ಎಚ್.ಡಿ. ಕೆ ಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ: ಒಕ್ಕಲಿಗ ನಾಯಕರಿಬ್ಬರ ಪೈಪೋಟಿಗೆ ಕಾರಣವಾಗಲಿದೆಯೇ?

ಈಗ ಇಬ್ಬರು ಪ್ರಬಲ ಒಕ್ಕಲಿಗ ನಾಯಕರಲ್ಲಿಯೇ ಎದ್ದಿರುವ ಈ ಪೈಪೋಟಿ ಮತ್ತು ಸದ್ಯಕ್ಕೆ ಕುಮಾರಸ್ವಾಮಿಯವರು ಗೆದ್ದಂತೆ ಕಾಣಿಸುತ್ತಿರುವ ಈಗಿನ ಸನ್ನಿವೇಶ ಮುಂದಿನ ದಿನಗಳಲ್ಲಿನ ರಾಜಕೀಯದ ಬಗ್ಗೆಯೂ ಕುತೂಹಲ ಕೆರಳಿಸಿದೆ.

Update: 2024-06-11 06:20 GMT

ಮೋದಿ 3.0 ಸರಕಾರದಲ್ಲಿ ಗಮನ ಸೆಳೆದವರು ರಾಜ್ಯದ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು. ಒಂಭತ್ತನೆಯವರಾಗಿ ಪ್ರಹ್ಲಾದ್ ಜೋಶಿಗೂ ಮೊದಲೇ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲಿಗೆ ಕುಮಾರಸ್ವಾಮಿ ಪ್ರಭಾವ ಈ ಸರಕಾರದಲ್ಲಿ ಎಲ್ಲರಿಗೂ ಅರ್ಥವಾಗಿದೆ.

ಕುಮಾರಸ್ವಾಮಿಯವರು ಪಟ್ಟು ಹಿಡಿದು ಮಂಡ್ಯ ಕ್ಷೇತ್ರವನ್ನು ಬಿಜೆಪಿಯಿಂದ ಪಡೆದುಕೊಂಡರು ಮತ್ತು ಅಂತಿಮವಾಗಿ ತಾವೇ ಅಲ್ಲಿಂದ ಕಣಕ್ಕಿಳಿಯುವ ನಿರ್ಧಾರ ಮಾಡಿದರು. ಈಗ ಗೆದ್ದಿರುವ ಅವರಿಗೆ ಮೋದಿ ಸಂಪುಟದಲ್ಲಿ ಪ್ರಭಾವಿ ಸ್ಥಾನವೂ ಒಲಿದಿದೆ.

ಇಲ್ಲಿಂದ ನಂತರದ ಅವರ ನಡೆ ಹೇಗಿರಬಹುದು? ಅಧಿಕಾರವನ್ನು ಅವರು ರಾಜ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳುವರೋ ಅಥವಾ ಅವರದೇ ಆದ ಆದ್ಯತೆಗಳಿಗೆ ಒತ್ತು ನೀಡುವರೋ?

ಈ ಪ್ರಶ್ನೆಗಳು ಕರ್ನಾಟಕದಲ್ಲಿನ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಮುಖ್ಯವಾಗುತ್ತವೆ.

ಯಾಕೆಂದರೆ ಹಲವು ಕಾರಣಗಳಿಂದಾಗಿ ಹೈರಾಣಾಗಿರುವ ಮತ್ತು ಹತಾಶೆಗೆ ಒಳಗಾಗಿರುವ ಜೆಡಿಎಸ್‌ಗೆ ಅದಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿಯವರಿಗೆ ಈಗ ಸಿಕ್ಕಿರುವ ಮಂಡ್ಯ ಗೆಲುವು ಮತ್ತು ಆ ಮೂಲಕ ಒದಗಿರುವ ರಾಷ್ಟ್ರ ರಾಜಕಾರಣದಲ್ಲಿನ ಅತ್ಯುತ್ತಮ ಅವಕಾಶ ಒಂದು ಬಲ ಎನ್ನುವುದು ನಿಜ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದ ಅವರಿಗೆ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದಿದ್ದು ಆಘಾತ ತಂದಿತ್ತು.

