ಅಳಿಸಲಾಗದ ಸತ್ಯ

ಗೋಡ್ಸೆಯನ್ನು ಪ್ರಶಂಸಿಸಿದರೆ ಜಗತ್ತು ಉಗಿಯುತ್ತದೆ. ಗಾಂಧೀಜಿಯನ್ನು ಸ್ಮರಿಸಿದರೆ ಜಗತ್ತು ಜೊತೆಗೂಡುತ್ತದೆ. ಅಷ್ಟೇ ಸತ್ಯ. ಯಾಕೆಂದರೆ ಗಾಂಧಿ ಮಾತ್ರವೇ ಅಗಾಧ ಸತ್ಯ. ಸತ್ಯವನ್ನು ಮರೆಮಾಚುವ, ಇತಿಹಾಸವನ್ನು ಅಳಿಸಿಬಿಡ ಬಲ್ಲೆವೆಂಬ ಭ್ರಮೆಯಲ್ಲಿ ರಾಜಕಾರಣ ಮಾಡುವವರಿಗೂ ಗಾಂಧಿ ಎಂಬ ಸತ್ಯದ ಎದುರು ತಾವೇನೂ ಅಲ್ಲ ಎಂಬುದು ಗೊತ್ತಿದೆ ಮತ್ತು ಅವರನ್ನು ಅದು ಯಾವತ್ತಿಗೂ ಒಳಗಿಂದಲೇ ಕಾಡುವ ಅಳುಕೂ ಹೌದು.

Update: 2023-09-13 05:25 GMT
Editor : jafar sadik | By : ಪೂರ್ವಿ

ಮೊನ್ನೆ ಜಿ20 ಶೃಂಗಸಭೆಗೆ ಬಂದಿದ್ದ ವಿಶ್ವನಾಯಕರು ದೇಶದಿಂದ ಮರಳುವ ಮೊದಲು ರಾಜ್‌ಘಾಟ್‌ಗೆ ಭೇಟಿನೀಡಿ, ಮಹಾತ್ಮಾ ಗಾಂಧೀಜಿಗೆ ನಮನ ಸಲ್ಲಿಸಿದರು.

ಅದು ಜಗತ್ತಿನ ಇಪ್ಪತ್ತು ಬಲಾಢ್ಯ ದೇಶಗಳ ನಾಯಕರು ಬಂದು ಸಾಲಾಗಿ ನಿಂತು ದೇಶದ ರಾಷ್ಟ್ರಪಿತನಿಗೆ ಗೌರವ ಸಲ್ಲಿಸುವ ಅತ್ಯಂತ ಅದ್ಭುತ ಕ್ಷಣವಾಗಿತ್ತು. ತಮ್ಮ ಪಾಲಿಗೆ ಇದೊಂದು ಭಾವುಕ ಕ್ಷಣ ಎಂದು ಹಲವು ನಾಯಕರು ಹೇಳಿಕೊಂಡರು. ಆ ಎಲ್ಲ ನಾಯಕರನ್ನು ಅಲ್ಲಿಗೆ ಕರೆದುಕೊಂಡು ಹೋದದ್ದು ಪ್ರಧಾನಿ ನರೇಂದ್ರ ಮೋದಿ. ವಿದೇಶಗಳ ಆ ನಾಯಕರನ್ನು ಅವರು ಸ್ವಾಗತಿಸಿದ್ದು ಖಾದಿ ಶಾಲು ನೀಡುವ ಮೂಲಕ.

ಅಂದ ಹಾಗೆ ವಿಶ್ವನಾಯಕರನ್ನು ಬರಮಾಡಿಕೊಂಡ ವೇದಿಕೆಗೆ ಹಿನ್ನೆಲೆಯಾಗಿ ಇದ್ದದ್ದು ಗಾಂಧೀಜಿಯವರ ಸಾಬರಮತಿ ಆಶ್ರಮದ ಚಿತ್ರ. ಇದೆಂತಹ ವಿಪರ್ಯಾಸ ಅಲ್ಲವೇ?

