ಎನ್‌ಕೌಂಟರ್ ಕೂಡಾ ಜಾತಿ ನೋಡಿಕೊಂಡು ನಡೆಯುತ್ತಿದೆಯೇ?

ಎನ್‌ಕೌಂಟರ್‌ಗಳ ನ್ಯಾಯಸಮ್ಮತ ತನಿಖೆ ಆಗಬೇಕೆಂದು ಸುಪ್ರೀಂ ಕೋರ್ಟ್‌ನಿಂದ ಆದೇಶವೇ ಇದೆ. ಮಂಗೇಶ್ ಯಾದವ್ ಎನ್‌ಕೌಂಟರ್ ಬಗ್ಗೆ ಸುಲ್ತಾನ್‌ಪುರದ ಎಸ್‌ಪಿ ಕೃತಿಕಾ ಜ್ಯೋತ್ಸ್ನಾ ತನಿಖೆಗೆ ಆದೇಶಿಸಿದ್ದಾರೆ. ಎನ್‌ಕೌಂಟರ್‌ಗಳು ನ್ಯಾಯದ ವಿಶ್ವಾಸಾರ್ಹತೆಯನ್ನೇ ಕೊಲ್ಲುತ್ತಿವೆ ಎಂಬುದು ಕೂಡ ಅಷ್ಟೇ ಸತ್ಯ. ಧರ್ಮವನ್ನು ನೋಡಿ ಬುಲ್ಡೋಜರ್ ಬಳಸುವುದು ನಡೆದಿರುವಂತೆಯೇ ಜಾತಿ ನೋಡಿಕೊಂಡು ಎನ್‌ಕೌಂಟರ್ ಮಾಡಲಾಗುತ್ತಿದೆ ಎಂಬುದನ್ನೂ ಜನ ಈಗ ಅರ್ಥ ಮಾಡಿಕೊಳ್ಳಬೇಕಾಗಿದೆ.

Update: 2024-09-11 07:13 GMT

ಉತ್ತರ ಪ್ರದೇಶದಲ್ಲಿ ಮಂಗೇಶ್ ಯಾದವ್ ಎಂಬ ವ್ಯಕ್ತಿಯ ಎನ್‌ಕೌಂಟರ್ ನಡೆದಿದೆ.

ಜಾತಿಯನ್ನು ನೋಡಿ ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್ ಮಾಡಲಾಗುತ್ತಿದೆ ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ಅಖಿಲೇಶ್ ಯಾದವ್ ಸೆಪ್ಟಂಬರ್ 5ರಿಂದಲೂ ಈ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ.

‘‘ಪ್ರಕರಣದ ಬೇರೆ ಆರೋಪಿಗಳು ಶರಣಾಗುವಂತೆ ಮಾಡಲಾಗಿದೆ. ಅದರೆ, ಜಾತಿಯ ಕಾರಣದಿಂದಾಗಿ ಮಂಗೇಶ್ ಯಾದವ್‌ನನ್ನು ಎನ್‌ಕೌಂಟರ್‌ನಲ್ಲಿ ಬಲಿ ಹಾಕಲಾಗಿದೆ’’ ಎಂದು ಅಖಿಲೇಶ್ ಆರೋಪಿಸಿದ್ದಾರೆ.

ತನ್ನ ಪರವಾಗಿ ಪುರಾವೆಗಳನ್ನಾದರೂ ಕೊಡುವ, ತಾನು ಅಪರಾಧಿಯಲ್ಲ ಎಂದಾದರೂ ಸಾಬೀತು ಮಾಡುವ ಅವಕಾಶವನ್ನೇ ಆತನಿಂದ ಶಾಶ್ವತವಾಗಿ ಕಸಿದುಕೊಳ್ಳಲಾಗಿದೆ.

ಎನ್‌ಕೌಂಟರ್‌ಗಳ ನ್ಯಾಯಸಮ್ಮತ ತನಿಖೆ ಆಗಬೇಕೆಂದು ಸುಪ್ರೀಂ ಕೋರ್ಟ್‌ನಿಂದ ಆದೇಶವೇ ಇದೆ. ಮಂಗೇಶ್ ಯಾದವ್ ಎನ್‌ಕೌಂಟರ್ ಬಗ್ಗೆ ಸುಲ್ತಾನ್‌ಪುರದ ಎಸ್‌ಪಿ ಕೃತಿಕಾ ಜ್ಯೋತ್ಸ್ನಾ ತನಿಖೆಗೆ ಆದೇಶಿಸಿದ್ದಾರೆ.