ಅದಕ್ಕಿಂತಲೂ ಹೆಚ್ಚಾಗಿ ಹಳೇ ಮೈಸೂರು ಭಾಗದಲ್ಲಿಯೇ ಅವರ ಪಕ್ಷ ಜೆಡಿಎಸ್ ಮೂಲೆಗುಂಪಾಗಿತ್ತು. ಅದರಿಂದ ಚೇತರಿಸಿಕೊಳ್ಳುವ ದಾರಿಯಿಲ್ಲದಂಥ ಹೊತ್ತಿನಲ್ಲಿ ಮಂಡ್ಯದ ಜನತೆ ಸಂಸದರನ್ನಾಗಿ ಕುಮಾರಸ್ವಾಮಿಯವರನ್ನು ಗೆಲ್ಲಿಸಿರುವುದು, ದೇವೇಗೌಡರ ಬಗ್ಗೆ ಆ ಮೂಲಕ ಕುಮಾರಸ್ವಾಮಿಯವರ ಬಗ್ಗೆ ಆ ಭಾಗದಲ್ಲಿ ಇನ್ನೂ ಒಲವು ಇದೆ ಎಂಬುದನ್ನು ತೋರಿಸಿದೆ. ವಿಧಾನಸಭೆ ಸೋಲಿನ ಗಾಯವನ್ನು ಮಾಯಿಸುವ ಮುಲಾಮನ್ನು ಕುಮಾರಸ್ವಾಮಿ ಅವರು ಈ ಗೆಲುವಿನಲ್ಲಿ ಕಂಡರೆ ಅಚ್ಚರಿಯಿಲ್ಲ.

ಹಾಗೊಂದು ವೇಳೆ ಈ ಗೆಲುವು ಮತ್ತು ಈ ಅಧಿಕಾರವನ್ನು ಅವರು ಕಾಂಗ್ರೆಸ್ ವಿರುದ್ಧದ ಅಸ್ತ್ರವಾಗಿ ಬಳಸಿದರೆ? ಈಗಿನ ಸನ್ನಿವೇಶದಲ್ಲಿ ಇಂಥದೊಂದು ಸಾಧ್ಯತೆ ಇಲ್ಲವೆನ್ನಲಾಗದು.

ಇಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ಅವರು ನಿರಂತರವಾಗಿ ಟೀಕಿಸುತ್ತಿರುವುದಕ್ಕೆ ಕಾರಣವಾಗಿರುವ ಮತ್ತೂ ಒಂದು ವಿಚಾರವೆಂದರೆ ಪ್ರಜ್ವಲ್ ರೇವಣ್ಣ ಹಗರಣ.

ಪ್ರಜ್ವಲ್ ರೇವಣ್ಣ ಈ ಚುನಾವಣೆಯಲ್ಲಿ ಸೋಲು ಕಂಡಿರುವುದು ದೇವೇಗೌಡರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸಂಗತಿಯಾಗಲಿದೆ. ಗೌಡರ ಕುಟುಂಬವೇ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣ ಆಗಿದೆ.

ಈ ಫಲಿತಾಂಶದಿಂದ ಆಘಾತವಾಗಿದೆ ಎಂದು ಫಲಿತಾಂಶ ಬರುತ್ತಿದ್ದಂತೆಯೇ ಹೇಳಿದ್ದರು ಕುಮಾರಸ್ವಾಮಿ.

ಹಾಸನವನ್ನು ಬಹುಶಃ ಜೆಡಿಎಸ್ ಈ ಹಗರಣದ ಕಾರಣ ದಿಂದಾಗಿಯೇ ಕಳೆದುಕೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ, ಅದು ದೊಡ್ಡ ಸಂಕಟವಾಗಿ ಕಾಡಲಿರುವುದು ನಿಜ.

