು. ಮರಾಠರು ಹಾಗೂ ಮುಸಲ್ಮಾನರು ಕಂಬಳಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಆ 24 ಮಂದಿಯಲ್ಲಿ ಅಂಬೇಡ್ಕರರೂ ಒಬ್ಬರಾಗಿದ್ದರು.

ಬಾಬಾಸಾಹೇಬರು ಮತ್ತು ಕಂಬಳಿಯವರ ಮಧ್ಯೆ ಆತ್ಮೀಯ ಸಂಬಂಧ ಬೆಳೆಯುವಲ್ಲಿ ಶಾಹು ಮಹಾರಾಜರ ಪಾತ್ರವೂ ಇದೆ. ಶಾಹೂ ಮಹಾರಾಜರು ಜಾತಿ ನಿರ್ಮೂಲನಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಕಂಬಳಿಯವರಲ್ಲಿ ಜಾತೀಯತೆಯ ಲವಲೇಶವೂ ಇರಲಿಲ್ಲ. ಹೀಗಾಗಿ ಬಾಬಾಸಾಹೇಬರು ಇವರಿಬ್ಬರನ್ನು ಬಹಳ ಮೆಚ್ಚಿಕೊಂಡಿದ್ದರು. ಮೂವರ ವಿಚಾರಧಾರೆ ಒಂದೇ ಆಗಿತ್ತು.

ಇಷ್ಟೆಲ್ಲ ಆತ್ಮೀಯತೆ ಇದ್ದರೂ ಸ್ವಕಾರ್ಯದ ವಿಚಾರ ಬಂದಾಗ ಅಂಬೇಡ್ಕರರು ಬಹಳ ಮುಜುಗರಕ್ಕೆ ಒಳಗಾಗುತ್ತಿದ್ದರು. ಒಂದು ಸಲ ಕಂಬಳಿಯವರು ತಮ್ಮ ನಿವಾಸದ ಕಚೇರಿ ಕೋಣೆಯಲ್ಲಿ ಇದ್ದಾಗ ಅಂಬೇಡ್ಕರರು ಬಂದರು. ಆದರೆ ನೇರವಾಗಿ ಒಳಗೆ ಹೋಗದೆ ಸಿಪಾಯಿ ಕೈಯಲ್ಲಿ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟರು. ಆಗ ಕಂಬಳಿಯವರು ತಕ್ಷಣವೇ ಹೊರ ಬಂದು ‘‘ವಿಸಿಟಿಂಗ್ ಕಾರ್ಡ್ ಕೊಟ್ಟು ನಾನು ಯಾರೋ ಎನ್ನುವಂತೆ ಮಾಡಿಬಿಟ್ಟಿರಿ’’ ಎನ್ನುತ್ತ ಬಾಬಾ ಸಾಹೇಬರನ್ನು ಒಳಗೆ ಕರೆದುಕೊಂಡು ಬಂದರು. ಪ್ರತಿಷ್ಠಿತ ಸರಕಾರಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಯನ್ನು ಅಂಬೇಡ್ಕರ್ ಬಯಸಿದ್ದರು. ಈ ವಿಷಯವನ್ನು ಅಂಬೇಡ್ಕರ್ ತಿಳಿಸಿದ ಮೇಲೆ ಕಂಬಳಿಯವರು ‘‘ನೀವು ಕಾಲೇಜಿಗೆ ಬರುವುದರಿಂದ ಕಾಲೇಜಿನ ಘನತೆ ಹೆಚ್ಚುತ್ತದೆ. ನೀವು ಲೆಕ್ಚರರ್ ಆಗ ಬಯಸಿದ್ದೀರಿ. ಆದರೆ ನಿಮ್ಮನ್ನು ಪ್ರೊಫೆಸರ್ ಆಗಿ ನೇಮಿಸುತ್ತೇನೆ’’ ಎಂದರು. ಅವರಿಗೆ ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿತ್ತು. ವೈದಿಕ ವ್ಯವಸ್ಥೆ ವಿರೋಧಿ ಚಿಂತಕರಾಗಿದ್ದ ಕಂಬಳಿಯವರು ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.

