ವಚನ ವಿಶ್ವವಿದ್ಯಾಲಯ ಸ್ಥಾಪನೆ ಸ್ವಾಗತಾರ್ಹ ಕ್ರಮ

Update: 2024-03-11 06:36 GMT

ಮಾನ್ಯರೇ,

ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟ ಅಮೂಲ್ಯ ಕೊಡುಗೆ ವಚನ ಸಾಹಿತ್ಯ. ಬಸವಾದಿ ಶಿವಶರಣರು ತಮ್ಮ ನಡೆ-ನುಡಿಯ ಮೂಲಕ ಸಾಮಾಜಿಕ ಆಂದೋಲನ ಮಾಡುವುದರ ಜೊತೆಗೆ ತಮ್ಮ ನುಡಿಸಂಪತ್ತನ್ನು ಕೊಟ್ಟಿದ್ದಾರೆ. ಇಂದಿನ ಜಗತ್ತಿನ ಸಮಸ್ಯೆಗಳಿಗೆ ವಚನ ಸಾಹಿತ್ಯದ ಒಂದೊಂದು ಮಾತು ಪರಿಹಾರ ನೀಡಬಲ್ಲವು. ಅಲ್ಲದೆ ನಮ್ಮ ಭಾರತದ ಸಂವಿಧಾನದ ಎಲ್ಲಾ ತತ್ವ ಸಿದ್ಧಾಂತಗಳೂ ಸಹ ವಚನಗಳಲ್ಲಿ ಇವೆ. ಕಾಯಕ, ಪ್ರಸಾದ, ದಾಸೋಹದ ಮೌಲ್ಯಗಳನ್ನು ಶಿವಶರಣರು ಪರಿಣಾಮಕಾರಿಯಾಗಿ ಎತ್ತಿಹಿಡಿದಿದ್ದಾರೆ. ಅನುಭವ ಮಂಟಪದ ಮೂಲಕ ನಿಜವಾದ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ವಚನಕಾರರು. ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜವನ್ನು ನಿರ್ಮಾಣ ಮಾಡುವುದು ಬಸವಣ್ಣನವರ ಗುರಿಯಾಗಿತ್ತು. ಇಂಥ ಅದ್ಭುತ ಸಂದೇಶವನ್ನು ತಮ್ಮ ವಚನ ಸಾಹಿತ್ಯದ ಮೂಲಕ ಜನಸಮುದಾಯಕ್ಕೆ ಮುಟ್ಟಿಸುವಲ್ಲಿ ವಚನಕಾರರು ಯಶಸ್ವಿಯಾದರು. ಹೀಗಾಗಿ ವಚನಸಾಹಿತ್ಯವನ್ನು ಇನ್ನಷ್ಟು ಬೆಳಗಿಸುವ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿಗಳು ವಚನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಮೂಲಕ ನಾಡಿಗೆ ವೈಚಾರಿಕ ಪ್ರಜ್ಞೆಯನ್ನು ಬಿತ್ತಲು ದಿಟ್ಟಹೆಜ್ಜೆಯನ್ನು ಇಟ್ಟಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಿರಿಜಾಶಂಕರ್ ಜಿ.ಎಸ್., ಚಿತ್ರದುರ್ಗ

contributor

Similar News