ದ್ವೇಷ ರಾಜಕಾರಣಿಗೆ ಮಾತೇ ಮುಳುವಾಯಿತೇ?

Update: 2024-03-26 10:49 IST
Editor : jafar sadik | Byline : ವಿನಯ್ ಕೆ.
ದ್ವೇಷ ರಾಜಕಾರಣಿಗೆ ಮಾತೇ ಮುಳುವಾಯಿತೇ?
  • whatsapp icon

ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೊರಟಿದ್ದವರನ್ನು ಈಗ ಪಕ್ಷವೇ ಬದಲಾಯಿಸಿದೆ.

ಮೈಸೂರಲ್ಲಿ ಸ್ವಯಂ ಘೋಷಿತ ಹಿಂದುತ್ವ ಸಿಂಹವನ್ನು ಹರಕೆಯ ಕುರಿ ಮಾಡಿದ ಮೇಲೆ ಉತ್ತರ ಕನ್ನಡದಲ್ಲಿ ಸ್ವಯಂ ಘೋಷಿತ ಹಿಂದುತ್ವ ಹುಲಿಯನ್ನು ಮನೆಗೆ ಕಳಿಸಲಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಒಂದು ಬಗೆಯ ನಿರಾಳತೆಯನ್ನು ಮೂವತ್ತು ವರ್ಷಗಳ ಬಳಿಕ ಅನುಭವಿಸುತ್ತಿದೆ. 6 ಸಲ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಈ ಕ್ಷೇತ್ರಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಿಸಲಾಗಿದೆ.

ಕಾಗೇರಿಗೂ ಅನಂತ ಕುಮಾರ್ ಹೆಗಡೆಗೂ ಆಗಿಬರುವುದಿಲ್ಲ ಎಂದು ಹೇಳಲಾಗುತ್ತದೆ. ಅದರರ್ಥ, ಚುನಾವಣೆಯಲ್ಲಿ ಕಾಗೇರಿ ಪರ ಅನಂತ ಕುಮಾರ್ ಹೆಗಡೆ ಪ್ರಚಾರ ಮಾಡದಿದ್ದರೂ ಚಿಂತೆಯಿಲ್ಲ ಅಥವಾ ಪ್ರಚಾರ ಮಾಡುವ ಅಗತ್ಯವೂ ಇಲ್ಲ ಎಂಬ ಕಟು ಸಂದೇಶವನ್ನೂ ಕೂಡ ಈ ಮೂಲಕ ಪಕ್ಷ ತನ್ನದೇ ಹಿಂದುತ್ವ ಫೈರ್ ಬ್ರ್ಯಾಂಡ್‌ಗೆ ನೀಡಿದ ಹಾಗಿದೆ.

ಅಂದರೆ, ಈ ಬಾರಿ ಹೆಗಡೆಯನ್ನು ತೋರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಬಿಜೆಪಿಗೆ ಗೊತ್ತಾಗಿದೆ. ಅಲ್ಲಿಗೆ ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆಯ ದ್ವೇಷ ರಾಜಕಾರಣ ಕೊನೆ ಕಂಡಂತಾಗಿದೆ.

ಬರೇ ಬೆಂಕಿ ಹಚ್ಚುವ ಮಾತಾಡಿದ್ದು ಬಿಟ್ಟರೆ, ಜಿಲ್ಲೆಯಲ್ಲಿ ಅಭಿವೃದ್ಧಿಯ ದೀಪ ಹಚ್ಚಲು ಈ ವ್ಯಕ್ತಿ ಯೋಚನೆ ಕೂಡ ಮಾಡಿದ್ದಿರಲಿಲ್ಲ. ದ್ವೇಷ ರಾಜಕಾರಣವನ್ನು ಮಾತ್ರವೇ ಮಾಡಿಕೊಂಡು ಬಂದಿದ್ದ ಅನಂತಕುಮಾರ್ ಹೆಗಡೆಗೆ ಅವರ ಪಕ್ಷ ಈ ಚುನಾವಣೆಗೆ ಟಿಕೆಟ್ ಕೊಡದೆ ಮನೆಗೆ ಕಳಿಸಿದೆ.

