ಮೋದಿಯವರಿಗೆ ದೊಡ್ಡ ಸವಾಲಾಗಲಿದ್ದಾರೆಯೇ ಕೇಜ್ರಿವಾಲ್?

ಜನಸಾಮಾನ್ಯರಿಗೆ ರಾಜಕಾರಣಿಗಳ ಬಗ್ಗೆ ಇರುವ ಅಸಮಾಧಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡವರು ಕೇಜ್ರಿವಾಲ್. ಅವರು ರಾಜಕಾರಣಿಯ ಹಾಗೆ ಜನರ ಮುಂದೆ ಹೋಗದೆ ಆಂದೋಲನಕಾರನಾಗಿ, ಹೋರಾಟಗಾರನಾಗಿ ಜನರ ಮುಂದೆ ಹೋಗಿ ಅವರ ವಿಶ್ವಾಸ ಗಳಿಸಿದವರು. ಈಗ ಅಧಿಕಾರದ ಭಾರ ಕೆಳಗಿಟ್ಟಿರುವ ಅವರು ಮತ್ತೆ ಅದೇ ರೂಪ ತಾಳಲಿದ್ದಾರೆ.

Update: 2024-09-19 07:01 GMT

ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಕೇಜ್ರಿವಾಲ್ ಬಿಜೆಪಿ ಎದುರು ದೊಡ್ಡ ಜಯ ಸಾಧಿಸಿಬಿಟ್ಟಂತೆ ಕಾಣುತ್ತಿದೆ

ಮೋದಿ ಅಧಿಕಾರಕ್ಕೆ ಬಂದ ಹೊತ್ತಲ್ಲಿಯೇ ಕೇಜ್ರಿವಾಲ್ ಕೂಡ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿ ಅಧಿಕಾರಕ್ಕೆ ಏರಿದ್ದರು. ಮೋದಿ ದೇಶದ ಅಧಿಕಾರ ಹಿಡಿದಿದ್ದರೆ, ದಿಲ್ಲಿಯಲ್ಲಿ ಕೇಜ್ರಿವಾಲ್ ಅಧಿಕಾರ ಹಿಡಿದಿದ್ದರು.

ಯಾವ ಪಕ್ಷವೂ ಪಡೆಯದಂಥ ರಾಜಕೀಯ ಸಫಲತೆಯನ್ನು ಆಪ್ ದಿಲ್ಲಿಯಲ್ಲಿ ಪಡೆದಿದೆ. ಇಂಥ ಪಕ್ಷವನ್ನು ಮಣಿಸಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸತತವಾಗಿ ಅಧಿಕಾರಶಾಹಿಯನ್ನು ಬಳಸಿಕೊಂಡಿತು. ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಎಲ್ಲರನ್ನೂ ಜೈಲಿಗೆ ಕಳಿಸಲಾಯಿತು. ಸಿಎಂ ಆಗಿದ್ದ ಕೇಜ್ರಿವಾಲ್ ಅವರನ್ನೂ ಜೈಲಿಗೆ ಹಾಕಲಾಯಿತು.

ಕೇಜ್ರಿವಾಲ್ ಈಗ ಸೆಪ್ಟಂಬರ್ 17ರಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರು ಮೋದಿಗೂ ಬಿಜೆಪಿಗೂ ಖಡಕ್ ಸವಾಲು ಎಸೆದಂತಾಗಿದೆ. ಈಗ ಆತಿಶಿ ಸಿಂಗ್ ದಿಲ್ಲಿಯ ಹೊಸ ಸಿಎಂ ಆಗಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಬಿಜೆಪಿ ಎಂದರೆ ಅದು ನರೇಂದ್ರ ಮೋದಿ. ಹಾಗೆಯೇ ಎಎಪಿ ಎಂದರೆ ಅದು ಅರವಿಂದ ಕೇಜ್ರಿವಾಲ್. ಈಗವರು ಮುಖ್ಯಮಂತ್ರಿಯ ಹೊಣೆಗಾರಿಕೆಯಿಂದ ಮುಕ್ತರಾಗಿದ್ದಾರೆ. ಅವರ ಜೊತೆ 2013ರಲ್ಲಿ ಆಂದೋಲನದಲಿದ್ದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಗೋಪಾಲ್ ರಾಯ್ ಅವರೂ ಈಗ ಅಧಿಕಾರದ ಭಾರದಿಂದ ಕಳಚಿಕೊಂಡಿದ್ದಾರೆ.

ಇದು ಬಿಜೆಪಿಗೆ ಶುಭ ಸುದ್ದಿ ಅಲ್ಲವೇ ಅಲ್ಲ.