ಮೊದಲನೆಯದಾಗಿ, ವಿಧಾನಸಭೆ ಚುನಾವಣೆಯಲ್ಲಿನ ಸೋಲು ಮತ್ತು ಈಗ ಪ್ರಜ್ವಲ್ ಪ್ರಕರಣದಲ್ಲಿನ ಆಘಾತ ಇವೆರಡರ ನೇರ ಗುರಿಯಾಗಿ ಕುಮಾರಸ್ವಾಮಿಯವರ ಎದುರು ಇರುವುದು ಕಾಂಗ್ರೆಸ್.

ಚುನಾವಣೆ ಸೋಲಿನ ಹೊತ್ತಲ್ಲಿ ಮುಖ್ಯವಾಗಿ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡಿದ್ದ ಕುಮಾರಸ್ವಾಮಿ ಈಗ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯುತ್ತಿದ್ಧಾರೆ.

ಇಡೀ ಪೆನ್‌ಡ್ರೈವ್ ಪ್ರಕರಣದ ಹಿಂದೆ ಡಿ.ಕೆ. ಶಿವಕುಮಾರ್ ಇದ್ದಾರೆಂಬುದು ಅವರ ನೇರ ಆರೋಪವಾಗಿವೆ. ಇಲ್ಲಿ ಉಳಿದೆಲ್ಲ ಕಾಳಜಿ, ಕಳಕಳಿಗಳು ಗೌಣವಾಗಿ, ಡಿ.ಕೆ. ಶಿವಕುಮಾರ್ ಕಾರಣದಿಂದಾಗಿ ತಮ್ಮ ರಾಜಕೀಯ ಭವಿಷ್ಯ ನಾಶವಾಗುತ್ತಿದೆ ಎಂಬ ಆಕ್ರೋಶವನ್ನು ಕುಮಾರಸ್ವಾಮಿ ಹೊರಹಾಕುತ್ತಿದ್ದಾರೆ.

ಇಂತಹ ಹೊತ್ತಿನಲ್ಲಿ ಅವರಿಗೆ ಕೇಂದ್ರ ಸರಕಾರದಲ್ಲಿ ಸಿಕ್ಕಿರುವ ಅವಕಾಶ ಮತ್ತು ಅಧಿಕಾರ ರಾಜ್ಯ ರಾಜಕಾರಣದಲ್ಲಿ ಏನು ಪರಿಣಾಮ ಬೀರಬಹುದು? ಅದು ಕಾಂಗ್ರೆಸ್ ಸರಕಾರಕ್ಕೆ ತಂದಿಡುವ ಸವಾಲುಗಳೇನಾಗಿರಬಹುದು?

ಕಾಂಗ್ರೆಸ್ ಸರಕಾರವನ್ನು ಮತ್ತು ಪೆನ್‌ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ಅವರು ಸಿಕ್ಕಾಪಟ್ಟೆ ಟೀಕಿಸುತ್ತಲೇ ಬಂದಿದ್ದು, ಪರೋಕ್ಷವಾಗಿ ಇಡೀ ಪ್ರಕರಣ ಮುನ್ನೆಲೆಗೆ ಬಂದಿರುವುದರ ಬಗ್ಗೆಯೇ ಅಸಮಾಧಾನ ಹೊಂದಿದ್ದಾರೆ.

ಚುನಾವಣೆಯ ವೇಳೆ ಅವರು ದಿನನಿತ್ಯವೂ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಮಾತನಾಡಿದರು ಮತ್ತು ತನ್ನ ರಾಜಕೀಯ ನಾಶಕ್ಕಾಗಿ ಅವರು ನಿಂತಿದ್ದಾರೆ ಎಂಬಂತೆ ಹೇಳುತ್ತ ಬಂದರು.