ಮೋದಿ ಮತ್ತವರ ಪಕ್ಷಕ್ಕೆ, ಪರಿವಾರಕ್ಕೆ, ಬೆಂಬಲಿಗರಿಗೆ ಅದೆಷ್ಟೇ ಕಸಿವಿಸಿಯಾದರೂ, ಕೊನೆಗೂ ಜಾಗತಿಕ ಮನ್ನಣೆ ಗಳಿಸಲು ಬೇಕಿರುವುದು ಮಹಾತ್ಮಾ ಗಾಂಧೀಜಿಯವರೇ. ಜಾಗತಿಕ ವೇದಿಕೆಯಲ್ಲಿ ಗಾಂಧೀಜಿಗೆ ಮಾತ್ರ ಮೌಲ್ಯ. ಗೋಡ್ಸೆಗೆ ಅಲ್ಲ. ಗಾಂಧೀಜಿ ಹೆಸರು ಹೇಳಿದರೆ ಮಾತ್ರ ಮೋದಿ ಮತ್ತವರ ಪರಿವಾರಕ್ಕೆ ಬೆಲೆ.

ಆದರೆ ಮೋದಿ, ಬಿಜೆಪಿ, ಸಂಘಪರಿವಾರ ಮಾಡುತ್ತಾ ಬಂದಿರುವುದೇನು ಎಂಬುದು ಇಡೀ ದೇಶಕ್ಕೆ ಗೊತ್ತೇ ಇರುವ ವಿಚಾರ. ಇಲ್ಲಿ ಬಿಜೆಪಿ, ಸಂಘ ಪರಿವಾರ ಗಾಂಧೀಜಿಯನ್ನು ಜನಮಾನಸದಿಂದ ತೆಗೆದುಹಾಕಲು ನಿರಂತರ ಶ್ರಮಿಸುತ್ತಿದೆ.

ದಶಕಗಳಿಂದ ಗಾಂಧೀಜಿಯ ಕುರಿತು ಅಪಪ್ರಚಾರವನ್ನೇ ಮಾಡಿಕೊಂಡು ಬರಲಾಗಿದೆ. ಅವರ ವಿರುದ್ಧ ದ್ವೇಷ ಕಾರುತ್ತಾ ಬರಲಾಗಿದೆ. ಅವರ ಕೊಡುಗೆಗಳನ್ನು ಕಡೆಗಣಿಸುತ್ತ ಬರಲಾಗಿದೆ. ಅವರ ಬಗ್ಗೆ ಸುಳ್ಳುಗಳನ್ನೇ ಹೇಳುತ್ತ ಬರಲಾಗಿದೆ. ಅವರ ಹಂತಕರನ್ನು ಆರಾಧಿಸುತ್ತಾ ಬರಲಾಗಿದೆ.

ಆದರೆ ಅವರನ್ನು ದೇಶದೊಳಗೆ ಹೀಗಳೆಯುವಷ್ಟೇ ಸುಲಭವಾಗಿ ವಿಶ್ವಮಟ್ಟದಲ್ಲಿ ಕೈಬಿಡುವುದು ಸುಲಭವಿಲ್ಲ, ಮರೆತುಬಿಡುವುದು ಸಾಧ್ಯವಿಲ್ಲ. ಅಲ್ಲೇನಿದ್ದರೂ ವಿಶ್ವಮಾನ್ಯರಾದ ಗಾಂಧೀಜಿಗೇ ಮೌಲ್ಯ ಹೊರತು, ಇವರು ಆರಾಧಿಸುತ್ತಿರುವ ಗೋಡ್ಸೆಗಾಗಲೀ, ಸಾವರ್ಕರ್‌ಗಾಗಲೀ ಅಲ್ಲ.

ಗಾಂಧೀಜಿಯ ಮೌಲ್ಯವನ್ನು ಗಾಂಧೀಜಿಯನ್ನು ವಿರೋಧಿಸುತ್ತಲೇ ಬಂದಿರುವ ಸಂಘಪರಿವಾರದ ಮಹಾ ನಾಯಕ ಪ್ರಧಾನಿ ಮೋದಿಯವರೇ ತಮ್ಮ ಪಡೆಗೆ ಸಂದೇಶ ರವಾನಿಸಿದ್ದಾರೆ. ಅವರಿಗೂ ಅದೇ ಅನಿವಾರ್ಯವಾಗಿತ್ತು.