ಹೊಸ ಸಿಎಂ ಆಗಿ ಆಯ್ಕೆಯಾಗಿರುವ ಆತಿಶಿ ಆಂದೋಲನದಲ್ಲಿ ಇರಲಿಲ್ಲ. ಆದರೆ ಆಡಳಿತದಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ನೇತೃತ್ವದ ಹೊಸ ತಂಡ ಈಗ ದಿಲ್ಲಿ ಸರಕಾರವನ್ನು ಮುನ್ನಡೆಸಲಿದೆ.

ಈಗ, ಆಡಳಿತದ ಜಂಜಾಟ ಇಲ್ಲದ ಕೇಜ್ರಿವಾಲ್ ಆ್ಯಂಡ್ ಟೀಮ್ ಮತ್ತೆ ಆಂದೋಲನದ ಶೈಲಿಗೆ ತಿರುಗಿದರೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.

ಈಗಾಗಲೇ ಒಮ್ಮೆ ಎಪ್ಪತ್ತರಲ್ಲಿ 67, ಇನ್ನೊಮ್ಮೆ ಎಪ್ಪತ್ತರಲ್ಲಿ 62 ಸೀಟು ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಆಪ್‌ನ ನೇತೃತ್ವ ವಹಿಸಿದ್ದ ಕೇಜ್ರಿವಾಲ್ ಈಗ ಬಿಜೆಪಿಯಿಂದಾಗಿ ಅಧಿಕಾರ ಕಳೆದುಕೊಂಡರು. ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಜನರ ನಡುವೆ ಹೋಗಿ ಸಂಘಟನೆ ಹಾಗೂ ಪ್ರಚಾರ ಶುರು ಮಾಡಿದರೆ ಅದಕ್ಕೆ ಠಕ್ಕರ್ ಕೊಡುವುದು ದಿಲ್ಲಿ ಬಿಜೆಪಿಗಂತೂ ಅಸಾಧ್ಯ. ಹೀಗೆ ಬಿಜೆಪಿ, ಮೋದಿ ಹಾಗೂ ಅಮಿತ್ ಶಾ ಪಾಲಿಗೆ ಹೊಸ ಸಂಕಟ ಹಾಗೂ ಸವಾಲನ್ನು ತಂದಿಟ್ಟಿದ್ದಾರೆ ಕೇಜ್ರಿವಾಲ್.

ದಿಲ್ಲಿ ಬಿಜೆಪಿ ಘಟಕದಲ್ಲಿ ಕೇಜ್ರಿವಾಲ್‌ಗೆ ಸವಾಲು ಹಾಕಬಲ್ಲ ನಾಯಕನೂ ಇಲ್ಲ, ಅಂತಹ ಬಲಿಷ್ಠ ಸಂಘಟನೆಯೂ ಇಲ್ಲ, ಆಪ್ ನಂತಹ ಕಾರ್ಯಕರ್ತರ ಪಡೆಯೂ ಇಲ್ಲ.

ಇನ್ನೊಂದು ಕಡೆ ಮೊಹಲ್ಲಾ ಕ್ಲಿನಿಕ್, ಅತ್ಯಾಧುನಿಕ ಸರಕಾರೀ ಶಾಲೆ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಎಲ್ಲವನ್ನೂ ಕೊಟ್ಟ ಕೇಜ್ರಿವಾಲ್‌ರನ್ನು ಬಿಜೆಪಿ ಕೆಳಗಿಳಿಸಿದೆ, ಅವರನ್ನು ಮತ್ತೆ ತಂದರೆ ಮಾತ್ರ ಅವೆಲ್ಲವೂ ಮತ್ತೆ ಸಿಗಲಿದೆ ಎಂಬುದು ಆಮ್ ಆದ್ಮಿಯ ಪ್ರಚಾರ. ಆದರೆ ಬಿಜೆಪಿ ಬಳಿ ಇದನ್ನೆಲ್ಲಾ ಎದುರಿಸಲು ಇರೋದು ಲೆಫ್ಟಿನೆಂಟ್ ಗವರ್ನರ್ ಮಾತ್ರ.

ಸರಕಾರಿ ವಾಹನದಿಂದ ಇಳಿದು ಪುಟ್ಟ ಕಾರಿನಲ್ಲಿ ಕೇಜ್ರಿವಾಲ್ ದಿಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ಕಾಣಿಸಿಕೊಳ್ಳತೊಡಗಿದರೆ ಅದನ್ನು ಎದುರಿಸಲು ಬಿಜೆಪಿಗೆ ಸಾಧ್ಯವೇ ?

