21 ನೇ ಶತಮಾನಕ್ಕೆ ಬೇಕಾದ ಗಾಂಧಿ
ಜಗತ್ತಿನಲ್ಲಿ ಮನುಷ್ಯ ಮನುಷ್ಯರ ನಡುವೆ ಅಸಹನೆ ಹೆಚ್ಚುತ್ತಿದೆ. ಹೊಂದಾಣಿಕೆ, ಸೌಹಾರ್ದ ಎಂಬ ಅಮೂಲ್ಯ ಭಾವನೆಗಳು ವೇಗವಾಗಿ ಮರೆಯಾಗುತ್ತಿವೆ.
ಮನುಷ್ಯನ ಸ್ವಯಂಕೃತ ಅಪರಾಧಗಳ ಕಾರಣದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಭೂಮಿ ವೇಗವಾಗಿ ಬಿಸಿಯಾಗುತ್ತಿದೆ. ಬರ ಮತ್ತು ಪ್ರವಾಹಗಳು ಹಿಂದಿಂದೆಯೆ ಬಂದು ಅಪ್ಪಳಿಸುತ್ತಿವೆ.
ಜಾಗತಿಕ ಭಯೋತ್ಪಾದನೆ ಹೆಚ್ಚುತ್ತಿದೆ. ಜಗತ್ತು ನಾಯಕತ್ವ ಕಳೆದುಕೊಂಡಿದೆ. ಪ್ರಮುಖ ದೇಶಗಳ ನಾಯಕರು ಸರ್ವಾಧಿಕಾರಿಗಳಾಗುತ್ತಿದ್ದಾರೆ. ಇವರು ಸದಾ ಅಶಾಂತಿ, ಹಿಂಸೆ, ಯುದ್ಧಗಳಿಗೆ ಕರೆ ಕೊಡುತ್ತಿರುತ್ತಾರೆ. ತಮ್ಮ ದೇಶಗಳಲ್ಲಿ ದಮನಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರನ್ನು ಎತ್ತಿ ಕಟ್ಟುತ್ತಿರುತ್ತಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ತಾಂತ್ರಿಕ ಸಂಶೋಧನೆಯು ಮನುಷ್ಯರನ್ನು ನಿರುಪಯೋಗಿ ಜೀವಿಗಳನ್ನಾಗಿ ಮಾಡುತ್ತಿದೆ. ಮನುಷ್ಯ ಯಂತ್ರಗಳ ಗುಲಾಮನಾಗುತ್ತಿದ್ದಾನೆ.
ಮನುಷ್ಯರ ದುರಾಸೆಯ ಕಾರಣಕ್ಕೆ ಮುಂದಿನ ಎಷ್ಟೋ ತಲೆಮಾರುಗಳಿಗೆ ಬೇಕಾದ ಸಂಪನ್ಮೂಲಗಳು ವೇಗವಾಗಿ ಖಾಲಿಯಾಗುತ್ತಿವೆ.
ಈ 5 ಕಾರಣಗಳನ್ನು ಸ್ಟೀಫನ್ ಹಾಕಿಂಗ್ ಕೊಟ್ಟಿದ್ದಾನೆ. ಆತನ ಪ್ರಕಾರ ಮನುಷ್ಯ ಎಂಬ ಜೀವಿಯು ಉಳಿಯಬೇಕಾದರೆ ಬೇರೆ ಗ್ರಹಗಳನ್ನು ಹುಡುಕಿಕೊಳ್ಳಬೇಕು ಅಥವಾ ಇರುವ ಭೂಮಿಯನ್ನು ವೇಗವಾಗಿ ಮೊದಲಿನ ಸ್ಥಿತಿಗೆ ತರಬೇಕು ಎಂಬುದಾಗಿದೆ.
ಸ್ಟೀಫನ್ ಹಾಕಿಂಗ್ "Brief answers to the Big Questions' ಎಂಬ ಅಮೂಲ್ಯ ಪುಸ್ತಕದಲ್ಲಿ ಈ ಎಲ್ಲ ವಿಚಾರಗಳನ್ನು ಚರ್ಚಿಸಿದ್ದಾನೆ.
ಹಾಕಿಂಗ್‌ನ ಮೊದಲ ಆತಂಕಕ್ಕೆ:
ಗಾಂಧೀಜಿಯವರು ನಿರಂತರವಾಗಿ ಪ್ರತಿ ಪಾದಿಸುತ್ತಿದ್ದ ಅನೇಕ ವಿಚಾರಗಳು ಇಂದು ಅಂತರ್‌ರಾಷ್ಟ್ರೀಯ ನಿಯಮಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಅನ್ಯ ಧರ್ಮ-ಪಂಥಗಳ ಜನರ ಆಚಾರ-ವಿಚಾರ, ನಂಬಿಕೆಗಳ ಬಗ್ಗೆ ಗೌರವ, ಆಸಕ್ತಿ ತೋರುವುದು. ಗಾಂಧೀಜಿಯವರು ಈ ವಿಚಾರವನ್ನು ತಮ್ಮ ಜೀವಿತಾವಧಿಯುದ್ದಕ್ಕೂ ಜೀವನ್ಮರಣದಂತೆ ಪಾಲಿಸಿದ್ದರು. ಎಲ್ಲರನ್ನೂ ಒಳಗೊಂಡು ಬಾಳುವ, ಯಾರನ್ನೂ ಹೊರಗಿಡದೆ ‘ಇವ ನಮ್ಮವ’ ಎಂದು ಪರಿಭಾವಿಸಬೇಕು ಎಂದು ಪ್ರತಿಪಾದಿಸಿದ ಬುದ್ಧ, ಬಸವಣ್ಣ ಮುಂತಾದವರ ಆದರ್ಶಗಳನ್ನು ಗಾಂಧೀಜಿ ಬಾಯಿ ಮಾತಿನಲ್ಲಿ ಹೇಳದೆ ಜೀವನದಲ್ಲಿಯೂ ಅಳವಡಿಸಿಕೊಂಡರು.