ಬಾಯ್ತೆರೆದರೆ ಹೆಗಡೆಯಿಂದ ಬರುತ್ತಿದ್ದುದು ಮಾರಿಹಬ್ಬದ ಮಾತು. ಸಂವಿಧಾನ ಬದಲಿಸುವ ಮಾತು. ಆ ವ್ಯಕ್ತಿಯ ಆ ಎಲ್ಲ ಅತಿರೇಕಗಳಿಗೂ ಅಬ್ಬರಗಳಿಗೂ ಅವರದೇ ಪಕ್ಷವೀಗ ತೆರೆ ಎಳೆದುಬಿಟ್ಟಿದೆ. ೩೦ ವರ್ಷಗಳ ಕಾಲ ಸಂಸದನಾಗಿ ಮಾಡಿದ್ದೇನು ಎಂಬುದಕ್ಕೂ ಒಂದು ಗುರುತಿಲ್ಲದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಆ ರಾಜಕಾರಣಿಯ ರಾಜಕೀಯ ಮುಗಿದಿದೆ.

ಆದರೆ ಆರು ಬಾರಿಯ ಸಂಸದನನ್ನು ಟಿಕೆಟ್ ನಿರಾಕರಿಸಿ ಮನೆಗೆ ಕಳಿಸಿದ್ದು ಕೇವಲ ಆತನ ವೈಫಲ್ಯಕ್ಕೆ ಮಾತ್ರ ಸಾಕ್ಷ್ಯವೇ? ಆ ಸಂಸದ ಪ್ರತಿನಿಧಿಸುತ್ತಿದ್ದ ಪಕ್ಷದ ಹತ್ತು ವರ್ಷದ ಸರಕಾರವೂ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೂ ಅದು ನಿದರ್ಶನವಲ್ಲವೇ?

ಜನರಿಗಾಗಿ ಕೆಲಸ ಮಾಡದೇ ಬರೀ ಧರ್ಮದ ಹೆಸರಲ್ಲಿ ಸುಳ್ಳು, ದ್ವೇಷ ಹರಡುವ ಎಂಎಲ್‌ಎ, ಎಂಪಿಗಳಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ ಅಂತಾನೂ ಈ ಬಾರಿ ಸಾಬೀತು ಆಗಿದೆಯೇ?

ಅನಂತ ಕುಮಾರ್ ಹೆಗಡೆಗೆ ಮಾತೇ ಮುಳುವಾಯಿತೇ ಎಂಬ ಪ್ರಶ್ನೆಗಳೂ ಎದ್ದಿವೆ. ಬಹುಶಃ ಅದು ನಿಜವೇ ಆದರೂ, ಬಿಜೆಪಿಯದ್ದೇ ಬಾಣವಾಗಿರುವ ಆತ ಬಿಜೆಪಿಗೇ ಬಡಿದು ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಇರಿಸುಮುರಿಸು ಉಂಟಾದ ಮೇಲಿನ ಬೆಳವಣಿಗೆ ಇದಾಗಿರಬಹುದು.

ಸಂವಿಧಾನ ಬದಲಿಸುವುದಕ್ಕಾಗಿ ಮೋದಿಗೆ 400 ಸೀಟುಗಳ ಅಗತ್ಯವಿದೆ ಎಂದಿದ್ದು ಯಡವಟ್ಟಾಗಿರಬೇಕು ಅಥವಾ ಅದೊಂದು ನೆಪ ಮಾತ್ರ ಆಗಿರಲೂಬಹುದು.