ಅಂತಿಮವಾಗಿ ಒಕ್ಕಲಿಗ ನಾಯಕರಾಗಿರುವ ಅವರು ಮಂಡ್ಯದಲ್ಲಿ ಗೆದ್ದರು ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಶಿವಕುಮಾರ್ ಸೋದರ ಸುರೇಶ್ ಸೋಲಿನಲ್ಲೂ ಇದೆಲ್ಲವೂ ಪಾತ್ರ ವಹಿಸಿರುವ ಸಾಧ್ಯತೆಗಳೂ ಇವೆ. ಈ ಮೂಲಕ ಮೊದಲ ಹಂತದಲ್ಲಿ ಡಿ.ಕೆ. ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ಗೆದ್ದಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿನ ಗೆಲುವು ಬಿಜೆಪಿಯದ್ದು ಎನ್ನುವುದಕ್ಕಿಂತ ಹೆಚ್ಚಾಗಿ ಅದು ದೇವೇಗೌಡರ ಕುಟುಂಬದ ಪಾಲಿನ ಗೆಲುವಾಗಿ ಗಮನ ಸೆಳೆಯುತ್ತದೆ.

ಈಗ ಇಬ್ಬರು ಪ್ರಬಲ ಒಕ್ಕಲಿಗ ನಾಯಕರಲ್ಲಿಯೇ ಎದ್ದಿರುವ ಈ ಪೈಪೋಟಿ ಮತ್ತು ಸದ್ಯಕ್ಕೆ ಕುಮಾರಸ್ವಾಮಿಯವರು ಗೆದ್ದಂತೆ ಕಾಣಿಸುತ್ತಿರುವ ಈಗಿನ ಸನ್ನಿವೇಶ ಮುಂದಿನ ದಿನಗಳಲ್ಲಿನ ರಾಜಕೀಯದ ಬಗ್ಗೆಯೂ ಕುತೂಹಲ ಕೆರಳಿಸಿದೆ.

ಇಲ್ಲಿ ಕೆಲವು ಅಂಶಗಳನ್ನು ಗಮನಿಸುವುದಾದರೆ,

ಇದೊಂದು ಗೆಲುವು ರಾಜ್ಯದಲ್ಲಿನ ಜೆಡಿಎಸ್ ಸೋಲನ್ನು ಮೀರಿ ನಿಲ್ಲುವುದಕ್ಕೆ ಕುಮಾರಸ್ವಾಮಿಯವರಿಗೆ ಆಸರೆಯಾಗಲಿದೆ.

ಈ ಹಂತದಲ್ಲಿ ಅವರು ಕಾಂಗ್ರೆಸ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತ, ತಮ್ಮ ವಿರುದ್ಧ ಅದು ಸಂಚಿನ ರಾಜಕಾರಣ ನಡೆಸುತ್ತಿದೆ ಎಂಬ ಆರೋಪವನ್ನು ಇನ್ನಷ್ಟು ತೀವ್ರಗೊಳಿಸಲೂ ಬಹುದು.

ಇಡೀ ಪೆನ್‌ಡ್ರೈವ್ ಪ್ರಕರಣ ಒಂದು ಸಂಚೆಂಬಂತೆ ಬಿಂಬಿಸಿ, ಅದನ್ನು ಕಾಂಗ್ರೆಸ್ ವಿರುದ್ಧವೇ ಅಸ್ತ್ರವಾಗಿಸುವುದನ್ನು ಅವರು ಮುಂದುವರಿಸಲೂ ಬಹುದು.

ಹಳೇ ಮೈಸೂರು ಭಾಗದಲ್ಲಿ ದೇವೇಗೌಡರನ್ನೇ ಇವತ್ತಿಗೂ ಅಭಿಮಾನದಿಂದ ಕಾಣುವ ಮತ್ತು ಪ್ರೀತಿಸುವ ಜನರಿದ್ದಾರೆ ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ.

ದೇವೇಗೌಡರನ್ನು, ಆ ಮೂಲಕ ಕುಮಾರಸ್ವಾಮಿಯವರನ್ನು ಆ ಭಾಗದ ಜನ ಕೈಬಿಟ್ಟಿಲ್ಲ ಎಂಬುದಕ್ಕೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರು ಕುಮಾರಸ್ವಾಮಿಯವರನ್ನು ಗೆಲ್ಲಿಸಿರುವುದು ಮತ್ತು ಅವರಿಗೆ ಸಿಕ್ಕಿರುವ ಮತಗಳ ಅಂತರವೇ ಸಾಕ್ಷಿ.