ಎನ್‌ಕೌಂಟರ್‌ಗಳು ನ್ಯಾಯದ ವಿಶ್ವಾಸಾರ್ಹತೆಯನ್ನೇ ಕೊಲ್ಲುತ್ತಿವೆ ಎಂಬುದು ಕೂಡ ಅಷ್ಟೇ ಸತ್ಯ. ಧರ್ಮವನ್ನು ನೋಡಿ ಬುಲ್ಡೋಜರ್ ಬಳಸುವುದು ನಡೆದಿರುವಂತೆಯೇ ಜಾತಿ ನೋಡಿಕೊಂಡು ಎನ್‌ಕೌಂಟರ್ ಮಾಡಲಾಗುತ್ತಿದೆ ಎಂಬುದನ್ನೂ ಜನ ಈಗ ಅರ್ಥ ಮಾಡಿಕೊಳ್ಳಬೇಕಾಗಿದೆ.

ಬುಲ್ಡೋಜರ್ ಉತ್ತರ ಪ್ರದೇಶದ ರಾಜಕೀಯ ಮತ್ತು ಸರಕಾರದ ನೀತಿಯ ಭಾಗವೇ ಆಗಿಹೋಗಿದೆ. ಎನ್‌ಕೌಂಟರ್‌ಗಳ ಬಗ್ಗೆಯಂತೂ ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಎತ್ತುತ್ತಲೇ ಬರಲಾಗಿದೆ.

ಎನ್‌ಕೌಂಟರ್ ನಕಲಿ ಎಂಬುದು ಸಾಬೀತಾದರೆ ಪೊಲೀಸ್ ಅಧಿಕಾರಿಗೆ ಗಲ್ಲು ಶಿಕ್ಷೆಯನ್ನೂ ವಿಧಿಸಬೇಕಾಗಿ ಬರಬಹುದು ಎಂದು ಪ್ರಕರಣವೊಂದರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಟ್ರಿಗರ್ ಎಳೆಯುವುದನ್ನು ಆನಂದಿಸುವ ಪೊಲೀಸರಿಗೆ ಯಾರನ್ನಾದರೂ ಎನ್‌ಕೌಂಟರ್ ಹೆಸರಿನಲ್ಲಿ ಬಲಿಹಾಕಿ ಬಚಾವಾಗಬಹುದು ಎಂದೆನ್ನಿಸಿರಬಹುದು. ಆದರೆ ಅಂಥವರಿಗೆ ಗಲ್ಲುಶಿಕ್ಷೆಯೂ ಕಾದಿರಬಹುದು ಎಂಬ ಅರ್ಥದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ನಕಲಿ ಎನ್‌ಕೌಂಟರ್ ಮಾಡುವವರು ಶಾಶ್ವತವಾಗಿ ವ್ಯವಸ್ಥೆಯಲ್ಲಿ ಅಪರಾಧಿಯಾಗಿಬಿಡುತ್ತಾರೆ. ಅವರು ಸರಕಾರದ ಇಷಾರೆಯ ಮೇರೆಗೆ ಕೆಲಸ ಮಾಡುತ್ತಾರೆ. ಸರಕಾರದ ಕೃಪೆಯಿಂದ ಬಚಾವಾಗುತ್ತಾರೆ.

ಸುಲ್ತಾನ್‌ಪುರದ ದರೋಡೆ ಪ್ರಕರಣದಲ್ಲಿ ಮಂಗೇಶ್ ಯಾದವ್ ಎನ್‌ಕೌಂಟರ್ ನಡೆದಿದೆ ಮತ್ತದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ವಿಪಿನ್ ಸಿಂಗ್ ಎಂಬ ಮುಖ್ಯ ಆರೋಪಿಗೆ ಶರಣಾಗಲು ಅವಕಾಶ ಮಾಡಿಕೊಟ್ಟು, ಮಂಗೇಶ್ ಯಾದವ್‌ನನ್ನು ಕೊಲ್ಲಲಾಗಿದೆ ಎಂಬುದು ಆರೋಪ.

ಎನ್‌ಕೌಂಟರ್‌ಗಳನ್ನು ಯಾಕೆ ಅನುಮಾನದಿಂದ ನೋಡಲೇಬೇಕಾಗಿದೆ?