ಸಂವಿಧಾನ ಬದಲಿಸುವುದಕ್ಕಾಗಿಯೇ ಬಂದಿದ್ದೇವೆ ಎಂಬ ಅನಂತ ಕುಮಾರ್ ಹೆಗಡೆ ಮಾತಿನ ವಿಚಾರದಲ್ಲಿ ಬಿಜೆಪಿಗೆ ಯಾವತ್ತೂ ಭಿನ್ನಾಭಿಪ್ರಾಯ ಇದ್ದಂತೆ ಕಂಡಿಲ್ಲ. ಬಿಜೆಪಿಯಲ್ಲಿ ಹಾಗೆಲ್ಲ ಮಾತಾಡಲೆಂದೇ ಹಲವರು ಇದ್ದಾರೆ. ಅವರು ಬಿಜೆಪಿಗಾಗಿಯೇ ಅದರ ಪೂರ್ತಿ ಬೆಂಬಲದೊಂದಿಗೆ ಹಾಗೆಲ್ಲ ಮಾತಾಡುತ್ತಾರೆ. ಅನಂತ ಕುಮಾರ್ ಹೆಗಡೆ ಕೂಡ ಅದೇ ಸಾಲಲ್ಲಿದ್ದ ವ್ಯಕ್ತಿ. ಅದು ಬಿಟ್ಟರೆ ಹೆಗಡೆ ಬೇರೆ ಏನಾದರೂ ಜನೋಪಯೋಗಿ ಕೆಲಸ ಮಾಡಿದ್ದೂ ಇಲ್ಲ.

ಕಳೆದ ಸಲವಂತೂ ಗೆದ್ದ ಬಳಿಕ ಕಾಣೆಯಾಗಿದ್ದ ಸಂಸದ ಮತ್ತೆ ಕಾಣಿಸಿಕೊಂಡದ್ದು ತೀರಾ ಒಂದೆರಡು ತಿಂಗಳ ಈಚೆಗೆ. ಹಾಗೆ ಪ್ರತ್ಯಕ್ಷವಾದ ಕೂಡಲೇ ಮತ್ತೆ ಶುರುವಾಗಿಬಿಟ್ಟಿದ್ದವು ಜನವಿರೋಧಿ, ಸಂವಿಧಾನ ವಿರೋಧಿ, ಮನುಷ್ಯ ವಿರೋಧಿ ಹೇಳಿಕೆಗಳು.

ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂಬ ಹೆಗಡೆ ಹೇಳಿಕೆ ಬಿಜೆಪಿ ಈ ದೇಶದಲ್ಲಿ ಏನು ಮಾಡಹೊರಟಿದೆ ಎಂಬುದನ್ನೇ ಸೂಚಿಸಿತ್ತು.

ಅನಂತ ಕುಮಾರ್ ಹೇಳಿಕೆಯಿಂದ ಬಿಜೆಪಿ ಅಜೆಂಡಾ ಬಯಲಾಗಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತ್ತು.

ಎಲ್ಲೆಡೆ ಬಹುಮತ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತದೆ ಎಂದು ಅನಂತ ಕುಮಾರ್ ಹೆಗಡೆ ಹಿಂಸೆಯ ಅಮಲಿನಲ್ಲಿಯೇ ನೀಡಿದ್ದ ಹೇಳಿಕೆ ಕೂಡ ಆತನ ಮತ್ತು ಬಿಜೆಪಿಯ ಮನಃಸ್ಥಿತಿಯನ್ನೇ ಬಿಚ್ಚಿಟ್ಟಿತ್ತು.