ಜನಸಾಮಾನ್ಯರಿಗೆ ರಾಜಕಾರಣಿಗಳ ಬಗ್ಗೆ ಇರುವ ಅಸಮಾಧಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡವರು ಕೇಜ್ರಿವಾಲ್. ಅವರು ರಾಜಕಾರಣಿಯ ಹಾಗೆ ಜನರ ಮುಂದೆ ಹೋಗದೆ ಆಂದೋಲನಕಾರನಾಗಿ, ಹೋರಾಟಗಾರನಾಗಿ ಜನರ ಮುಂದೆ ಹೋಗಿ ಅವರ ವಿಶ್ವಾಸ ಗಳಿಸಿದವರು. ಈಗ ಅಧಿಕಾರದ ಭಾರ ಕೆಳಗಿಟ್ಟಿರುವ ಅವರು ಮತ್ತೆ ಅದೇ ರೂಪ ತಾಳಲಿದ್ದಾರೆ.

ಬೆನ್ನಿಗೆ ಅವರು ದಿಲ್ಲಿ ಸಿಎಂ ಆಗಿ ಕೊಟ್ಟಿರುವ ಹಲವಾರು ಜನಪರ ಕಾರ್ಯಕ್ರಮಗಳೂ, ಯೋಜನೆಗಳೂ ಇವೆ. ದಿಲ್ಲಿಯ ಮಧ್ಯಮ ವರ್ಗ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಜೊತೆಗಿದೆ. ಅಲ್ಲಿನ ಎಂಸಿಡಿ ಅಂದರೆ ಕಾರ್ಪೊರೇಷನ್ ಕೂಡ ಆಮ್ ಆದ್ಮಿ ಕೈಯಲ್ಲಿದೆ. ಹಾಗಾಗಿ ಈ ಬಾರಿ ದಿಲ್ಲಿಯಲ್ಲಿ ಕೇಜ್ರಿವಾಲ್ ಎಬ್ಬಿಸಲಿರುವ ಸುಂಟರಗಾಳಿಗೆ ಬಿಜೆಪಿ ಏನಾಗಲಿದೆ ಎಂದು ಯಾರೂ ಊಹಿಸಬಹುದು.

ಈಗ ಬಿಜೆಪಿಯೊಳಗಿನ ತಳಮಳಗಳೇನು?

ಮೋದಿ ಹಾಗೂ ಅಮಿತ್ ಶಾ ಸೇರಿ ದಿಲ್ಲಿಯ ಸಿಎಂ ಅನ್ನು ಬದಲಾಯಿಸುತ್ತೇವೆ ಎಂದು ಹೊರಟಾಗ ಬಿಜೆಪಿಯಲ್ಲೇ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮೋದಿಗೆ ತೀರಾ ಆಗಿ ಬಾರದ ಸಂಜಯ್ ಜೋಶಿ ಹೆಸರನ್ನು ಆರೆಸ್ಸೆಸ್ ಮುಂದೆ ಮಾಡುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಉತ್ತರ ಪ್ರದೇಶದ ಕೆಲ ಮಾಧ್ಯಮಗಳಲ್ಲಿ ಈ ಸುದ್ದಿ ಬರುತ್ತಿದ್ದು, ಅದರಲ್ಲಿ ಸತ್ಯಾಂಶ ಇದೆ ಎಂದಾದರೆ ಅದು ಮೋದಿಗೆ ಆಘಾತಕಾರಿ.

ಮೋದಿಗೆ ಆ ಹೆಸರಿನ ಕುರಿತು ಸಹಮತವಿಲ್ಲದಿದ್ದರೂ ಆ ಹೆಸರು ಚರ್ಚೆಯಲ್ಲಂತೂ ಇದೆ ಎನ್ನುತ್ತಿದ್ದಾರೆ ಯುಪಿಯ ಕೆಲವು ಪತ್ರಕರ್ತರು.

ಇತ್ತ ಆಪ್‌ನಲ್ಲಿ ಕೇಜ್ರಿವಾಲ್ ಎದುರಿಗೆ ಇರುವುದು ದಿಲ್ಲಿಯನ್ನು ಗೆಲ್ಲುವ ಯೋಚನೆ ಮಾತ್ರ. ಹಾಗಾಗಿ ಹರ್ಯಾಣದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬೆಲ್ಲ ಮಾತುಗಳಿಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ.

ಕೇಜ್ರಿವಾಲ್ ದೇಶದ ತುಂಬೆಲ್ಲ ಪ್ರಭಾವ ಬೀರುವುದಕ್ಕೆ ಆಧಾರವಾಗಿರುವುದೇ ದಿಲ್ಲಿ. ದಿಲ್ಲಿಯ ಮೇಲೆ ಹಿಡಿತವಿಟ್ಟುಕೊಳ್ಳುವುದಕ್ಕಾಗಿ ಮೋದಿ ಸರಕಾರ ಏನೆಲ್ಲ ಆಟವನ್ನಾಡಿತು ಎಂಬುದನ್ನು ನೋಡಿದ್ದೇವೆ.