ಹೈದರಾಬಾದ್‌ನಲ್ಲಿ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2019ರ ಡಿಸೆಂಬರ್ 6ರಂದು ಎನ್‌ಕೌಂಟರ್ ನಡೆದಿತ್ತು. ನಾಲ್ವರು ಆ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಪೊಲೀಸರ ಮೇಲೆ ನಾಲ್ವರೂ ದಾಳಿಗೆ ಯತ್ನಿಸಿದರು ಮತ್ತು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂಬುದು ಪೊಲೀಸರು ಕೊಟ್ಟ ಸಬೂಬಾಗಿತ್ತು.

ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ಆ ಎನ್‌ಕೌಂಟರ್ ಅನ್ನು ನಕಲಿ ಎಂದಿತ್ತು. ಆನಂತರ, ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ 10 ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಹೆಸರಿನ ಕಪ್ಪು ಅಮೆರಿಕನ್‌ನನ್ನು ಅಂಗಡಿಯಲ್ಲಿ ಕಪ್ಪುಹಣ ಕೊಟ್ಟನೆಂಬ ಕಾರಣಕ್ಕೆ ಬಂಧಿಸಿದ್ದಾಗ ಕಸ್ಟಡಿಯಲ್ಲಿರುವಾಗಲೇ ಸಾವಾಗಿತ್ತು. ಪೊಲೀಸರ ಈ ಹಿಂಸೆಯ ವಿರುದ್ಧ ಇಡೀ ಅಮೆರಿಕ ರಸ್ತೆಗಿಳಿದಿತ್ತು. ಒಂದಿಡೀ ವರ್ಷ ತನಿಖೆ ನಡೆದಿತ್ತು. ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅಪರಾಧ ಸಾಬೀತಾಗಿತ್ತು. 22 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ನಾಗರಿಕರು ನಡೆಸಿದ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ, ಪೊಲೀಸರು ಮಂಡಿಯೂರಿ ಕ್ಷಮೆ ಕೇಳಬೇಕಾಯಿತು.

ಆದರೆ ಇಲ್ಲಿ ಬುಲ್ಡೋಜರ್ ಮತ್ತು ಎನ್‌ಕೌಂಟರ್ ಮೂಲಕ ಭಯವಿಡಲಾಗುತ್ತಿದೆ. ಸಮಾಜವನ್ನು ಭಯದಲ್ಲಿ ಬೀಳಿಸಲಾಗುತ್ತಿದೆ.

ಮಂಗೇಶ್ ಯಾದವ್ ಎನ್‌ಕೌಂಟರ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಡಿರುವ ಸುದ್ದಿಗಳನ್ನು ನೋಡಿದರೆ ಬೆಚ್ಚಿಬೀಳುವಂತಾಗುತ್ತದೆ. ಹಾಗೆಯೇ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಪೊಲೀಸರೆಲ್ಲ ಮೇಲ್ಜಾತಿಯವರು ಎಂದು ಹೇಳಲಾಗುತ್ತಿದೆ.

ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಡಿಎಸ್‌ಪಿ ಧರ್ಮೇಶ್ ಕುಮಾರ್ ಶಾಹಿ ಅವರ ಪತ್ನಿ ರಿತು ಶಾಹಿ ಗೋರಖ್‌ಪುರದ ಬಿಜೆಪಿ ಪದಾಧಿಕಾರಿಯಾಗಿದ್ದು, ಸೆಪ್ಟಂಬರ್ 3ರಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ಧಾರೆ.

ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕೇಸ್ ದಾಖಲಿಸಲು ಮಂಗೇಶ್ ಯಾದವ್ ತಂದೆ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಈ ಎನ್‌ಕೌಂಟರ್ ವಿಚಾರವಾಗಿ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗೇಶ್ ಎನ್‌ಕೌಂಟರ್ ನಕಲಿ ಎಂದು ಅಖಿಲೇಶ್ ಹೇಳಿದ್ದಾರೆ. ಇಡೀ ಪೊಲೀಸ್ ಕಾರ್ಯಾಚರಣೆಯ ಬಗ್ಗೆಯೇ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಆಡಳಿತ ಪಕ್ಷ ಸುಲ್ತಾನ್‌ಪುರ ಡಕಾಯಿತಿಯಲ್ಲಿ ಭಾಗಿಯಾಗಿರುವವರೊಂದಿಗೆ ಸಂಬಂಧ ಹೊಂದಿರುವಂತೆ ತೋರುತ್ತಿದೆ. ಅದಕ್ಕಾಗಿಯೇ, ನಕಲಿ ಎನ್‌ಕೌಂಟರ್‌ಗೆ ಮೊದಲು, ಅವರು ಮುಖ್ಯ ಆರೋಪಿಯನ್ನು ಸಂಪರ್ಕಿಸಿದ್ದಾರೆ.