ಅಷ್ಟಕ್ಕೂ ಈ ಅನಂತ ಕುಮಾರ್ ಹೆಗಡೆ ಮಾಡಿಕೊಂಡು ಬಂದಿದ್ದೇ ದ್ವೇಷ ರಾಜಕಾರಣ. ಧಾರ್ಮಿಕ ವಿಚಾರಗಳನ್ನು ಕೆದಕುತ್ತ, ಸಂವಿಧಾನ ಬದಲಿಸುವ ಮಾತನ್ನು ಮತ್ತೆ ಮತ್ತೆ ಆಡುತ್ತ ಸುದ್ದಿಯಲ್ಲಿದ್ದ ಈ ಸಂಸದ ಅಭಿವೃದ್ಧಿ, ಜನಸೇವೆ ವಿಚಾರಗಳಿಂದ ಯಾವತ್ತೂ ದೂರವೇ ಇದ್ದುದನ್ನು ಉತ್ತರ ಕನ್ನಡ ಜಿಲ್ಲೆಯ ಇವತ್ತಿನ ಸ್ಥಿತಿಯೇ ಹೇಳುತ್ತದೆ. 6 ಬಾರಿ ಸಂಸತ್ತಿಗೆ ಆಯ್ಕೆಯಾದರೂ ಉತ್ತರ ಕನ್ನಡಕ್ಕೆ ಹೆಗಡೆ ಕೊಡುಗೆ ಸೊನ್ನೆ ಎಂಬುದನ್ನು ಅಲ್ಲಿನ ಜನರೇ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಗೆದ್ದ ನಂತರವಂತೂ ಹೆಗಡೆ ಎಲ್ಲಿ ಎನ್ನುವುದೇ ಯಾರಿಗೂ ಗೊತ್ತಿಲ್ಲದಂತಾಗಿತ್ತು.

ಅದಾದ ಬಳಿಕ ಕಳೆದ ತಿಂಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಮೇಲೆ ಶುರು ಮಾಡಿದ್ದೂ ಅದೇ ಕೊಳಕು ಹೇಳಿಕೆಗಳನ್ನೇ.

ವರದಿಗಳು ಹೇಳುವ ಪ್ರಕಾರ, ಕಾರವಾರ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಇರುವ ಸಂಸದರ ಕಚೇರಿಗೆ ಬೀಗ ಬಿದ್ದೇ ಬಹಳ ಕಾಲವಾಗಿದೆ. ಜಿಲ್ಲೆಗಾಗಿ ಅನಂತ ಕುಮಾರ್ ಹೆಗಡೆ ಮಾಡಿದ್ದು ಎಂದು ಹೇಳುವುದಕ್ಕೂ ಒಂದು ಪ್ರಮುಖ ಕೆಲಸವೂ ಕಾಣಿಸುತ್ತಿಲ್ಲ ಎಂಬ ಅಸಮಾಧಾನವಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಶುರುವಾಗಿಯೇ 11 ವರ್ಷಗಳಾದವು. ಅರ್ಧ ಕೆಲಸವೂ ಮುಗಿದಿಲ್ಲ ಎನ್ನುತ್ತಿವೆ ವರದಿಗಳು. ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನಂತೂ ಕೇಳುವವರೇ ಇಲ್ಲ ಎನ್ನಲಾಗುತ್ತಿದೆ. ಶಿರಸಿ-ತಾಳಗುಪ್ಪ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಬೇಡಿಕೆಗಳು ದಶಕಗಳಿಂದಲೂ ಹಾಗೇ ಇವೆ. ಕೇಂದ್ರದ ಮೂಲಕವೇ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ.

ಸಂಸತ್ ಕಲಾಪದಲ್ಲಿ ಅನಂತ ಕುಮಾರ್ ಹೆಗಡೆ ಕಾಣಿಸಿಕೊಳ್ಳುವುದು ಕೂಡ ಅಪರೂಪ ಎಂಬ ಆರೋಪಗಳಿದ್ದವು. ಕಲಾಪಕ್ಕೆ ಹಾಜರಾದಾಗಲೂ ಚರ್ಚೆಯಲ್ಲಿ ಪಾಲ್ಗೊಂಡು ಜಿಲ್ಲೆಗಾಗಿ ಮಾತೇ ಆಡದೆ ದಾಖಲೆ ಬರೆದ ಸಂಸದ ಈ ಹೆಗಡೆ. ಇಂಥ ಒಬ್ಬ ಸಂಸದ ಸಾರ್ವಜನಿಕವಾಗಿ ಧರ್ಮದ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಸುದ್ದಿಯಾಗುತ್ತಿದ್ದುದಷ್ಟೇ ಸಾಧನೆಯಾಗಿತ್ತು.