ಲೆಫ್ಟಿನೆಂಟ್ ಗವರ್ನರ್ ಮೂಲಕ ಅದು ದಿಲ್ಲಿಯನ್ನು ನಿಯಂತ್ರಿಸುವ ತಂತ್ರ ಅನುಸರಿಸಿತು. ಅಂತಿಮವಾಗಿ ಇದರಿಂದ ಬಿಜೆಪಿಗೆ ರಾಜಕೀಯವಾಗಿ ಧಕ್ಕೆಯಾಯಿತು.

ಕೇಜ್ರಿವಾಲ್‌ರಿಗೆ ಮುಖಾಮುಖಿಯಾಗಬಲ್ಲ ನಾಯಕ ದಿಲ್ಲಿ ಬಿಜೆಪಿಯಲ್ಲಿ ಈ ಮೊದಲೂ ಇದ್ದಿರಲಿಲ್ಲ, ಈಗಲೂ ಇಲ್ಲ. ಬಿಜೆಪಿಗೆ ಇದ್ದ ಒಬ್ಬನೇ ನಾಯಕ ದಿಲ್ಲಿಯಲ್ಲಿ ಹರ್ಷವರ್ಧನ್ ಆಗಿದ್ದರು. ಆದರೆ ಎಎಪಿಯ ಪ್ರಮುಖ ನಾಯಕರನ್ನು ಸಿಲುಕಿಸಿ ಹಾಕಲು ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡಿತು ಬಿಜೆಪಿ.

ಎಲ್ಲರನ್ನೂ ಜೈಲಿಗೆ ಅಟ್ಟಿ ಎಎಪಿಯನ್ನು ದುರ್ಬಲಗೊಳಿಸುವ, ಜನರ ಮನಸ್ಸಿನಿಂದ ಮರೆಮಾಚುವ ಯತ್ನ ನಡೆದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಆಪ್‌ನ ನಾಯಕರು ಜೈಲಿನಿಂದ ಮರಳುವುದು ಸಾಧ್ಯವಾಗಿದೆ.

ಕೇಜ್ರಿವಾಲ್ ಬಂಧನದ ಬಳಿಕ ಆಪ್ ಮುಗಿದೇ ಹೋಗುತ್ತದೆ ಎಂಬ ಊಹೆಗಳಿದ್ದವು. ಆದರೆ ಆಪ್‌ನೊಳಗೆ ಆತಿಶಿ, ಸಂಜಯ್ ಸಿಂಗ್ ಮೊದಲಾಗಿ ನಾಯಕತ್ವದ ಬಲ ಇದ್ದೇ ಇತ್ತು ಮತ್ತು ಅದು ಹೊರ ಹೊಮ್ಮಿತು.

ಈಗ ಬಿಜೆಪಿ ಅಧ್ಯಕ್ಷರನ್ನು ನಿರ್ಧರಿಸುವ ಅವಕಾಶ ಮೋದಿ ಮತ್ತು ಶಾ ಕೈಯಲ್ಲಿ ಇಲ್ಲ. ಅಲ್ಲಿ ಆರೆಸ್ಸೆಸ್ ಅನ್ನು ಬಿಟ್ಟು ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸುವುದು ಮೋದಿ ಶಾ ಜೋಡಿಗೆ ಸಾಧ್ಯವಾಗುತ್ತಿಲ್ಲ. ಆರೆಸ್ಸೆಸ್ ಸೂಚಿಸುತ್ತಿರುವ ಹೆಸರುಗಳು ಇವರಿಬ್ಬರಿಗೂ ಪಥ್ಯವಾಗುತ್ತಿಲ್ಲ.

ಇದರೊಂದಿಗೆ, ಸಂಘ ಪರಿವಾರದ ಹಿಡಿತಕ್ಕೂ ಸಿಗದಂತೆ ಬೆಳೆದುಬಿಟ್ಟಿದ್ದ ರಾಜಕೀಯ ಜೋಡಿ ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲಿದೆಯೆ?

ಅಧಿಕಾರದಲ್ಲಿದ್ದು ಎಷ್ಟೆಲ್ಲ ಆಟವಾಡಿದವರು ಅಲ್ಪಮತಕ್ಕೆ ಕುಸಿದಿರುವ ಹೊತ್ತಲ್ಲಿ ಎಲ್ಲ ಸೋಲುಗಳೂ ಎಲ್ಲ ದಿಕ್ಕಿನಿಂದಲೂ ಅವರನ್ನು ಮುತ್ತಲಿವೆಯೆ?

ಆಪ್ ಒಡ್ಡಿರುವ ಸವಾಲನ್ನು ಎದುರಿಸಲಾರದ ಸನ್ನಿವೇಶ ಮೋದಿ ಮತ್ತು ಶಾ ಪಾಲಿಗೆ ಎದುರಾಗಲಿದೆಯೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News