ಗಾಂಧೀಜಿಯವರು ಬದುಕಿದ್ದ ಅವಧಿಯಲ್ಲಿಯೇ ಮೊದಲ ಮತ್ತು ಎರಡನೆಯ ಮಹಾಯುದ್ಧಗಳು ನಡೆದವು. ಈ ಯುದ್ಧದಲ್ಲಿ ಕೋಟ್ಯಂತರ ಸಾವು ನೋವುಗಳು ಸಂಭವಿಸಿದವು. ಪ್ರಪಂಚದ ಉತ್ತರ ಭಾಗದವರು ದಕ್ಷಿಣ ಭಾಗವನ್ನು ವಸಾಹತುವಾದದ ಹೆಸರಲ್ಲಿ ಲೂಟಿ ಹೊಡೆದರು. ಜಗತ್ತು ಕಂಡು ಕೇಳರಿಯದ ಮಟ್ಟಿಗೆ ರೋಗ ರುಜಿನಗಳಿಗೆ ತುತ್ತಾಯಿತು. ಇವುಗಳೆಲ್ಲದರ ಜೊತೆಗೆ ಹೊಸದಾಗಿಯೆಂಬಂತೆ ಅಸಂಖ್ಯಾತ ಕೋಮು ಸಂಘರ್ಷಗಳು ನಡೆದವು.
ಇದನ್ನೆಲ್ಲ ಗಮನಿಸಿದ್ದ ಗಾಂಧೀಜಿಯವರು ಎಲ್ಲದ್ದಕ್ಕಿಂತ ಕೋಮು ಸಾಮರಸ್ಯ ಬಹಳ ಮುಖ್ಯ ಎಂದು ಹೇಳಿದ್ದರು.
ಕೋಮು ವಿಚಾರದಲ್ಲಿ ಇಂದು ಇಡೀ ಜಗತ್ತೇ ಕೊತ ಕೊತ ಕುದಿಯುತ್ತಿದೆ. ಹಿಂದೂ-ಮುಸ್ಲಿಮ್, ಬೌದ್ಧ-ಮುಸ್ಲಿಮ್ ಶ್ರೀಲಂಕಾ ಮುಂತಾದ ಕಡೆ, ಕ್ರೈಸ್ತ- ಮುಸ್ಲಿಮ್, ಯಹೂದಿ-ಮುಸ್ಲಿಮ್ ಮುಂತಾಗಿ ಜಗತ್ತು ಹಲವು ಬಿರುಕುಗಳಲ್ಲಿ ಸಿಲುಕಿಕೊಂಡಿದೆ. ಅನೇಕ ಕಡೆ ಯುದ್ಧಗಳು ನಡೆಯುತ್ತಿವೆ.
ಪರಸ್ಪರ ಹೊಂದಾಣಿಕೆ, ತಿಳಿವಳಿಕೆ, ಸಹನೆ, ಔದಾರ್ಯತೆಗಳು ನೆಲೆಸದಿದ್ದರೆ ಒಂದು ದಿನ ಮನುಷ್ಯರು ಭಾಷೆ, ಬುಡಕಟ್ಟು, ಜಾತಿ, ಧರ್ಮ ಮುಂತಾದ ವಿಷಯಗಳಿಗಾಗಿಯೆ ಹೊಡೆದಾಡಿಕೊಂಡು ನಾಶವಾಗುವ ಭೀತಿ ಎದುರಾಗಿದೆ.
ಗಾಂಧೀಜಿಯವರು ಪದೇ ಪದೇ ಕೋಮು ಸೌಹಾರ್ದದ ಕುರಿತು ಮಾತನಾಡಿದ್ದರು. ಆಚರಣೆಯಲ್ಲಿಯೂ ಅವುಗಳನ್ನು ಅಳವಡಿಸಿಕೊಂಡಿದ್ದರು. ಅವರ ಪ್ರಯೋಗಗಳು 21ನೇ ಶತಮಾನದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತತೆ ಪಡೆದುಕೊಳ್ಳುತ್ತಿವೆ.
ಕೋಮು ಸೌಹಾರ್ದ ಸಾಧ್ಯವಾಗಬೇಕಾದರೆ ಆಯಾ ದೇಶದಲ್ಲಿನ ಯಾವುದೇ ರೀತಿಯ ಅಲ್ಪ ಸಂಖ್ಯಾತರ ಹಿತಾಸಕ್ತಿಯನ್ನು, ಸಂಸ್ಕೃತಿ, ಭಾಷೆ, ಆಸ್ತಿ-ಪಾಸ್ತಿಗಳನ್ನು ರಕ್ಷಿಸಬೇಕು. ಈ ವಿಚಾರ ಕೂಡ ಇಂದು ಅಂತರ್‌ರಾಷ್ಟ್ರೀಯ ಸನದ್ದಾಗಿದೆ.