ನನ್ನ ಜೀವನವೇ ನನ್ನ ಸಂದೇಶ ಎಂದಿದ್ದರು ಗಾಂಧೀಜಿ.

ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಗಳೇ ಹೋರಾಟದ ಪ್ರಬಲ ಅಸ್ತ್ರಗಳಾಗಿ ರೂಪುಗೊಂಡವು ಮತ್ತು ಇವತ್ತಿಗೂ ಸತ್ಯ, ಸತ್ಯಾಗ್ರಹ, ಅಹಿಂಸಾ ತತ್ವಗಳೇ ಜಗತ್ತನ್ನು ಪ್ರಭಾವಿಸುತ್ತಿರುವ ಅಂಶಗಳಾಗಿವೆ.

ಜಿ೨೦ ನಾಯಕರುಗಳಿಗೆ ಮೋದಿ ಉಡುಗೊರೆಯಾಗಿ ನೀಡಿದ ಖಾದಿ ವಸ್ತ್ರ ಕೂಡ ಗಾಂಧೀಜಿಯುವರ ಅಹಿಂಸಾತ್ಮಕ ಪ್ರತಿರೋಧದ ಪ್ರಮುಖ ಸಂಕೇತವೇ ಆಗಿದೆ.

ಅಂದು ಈ ಅಹಿಂಸಾತ್ಮಕ ಪ್ರತಿರೋಧದ ಆಂದೋಲನವೇ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತವನ್ನು ಬಿಡಿಸಿದ್ದು. ಗಾಂಧೀಜಿಯ ಸ್ವಾವಲಂಬನೆಯ ಲಾಂಛನವಾಗಿದ್ದುದು ಖಾದಿ ಬಟ್ಟೆ.

ಬ್ರಿಟಿಷರ ಉತ್ಪನ್ನಗಳನ್ನು ಬಹಿಷ್ಕರಿಸಲು ಭಾರತೀಯರು ಸ್ಥಳೀಯವಾಗಿಯೇ ಬಟ್ಟೆ ತಯಾರಿಸಿಕೊಳ್ಳಲು ಗಾಂಧಿ ಪ್ರೇರಣೆಯಾದರು.

ದೇಶದ ರಾಜಕೀಯ ಮತ್ತು ಆರ್ಥಿಕ ವಿಮೋಚನೆಯನ್ನು ಸಂಕೇತಿಸಲು ಚರಕ ಸಾಧನವಾಯಿತು. ಇವತ್ತಿಗೂ ದೇಶಕ್ಕೆ ಭೇಟಿ ನೀಡುವ ವಿದೇಶಗಳ ನಾಯಕರನ್ನು ಸ್ವತಃ ಮೋದೀಜಿ ಅವರೇ ಸಾಬರಮತಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಗಾಂಧೀಜಿಯ ಚರಕದ ಬಳಿ ಕೂರಿಸಿ ಸ್ವತಃ ಅದರ ವಿವರಣೆ ಕೊಡುತ್ತಾರೆ. ಅದು ಗಾಂಧೀಜಿಯ ಮಹತ್ವ. ಯಾರೋ ಗಿರಿರಾಜ್ ಸಿಂಗ್ ಅಥವಾ ಪ್ರಜ್ಞಾ ಸಿಂಗ್ ಠಾಕೂರ್ ಬಂದು ಅದನ್ನು ಇಲ್ಲವಾಗಿಸಲು ಆಗುವುದಿಲ್ಲ.