ಕ್ಷೇತ್ರದಲ್ಲಿ ಕೂಡ ಯಾರಿಗೂ ಸಿಗದೆ ಇರುತ್ತಿದ್ದ ಅನಂತ ಕುಮಾರ್ ಹೆಗಡೆ, ಈಗ ಟಿಕೆಟ್ ಕೈತಪ್ಪಿದೊಡನೆ ಫೇಸ್‌ಬುಕ್‌ನಲ್ಲೊಂದು ಪೋಸ್ಟ್ ಹಾಕಿ, ಜನತಾ ಜನಾರ್ದನನ ಆರಾಧನೆಗೆ ಅವಕಾಶ, ಸರಿ ಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ ಎಂದೆಲ್ಲ ಬರೆದುಕೊಂಡಿರುವುದು ವರದಿಯಾಗಿದೆ. ಅನಂತ ಕುಮಾರ್ ಹೆಗಡೆ ಜನತಾ ಜನಾರ್ದನನ ಸೇವೆ ಮಾಡಿದ್ದು ಯಾವಾಗ, ಜನರೊಡನೆ ಬೆರೆತದ್ದು ಯಾವಾಗ ಎಂದು ಆ ವ್ಯಕ್ತಿಯೇ ಹೇಳಬೇಕು.

ತಾನೊಬ್ಬ ಸಂಸದ ಎಂಬುದನ್ನೂ ಮರೆತು ವೈದ್ಯರೊಬ್ಬರಿಗೆ ಹೊಡೆಯಲು ಹೋಗಿದ್ದ ಕಾರಣಕ್ಕೆ ಸುದ್ದಿಯಾಗಿದ್ದು ಬಿಟ್ಟರೆ, ಕ್ಷೇತ್ರದಲ್ಲಿ ಯಾರಿಗೂ ಕಾಣಿಸಿಕೊಳ್ಳದೆ ಸುದ್ದಿಯಾದದ್ದು ಬಿಟ್ಟರೆ ಜನತಾ ಜನಾರ್ದನನ ಸೇವೆ ಮಾಡಿದ ಸುದ್ದಿಯಂತೂ ಯಾವತ್ತೂ ಇದ್ದಿರಲೇ ಇಲ್ಲ.

ಸಂವಿಧಾನ ಬದಲಾಯಿಸುತ್ತೇವೆ ಎಂದು ಅನಂತ ಕುಮಾರ್ ಹೆಗಡೆ ಹೇಳುತ್ತಿದ್ದಾಗ ಬಿಜೆಪಿ ಬೆಂಬಲ ಹಿಂದಿನಿಂದ ಇದ್ದೇ ಇತ್ತು ಎಂಬುದು ಸ್ಪಷ್ಟ.

ಉದ್ದಕ್ಕೂ ದುರಹಂಕಾರದ ಮಾತಾಡುತ್ತಲೇ ಬಂದ ಆತ ಯಾವತ್ತೂ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಂತೆ ಮಾತಾಡಿದ್ದೇ ಇಲ್ಲ.

ಇಂಥವರನ್ನು ಸಾಕುತ್ತಲೇ ಬಂದಿರುವ ಬಿಜೆಪಿ, ಬೇಡವೆಂದ ತಕ್ಷಣ ನಿರುಪಯುಕ್ತ ಸಿಪ್ಪೆಯನ್ನು ಎಸೆದಂತೆ ಎಸೆದುಬಿಟ್ಟಿದೆ.

ಈಗ ಅದು ಎಸೆದಿರುವುದು ಕೂಡ ಬಹುಶಃ ಅಂಥದೇ ಒಂದು ಸಿಪ್ಪೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಿನಯ್ ಕೆ.

contributor

Similar News