ಭಾರತದಲ್ಲಿ ಜಾತಿಯು ಸಮಗ್ರ ರೂಪದ ಶಾಪವಾಗಿದೆ
ಎಂದು ಎರಡನೆಯ ಹಂತದಲ್ಲಿ ಗಾಂಧೀಜಿಯವರಿಗೆ ಮನವರಿಕೆಯಾಯಿತು. ಜಾತಿಯು ಕೆಲವರಿಗೆ ಸಾಮಾಜಿಕ ಸಂಪತ್ತು. ಆ ಸಂಪತ್ತನ್ನು ಬಳಸಿಕೊಂಡೇ ಕೆಲವರು ರಾಜಕೀಯ-ಆರ್ಥಿಕ ಯಜಮಾನಿಕೆಯನ್ನು ಗಳಿಸಿಕೊಂಡಿದ್ದಾರೆ. ಯಾರಿಗೆ ಇದು ಸಾಧ್ಯವಾಗುವುದಿಲ್ಲವೊ ಅವರು ಶಾಶ್ವತವಾಗಿ ಗುಲಾಮಗಿರಿಯಲ್ಲಿಯೇ ಇರಬೇಕಾಗುತ್ತದೆ. ಹಾಗಾಗಿ ಜನರಲ್ಲಿ ಜಾತಿ ಪ್ರಜ್ಞೆಯನ್ನು ಹೋಗಲಾಡಿಸಲು ಗಾಂಧೀಜಿ ನಿರಂತರ ಪ್ರಯತ್ನ ಮಾಡಿದರು. ಜಾತಿ ವ್ಯವಸ್ಥೆಯಂತೆಯೆ ಬ್ರಿಟಿಷರು ಬಣ್ಣದ ಆಧಾರದ ಮೇಲೆ ಶ್ರೇಷ್ಠ-ಕನಿಷ್ಠ, ಆಳುವವನು-ಆಳಿಸಿಕೊಳ್ಳುವವನು ಎಂಬ ತತ್ವವನ್ನು ಮಾಡಿ ಭಾರತೀಯರನ್ನು, ಏಶ್ಯನ್ನರನ್ನು, ಆಫ್ರಿಕನ್ನರನ್ನು ಆಳಿದರು. ಹಾಗಾಗಿ ಶ್ರೇಷ್ಠ-ಕನಿಷ್ಠ ಎಂಬ ತಾರತಮ್ಯ ಮನೋಭಾವಗಳು ಮೊದಲು ತೊಲಗಬೇಕು ಎಂದು ಗಾಂಧೀಜಿ ಹೇಳಿದ್ದರು. ಈಗಲೂ ಜಾತಿ-ವರ್ಣ, ವರ್ಗ ಸಮಸ್ಯೆಗಳು ಮೊದಲಿಗಿಂತಲೂ ತೀವ್ರಗೊಂಡಿವೆ. ಆದ್ದರಿಂದ ಗಾಂಧೀಜಿ ಮೊದಲಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದ್ದಾರೆ.
ಬಹುಶಃ ಈ ಹಿನ್ನೆಲೆಯಲ್ಲಿಯೆ ಐನ್‌ಸ್ಟೈನ್ ಎಂಬ ವಿಜ್ಞಾನಿ ಗಾಂಧೀಜಿ ಪ್ರತಿಪಾದಿಸುತ್ತಿರುವ Inclusiveness and Non Violence ಎಂಬ ವಿಚಾರಗಳು ಮಾತ್ರ ಮನುಷ್ಯ ಕುಲಕ್ಕೆ ಆಶಾವಾದಿಯಾಗಿವೆ ಎಂದು ಹೇಳಿದ್ದಾನೆ.
ಜಾಗತಿಕ ಪರಿಸರ ಬಿಕ್ಕಟ್ಟುಗಳು ಎಂಬ ಹಾಕಿಂಗ್‌ನ ಎರಡನೆಯ ಆತಂಕ ಸರಿಯಾಗಿದೆ.
ಹಾಕಿಂಗ್‌ನ ಮಾತುಗಳನ್ನು ಓದಿದ ಮೇಲೆ ನನಗೆ ನಿಜಕ್ಕೂ ಮುಂದಿನ ದಿನಗಳ ಬಗ್ಗೆ ಆತಂಕವಾಗುತ್ತಿದೆ. ಇಡೀ ಜಗತ್ತಿನ ಪ್ರಕೃತಿ ಭೀಕರವಾಗಿ ದಣಿದಿದೆ. ಪ್ರಕೃತಿಯ ಮೇಲಿನ ಹಲ್ಲೆಯಿಂದಾಗಿ ಅದು ಕೋಪಗೊಂಡಿದೆ. ನಮ್ಮ ಪಶ್ಚಿಮ ಘಟ್ಟಗಳ ಮೇಲೆ ವಿಪರೀತ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಇಡೀ ಬೆಟ್ಟ ಗುಡ್ಡಗಳೆ ಕರಗಿ ನೀರಿನಂತೆ ಹರಿಯುತ್ತಿವೆ. ಕೇರಳದಲ್ಲಿ, ನಮ್ಮ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಗಳು ಇದಕ್ಕೆ ಸಾಕ್ಷಿ. ನಮ್ಮ ರಾಜಕಾರಣಿಗಳು ಈಗಲೂ ಓಟಿನ ರಾಜಕಾರಣಕ್ಕೆ ಕ್ಷುಲ್ಲಕ ರಾಜಕಾರಣ ಮಾಡುತ್ತಾ ಕೂತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮಳೆ ಬರುವುದಿಲ್ಲ ಎಂದು ಜನರಲ್ಲಿ ಹುಸಿ ನಂಬಿಕೆಯನ್ನು ಬಿತ್ತಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ತಮ್ಮ ಅಧಿಕಾರ ದಾಹಕ್ಕಾಗಿ ಜನರನ್ನು ಶಾಶ್ವತ ಮೌಢ್ಯದಲ್ಲಿ ಬೀಳಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಮಾಧ್ಯಮಗಳೂ ತುಪ್ಪ ಸುರಿಯುತ್ತವೆ.