ಜಿ೨೦ ನಾಯಕರೆಲ್ಲ ಖಾದಿ ವಸ್ತ್ರವನ್ನು ಕೊರಳ ಸುತ್ತ ಧರಿಸಿಕೊಂಡು ರಾಜ್‌ಘಾಟ್‌ನಲ್ಲಿ ನಿಂತ ಕ್ಷಣದ ಚಿತ್ರವನ್ನು ನೋಡುವಾಗ ಇತಿಹಾಸದ ಇದಿಷ್ಟೂ ಅಧ್ಯಾಯಗಳು ಒಮ್ಮೆ ಮನಸ್ಸನ್ನು ತುಂಬದೇ ಇರುವುದು ಸಾಧ್ಯವೇ ಇಲ್ಲ.

ದೇಶದೊಳಗೆ ಗಾಂಧಿ ಪರಂಪರೆ ಭಾರತೀಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ.

ಭಾರತೀಯ ನೋಟುಗಳಲ್ಲಿ ಅವರ ಚಿತ್ರವಿರುತ್ತದೆ.

ಕಟ್ಟಡಗಳು, ವಸ್ತುಸಂಗ್ರಹಾಲಯಗಳು, ಬೀದಿಗಳು ಮತ್ತು ಹೆಗ್ಗುರುತುಗಳಿಗೆ ಗಾಂಧಿ ಹೆಸರಿಡಲಾಗುತ್ತದೆ.

‘‘ವೈವಿಧ್ಯಮಯ ರಾಷ್ಟ್ರಗಳು ಒಗ್ಗೂಡುತ್ತಿದ್ದಂತೆ, ಗಾಂಧೀಜಿಯವರ ಕಾಲಾತೀತ ಆದರ್ಶ, ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಗೆ ಮಾರ್ಗದರ್ಶನ ನೀಡುತ್ತವೆ’’ ಎಂದು ಎಕ್ಸ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಸ್ವತಃ ಬಿಜೆಪಿ ಕೂಡ ಗಾಂಧೀಜಿಯ ಭಜನೆಯ ಸಾಲುಗಳನ್ನು ಉಲ್ಲೇಖಿಸಿ ದೇಶದ ಶಾಂತಿ, ಪ್ರೀತಿ, ಸೇವೆ ಹಾಗೂ ಅಹಿಂಸೆಯ ಐಕಾನ್ ಆಗಿರುವ ಗಾಂಧೀಜಿಯವರ ಸ್ಮಾರಕದಲ್ಲಿ ಪ್ರಧಾನಿ ಮೋದಿ ಹಾಗೂ ವಿಶ್ವ ನಾಯಕರು ಗೌರವ ಸಲ್ಲಿಸಿದರು ಎಂದು ಬರೆಯಬೇಕಾಗಿ ಬಂದಿದೆ. ಅದಕ್ಕೆ ಬೇರೆ ದಾರಿಯಿಲ್ಲ.

ಗೋಡ್ಸೆಯನ್ನು ಪ್ರಶಂಸಿಸಿದರೆ ಜಗತ್ತು ಉಗಿಯುತ್ತದೆ. ಗಾಂಧೀಜಿಯನ್ನು ಸ್ಮರಿಸಿದರೆ ಜಗತ್ತು ಜೊತೆಗೂಡುತ್ತದೆ. ಅಷ್ಟೇ ಸತ್ಯ.

ಯಾಕೆಂದರೆ ಗಾಂಧಿ ಮಾತ್ರವೇ ಅಗಾಧ ಸತ್ಯ.

ಸತ್ಯವನ್ನು ಮರೆಮಾಚುವ, ಇತಿಹಾಸವನ್ನು ಅಳಿಸಿಬಿಡಬಲ್ಲೆವೆಂಬ ಭ್ರಮೆಯಲ್ಲಿ ರಾಜಕಾರಣ ಮಾಡುವವರಿಗೂ ಗಾಂಧಿ ಎಂಬ ಸತ್ಯದ ಎದುರು ತಾವೇನೂ ಅಲ್ಲ ಎಂಬುದು ಗೊತ್ತಿದೆ ಮತ್ತು ಅವರನ್ನು ಅದು ಯಾವತ್ತಿಗೂ ಒಳಗಿಂದಲೇ ಕಾಡುವ ಅಳುಕೂ ಹೌದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಪೂರ್ವಿ

contributor

Similar News