1875ರಲ್ಲಿ ಧಾರವಾಡದಲ್ಲಿ ಜನಿಸಿದ ಬಾಲು ಅಪ್ರತಿಮ ಕ್ರಿಕೆಟ್ ಆಟಗಾರರಾಗಿದ್ದರು. ಪುಣೆಯ ಡೆಕ್ಕನ್ ಜಿಮ್‌ಖಾನಾ ಮತ್ತು ಬ್ರಿಟಿಷ್ ಜಿಮ್‌ಖಾನಾ ಮಧ್ಯೆ ಪಂದ್ಯ ಏರ್ಪಟ್ಟಾಗ ಸವರ್ಣೀಯರು ಢೋರ್ ಸಮಾಜದ ಬಾಲುನನ್ನು ಅನಿವಾರ್ಯವಾಗಿ ಟೀಮ್‌ಗೆ ಸೇರಿಸಿಕೊಂಡರು. ಬಾಲುನಿಂದಾಗಿ ಡೆಕ್ಕನ್ ತಂಡ್ ಬ್ರಿಟಿಷ್ ತಂಡವನ್ನು ಸೋಲಿಸಲು ಸಾಧ್ಯವಾಯಿತು. ಪುಣೆಯ ಬ್ರಾಹ್ಮಣರು ಮತ್ತು ಇತರ ಸವರ್ಣೀಯರು ಬಾಲುನ ಮೆರವಣಿಗೆ ಮಾಡಿದರು. ನಂತರದ ದಿನಗಳಲ್ಲಿ ಬಾಲು ಅವರು ಅಂಬೇಡ್ಕರ್‌ರ ಅನುಯಾಯಿಯಾದರು. ಬ್ರಿಟಿಷ್ ಪ್ರಧಾನಿ ಮ್ಯಾಕ್‌ಡೊನಾಲ್ಡ್ 1932ನೇ ಆಗಸ್ಟ್ 14ರಂದು ಕಮ್ಯೂನಲ್ ಅವಾರ್ಡ್ ಘೋಷಿಸಿದಾಗ ಗಾಂಧೀಜಿ ಅದನ್ನು ವಿರೋಧಿಸಿ ಸೆಪ್ಟಂಬರ್ 24ರಂದು ಯರವಡಾ ಜೈಲಿನಲ್ಲಿ ಉಪವಾಸ ಕುಳಿತರು. ಆಮರಣ ಉಪವಾಸ ಬಿಡಿಸಲು ಅಂಬೇಡ್ಕರರು ಗಾಂಧೀಜಿ ಬಳಿ ಹೋದಾಗ ಬಾಲು ಕೂಡ ಅವರ ಜೊತೆ ಇದ್ದದ್ದು ಗಮನಾರ್ಹವಾಗಿದೆ. ಬಾಲು ನಿಧನರಾದಾಗ ಅಂಬೇಡ್ಕರರು ಧಾರವಾಡಕ್ಕೆ ಬಂದಿದ್ದರು.

1940ರ ಹೊತ್ತಿಗೆ ಅಂಬೇಡ್ಕರರು ಬೀಳಗಿ, ಕಲಬುರಗಿ, ಶಹಾಪುರ, ವಾಡಿ, ಕೋಲಾರ, ಮೈಸೂರು, ಬೆಂಗಳೂರು, ವಿಜಯಪುರ, ಇಂಡಿ, ಬರ್ಡೋಲ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ ದಾಖಲೆಗಳಿವೆ. 1950ರಲ್ಲಿ ಹೈದರಾಬಾದ್‌ಗೆ ಹೋಗುವುದಕ್ಕಾಗಿ ಮುಂಬೈ ಕರ್ನಾಟಕ ರೈಲಿನಲ್ಲಿ ಬಂದು ವಾಡಿಯಲ್ಲಿ ಇಳಿದು ನಿಜಾಮ ಸರಕಾರದ ರೈಲಿಗಾಗಿ ಕಾಯುತ್ತಿದ್ದರು. ಸಿಗ್ನಲ್‌ಮ್ಯಾನ್ ಮೂಲಕ ಈ ವಿಷಯ ಗೊತ್ತಾದ ಕೂಡಲೇ ಅಭಿಮಾನಿಗಳು ಬಂದು ಭಾಷಣದ ವ್ಯವಸ್ಥೆ ಮಾಡಿಸುತ್ತಾರೆ. ಇಂದು ಅದೇ ಸ್ಥಳದಲ್ಲಿ ಬಾಬಾಸಾಹೇಬರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 1950ರ ಹೊತ್ತಿಗೆ ಕೆ.ಜಿ.ಎಫ್. ಕಾರ್ಮಿಕರು ಕಟ್ಟಿದ ಬುದ್ಧ ವಿಹಾರ ನೋಡಲು ಬಂದಿದ್ದರು. ಹೀಗೆ ಬಾಬಾ ಸಾಹೇಬ ಅಂಬೇಡ್ಕರರು ಕನ್ನಡ ಮತ್ತು ಮರಾಠಿ ಪ್ರದೇಶಗಳ ಮಧ್ಯೆ ಸಾಂಸ್ಕೃತಿಕ ಸೇತುವೆಯೂ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಂಜಾನ್ ದರ್ಗಾ

contributor

Similar News