ಆದರೆ ಆಗುತ್ತಿರುವುದೇನು? ಪೆಸಿಫಿಕ್ ಸಾಗರದಲ್ಲಿ ಉಂಟಾಗುವ ಉಷ್ಣ ಮತ್ತು ಶೀತ ಪ್ರವಾಹಗಳು-ಎಲ್ ನಿನೊ ಮತ್ತು ಲಾನಿನೊ ಜಗತ್ತಿನಲ್ಲಿ ಮಳೆ, ಪ್ರವಾಹ, ಬರಗಳಿಗೆ ಕಾರಣವಾಗುತ್ತಿದೆ. ಜಗತ್ತಿನ ಮನುಷ್ಯರು ತಮ್ಮ ಸ್ವಾರ್ಥ, ದುರಾಸೆಗಳ ಕಾರಣಕ್ಕಾಗಿ, ಐಷಾರಾಮಿ ಜೀವನಗಳಿಗಾಗಿ ಕಾಡು ಕಡಿದು, ಬೆಟ್ಟ ಬಗೆದು ರಸ್ತೆ ಮಾಡಿ, ಡೀಸೆಲ್, ಪೆಟ್ರೋಲ್ ಉರಿಸಿ ಕಾರ್ಬನ್ ಡೈಆಕ್ಸೈಡ್ ಮುಂತಾದ ವಿಷಕಾರಿ ಹೊಗೆ ಬಿಟ್ಟು ಭೂಮಿಯನ್ನು ಮರುಭೂಮಿ ಮಾಡುತ್ತಿದ್ದಾರೆ. ಇದರಿಂದ ಭೂಮಿ ವೇಗವಾಗಿ ಬಿಸಿಯಾಗುತ್ತಿದೆ. ಇದು ಎಲ್-ನಿನೊ, ಲಾ-ನಿನೊಗಳಿಗೆ ಕಾರಣವಾಗುತ್ತಿದೆ. ಮನುಷ್ಯನ ಆರೋಗ್ಯಕಾರಕ ಬದುಕಿಗೆ ಪ್ರಕೃತಿಯ ಆರೋಗ್ಯ ಬಹಳ ಮುಖ್ಯ ಎಂಬ ಕಾರಣದಿಂದಾಗಿ ಗಾಂಧೀಜಿಯವರು ‘‘ಈ ಭೂಮಿಯು ಎಲ್ಲರ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ದುರಾಸೆಗಳನ್ನಲ್ಲ’’ ಎಂದು ಹೇಳಿದ್ದರು. 21ನೇ ಶತಮಾನದ ಈ ದಿನಗಳಲ್ಲಿ ಗಾಂಧೀಜಿಯವರ ಈ ಮಾತು ಹಿಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.
ಹಾಕಿಂಗ್‌ನ 4ನೇ ಆತಂಕ; ಮನುಷ್ಯನನ್ನು ಭೂಮಿ ಮೇಲಿನಿಂದ ಅಳಿಸಿ ಹಾಕಲು ನಿಂತಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್;
ಜಗತ್ತು ಇಂದು ತಾಂತ್ರಿಕವಾಗಿ ಅನೇಕ ಆವಿಷ್ಕಾರಗಳನ್ನು ಮಾಡಿದೆ. ಮನುಷ್ಯರು ಮಾಡುವ ಕೆಲಸಗಳನ್ನು ರೊಬೋಟ್‌ಗಳೆಂಬ ಯಂತ್ರಗಳೇ ಮಾಡಲು ಪ್ರಾರಂಭಿಸಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದನ್ನು ಕೃತಕ ಬುದ್ಧಿಮತ್ತೆ ಎಂದೂ ಕರೆಯಲಾಗುತ್ತಿದೆ ಎಂಬುದು ಮನುಷ್ಯರನ್ನು ನಿಯಂತ್ರಿಸುವ ದಿನಗಳು ಬಂದಿವೆ. ಮನುಷ್ಯ ಯಂತ್ರಗಳ ಗುಲಾಮನಾಗುತ್ತಿದ್ದಾನೆ. ಮನುಷ್ಯರ ಘನತೆ-ಗೌರವಗಳು ಮಣ್ಣು ಪಾಲಾಗುತ್ತಿವೆ. ಕಾರ್ಪೊರೇಟ್ ಬಂಡವಾಳಿಗ ಕುಳಗಳು ಯಂತ್ರಗಳನ್ನು ಆಧರಿಸಿದ ಉತ್ಪಾದನಾ ವಿಧಾನವನ್ನು ಹೆಚ್ಚೆಚ್ಚು ಬಳಸಲಾರಂಭಿಸಿದ್ದಾರೆ. ಇದರಿಂದಾಗಿ ವ್ಯಾಪಕ ನಿರುದ್ಯೋಗ, ಅಶಾಂತಿಗಳಿಗೆ ಕಾರಣವಾಗುತ್ತಿದೆ. ಇದರಿಂದ ಜಗತ್ತು ಡಿಜಿಟಲ್ ಡಿಕ್ಟೇಟರ್‌ಶಿಪ್ ಕಡೆಗೆ ನಡೆಯುತ್ತಿದೆ ಎಂಬುದು ಎಲ್ಲ ಮಾನವತಾವಾದಿಗಳ ಆತಂಕ.
ಜಗತ್ತಿನಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ತೀವ್ರವಾಗಿ ಹೆಚ್ಚುತ್ತಿದೆ. ಅಸಮಾನತೆಯ ವಿಷಯದಲ್ಲಿ ಭಾರತ ಮತ್ತು ಜಗತ್ತಿನ ಪರಿಸ್ಥಿತಿ ಭಿನ್ನವಾಗಿಲ್ಲ. ಹಲವು ಅಧ್ಯಯನಗಳ ಪ್ರಕಾರ ಶೇ.1ರಷ್ಟು ಜನರ ಬಳಿ ಶೇ.50ರಷ್ಟು ಸಂಪತ್ತು ಶೇಖರವಾಗಿದೆ. ಶೇ.10ರಷ್ಟು ಜನರ ಬಳಿ ಶೇ.85ರಷ್ಟು ಸಂಪತ್ತು ಶೇಖರಣೆಗೊಂಡಿದೆ. ಯಂತ್ರ ನಾಗರಿಕತೆಯ ಕಾರಣಕ್ಕೆ ಬಡತನ ಹೆಚ್ಚಾಗುತ್ತದೆ. ಅಸಮಾನತೆ, ಅಶಾಂತಿಗಳು ಹೆಚ್ಚುತ್ತವೆ ಎಂಬುದನ್ನು ಗಾಂಧೀಜಿ ಮನಗಂಡಿದ್ದರು. ಗಾಂಧೀಜಿಯವರ ಆತಂಕ ಇಂದು ಸಂಪೂರ್ಣವಾಗಿ ನಿಜವಾಗಿದೆ ಎಂದು ಸಾಬೀತಾಗುತ್ತಿದೆ.