ಇತರರ ಕಾಲಿಗೆ ಗುಂಡು ಹಾರಿಸುವಾಗ ಶರಣಾಗುವಂತೆ ಹೇಳಿದ್ದಾರೆ.

ಆದರೆ, ಮಂಗೇಶ್ ಯಾದವ್‌ನನ್ನು ಮಾತ್ರ ಜಾತಿಯ ಕಾರಣಕ್ಕೆ ಕೊಂದಿದ್ದಾರೆ ಎಂದು ಅಖಿಲೇಶ್ ಯಾದವ್ ಬರೆದಿದ್ದಾರೆ.

ನಕಲಿ ಎನ್‌ಕೌಂಟರ್‌ಗಳು ರಕ್ಷಕನನ್ನು ಭಕ್ಷಕನನ್ನಾಗಿ ಮಾಡುತ್ತವೆ. ನಿಜವಾದ ಪರಿಹಾರ ನಕಲಿ ಎನ್‌ಕೌಂಟರ್‌ಗಳಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿದೆ ಎಂದು ಹೇಳಿದ್ದಾರೆ ಅಖಿಲೇಶ್.

ಬಿಜೆಪಿ ಸರಕಾರ ಅಪರಾಧಗಳ ಅಮೃತ ಕಾಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸೇನೆ ಮಾಡಿದ ಎನ್‌ಕೌಂಟರ್ ಅನ್ನೂ ಜನರು ಪ್ರಶ್ನಿಸದೇಬಿಟ್ಟಿಲ್ಲ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಮ್ಮು-ಕಾಶ್ಮೀರದ ಪೂಂಛ್‌ನಲ್ಲಿ ಮೂವರು ನಾಗರಿಕರನ್ನು ಸೇನೆಯವರು ಕೊಂದಿದ್ದರು.ಅವರನ್ನು ಸೇನೆಯವರು ವಾಹನದಲ್ಲಿ ಕರೆದುಕೊಂಡು ಹೋದ ಬಳಿಕ ಅವರ ಮೃತದೇಹಗಳು ಪತ್ತೆಯಾದುದು ತೀವ್ರ ಕೋಲಾಹಲ ಸೃಷ್ಟಿಸಿತ್ತು.ವೀಡಿಯೊವೊಂದು ವೈರಲ್ ಆಗಿ ಈ ಸತ್ಯವೆಲ್ಲ ಬಯಲಾಗಿತ್ತು. ಸೇನೆಯ ಅಧಿಕಾರಿಗಳ ವಿರುದ್ಧವೇ ಕೇಸ್ ದಾಖಲಿಸಬೇಕಾಯಿತು.

ಹತ್ಯೆಯಾದವರ ಕುಟುಂಬದ ಒಬ್ಬೊಬ್ಬ ವ್ಯಕ್ತಿಗೆ ಉದ್ಯೋಗದ ಭರವಸೆಯನ್ನೂ ಸರಕಾರ ನೀಡಿತ್ತು

ಮಂಗೇಶ್ ಯಾದವ್ ಎನ್‌ಕೌಂಟರ್ ಅನ್ನು ಈಗ ಅಖಿಲೇಶ್ ಯಾದವ್ ಆಗಲೀ, ಸಂಜಯ್ ಸಿಂಗ್ ಆಗಲೀ ಪ್ರಶ್ನಿಸಿದ ಮಾತ್ರಕ್ಕೆ ಅವರು ಆರೋಪಿಯ ಪರವಾಗಿ ಮಾತಾಡುತ್ತಿದ್ದಾರೆ ಎಂದಲ್ಲ.

ಎನ್‌ಕೌಂಟರ್‌ಗಳು ನಕಲಿಯಲ್ಲ ಎಂದು ಸಾಬೀತಾಗುವುದು ಅವಶ್ಯವಾಗಿದೆ.