ಹಾಗೆಯೇ ಡಿ.ಕೆ. ಶಿವಕುಮಾರ್ ಅವರಿಗೆ ಅವರ ತವರು ಕ್ಷೇತ್ರದಲ್ಲಿಯೇ ಸ್ವತಃ ಅವರ ಸಹೋದರನನ್ನು ಗೆಲ್ಲಿಸಿಕೊಳ್ಳಲು ಆಗದೇ ಹೋದದ್ದು, ನಿರಾಯಾಸದ ತುತ್ತು ಎಂಬಂತಿದ್ದ ಕ್ಷೇತ್ರ ಮೊದಲ ಸಲ ಕಣಕ್ಕಿಳಿದವರ ಪಾಲಾದದ್ದು ಕೂಡ ರಾಜ್ಯದಲ್ಲಿನ ಒಕ್ಕಲಿಗ ರಾಜಕಾರಣದ ಬೇರೆಯೇ ನೆಲೆಯ ಬಗ್ಗೆ ಒಂದು ಸುಳಿವನ್ನು ಕೊಟ್ಟಿದೆ.

ಒಂದು ಕಾಲದಲ್ಲಿ ಕುಮಾರಸ್ವಾಮಿ ಅನುಭವಿಸಿದ್ದ ಹಿನ್ನಡೆಯನ್ನು ಈಗ ಡಿ.ಕೆ. ಶಿವಕುಮಾರ್ ಅನುಭವಿಸಿದ್ದಾರೆ.

ಇದು ಸದ್ಯಕ್ಕೆ ಅವರಿಬ್ಬರ ನಡುವಿನ ಪೈಪೋಟಿ ಎಂಬಂತೆ ಕಂಡರೂ ಅಂತಿಮವಾಗಿ ಇದರ ಹೊಡೆತದ ಪರಿಣಾಮವನ್ನು ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿಯೇ ಎದುರಿಸಬೇಕಾಗಿ ಬರಬಹುದು.

ಯಾಕೆಂದರೆ, ಈ ಹಂತದ ಲಾಭವನ್ನು ಪಡೆಯಲು ಜೆಡಿಎಸ್ ನೆಪದೊಂದಿಗೆ ಅದರ ಹಿಂದೆಯೇ ಕಾದುಕೊಂಡಿರುವುದು ಬಿಜೆಪಿ.

ಜೆಡಿಎಸ್ ಜೊತೆಜೊತೆಗೇ ತೋರಿಸಿಕೊಳ್ಳುತ್ತ, ಅದು ಒಂದೆಡೆ ಒಕ್ಕಲಿಗರನ್ನು ಸೆಳೆಯುತ್ತಲೇ ಇನ್ನೊಂದೆಡೆ ಲಿಂಗಾಯತರ ಬಲದ ಲಾಭವನ್ನೂ ಪಡೆಯಲಿದೆ ಎಂಬುದು ನಿಜ. ಜೆಡಿಎಸ್ ಜೊತೆಗಿನ ಮೈತ್ರಿ ಹಿಂದಿರುವ ಅದರ ಲೆಕ್ಕಾಚಾರ ಹಳೆ ಮೈಸೂರು ಭಾಗದಲ್ಲಿ ಪಕ್ಷ ಗಟ್ಟಿಗೊಳಿಸುವುದು.

ಇದಕ್ಕಾಗಿ ಒಂದು ಹೆಜ್ಜೆ ಹಿಂದೆ ಇಟ್ಟು ಜೆಡಿಎಸ್ ಮುಂದೆ ಬಿಟ್ಟಿದೆ. ಆದರೆ ಹಿಂದಿರೋ ಹೆಜ್ಜೆ ಯಾವಾಗ ಮುಂದಡಿ ಆಗುತ್ತೆ ಅನ್ನುವುದನ್ನು ಹೇಳಲಾಗದು. ರಾಜಕೀಯವಾಗಿ ಲಾಭ ಎಲ್ಲಿಂದ ಎಲ್ಲಿಗೋ ನುಸುಳಿಕೊಳ್ಳಲಿದೆ ಎಂಬುದನ್ನು ಅಲ್ಲಗಳೆಯಲು ಆಗದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News