ಗಾಂಧೀಜಿ 1909ರ ವೇಳೆಗೆ ಬರೆದ ‘ಹಿಂದ್ ಸ್ವರಾಜ್’ ಎಂಬ ಕೃತಿಯಲ್ಲಿ ಮನುಷ್ಯ ಘನತೆಯಿಂದ ಬಾಳಬೇಕಾದರೆ ಮಾಡಬೇಕಾದುದೇನು? ಎಂದು ವಿವರವಾಗಿ ಚರ್ಚಿಸಿದ್ದಾರೆ. ಅದರಲ್ಲಿ ಗಾಂಧೀಜಿ ಯಂತ್ರಗಳು ಮನುಷ್ಯನ ನಿಯಂತ್ರಣದಲ್ಲಿರಬೇಕು. ಸಾಧ್ಯವಾದಷ್ಟು ಮನುಷ್ಯನ ಕೈ ಕಾಲುಗಳಿಗೆ ಶ್ರಮ ಕೊಡುವ ಸರಳ ಯಂತ್ರಗಳಾದ ನೇಗಿಲು, ಚರಕ, ರಾಟೆ ಮುಂತಾದವುಗಳು ಮಾತ್ರ ಇರಲಿ ಎಂದಿದ್ದಾರೆ. ಆದರೆ ಬೃಹತ್ ನಾಗರಿಕತೆಯು ಇಂದು ಗಾಂಧೀಜಿಯಂತವರ ವಿಚಾರಗಳನ್ನು ಸಂಪೂರ್ಣವಾಗಿ ನಾಶಗೊಳಿಸಿ.
ಅನೇಕ ಸಾರಿ ನಾನು ಗಾಂಧೀಜಿ ಯಾಕೆ ಈ ಮಾತುಗಳನ್ನು ಹೇಳಿರಬಹುದು ಎಂದು ಯೋಚಿಸುತ್ತೇನೆ. ಮುಂಬೈ, ಲಂಡನ್, ಡರ್ಬಾನ್ ಮುಂತಾದ ನಗರಗಳನ್ನು ನೋಡಿದ್ದ ಗಾಂಧೀಜಿಯವರಿಗೆ ನಗರೀಕರಣದ ವಿಕೃತಿಗಳೆಲ್ಲವೂ ಅರ್ಥವಾಗಿದ್ದವು.
ಉದಾಹರಣೆಗೆ ಅಂದಿನ ಭಾರತದ ಮೊದಲ ರೈಲು ಪ್ರಾರಂಭವಾಗಿದ್ದು 1853ರಲ್ಲಿ. ಮೊದಲ ಕಾರ್ಖಾನೆ ಆಧುನಿಕ ಹತ್ತಿ ಗಿರಣಿ ಪ್ರಾರಂಭವಾಗಿದ್ದು 1854ರಲ್ಲಿ ದೇಶದಲ್ಲಿ ಮೊದಲ ವಿದ್ಯುತ್ ಪ್ರಾರಂಭವಾಗಿದ್ದು 1905ರಲ್ಲಿ. ಮೊದಲ ಬಸ್ ಸಂಚಾರ ಪ್ರಾರಂಭವಾಗಿದ್ದು 1926ರಲ್ಲಿ. ಮೊದಲ ವಿಮಾನ 1911ರಲ್ಲಿ. ವಿದ್ಯುತ್, ರೈಲು, ಬಸ್ಸು, ವಿಮಾನಗಳು ಬಂದ ಮೇಲೆ ದೇಶವನ್ನು ವೇಗವಾಗಿ ಲೂಟಿ ಹೊಡೆದು ಸಾಗಿಸಲು ಸಾಧ್ಯವಾಯಿತು.
ಇದರ ಜೊತೆಗೆ ಗಾಂಧೀಜಿಯವರಿಗೆ ತಾಂತ್ರಿಕತೆಯ ಪ್ರಗತಿ ಮತ್ತು ನಗರೀಕರಣಗಳ ಕುರಿತು ಹಲವು ರೀತಿಯ ತಕರಾರುಗಳಿದ್ದವು. ಮನುಷ್ಯ ಮಾನಸಿಕವಾಗಿ ಬದಲಾವಣೆ ಹೊಂದದೆ, ಆಧುನಿಕನಾಗದೆ ಭೌತಿಕವಾಗಿ ಮಾತ್ರ ಬದಲಾವಣೆಯಾದರೆ ಅದರ ವಿಕೃತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಗಾಂಧೀಜಿ ನಂಬಿದ್ದರು. ಆಧುನೀಕರಣ ಮತ್ತು ಕೈಗಾರಿಕೀಕರಣಗಳು ಮನುಷ್ಯನ ಚೈತನ್ಯವನ್ನು ಹಾಳು ಮಾಡುತ್ತವೆ ಎಂದು ಅವರು ನಂಬಿದ್ದರು.
ಭಾರತದಲ್ಲಿ ಬಲಪಂಥೀಯರೆಂದು ಕರೆಸಿಕೊಳ್ಳುತ್ತಿರುವ ಬಿಜೆಪಿ, ಆರೆಸ್ಸೆಸ್, ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಸಂಘಟನೆಗಳು, ಜರ್ಮನಿಯ ನಾಜಿ, ಇಟಲಿಯ ಫ್ಯಾಸಿಸ್ಟ್ ಸಂಘಟನೆಗಳಂತೆಯೇ ಮನುಷ್ಯ ಕುಲಕ್ಕೆ ಅಪಾಯಕಾರಿಯಾಗಿವೆ. ಇದೇ ಮನಸ್ಥಿತಿಯ ಜನರೇ ಗಾಂಧೀಜಿಯವರನ್ನು ಕೊಲೆ ಮಾಡಿದರು.