ಪೊಲೀಸರು ಮಂಗೇಶ್‌ನನ್ನು ಮನೆಯಿಂದ ಕರೆದುಕೊಂಡು ಹೋದರು. ವಿಚಾರಣೆ ನಡೆಸಿ ಬಿಡುತ್ತೇವೆ ಎಂದಿದ್ದರು. ಆದರೆ ಕಡೆಗೆ ಎನ್‌ಕೌಂಟರ್ ಮಾಡಲಾಗಿದೆ ಎಂದು ಹೇಳಲಾಯಿತು ಎಂದು ಮಂಗೇಶ್ ಸೋದರಿ ಹೇಳಿದ್ದಾರೆ.

ಆಭರಣ ಮಳಿಗೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಎಷ್ಟು ಮೌಲ್ಯದ ಮಾಲು ಕಳುವಾಗಿದೆಯೆಂದು ಮಾಲಕ ಹೇಳಿಯೇ ಇಲ್ಲ. ಆದರೆ ಪೊಲೀಸರು ರೂ. ಒಂದು ಕೋಟಿಯದ್ದು ಎನ್ನುತ್ತಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರು ಎತ್ತುತ್ತಿರುವ ಪ್ರಶ್ನೆಗಳು ಹಲವಾರಿವೆ.

ಮಂಗೇಶ್ ಯಾದವ್ ವಿರುದ್ಧ 7 ಕೇಸ್‌ಗಳಿವೆ. ಆದರೆ ಮುಖ್ಯ ಆರೋಪಿ ವಿಪಿನ್ ಸಿಂಗ್ ವಿರುದ್ಧ 34 ಕೇಸ್‌ಗಳಿವೆ.

ಆದರೆ ಆತ ಶರಣಾಗುವಂತೆ ಹೇಳಲಾಯಿತು.

ಇದೇ ಪ್ರಕರಣದಲ್ಲಿ ಸಚಿನ್ ಸಿಂಗ್, ಪುಷ್ಪೇಂದ್ರ ಸಿಂಗ್, ತ್ರಿಭುವನ್ ಸಿಂಗ್ ಎನ್ನುವವರೂ ಆರೋಪಿಗಳು. ಅವರೆಲ್ಲರನ್ನೂ ಬಂಧಿಸಲಾಗಿದೆ. ಮಂಗೇಶ್ ಯಾದವ್‌ನನ್ನು ಮಾತ್ರ ಎನ್‌ಕೌಂಟರ್ ಮಾಡಿ ಮುಗಿಸಲಾಗಿದೆ.

ಮಂಗೇಶ್ ಯಾದವ್ ಎನ್‌ಕೌಂಟರ್ ಕುರಿತು ಮುಖ್ಯಮಂತ್ರಿ ಆದಿತ್ಯನಾಥ್ ಕಡೆಯಿಂದ ಯಾವ ಹೇಳಿಕೆಯೂ ಬಂದಿಲ್ಲ.

ಕಳೆದ ಬಾರಿ ಯುಪಿ ಪೊಲೀಸರು ಒಂದು ಪ್ರಕಟಣೆ ಹೊರಡಿಸಿ, ಆದಿತ್ಯನಾಥ್ ಸರಕಾರದ 6 ವರ್ಷಗಳ ಅವಧಿಯಲ್ಲಿ ಪೊಲೀಸರು 10,713 ಎನ್‌ಕೌಂಟರ್ ಮಾಡಿರುವುದಾಗಿ ಹೇಳಿದ್ದರು. ಒಂದೇ ಜಿಲ್ಲೆಯ ಪೊಲೀಸರು 3 ಸಾವಿರಕ್ಕಿಂತ ಹೆಚ್ಚು ಎನ್‌ಕೌಂಟರ್ ನಡೆಸಿದ್ದರು.

ಈಗ ಎನ್‌ಕೌಂಟರ್ ಅನ್ನು ಜಾತಿ ನೋಡಿಕೊಂಡು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಬಂದಿದೆ.

ಮಂಗೇಶ್ ಎನ್‌ಕೌಂಟರ್‌ನ ವಿವರ ನೋಡಿದರೇ ಯಾರಿಗಾದರೂ ಅದೇ ಸಂಶಯ ಬರುತ್ತದೆ.

ಎಲ್ಲವೂ ಹೌದೆನ್ನಿಸುತ್ತಿದ್ದರೂ ಇದರ ಬಗ್ಗೆ ಮೌನ ವಹಿಸಲಾಗುತ್ತದೆ.

ಮೌನವೂ ಒಂದು ರಾಜಕೀಯವೇ ಆಗುವುದು ಇನ್ನೂ ಅಪಾಯಕಾರಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News