ಜಗತ್ತಿನಲ್ಲಿರುವ ಎಲ್ಲ ಧಾರ್ಮಿಕ ಸಂಘಟನೆಗಳು, ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ರಾಜಕೀಯ ಪಕ್ಷಗಳು ಮನುಷ್ಯ ಕುಲಕ್ಕೆ ಕಂಟಕಗಳಾಗಿವೆ. ಈ ಬಲಪಂಥೀಯವೆನ್ನಿಸಿಕೊಂಡಿರುವ ಸಂಘಟನೆಗಳು ಧರ್ಮಾಂದವಾಗಿವೆ. ಇಸ್ಲಾಂನಲ್ಲೂ ಇವೆ, ಬೌದ್ಧರಲ್ಲೂ ಇವೆ, ಕ್ರಿಶ್ಚಿಯನ್ನರಲ್ಲೂ ಇವೆ. ಇವು ಆಯಾ ದೇಶದ ಅಲ್ಪ ಸಂಖ್ಯಾತರ ವಿರುದ್ಧ, ಅಂಚಿನ ಸಮುದಾಯಗಳ ವಿರುದ್ಧ, ಮಹಿಳೆಯರ ವಿರುದ್ಧ ಇರುತ್ತವೆ. ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳು ಎಂದೇ ಭಾವಿಸುತ್ತವೆ. ಹಾಗಾಗಿ ಇವುಗಳನ್ನು ತಿರಸ್ಕರಿಸದಿದ್ದರೆ ಮನುಷ್ಯ ಕುಲಕ್ಕೆ ಅಪಾಯಕಾರಿಯಾಗುತ್ತವೆ. ಈಗಾಗಲೆ ಅಂಥ ಹಾದಿಯಲ್ಲಿವೆ.
ದೇಶದಲ್ಲಿ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಗಾಂಧೀಜಿಯನ್ನು ಕೊಂದದ್ದು ಸರಿ ಎಂಬ ವಾದವನ್ನು ಆಗಾಗ ಮಂಡಿಸುತ್ತವೆ. ಗೋಡ್ಸೆಯನ್ನು ಆರಾಧಿಸುತ್ತವೆ. ಭಾರತದಲ್ಲಿ ಗಾಂಧೀಜಿಯವರ ಕೊಲೆಯ ಮೂಲಕ ವಿಶ್ವದ ಮನುಷ್ಯರ ವಿನಾಶಕ್ಕೆ ಬರೆದ ಮುನ್ನುಡಿ ಎಂದು ನಾನು ಭಾವಿಸಿದ್ದೇನೆ.
ಮಹಾತ್ಮ್ಮಾ ಗಾಂಧೀಜಿಯವರ ಬೋಧನೆಗಳು ಮತ್ತು ತತ್ವಗಳು ಕಾಲ ಮತ್ತು ಗಡಿಗಳನ್ನು ಮೀರಿದ್ದು. ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜಗತ್ತಿನಾದ್ಯಂತ ನಡೆದ ಚಳವಳಿಗಳ ಮೇಲೆ ಪ್ರಭಾವ ಬೀರಿವೆ. ಗಾಂಧೀಜಿಯವರ ದೃಷ್ಟಿಕೋನ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿರಲಿಲ್ಲ; ಇದು ಸತ್ಯ, ಅಹಿಂಸೆ ಮತ್ತು ಕರುಣೆಯ ತತ್ವಗಳ ಮೂಲಕ ಮಾನವೀಯತೆಯನ್ನು ಮೇಲಕ್ಕೆತ್ತುವ ಸಾರ್ವತ್ರಿಕ ದೃಷ್ಟಿಕೋನವಾಗಿದೆ.
ಗಾಂಧೀಜಿಯವರ ತತ್ವಗಳು 21ನೇ ಶತಮಾನದಲ್ಲೂ ಪ್ರಸ್ತುತವಾಗಿವೆ. ಪ್ರಪಂಚವು ಹೆಚ್ಚುತ್ತಿರುವ ಅಸಮಾನತೆ, ಪರಿಸರದ ಅವನತಿ, ಸಂಘರ್ಷಗಳು ಮತ್ತು ಬೆಳೆಯುತ್ತಿರುವ ಸಾಮಾಜಿಕ ಪರಕೀಯತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಗಾಂಧೀಜಿಯವರ ಶಾಂತಿ, ನ್ಯಾಯ, ಭ್ರಾತೃತ್ವ ಮತ್ತು ಸುಸ್ಥಿರ ಅಭಿವೃದ್ಧಿಯ ಆದರ್ಶಗಳು ಭರವಸೆಯ ದಾರಿದೀಪವನ್ನು ನೀಡುತ್ತವೆ.
ಗಾಂಧೀಜಿಯವರ ಪ್ರಜಾಪ್ರಭುತ್ವದ ಕಲ್ಪನೆಯು ಅಹಿಂಸೆಯ ಮೇಲಿನ ಅವರ ನಂಬಿಕೆಯೊಂದಿಗೆ ಆಳವಾಗಿ ಬೆಸೆದುಕೊಂಡಿತ್ತು. ಪ್ರಜಾಪ್ರಭುತ್ವದ ಶಕ್ತಿಯು ಜನರ ಇಚ್ಛೆಯನ್ನು ಎತ್ತಿಹಿಡಿಯುವ ಸಾಮರ್ಥ್ಯದಲ್ಲಿದೆ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ನಿಜವಾದ ಪ್ರಜಾಸತ್ತಾತ್ಮಕ ಆಡಳಿತವನ್ನು ಸಾಧಿಸಬಹುದು ಎಂದು ಅವರು ಬಲವಾಗಿ ನಂಬಿದ್ದರು.
ನಾವು ಇಂದು ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡುತ್ತಿರುವ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರಜಾಸತ್ತಾತ್ಮಕ ಜನಾದೇಶವನ್ನು ಕಡೆಗಣಿಸಿ, ಬಹುಮತ ಹೊಂದಿರುವ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುತ್ತಿದೆ. ಜನರ ಶಕ್ತಿ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಪಾವಿತ್ರ್ಯವನ್ನು ಪ್ರತಿಪಾದಿಸಿದ ಗಾಂಧೀಜಿಯವರು, ಇಂತಹ ಕ್ರಮಗಳನ್ನು ನಿಸ್ಸಂದೇಹವಾಗಿ ವಿರೋಧಿಸುತ್ತಿದ್ದರು.
ಗಾಂಧೀಜಿಯವರು ಯಾವುದೇ ಸಮಾಜವನ್ನು ಅದು ಅತ್ಯಂತ ದುರ್ಬಲ ವರ್ಗದವರನ್ನು ಹಾಗೂ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರಿಂದ ಅಳೆಯಬಹುದು ಎಂದು ನಂಬಿದ್ದರು. ಗಾಂಧೀಜಿಯವರ ನ್ಯಾಯದ ಅನ್ವೇಷಣೆಯು ಇಂದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸಬೇಕು ಎಂಬುದಾಗಿತ್ತು. ದುರ್ಬಲರನ್ನು ಮೇಲಕ್ಕೆತ್ತದಿದ್ದರೆ ಸಮಾಜದ ಪ್ರಗತಿ ಅರ್ಥಹೀನ ಎಂಬುದು ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆ.
ಗಾಂಧೀಜಿಯವರದು ಕೇವಲ ರಾಜಕೀಯ ಸ್ವಾತಂತ್ರ್ಯದ ಕಲ್ಪನೆಯಾಗಿರಲಿಲ್ಲ; ಬದಲಾಗಿ, ಪ್ರತಿಯೊಬ್ಬ ವ್ಯಕ್ತಿಯ, ವಿಶೇಷವಾಗಿ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿತ್ತು. ಅವರು ಕನಸು ಕಂಡಿದ್ದು-ಮಧ್ಯರಾತ್ರಿಯಲ್ಲಿ ಮಹಿಳೆ ನಿರ್ಭಯವಾಗಿ ನಡೆಯಬಹುದಾದ ನಿಜವಾದ ಸ್ವಾತಂತ್ರ್ಯವನ್ನು.
ದೇಶ ಇಂದು ಎಷ್ಟೇ ಸಾಧನೆ ಮಾಡಿದ್ದರೂ, ಮಹಿಳೆಯರು ಇಂದಿಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕ್ರೂರ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಗಾಂಧೀಜಿಯವರ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ತಲುಪುವಲ್ಲಿ ನಾವು ಇನ್ನೂ ದೂರ ಸಾಗಬೇಕಾಗಿದೆ ಎಂಬುದನ್ನು ಹೇಳುತ್ತವೆ. ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಭಯಭೀತರಾಗಿ ಬದುಕುವವರೆಗೂ ನಾವು ಇನ್ನೂ ನಿಜವಾಗಿಯೂ ಸ್ವತಂತ್ರರಾಗುವುದಿಲ್ಲ. ಇಂದಿನ ಗಾಂಧೀಜಿ, ಲಿಂಗ ಸಮಾನತೆಯ ಹೋರಾಟವನ್ನು ಮುಂದುವರಿಸಲು, ಮಹಿಳೆಯರು ಘನತೆ, ಭದ್ರತೆ ಮತ್ತು ಸ್ವಾತಂತ್ರ್ಯದಿಂದ ಬದುಕುವ ಸಮಾಜವನ್ನು ರಚಿಸಲು ನಮಗೆ ಸವಾಲು ಹಾಕುತ್ತಾರೆ.
ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ಭೀಕರ ಹಿಂಸಾಚಾರದ ಸಂದರ್ಭದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಮೌನವನ್ನು ಗಮನಿಸಬೇಕಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರಂತಹ ವ್ಯಕ್ತಿಗಳಿಗೆ ಅವರ ಮೌನ ಬೆಂಬಲವನ್ನು ಗಮನಿಸಬೇಕಾಗಿದೆ. ನಿರ್ಧಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳದೆ, ಬಿಜೆಪಿಯು ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಹಿಸಿಕೊಳ್ಳುವ ಮತ್ತು ಶಾಶ್ವತವಾಗಿ ಬೆಳೆಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ. ಗಾಂಧೀಜಿಯವರು ಇಂತಹ ಉದಾಸೀನತೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು ಮತ್ತು ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆಗಾಗಿ ನಿಲ್ಲುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು. ಗಾಂಧೀಜಿಯವರು ಯಾವುದೇ ರೀತಿಯ ಹಿಂಸಾಚಾರವನ್ನು ಖಂಡಿಸುತ್ತಾರೆ ಮತ್ತು ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ.
ಗಾಂಧೀಜಿಯವರ ಭ್ರಾತೃತ್ವದ ಕಲ್ಪನೆಯು ವಸುದೈವ ಕುಟುಂಬಕಂ-ಜಗತ್ತು ಒಂದೇ ಕುಟುಂಬ ಎಂಬುದರಲ್ಲಿ ಬೇರೂರಿದೆ. ನಾವೆಲ್ಲರೂ ಸಂಬಂಧಿಗಳು ಮತ್ತು ನಮ್ಮ ಭವಿಷ್ಯವು ಬೆಸೆದುಕೊಂಡಿದೆ ಎಂದು ಅವರು ನಂಬಿದ್ದರು. ಇಂದಿನ ಧ್ರುವೀಕರಣದ ಜಗತ್ತು ಮತ್ತು ಒಡೆದು ಆಳುವ ಸಿದ್ಧಾಂತಗಳು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿವೆ. ಇದಕ್ಕೆ ಪ್ರತಿಯಾಗಿ, ಗಾಂಧೀಜಿಯವರ ಭ್ರಾತೃತ್ವದ ಸಂದೇಶವು ನಮ್ಮ ಶಕ್ತಿಯು ನಮ್ಮ ಏಕತೆಯಲ್ಲಿದೆ, ಪರಸ್ಪರ ಗೌರವ ಮತ್ತು ತಿಳುವಳಿಕೆಯ ಮೂಲಕ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ನಮ್ಮ ಸಾಮರ್ಥ್ಯದಲ್ಲಿದೆ ಎಂದು ಹೇಳುತ್ತದೆ.
ಆದಾಗ್ಯೂ, ಇಂದು ಪ್ರಪಂಚದಾದ್ಯಂತ ಕೋಮುವಾದವು ಉತ್ತುಂಗದಲ್ಲಿದೆ, ನಮ್ಮ ಸಮಾಜಗಳ ಮೂಲಕ್ಕೆ ಆತಂಕಕಾರಿಯಾಗಿವೆ. ಗಾಂಧೀಜಿಯವರ 21ನೇ ಶತಮಾನದ ಅವತಾರವು ನಿಸ್ಸಂದೇಹವಾಗಿ ಇವುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಧರ್ಮ, ಜಾತಿ ಅಥವಾ ಪಂಥಗಳನ್ನು ಮೀರಿ ಎಲ್ಲರನ್ನೂ ಸಮಾನತೆ ಮತ್ತು ನ್ಯಾಯದೊಂದಿಗೆ ಪರಿಗಣಿಸುವ ಜಗತ್ತನ್ನು ಬಯಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಮೌಲ್ಯಯುತವಾಗಿ ಗೌರವಿಸಿದಾಗ ಮಾತ್ರ ಶಾಂತಿಯನ್ನು ಸಾಧಿಸಬಹುದು ಎಂದು ಗಾಂಧೀಜಿಯವರು ನಮಗೆ ನೆನಪಿಸುತ್ತಾರೆ.
ಸುಸ್ಥಿರ ಅಭಿವೃದ್ಧಿ ಎಂಬ ಪದವು ಜಾಗತಿಕವಾಗಿ ಸುದ್ದಿಯಾಗುವ ಬಹಳ ಹಿಂದೆಯೇ, ಗಾಂಧೀಜಿಯವರು ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನ ವಿಧಾನಕ್ಕಾಗಿ ಪ್ರತಿಪಾದಿಸಿದರು. ಅನಿಯಂತ್ರಿತ ಕೈಗಾರಿಕೀಕರಣದ ಅಪಾಯಗಳ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಇದು ಜನರು ಮತ್ತು ಪರಿಸರಕ್ಕೆ ತೊಂದರೆಯನ್ನುಂಟು ಮಾಡುತ್ತವೆ ಎಂದು ಅವರು ನಂಬಿದ್ದರು. ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯು ಸ್ಥಳೀಯ ಸಮುದಾಯಗಳು ತಮ್ಮ ಪರಿಸರದೊಂದಿಗೆ ಹೇಗೆ ಸಾಮರಸ್ಯದಿಂದ ಬದುಕುತ್ತವೆ, ಹೇಗೆ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುತ್ತವೆ ಮತ್ತು ಹೇಗೆ ಭವಿಷ್ಯದ ಅಗತ್ಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತವೆ ಎಂಬುದಾಗಿತ್ತು.
ಇಂದು ಹವಾಮಾನ ಬದಲಾವಣೆಯ ಆತಂಕವನ್ನು ಎದುರಿಸುತ್ತಿರುವಾಗ, ಗಾಂಧೀಜಿಯವರ ಸುಸ್ಥಿರತೆಯ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ನಾವು ನಮ್ಮ ಅಭಿವೃದ್ಧಿಯ ಮಾದರಿಗಳನ್ನು ಮರುರೂಪಿಸಬೇಕಾಗಿದೆ. ಬೆಳವಣಿಗೆಯ ನಿರಂತರ ಅನ್ವೇಷಣೆಯಿಂದ ಕೊಂಚ ದೂರ ಸರಿಯುವುದು ಹಾಗೂ ಜನರು-ಗ್ರಹಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಮಾದರಿಯತ್ತ ನಾವು ಸಾಗಬೇಕಾಗಿದೆ. ನಮ್ಮ ಸರಕಾರವು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಗೌರವಿಸುವ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಾತ್ರಿಪಡಿಸುವ, ಸಮಾನ ಮತ್ತು ಸುಸ್ಥಿರ ಅಭಿವೃದ್ಧಿಯ ಮಾರ್ಗವನ್ನು ಅನುಸರಿಸಲು ಬದ್ಧವಾಗಿದೆ.
ಕರ್ನಾಟಕದಲ್ಲಿ, ಗಾಂಧೀಜಿಯವರ ಆದರ್ಶಗಳನ್ನು ಒಳಗೊಂಡಿರುವ ಸಮಾಜವನ್ನು ರಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಶಾಂತಿ ಮತ್ತು ಸೌಹಾರ್ದವನ್ನು ಬೆಳೆಸಲು, ಎಲ್ಲರಿಗೂ ನ್ಯಾಯವನ್ನು ಖಾತ್ರಿಪಡಿಸಲು, ಮಹಿಳೆಯರಿಗೆ ಭದ್ರತೆಯನ್ನು ಖಾತರಿಪಡಿಸಲು, ಭ್ರಾತೃತ್ವದ ಮನೋಭಾವವನ್ನು ನಿರ್ಮಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ. ನಾವು ಗಾಂಧೀಜಿಯವರ ಜೀವನ ಮತ್ತು ಕೆಲಸದಿಂದ ಸ್ಫೂರ್ತಿಯನ್ನು ಪಡೆಯೋಣ ಮತ್ತು ಗಾಂಧೀಜಿಯವರು ಹೆಮ್ಮೆಪಡುವಂತಹ ಸತ್ಯ, ಅಹಿಂಸೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಹೊಂದಿದ ಜಗತ್ತನ್ನು ನಿರ್ಮಿಸಲು ಶ್ರಮಿಸೋಣ.
ಹೊಸದಿಲ್ಲಿಯ ಗಾಂಧಿ ಸ್ಮಾರಕ ನಿಧಿ ಸ್ಥಾಪನೆಗೊಂಡ 75ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿರುವ ‘21 ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಎನ್ನುವ ಹೆಸರಿನಲ್ಲಿ ಆಯೋಜಿಸಿರುವ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾಡಿದ ಭಾಷಣ.